Showing posts with label ನುಡಿಸಿರಿ. Show all posts
Showing posts with label ನುಡಿಸಿರಿ. Show all posts

ವರ್ತಮಾನವೇ ಒಂದು ತಲ್ಲಣದ ವಿಷಯ: ಡಾ. ನಾ. ಡಿಸೋಜ

ಮೂಡುಬಿದಿರೆ: ಪ್ರಗತಿಪರ ಭವಿಷ್ಯದ ಚಿಂತನೆ ಇಲ್ಲದ ವರ್ತಮಾನವೇ ಒಂದು ತಲ್ಲಣದ ವಿಷಯವಾಗಿದೆ. ಹಿಂದಿನದೆಲ್ಲವನ್ನು ಕಡೆಗಣಿಸಿ ಸುಖಭೋಗದತ್ತ ಒಲಿದು ಕೊನೆಯಲ್ಲಿ ಯಾವುದನ್ನು ಪಡೆಯದೇ ತೊಳಲಾಡುತ್ತಿದ್ದೇವೆ. ಯಂತ್ರಗಳ ಮೇಲಿನ ಅವಲಂಬನೆ ನಮ್ಮನ್ನು ಆತಂಕಕ್ಕಿಡು ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಡಾ. ನಾ. ಡಿಸೋಜ ಹೇಳಿದರು.
ಅವರು ಇಂದಿನಿಂದ ಆರಂಭಗೊಂಡ 'ಆಳ್ವಾಸ್ ನುಡಿಸಿರಿ' ಕನ್ನಡ ನಾಡು ನ್ಮಡಿಯ ರಾಷ್ಟ್ರೀಯ ಸಮ್ಮೇಳನವನ್ನು ರತ್ನಾಕರವರ್ಣಿ ವೇದಿಕೆಯಲ್ಲಿ ಭತ್ತದ ತೆನೆಗೆ ಹಾಲು ಎರೆದು, ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ ಜ್ಞಾನಪೀಠಿಗಳು ಹೊರಗಿನಿಂದ ಬಂದವುಗಳಾಗಿವೆ. ಆದರೆ ನಾಡಿನೊಳಗೆ ಇರುವ ಭಾಷಾ ಪೀಠಗಳು ನಾಡು ನುಡಿಯನ್ನು ಕಟ್ಟುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿವೆ. ಆಳ್ವಾಸ್ ನುಡಿಸಿರಿ ಅಂತಹ ಒಂದು ಪೀಠಗಳಲ್ರ್ಲೆಂದು. ಸಮ್ಮೇಳನಗಳು ಹೇಗೆ ನಡೆಯಬೇಕು ಎನ್ನುವುದಕ್ಕೆ ನುಡಿಸಿರಿ ಮಾದರಿಯಾಗಿ ನಿಂತಿದೆ. ಒಂದು ನಿಶ್ಷಿತವಾದ ವಿಷಯವನ್ನಿಟ್ಟುಕೊಂಡು ಸಮ್ಮೇಳನದುದ್ದಕ್ಕೂ ಅದನ್ನು ವಿಮರ್ಷೆಗೊಡ್ಡುವ ಪ್ರಯತ್ನ ವಿಶೇಷವಾದುದು ಎಂದರು.
ನಾಡೋಜ ಡಾ. ಸಿದ್ಧಲಿಂಗಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ನುಡಿಸಿರಿಯ ರೂವಾರಿ ಡಾ| ಎಂ ಮೋಹನ ಆಳ್ವ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು.
ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾಷ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ಸುಪ್ರಿಯ ಡಿ. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪೋಟೋಗಳು: ಅಪಾರ ಉಜಿರೆ













Read more...

ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷ ಡಾ. ಸಿದ್ಧಲಿಂಗಯ್ಯ ಭಾಷಣ






ಮೂಡುಬಿದಿರೆ: 11ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಾದೇಶಿಕ ಭಾಷೆಗಳ ಐಸಿರಿಯೊಂದಿಗೆ ನ.14ರಿಂದ ಮೂರು ದಿನಗಳ ವರೆಗೆ ಸಂಪನ್ನಗೊಳ್ಳುತ್ತಿದ್ದು 
ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆಯುಳ್ಳ ಕನ್ನಡಭಾಷೆ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ.  ಕನ್ನಡಸಂಸ್ಕೃತಿ ಬಹುಮುಖೀ ಸಂಸ್ಕೃತಿಯಾಗಿದ್ದು ತನ್ನ ವೈವಿಧ್ಯತೆಗೆ ಹೆಸರಾಗಿದೆ.  ಸಹನೆ, ಕನ್ನಡಸಂಸ್ಕೃತಿಯ ಮೂಲಗುಣ. ಎಲ್ಲಾ ಜಾತಿ, ಧರ್ಮಗಳು, ಭಾಷೆ, ಉಪಭಾಷೆಗಳು, ಸಂಸ್ಕೃತಿ, ಉಪಸಂಸ್ಕೃತಿಗಳು ಶತಶತಮಾನಗಳ ಕಾಲ ಸಹಬಾಳ್ವೆ ಮಾಡಿದ್ದು ಇಲ್ಲಿಯ ವಿಶೇಷ.  ಆಗಾಗ ಸಣ್ಣ ಪ್ರಮಾಣದ ಸಂಘರ್ಷಗಳು ಸಂಭವಿಸಿದರೂ, ಅದನ್ನು ಅರಗಿಸಿಕೊಂಡು ಮೀರಿ ಬೆಳೆಯುವ ಶಕ್ತಿಯನ್ನು ಕನ್ನಡಭಾಷೆ ತೋರುತ್ತ ಬಂದಿದೆ.  ಪ್ರಸ್ತುತ ಕನ್ನಡಭಾಷೆಗೆ ಒದಗಿರುವ ಗಂಡಾಂತರ ಕನ್ನಡಪ್ರೇಮಿಗಳನ್ನು ಆತಂಕಕ್ಕೆ ಈಡುಮಾಡಿದೆ. ನಮ್ಮ ಕಣ್ಮುಂದೆಯೇ ನಮ್ಮ ಮಕ್ಕಳು ಕನ್ನಡದಿಂದ ದೂರವಾಗಿ ಸಂಸ್ಕೃತಿಯ ಬೇರುಗಳನ್ನು ಕಳೆದುಕೊಂಡು ತ್ರಿಶಂಕು ಸ್ಥಿತಿಯತ್ತ ಸಾಗುತ್ತಿರುವ ದುರಂತವನ್ನು ನಾವು ನೋಡುತ್ತಿದ್ದೇವೆ. ಮಾತನಾಡಲು ಕಲಿಯುತ್ತಿರುವ ಮಕ್ಕಳು ಕೂಡ ಇಂಗ್ಲೀಷಿನಲ್ಲೇ ತೊದಲುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ.
      ೧೯೨೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸರ್.ಎಂ.ಪುಟ್ಟಣ್ಣಚೆಟ್ಟಿ ಅವರು ಹೇಳಿದ ಒಂದು ಪ್ರಸಂಗ ನೆನಪಾಗುತ್ತದೆ.  ಕನ್ಯಾಪಿತೃ ಒಬ್ಬ ತನ್ನ ಮಗಳನ್ನು ಸೂಕ್ತ ವರನಿಗೆ ಕೊಟ್ಟು ಮದುವೆ ಮಾಡಿದ್ದ. ಅಳಿಯನಾದವನು ಮಾವನ ಕ್ಷೇಮ ಸಮಾಚಾರವನ್ನು ವಿಚಾರಿಸಿ ಒಂದು ಪತ್ರ ಬರೆದ.  ಪತ್ರವನ್ನು ಒಡೆದು ನೋಡಿದ ಮಾವ, ಪತ್ರದಲ್ಲಿರುವ ವಿಷಯಗಳನ್ನು ಓದುವುದಕ್ಕಿಂತ ಮೊದಲೇ ಕೂಗಾಡಲು ತೊಡಗಿದ.  ಅಳಿಯನ ಮೇಲೆ ಕಿಡಿಕಾರ ತೊಡಗಿದ. ಮಾವನ ಕೋಪಕ್ಕೆ ಕಾರಣವೇನೆಂದರೆ ಅಳಿಯ ಪತ್ರವನ್ನು ಕನ್ನಡದಲ್ಲಿ ಬರೆದದ್ದು.  ಇವನು ಕನ್ನಡದಲ್ಲಿ ಪತ್ರ ಬರೆಯುತ್ತಾನೆಂದು ಗೊತ್ತಿದ್ದರೆ ನನ್ನ ಮಗಳನ್ನು ಇವನಿಗೆ ಕೊಟ್ಟು ಮದುವೆ ಮಾಡುತ್ತಿರಲಿಲ್ಲ ಎಂದು ಇಂಗ್ಲೀಷ್ ಪ್ರೇಮಿ ಮಾವ ರೇಗಾಡಿದ.  ಆದರೆ ಇಂಗ್ಲೀಷ್ ಮಾವ ಅಸಹಾಯಕನಾಗಿದ್ದ. ಆಗಲೇ ಮಗಳು ಮದುವೆಯಾಗಿ ಗಂಡನ ಮನೆ ಸೇರಿ ಆಗಿತ್ತು.
    ಈ ಮಾತನ್ನು ಸುಮಾರು ತೊಂಬತ್ತು ವರ್ಷಗಳ ಹಿಂದೆ ಪುಟ್ಟಣ್ಣಚೆಟ್ಟರು ಹೇಳಿದ್ದರೂ ಕೂಡ, ಇಂಗ್ಲೀಷ್ ಮಾವಂದಿರ ಸಂತಾನ ಹೆಚ್ಚುತ್ತಲೇ ಇದೆ.  ಪ್ರಾಥಮಿಕ ಪೂರ್ವಶಿಕ್ಷಣವನ್ನು ತಮ್ಮ ಮಕ್ಕಳಿಗೆ ಆಂಗ್ಲಭಾಷೆಯಲ್ಲೇ ಕೊಡಿಸಬೇಕೆಂಬ ಗೀಳನ್ನು ಹಚ್ಚಿಕೊಂಡ ಪೋಷಕರು ಬೆಳಗಿನ ಜಾವದ ಚಳಿಯಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಮುಂದೆ ನಡುಗುತ್ತ ಸರತಿಯ ಸಾಲಿನಲ್ಲಿ ನಿಲ್ಲುವುದನ್ನು ಕಂಡಾಗ ವ್ಯಥೆಯಾಗುತ್ತದೆ.  ಕೆಲವು ಶಾಲೆಗಳಲ್ಲಿ ವಿದ್ಯಾವಂತರಲ್ಲದ ತಂದೆತಾಯಿಯರ ಮಕ್ಕಳಿಗೆ ಪ್ರವೇಶವಿಲ್ಲ.  ಹೆತ್ತವರಿಗೂ ಆಂಗ್ಲಭಾಷೆಯ ಪರಿಜ್ಞಾನ ಕಡ್ಡಾಯ.  ಶಾಲೆಗೆ ಸೇರಿದ ಮಕ್ಕಳು ಅಕಸ್ಮಾತ್ ಕನ್ನಡದಲ್ಲಿ ಮಾತಾಡಿದರೆ ಅವರಿಗೆ ದಂಡ, ಬೆತ್ತದೇಟು.  ಶುಲ್ಕದ ವಿಷಯ ಬಂದರೆ ಬಡವರು ಬೆಚ್ಚಿ ಬೀಳುವಂತಾಗುತ್ತದೆ.  ಏಕೆಂದರೆ ಶಾಲೆಯ ಆಡಳಿತ ಮಂಡಳಿಯವರಿಗೆ ಪೋಷಕರು ಕೇಜಿಗಟ್ಟಲೆ ರೂಪಾಯಿಗಳನ್ನು ಕಕ್ಕಬೇಕು. ಇದಕ್ಕೆ ಪರಿಹಾರವೇನು? ಏಕರೂಪ ಶಿಕ್ಷಣ ನೀತಿಯೇ ಇದಕ್ಕೆ ಪರಿಹಾರ.  ಇತ್ತೀಚೆಗೆ ಬಂದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ.  ಪ್ರಾಥಮಿಕ ಶಿಕ್ಷಣದ ಭಾಷಾಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟದ್ದು ಎಂಬ ತೀರ್ಪು ಬಡವರು ಮತ್ತು ಶ್ರೀಮಂತರ ನಡುವೆ ಶೈಕ್ಷಣಿಕ ಕಂದಕವನ್ನು ಹೆಚ್ಚಿಸುವುದಲ್ಲದೆ, ವರ್ಗವ್ಯವಸ್ಥೆಯನ್ನು ಪೋಷಣೆ ಮಾಡಿದಂತಾಗುತ್ತದೆ.  ನಮ್ಮ ಸರ್ಕಾರ ಈ ತೀರ್ಪನ್ನು ವಿರೋಧಿಸಿ ಕೂಡಲೇ ಮೇಲ್ಮನವಿಯನ್ನು ಸಲ್ಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ.  ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯನ್ನು ಮಾಡುತ್ತಿರುವುದು ಖಂಡನೀಯ.  ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.  ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದಲ್ಲಿ ಕನ್ನಡಭಾಷೆಯೇ ವಿಜೃಂಭಿಸಬೇಕು. ನಮ್ಮ ಜನ ಜಗಳವಾಡುವುದು ಕನ್ನಡದಲ್ಲಿ.  ಆ ಜಗಳ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದಾಗ ವಕೀಲರು ವಾದ ಮಾಡುವುದು ಇಂಗ್ಲೀಷಿನಲ್ಲಿ. ಕೊನೆಗೆ ನ್ಯಾಯಾಧೀಶರು ತೀರ್ಪು ಕೊಡುವುದೂ ಇಂಗ್ಲೀಷಿನಲ್ಲಿ. ಕಕ್ಷಿದಾರರು ಆ ತೀರ್ಪನ್ನು ಅರ್ಥಮಾಡಿಕೊಳ್ಳಲು ಇಂಗ್ಲೀಷ್ ಗೊತ್ತಿದ್ದವರನ್ನು ಅವಲಂಬಿಸಬೇಕಾದ ಅಸಾಹಯಕ ಸ್ಥಿತಿ ಏರ್ಪಟ್ಟಿದೆ.  ಈ ವಿಪರ್ಯಾಸ ಕೊನೆಯಾಗಬೇಕು.  ಕಾನೂನಿನ ಅಜ್ಞಾನ, ಅಪರಾಧ ಎಂದು ಕಾನೂನು ಹೇಳುತ್ತದೆ.  ನಮ್ಮ ಕಾನೂನುಗಳೆಲ್ಲ ಇಂಗ್ಲೀಷಿನಲ್ಲೇ ಇವೆ.  ಕನ್ನಡಕ್ಕೆ ಭಾಷಾಂತರವಾಗಿರುವುದು ಅತ್ಯಲ್ಪ.  ಇದರ ಅರ್ಥ ಇಂಗ್ಲೀಷ್ ಗೊತ್ತಿಲ್ಲದಿರುವುದು ಅಪರಾಧ ಎಂದಾಗುತ್ತದೆ.  ಇದಕ್ಕಿಂತ ಅನ್ಯಾಯ ಮತ್ತೊಂದಿಲ್ಲ. ಜಿಲ್ಲಾನ್ಯಾಯಾಲಯ ಮತ್ತು ಕೆಳಗಿನ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ಕೊಡಬೇಕೆಂದು ಉಚ್ಚನ್ಯಾಯಾಲಯದ ಆದೇಶವಿದ್ದರೂ ಅದು ಪಾಲನೆ ಆಗದಿರುವುದು ಸರಿಯಲ್ಲ.  ಈ ನಡುವೆಯೂ ಕನ್ನಡದಲ್ಲಿ ತೀರ್ಪುಕೊಡುತ್ತಿರುವ ನ್ಯಾಯಾಧೀಶರನ್ನು, ಸಾವಿರಕ್ಕೂ ಮೇಲ್ಪಟ್ಟು ತೀರ್ಪುಗಳನ್ನು ಕನ್ನಡದಲ್ಲಿ ನೀಡಿದ ಜಿಲ್ಲಾನ್ಯಾಯಾಧೀಶರಾಗಿದ್ದ ಶ್ರೀ ಮಿಠ್ಠಲ್‌ಕೋಡ್ ಅವರನ್ನು ಅಭಿನಂದಿಸುತ್ತೇನೆ.  
ಈ ತಿಂಗಳ ಮೊದಲವಾರದಲ್ಲಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರು ಒಂದು ದಿಟ್ಟ ಹೆಜ್ಜೆಯಿರಿಸಿದರು. ಇಂಗ್ಲಿಷ್‌ನಲ್ಲಿ ಕಡತ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಸಹಿಪಡೆಯಲೆಂದು ಬಂದ ಅಧಿಕಾರಿಗಳಿಗೆ ಮಂಗಳಾರತಿ ಮಾಡಿದರು. ಕಡತ ಕನ್ನಡದಲ್ಲಿದ್ದರೆ ಮಾತ್ರ ಸಹಿ ಮಾಡುವೆನೆಂದು ಹೇಳಿ ಅದನ್ನು ಹಿಂದಿರುಗಿಸಿದ್ದು ಕನ್ನಡ ನಾಡಿನ ಪ್ರತಿಯೊಬ್ಬ ಸರಕಾರಿ ಅಧಿಕಾರಿಗೂ ಒಂದು ಎಚ್ಚರಿಕೆಯ ಕರೆಗಂಟೆ ಎಂದು ನಾನು ಭಾವಿಸುತ್ತೇನೆ.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಅಂಥ ತರಗತಿಗಳನ್ನು ಮುಚ್ಚುವ ಕುರಿತು ೨೭.೭.೧೯೯೯ ರಂದು ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಒಂದು ಸುತ್ತೋಲೆ ಹೊರಡಿಸಿದ್ದರು. ಅದರಲ್ಲಿ 'ಕನ್ನಡವನ್ನು ಐಚ್ಛಿಕ ವಿಷಯವಾಗಿ ಬೋಧಿಸುವಲ್ಲಿಯು ಸಹ ತರಗತಿಯನ್ನು ಮುಚ್ಚಬೇಕಾಗುತ್ತದೆ. ಆದರೆ ಕನ್ನಡವು ರಾಜ್ಯಭಾಷೆಯಾಗಿದ್ದು ಇದಕ್ಕೆ ಸರಕಾರದಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕೇ ಹೊರತು ಯಾವುದೇ ನಿಬಂಧಗಳು ರಾಜ್ಯಭಾಷೆಯನ್ನು ಅಭಿವೃದ್ಧಿಗೊಳಿಸುವಲ್ಲಿ ತಡೆಯಾಗಬಾರದು ಎಂಬ ಕಾರಣದಿಂದ ೧೫ ವಿದ್ಯಾರ್ಥಿಗಳ ಕನಿಷ್ಠ ಮಿತಿ ವಿಧಿಸಿರುವುದು ಕನ್ನಡ ಐಚ್ಛಿಕ ವಿಷಯದ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ' ಎಂದು ಹೇಳಲಾಗಿದೆ. ಶಿಕ್ಷಣ ಇಲಾಖೆಯ ಈ ಸುತ್ತೋಲೆಯನ್ನು  ಇಂದೀಗ ತಿಪ್ಪೆಗೆ ಎಸೆಯಲಾಗಿz. ಉತ್ತರ ಭಾರತದಿಂದ ಬಂದು ನಮ್ಮ ತಲೆಮೇಲೆ ಕುಳಿತ ಐ.ಎ.ಎಸ್. ಆಯುಕ್ತರಿಗೆ ಕನ್ನಡದ ಮೇಲೆ ಅಭಿಮಾನವಾದರೂ ಎಲ್ಲಿಂದ ಬರಬೇಕು? ಇದೇ ಅಕ್ಟೋಬರಿನಲ್ಲಿ ಹೊರಡಿಸಿದ ಇನ್ನೊಂದು ಸುತ್ತೋಲೆಯ ಪ್ರಕಾರ ಹತ್ತು ವಿದ್ಯಾರ್ಥಿಗಳಿದ್ದ ಕನ್ನಡ ಐಚ್ಛಿಕ ತರಗತಿಗಳನ್ನು ರದ್ದುಗೊಳಿಸಲಾಗಿದೆ ಹಾಗೂ ಹೆಚ್ಚುವರಿ ಅಧ್ಯಾಪಕರನ್ನು ಸಿಕ್ಕಸಿಕ್ಕೆಡೆಗೆ ವರ್ಗಾಯಿಸಲಾಗಿದೆ. ಕನ್ನಡವನ್ನು ನಮ್ಮ ಅಧಿಕಾರಿಗಳು 'ನಿಧಾನವಿಷ' ಕೊಟ್ಟು ಕೊಲ್ಲುತ್ತಿರುವುದನ್ನು ಸರಕಾರ ಇನ್ನಾದರೂ ಗಮನಿಸಿ, ಆದ ತಪ್ಪನ್ನು ತಕ್ಷಣ ಸರಿಪಡಿಸಬೇಕು ಹಾಗೂ ಮುಂದೆ ಇಂತಹ ತಪ್ಪು ಆಗದಂತೆ ನಿಗಾ ವಹಿಸಬೇಕು.
ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯ ನೆಪವೊಡ್ಡಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ವಿಷಾದನೀಯ.  ಸರ್ಕಾರ, ಕನ್ನಡ ಶಾಲೆಗಳಿಗೆ ಸ್ವಂತ ಕಟ್ಟಡ, ನೀರು, ಪೀಠೋಪಕರಣ, ಉಪಾಧ್ಯಾಯರ ನೇಮಕ, ಶೌಚಾಲಯಗಳ ವ್ಯವಸ್ಥೆ ಇನ್ನೂ ಮುಂತಾದ ಮೂಲಭೂತ ಸೌಕರ್ಯಗಳನ್ನು ನೀಡಿ, ಕನ್ನಡಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷನ್ನು ಒಂದು ಭಾಷೆಯನ್ನಾಗಿ ಕಲಿಸುವ ಏರ್ಪಾಟನ್ನು ಪರಿಣಾಮಕಾರಿಯಾಗಿ ಮಾಡಬೇಕು. ಕನ್ನಡಮಾಧ್ಯಮಶಾಲೆಗಳನ್ನು ಸರ್ಕಾರ ಉನ್ನತೀಕರಿಸಬೇಕು.  ಸರ್ಕಾರ, ಕನ್ನಡಮಾಧ್ಯಮ ಶಾಲೆಗಳನ್ನು ಮುಚ್ಚುತ್ತಿರುವಾಗ, ಡಾ.ಎಂ.ಮೋಹನ್ ಆಳ್ವ ಅವರು ಕನ್ನಡಮಾಧ್ಯಮ ಶಾಲೆಗಾಗಿ ಸುಮಾರು ಎರಡು ಕೋಟಿ ರೂ. ವೆಚ್ಚದ ಭವ್ಯ ಕಟ್ಟಡವೊಂದನ್ನು ನಿರ್ಮಿಸಿರುವುದು ಅಭಿನಂದನೀಯವಾಗಿದೆ. ಡಾ.ಮೋಹನ್ ಆಳ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ನಾನೂರ ಅರವತ್ತ ನಾಲ್ಕು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲದೆ ಊಟ, ವಸತಿ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ.     
ನಾನು ಪ್ರಾರಂಭದಲ್ಲಿ ಹೇಳಿದಂತೆ ಸೈರಣೆ ಕನ್ನಡಸಂಸ್ಕೃತಿಯ ಮೂಲಗುಣ.  ಇದರಿಂದ ನಮ್ಮ ಜನತೆ ದೂರ ಸರಿಯುತ್ತಿರುವುದು ವಿಷಾದಕರ. 'ಕಸವರಂ ಎಂಬುದು ನೆರೆಸೈರಿಸಲಾರ್ಪುಡೆ ಪರವಿಚಾರಮುಂ, ಪರಧರ್ಮಮುಮಂ' ಎಂಬ ಕವಿರಾಜಮಾರ್ಗಕಾರನ ಮಾತನ್ನು ನಾವು ಮರೆತಿದ್ದೇವೆ.  ಇದೇ ಕವಿ 'ಸರ್ವಧರ್ಮಧೇನುನಿವಕ್ಕೆ ಕರ್ನಾಟಕ ಆಡೊಂಬಲಂ' ಎಂದು ಹೇಳಿದ್ದನ್ನು ಕೂಡ ಅವಗಣನೆ ಮಾಡಿದ್ದು ನಮ್ಮ ಸಾಂಸ್ಕೃತಿಕ ದುರಂತವೆನ್ನಬಹುದು.  ಕರ್ನಾಟಕ ಸರ್ವಧರ್ಮ ಸಮನ್ವಯದ ಬೀಡಾಗಿತ್ತು ಎಂಬುದಕ್ಕೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನ ಹತ್ತಿರ ಇರುವ ಬಸ್ತಿಹಳ್ಳಿ ಎಂಬಲ್ಲಿ ಸಿಕ್ಕಿದ ಕ್ರಿ.ಶ. ೧೬೩೮ರ ಒಂದು ಶಾಸನ ಸಾಕ್ಷಿಯಾಗಿದೆ. ಈ ಶಾಸನದ ಒಕ್ಕಣಿಕೆ ಕೆಳಕಂಡಂತಿದೆ;  
ಬಸ್ತಿಹಳ್ಳಿಯ ಪಾರ್ಶ್ವನಾಥ ಕಂಬಗಳಿಗೆ ಹುಚ್ಚಪ್ಪದೇವ ಎಂಬಾತ ಲಿಂಗಮುದ್ರೆ ಹಾಕಿದಾಗ, ಸಂಘರ್ಷ ಉಂಟಾಗುತ್ತದೆ.  ಆಗ ಹಳೇಬೀಡಿನ ಮಠಾಧೀಶರಾದ ಬಸವಪ್ಪದೇವರು, ಪುಷ್ಪಗಿರಿ ಮಠದ ಪಟ್ಟದದೇವರು ಇಬ್ಬರೂ ಸೇರಿ ಜೈನರ ಪೂಜೆಗೆ ಅಡ್ಡಿ ಪಡಿಸಿದವರು ಶಿವದ್ರೋಹಿಗಳು, ಜಂಗಮದ್ರೋಹಿಗಳು, ವಿಭೂತಿ, ರುದ್ರಾಕ್ಷಿಗೆ ತಪ್ಪಿದವರು, ಕಾಶಿರಾಮೇಶ್ವರದ ಲಿಂಗಕ್ಕೆ ತಪ್ಪಿದವರು ಎಂದು ಹೇಳಿ ಜೈನಧರ್ಮದವರ ಪೂಜೆಗೆ ಅವಕಾಶ ಮಾಡಿಕೊಡುತ್ತಾರೆ.  ವೀರಶೈವರು ತಮ್ಮನ್ನು ರಕ್ಷಿಸಿಕೊಂಡು ಅನ್ಯಧರ್ಮದವರನ್ನೂ ರಕ್ಷಿಸಿದ ಪ್ರಕರಣ ಇದಾಗಿದೆ.  ದುರದೃಷ್ಟವಶಾತ್ ಈ ಬಗೆಯ ಔದಾರ್ಯ ಮತ್ತು ಸಹನೆ ಕಣ್ಮರೆ ಆಗುತ್ತಿರುವುದು ದುಃಖದಾಯಕ ಸಂಗತಿಯಾಗಿದೆ.   
    ಕೆಲವು ವರ್ಷಗಳ ಹಿಂದೆ ಗ್ರಾಮದೇವತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಗ್ರಾಮವೊಂದರಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದೆ.  ನನ್ನೊಡನೆ ಮಾತನಾಡುತ್ತಿದ್ದ ವ್ಯಕ್ತಿಯನ್ನು ದಾರಿಯಲ್ಲಿ ನಡೆದುಹೋಗುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಕೇಳಿದೆ.  ಅವನು ಇದೇ ಊರಿನವನ? ಎಂದು ಕೇಳಿದ್ದಕ್ಕೆ ಈ ವ್ಯಕ್ತಿ ಮುಖ ಸಿಂಡರಿಸಿಕೊಂಡನು, ಕೋಪಗೊಂಡನು. ನಾನು ಈ ವ್ಯಕ್ತಿಯನ್ನು ಆತನ ಬಗ್ಗೆ ಕೇಳಿದಕ್ಕೆ ನಿಮಗೇಕೆ ಇಷ್ಟು ಕೋಪ, ಅವನೂ ನೀವು ಜಗಳವಾಡಿದ್ದೀರ ಎಂದು ಕೇಳಿದೆ. ಆಗ ಆ ವ್ಯಕ್ತಿ ಅವನಿಗು ನನಗು ಜಗಳವೇನೂ ಆಗಿಲ್ಲ; ಆದರೆ ಅವರ ದೇವರಿಗು ನಮ್ಮ ದೇವರಿಗು ಜಗಳವಾಗಿದೆ; ಅದಕ್ಕಾಗಿ ಕಾಲಾಂತರದಿಂದ ಆ ದೇವರ ಒಕ್ಕಲಿನವರು ನಮ್ಮ ದೇವರ ಒಕ್ಕಲಿನವರು ಪರಸ್ಪರ ಮಾತುಬಿಟ್ಟಿದ್ದೇವೆ ಎಂದನು.  
ಗ್ರಾಮೀಣ ಪ್ರದೇಶದ ಕೆಲವು ದೇವತೆಗಳು ಅಕ್ಕತಂಗಿಂiiರಾಗಿದ್ದರೂ, ಅನೇಕ ಸಲ ಜಗಳವಾಗಿರುತ್ತದೆ.  ಈ ಎರಡೂ ದೇವತೆಗಳನ್ನು ಪೂಜಿಸುವ ಭಕ್ತರು ಆ ಕಾರಣಕ್ಕಾಗಿಯೆ ಪರಸ್ಪರ ವಿರೋಧಿಗಳಂತೆ ವರ್ತಿಸುತ್ತಾರೆ. ದೇವರು, ಧರ್ಮ ಇರುವುದು ಮನುಷ್ಯರ ಕಲ್ಯಾಣಕ್ಕೆ ಹೊರತು ಸಂಘರ್ಷ ಉಂಟು ಮಾಡುವುದಕ್ಕಲ್ಲ.  ಮೇಲೆ ಹೇಳಿದ ನಂಬಿಕೆಯು ಜನವಿರೋಧಿ ಆದದ್ದು. ದೇವರು, ಧರ್ಮದ ಹೆಸರಿನಲ್ಲಿ ಜಾತಿ, ಮತಗಳ ನಡುವೆ ದ್ವೇಷದ ಕಿಚ್ಚನ್ನು ಹಚ್ಚಿ ಮೈ ಕಾಯಿಸಿಕೊಳ್ಳುವವರು ಮನುಷ್ಯರೇ ಅಲ್ಲ.  ಅವರು ಯಾವುದೇ ಜಾತಿ, ಮತಕ್ಕೆ ಸೇರಿರಲಿ ಅವರೆಲ್ಲರೂ ಭಾರತೀಯರು.  ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಎಲ್ಲ ಜಾತಿ, ಮತದ ಬಂಧುಗಳು ಅಣ್ಣ ತಮ್ಮಂದಿರಂತೆ ಬಾಳುವ ವಾತಾವರಣ ಸೃಷ್ಟಿಯಾಗಬೇಕು.  ಈ ಬಗೆಯ ಸೌಹಾರ್ದ ಇಂದಿನ ತುರ್ತು ಅಗತ್ಯವಾಗಿದೆ. ಈ ಸಮ್ಮೇಳನದಲ್ಲಿ ಸೋದರ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಸಾಹಿತ್ಯಸಮಾವೇಶಗಳು ವಿವಿಧ ವೇದಿಕೆಗಳಲ್ಲಿ ಸಮಾನಾಂತರವಾಗಿ ನಡೆಯುತ್ತಿರುವುದು ಆಳ್ವಾಸ್ ನುಡಿಸಿರಿಯ ಭಾಷಾ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ದೇವರ ಹೆಸರಿನಲ್ಲಿ ನಿಧಿಗಾಗಿ ನರಬಲಿ ಕೊಡುವುದು, ಬೆತ್ತಲೆಸೇವೆ ಮಾಡುವುದು ಜೀವಂತ ವ್ಯಕ್ತಿಯ ಬೆನ್ನಿಗೆ ಕಬ್ಬಿಣದ ಕೊಂಡಿಯನ್ನು ಸಿಕ್ಕಿಸಿ ಅವನ ದೇಹವನ್ನು ಸುಮಾರು ಹದಿನೈದು ಅಡಿ ಮೇಲಕ್ಕೇರಿಸಿ ಸಿಡಿ ಎಂದು ನೇತಾಡಿಸುವ ಮೌಢ್ಯ ಸಂಪೂರ್ಣವಾಗಿ ಇಲ್ಲವಾಗಬೇಕಾಗಿದೆ. ಕೆಲವು ಗ್ರಾಮಗಳಲ್ಲಿ, ಸ್ತ್ರೀಯರನ್ನು ಅವರ ಮಾಸಿಕ ದೈಹಿಕ ಬದಲಾವಣೆಯ ಕಾರಣಕ್ಕಾಗಿ ಮತ್ತು ಗರ್ಭಿಣಿಯರು, ಬಾಣಂತಿಯರನ್ನು ಸೂತಕವೆಂಬ ನೆಪವೊಡ್ಡಿ ಊರಹೊರಗೆ ಗುಡಿಸಿಲಿನಲ್ಲಿ ಇರಿಸುವ ಪದ್ಧತಿ ಇನ್ನೂ ರೂಢಿಯಲ್ಲಿದೆ. ಇದಲ್ಲದೆ ಒಂದು ಜಾತಿಯ ಜನರು ತಿಂದುಬಿಟ್ಟ ಎಂಜಲಿನ ಮೇಲೆ ಇನ್ನೊಂದು ಜಾತಿಯವರು ಹೊರಳಾಡುವುದು ಧರ್ಮವೂ ಅಲ್ಲ, ಆರೋಗ್ಯಕರವೂ ಅಲ್ಲ. ಈ ಬಗೆಯ ಅಂಧಶ್ರದ್ಧೆ, ಮೂಢನಂಬಿಕೆಗಳು ಎಲ್ಲಾ ಜಾತಿ, ಧರ್ಮಗಳಲ್ಲೂ ಇವೆ.  ಮಾನವನಿಗೆ ನೈತಿಕಶಕ್ತಿ ಮತ್ತು ಮನೋಬಲ ಕೊಡುವ, ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ನಾನು ವಿರೋಧಿಸುವುದಿಲ್ಲ. ಮನುಷ್ಯನ ಘನತೆಯನ್ನು ಕುಗ್ಗಿಸುವ ಮೌಢ್ಯಾಚರಣೆಗಳನ್ನು ವಿರೋಧಿಸುತ್ತೇನೆ. ನನ್ನ ಆಕ್ಷೇಪಣೆ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮಗಳಲ್ಲಿರುವ ಮೌಢ್ಯತೆ ಅಳಿದು ಅಲ್ಲಿ ಮಾನವೀಯತೆ ನೆಲೆಗೊಳ್ಳಲೆಂದು ಆಶಿಸುತ್ತೇನೆ.  ಇಂಥ ಕಂದಾಚಾರಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮೌಢ್ಯವಿರೋಧಿ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ.

ಶಿಕ್ಷಣದಂತೆ ಆರೋಗ್ಯವೂ ಬಡವರ ಕೈಗೆ ಎಟುಕದ ವಸ್ತುವಾಗಿದೆ.  ದೊಡ್ಡ ದೊಡ್ಡ ನಗರಗಳಲ್ಲಿ ಉದ್ಭವಗೊಂಡಿರುವ ಹೈಟೆಕ್‌ಆಸ್ಪತ್ರೆಗಳು ವಿಧಿಸುವ ಮೊತ್ತವನ್ನು ಭರಿಸುವ ಶಕ್ತಿ ಜನಸಾಮಾನ್ಯರಿಗೆ ಇಲ್ಲವಾಗಿದೆ. ಮಧ್ಯಮವರ್ಗದವರು, ಕೆಳಮಧ್ಯಮವರ್ಗದವರು ಮತ್ತು ಬಡವರು ಈ ಆಸ್ಪತ್ರೆಗಳಿಗೆ ಹೋಗಲು ಹೆದರುತ್ತಾರೆ.  ಈ ಆಸ್ಪತ್ರೆಗಳ ಮೇಲೆ ಸರ್ಕಾರದ ಯಾವುದೇ ನಿಯಂತ್ರಣ ಇಲ್ಲ.  ಯಮನು ಪ್ರಾಣವನ್ನು ಮಾತ್ರ ಹರಣ ಮಾಡಿದರೆ, ಈ ಆಸ್ಪತ್ರೆಗಳು ಪ್ರಾಣ ಮತ್ತು ಹಣ ಎರಡನ್ನೂ ಹರಣ ಮಾಡುತ್ತವೆ.  ಹಿಂದೆ ಬಡಜನರು ಮದುವೆ ಹಬ್ಬಗಳಿಗಾಗಿ ಸಾಲ ಮಾಡಿ ಜೀವನ ಪೂರ್ತಿ ತೀರಿಸಲು ಹೆಣಗಾಡುತ್ತಿದ್ದರು.  ಇಂದು ಜನಸಾಮಾನ್ಯರು ಆಸ್ಪತ್ರೆಗಳ ವೆಚ್ಚವನ್ನು ಭರಿಸಲು ಸಾಲಮಾಡುವ ಪರಿಸ್ಥಿತಿ ಉಂಟಾಗಿದೆ.  ಒಂದು ಕುಟುಂಬದ ಸದಸ್ಯನೊಬ್ಬನನ್ನು ಉಳಿಸಲು, ಮನೆಮಠವನ್ನು ಮಾರಿಕೊಂಡು ಅನೇಕರು ಬೀದಿಪಾಲಾಗಿದ್ದಾರೆ.  ಈ ಹೈಟೆಕ್‌ಆಸ್ಪತ್ರೆಗಳ ಮೇಲೆ ಸರ್ಕಾರ ನಿಗಾ ವಹಿಸಬೇಕೆಂದು ನಾನು ವಿನಂತಿಸುತ್ತೇನೆ. 
ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯ ಮಾಡುವ ರೈತನ ಬಾಳು ಗೋಳಾಗಿದೆ.  ಅವನು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ದಕ್ಕುತ್ತಿಲ್ಲ.  ರೈತರು ತಾವು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಲೋಡುಗಟ್ಟಲೆ ಬೀದಿಗೆ ತಂದು ಚೆಲ್ಲಿ ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕೃಷಿಗಾಗಿ ವಿವಿಧ ಬ್ಯಾಂಕುಗಳಲ್ಲಿ ತನ್ನ ಜಮೀನನ್ನು ಅಡವಿಟ್ಟ ರೈತ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಗಂಭೀರ ಸಂಗತಿಯಾಗಿದೆ. ರೈತನು ದೇಶದ ಬೆನ್ನೆಲುಬು ಎಂದು ಪ್ರಾಜ್ಞರು ಹೇಳಿದ್ದರೂ, ರೈತನ ಬೆನ್ನು ಮುರಿದು ಹೋಗಿರುವುದನ್ನು ಕಂಡು ವಿಷಾದವಾಗುತ್ತದೆ. ಇಂದು ರೈತನ ಮಕ್ಕಳು ರೈತರಾಗಲು ಇಷ್ಟಪಡುತ್ತಿಲ್ಲ. ಇಂದು ಹಳ್ಳಿಗಳಲ್ಲಿ ಕೃಷಿಕಾರ್ಮಿಕರೂ ಸಿಗುತ್ತಿಲ್ಲ.  ಕೃಷಿಯೋಗ್ಯ ಭೂಮಿಯಲ್ಲೂ ಕೃಷಿಚಟುವಟಿಕೆ ನಡೆಯುತ್ತಿಲ್ಲ.
ಹೊಲಗದ್ದೆಗಳಲ್ಲಿ ದುಡಿಯುವುದಕ್ಕಿಂತ, ನಗರಗಳಿಗೆ ವಲಸೆ ಹೋಗುವುದೆ ಲೇಸೆಂದು ಗ್ರಾಮೀಣ ಯುವಕರು ಪಟ್ಟಣ ಸೇರುತ್ತಿದ್ದಾರೆ.  ಒಂದೊಂದು ಹಳ್ಳಿಯೂ ಕ್ರಮೇಣ ಒಂದೊಂದು ಹಾಳೂರಿನಂತಾಗುತ್ತಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಆಹಾರದ ಕ್ಷಾಮ ಉಂಟಾಗಿ, ತುತ್ತು ಅನ್ನಕ್ಕಾಗಿ ಜನ ಪರದಾಡುವ ಕಾಲ ಬಂದರೆ ಆಶ್ಚರ್ಯವಿಲ್ಲ. ಕೃಷಿಯನ್ನು ಕೈಗಾರಿಕೆ ಎಂದು ಭಾವಿಸಿ, ರೈತನು ಬೆಳೆದ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಲೆಯನ್ನು ನಿಗದಿ ಪಡಿಸುವ ತನಕ ಅನ್ನದಾತನ ಕಷ್ಟಕ್ಕೆ ಕೊನೆಯೇ ಇಲ್ಲ. ಕೃಷಿಯನ್ನು ಪ್ರೋತ್ಸಾಹಿಸಲು ರೈತನಿಗೆ ಬೇಕಾದ ನೀರು, ಗೊಬ್ಬರ ಮತ್ತು ವಿದ್ಯುತ್ತನ್ನು ಸರ್ಕಾರ ಒದಗಿಸಲು ಕೂಡಲೇ ಕ್ರಮ ಜರುಗಿಸಬೇಕು. 
ರೈತನಂತೆ ಸಂಕಷ್ಟಕ್ಕೀಡಾಗಿರುವ ಮತ್ತೊಂದು ನೊಂದವರ್ಗ ಕೈಮಗ್ಗದ ನೇಕಾರರು. ೧೯೮೫ರ ಕೈಮಗ್ಗ ಮೀಸಲಾತಿ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.  ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರಗಳನ್ನು ಪೂರೈಸುವ ವಿದ್ಯಾವಿಕಾಸ ಯೋಜನೆಯನ್ನು ಸಂಪೂರ್ಣವಾಗಿ ಕೈಮಗ್ಗ ಕ್ಷೇತ್ರಕ್ಕೆ ಮೀಸಲಿಡಬೇಕು. ಕೈಮಗ್ಗ ಮತ್ತು ಖಾದಿ ಉತ್ಪನ್ನಗಳ ಕಲಬೆರೆಕೆಯನ್ನು ತಡೆಯಬೇಕು.  ಕೈಮಗ್ಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಮಾರ್ಗಸೂಚಿಗಳನ್ನು ರೂಪಿಸಬೇಕು.  ಕೈಮಗ್ಗ ಮತ್ತು ವಿದ್ಯುತ್‌ಮಗ್ಗಗಳ ನೇಕಾರರ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳಾದ ಪೊಲೀಸ್ ಸಮವಸ್ತ್ರ, ಸರ್ಕಾರಿ ಆಸ್ಪತ್ರೆಗಳಿಗೆ ವಸ್ತ್ರ ಪೂರೈಕೆ ಇತ್ಯಾದಿಗಳಿಗೆ ಕರ್ನಾಟಕದ ನೇಕಾರರಿಂದಲೇ ಬಟ್ಟೆ ಖರೀದಿಸಬೇಕು. ವಿಶೇಷವಾಗಿ ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದ ಜಾತಿವರ್ಗಗಳಿಗೆ ಸೇರಿದ ಜನರೇ ಹೆಚ್ಚಾಗಿರುವ ಕೈಮಗ್ಗ ನೇಕಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು. ಇದರ ಜೊತೆಗೆ ಗ್ರಾಮೀಣ ಕರಕುಶಲಕರ್ಮಿಗಳು ಮತ್ತು ಗುಡಿಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆಗೆ ಒತ್ತಾಸೆ ನೀಡಬೇಕು. ಗ್ರಾಮೀಣ ಪ್ರದೇಶದ ಕುಂಬಾರರು, ಬಡಗಿಗಳು, ಚಮ್ಮಾರರು ಮುಂತಾದವರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸುವ ಸೂಕ್ತ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ಕೈಮಗ್ಗದ ಕಸುಬುದಾರರ ಪರವಾಗಿ ಸತ್ಯಾಗ್ರಹ ಮಾಡಿದ ರಾಷ್ಟ್ರೀಯ ಖ್ಯಾತಿಯ ರಂಗ ನಿರ್ದೇಶಕ ಶ್ರೀ ಪ್ರಸನ್ನ ಅವರ ಹೋರಾಟಕ್ಕೆ ಕರ್ನಾಟಕ ಸರ್ಕಾರ ಸ್ಪಂದಿಸಿರುವುದು ಸಮಾಧಾನಕರ ಸಂಗತಿಯಾಗಿದೆ.    
ಬೆಳಗ್ಗೆ ಎದ್ದು ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿದಾಗ ಒಂದಲ್ಲ, ಎರಡುಮೂರು ಅತ್ಯಾಚಾರ ಪ್ರಕರಣಗಳು ವರದಿಯಾಗಿರುವುದನ್ನು ನೋಡುತ್ತೇವೆ. ಇದು ದಿನನಿತ್ಯ ನಡೆಯುವ ದುರಂತ ಸಂಗತಿಯಾಗಿದೆ.  ಘನತೆ ಗೌರವದಿಂದ ಸಮಾಜದಲ್ಲಿ ತಲೆ ಎತ್ತಿ ಬಾಳಬೇಕಾದ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ನಿತ್ಯವೂ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಸ್ತ್ರೀಭ್ರೂಣಹತ್ಯೆ ಅನಾಗರೀಕ ಕೃತ್ಯ. ಇದರಿಂದ ಹೆಣ್ಣುಗಂಡಿನ ಜನಸಂಖ್ಯೆಯ ಅನುಪಾತದಲ್ಲಿ ಏರುಪೇರಾಗಿ ಸ್ತ್ರೀಕುಲ ಕಡಿಮೆಯಾಗುತ್ತಿರುವುದು ಅಪಮಾನಕರ ಸಂಗತಿಯಾಗಿದೆ. ಪತಿಯಿಂದ ಹಿಂಸೆಗೊಳಗಾಗಿ ನೋವನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳ ಗೋಳನ್ನು ಕೇಳುವವರೆ ಇಲ್ಲವಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ತಾಯಂದಿರು ಹಾಡಿದ ಒಂದು ತ್ರಿಪದಿ ನೆನಪಾಗುತ್ತಿದೆ;  
ಹೆಣ್ಣಿನ ಗೋಳಟ್ಟಿ ಬನ್ನೀಯ ಮರಬೆಂದೊ
ಅಲ್ಲಿ ಸನ್ಯಾಸಿ ಮಠಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೊ
ಈ ತ್ರಿಪದಿ ಈಗಲೂ ಪ್ರಸ್ತುತವೆಂದು ನನ್ನ ಭಾವನೆ.  ಈ ಅತ್ಯಾಚಾರಿಗಳು ಎಷ್ಟೇ ಶ್ರೀಮಂತರಾಗಿರಲಿ, ಪ್ರಭಾವ ಶಾಲಿಗಳಾಗಿರಲಿ ನ್ಯಾಯಾಂಗ ಅವರಿಗೆ ಉಗ್ರಶಿಕ್ಷೆ ವಿಧಿಸಬೇಕೆಂದು ಕೋರುತ್ತೇನೆ. ಇಂತಹ ವ್ಯಕ್ತಿಗಳನ್ನು ಸಮಾಜ ಬಹಿಷ್ಕರಿಸಬೇಕೆಂದು ವಿನಂತಿಸುತ್ತೇನೆ. ಪತ್ನಿಪೀಡಕ ಗಂಡಂದಿರಿಗೆ ಶಿಕ್ಷೆ ವಿಧಿಸುವುದಷ್ಟೇ ಅಲ, ಪತ್ನಿ ತನ್ನಿಂದ ಹುಟ್ಟಿದ ಮಗುವಿಗೆ ಜನ್ಮ ಕೊಡುವಾಗ ಆಕೆಯ ಪ್ರಸವವೇದನೆಯ ಸಮಯದಲ್ಲಿ ಗಂಡನಾದವನು ಕಡ್ಡಾಯವಾಗಿ ಆಕೆಯ ಬಳಿ ಇರುವಂತೆ, ಅವಳ ನೋವನ್ನು ಅರ್ಥಮಾಡಿಕೊಳ್ಳುವಂತೆ ಮಾಡಬೇಕೆಂದು ನಾನು ಸಮಾಜ ಮತ್ತು ಸರ್ಕಾರವನ್ನು ವಿನಂತಿಸುತ್ತೇನೆ.  
ಯುವಜನತೆ ಮೌಲ್ಯಗಳಿಂದ, ಪ್ರತಿಭಟನೆಗಳಿಂದ ವಿಮುಖರಾಗುತ್ತಿರುವುದು ದುರದೃಷ್ಟಕರವಾಗಿದೆ.  ಇಂದಿನ ಬಹುಸಂಖ್ಯೆಯ ಯುವಕರಿಗೆ ಆದರ್ಶಗಳಾಗಲಿ, ಮಾದರಿಗಳಾಗಲಿ ಇಲ್ಲವಾಗಿದೆ. ಸಂಸ್ಕೃತಿಯ ಮೇಲಿನ ಅಭಿಮಾನ ಇವರಿಗೆ ಲವಲೇಶವೂ ಇಲ್ಲ.  ಗುರುಹಿರಿಯರ ಮೇಲೆ ಗೌರವ ಮೊದಲೇ ಇಲ್ಲ.  ಹಿಂದೆ ಯಾವುದೇ ಸಮಸ್ಯೆ ಬಂದಾಗ ಹಿರಿಯರಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದ ಯುವಕರು ಇಂದು ಗೊತ್ತುಗುರಿ ಇಲ್ಲದೆ, ತಿಳುವಳಿಕೆ ಇಲ್ಲದೆ ಅತಂತ್ರರಾಗಿದ್ದಾರೆ.  ಅನೇಕ ದುಶ್ಚಟಗಳಿಗೆ ಬಲಿಯಾಗಿದ್ದಾರೆ.  ಹಿರಿಯರ ಗುಂಪು ನಮ್ಮ ಸಮಾಜದಲ್ಲಿ ಅವಗಣನೆಗೆ ಒಳಗಾದ ಒಂದು ವರ್ಗವಾಗಿದೆ.  ತಂದೆತಾಯಿ ಬಂಧುಬಳಗದೊಂದಿಗೆ ಇಂದಿನ ಯುವಜನತೆ ಭಾವನಾತ್ಮಕ ಸಂಬಂಧಗಳನ್ನು ಕಡಿದುಕೊಂಡಿದೆ.  ಆದ್ದರಿಂದಲೇ ಎಲ್ಲಾ ಕಡೆ ವೃದ್ಧಾಶ್ರಮಗಳು ಪ್ರಾರಂಭವಾಗಿವೆ. ಇಲ್ಲಿಗೆ ತಿಂಗಳಿಗೊ, ವರ್ಷಕ್ಕೊ ಒಮ್ಮೆ ಭೇಟಿಕೊಟ್ಟರೆ ಅದೇ ಮಾತೃ ದೇವೋಭವ, ಪಿತೃ ದೇವೋಭವ ಎಂಬಂತಾಗಿದೆ. ಕೆಲವು ವರ್ಷಗಳ ಹಿಂದೆ ನಾನೊಂದು ವೃದ್ಧಾಶ್ರಮಕ್ಕೆ ಹೋಗಿದ್ದಾಗ, ಸರ್ಕಾರದ ನಿವೃತ್ತ ಉನ್ನತ ಅಧಿಕಾರಿಗಳು, ಕರ್ನಾಟಕದ ವಿಶ್ವವಿದ್ಯಾಲಯ ಒಂದರ ವಿಶ್ರಾಂತ ಕುಲಪತಿಗಳು ಅಲ್ಲಿ ನಿವಾಸಿಗಳಾಗಿದ್ದನ್ನು ಕಂಡು ಚಕಿತಗೊಂಡೆ. ನಾನು ಕ್ಷಣ ಸ್ತಂಭೀಭೂತನಾದರೂ ಅವರು ಸಂತೋಷದಿಂದ ಇದ್ದುದ್ದನ್ನು ಕಂಡು ನಿಟ್ಟುಸಿರುಬಿಟ್ಟೆ.    
ಕರ್ನಾಟಕ ರಾಜ್ಯದಲ್ಲಿ ಕಳೆದ ಶತಮಾನದ ೧೯೫೪-೫೫ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ       ಶ್ರೀ ಕೆಂಗಲ್ ಹನುಮಂತಯ್ಯನವರು ಪ್ರಾರಂಭಿಸಿದ ಭೂ-ವಿದ್ಯಾದಾನದ ಚಳುವಳಿಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಿಗೆ ದಾನವಾಗಿ ಬಂದಿದ್ದ ಸುಮಾರು ಹತ್ತುಸಾವಿರ ಎಕರೆ ಶಾಲಾಜಮೀನುಗಳನ್ನು ಸುಮಾರು ಮೂರೂವರೆ ಸಾವಿರ ಕುಟುಂಬಗಳು ಗೇಣಿಸಾಗುವಳಿ ಮಾಡುತ್ತಿದ್ದಾರೆ.  ಈ ಶಾಲಾಜಮೀನುಗಳ ಖಾತೆ ಸಂವಿಧಾನಬಾಹಿರವಾಗಿ ರಾಜಪ್ರಮುಖರ ಹೆಸರಿನಲ್ಲಿವೆ.  ಈ ಶಾಲಾ ಜಮೀನು ಗೇಣಿದಾರರು ಆಯಾ ಸರ್ಕಾರಿ ಶಾಲೆಗಳಿಗೆ ಅಲ್ಪಸ್ವಲ್ಪ ಗೇಣಿ ಹಣವನ್ನು ಈಗಲೂ ಕಟ್ಟುತ್ತಿದ್ದಾರೆ.  ಈ ಎಲ್ಲಾ ಗೇಣಿಸಾಗುವಳಿಯಲ್ಲಿರುವ ಶಾಲಾಜಮೀನುಗಳು ಶಾಲೆಗಳಿಂದ ೪-೫ ಕಿ.ಮೀ. ದೂರದಲ್ಲಿದ್ದು, ಶಾಲೆಗಳ ಬಳಕೆಗೆ ಸಾಧ್ಯವಾಗದ ಜಮೀನುಗಳಾಗಿವೆ. ಈ ಶಾಲೆಗಳಿಗೆ ಸರ್ಕಾರ, ಆಟದಮೈದಾನ, ಪೀಠೋಪಕರಣಗಳು ಮತ್ತು ಶಿಕ್ಷಕರಿಗೆ ವೇತನವನ್ನು ಕೊಡುತ್ತಿದೆ. ಈ ಹಿನ್ನಲೆಯಲ್ಲಿ ಶಾಲಾಜಮೀನುಗಳ ಗೇಣಿದಾರರಿಂದ ಬರುವ ಗೇಣಿ ಹಣದ ಅಗತ್ಯ ಈಗ ಯಾವ ಶಾಲೆಗಳಿಗೂ ಇಲ್ಲ.  ಉಳುವವನೆ ಹೊಲದ ಒಡೆಯ ಎಂಬ ಐತಿಹಾಸಿಕ ಕಾಗೋಡು ಸತ್ಯಾಗ್ರಹದ ಸಿದ್ಧಾಂತದ ಅಡಿಯಲ್ಲಿ ೧೯೭೪ರಲ್ಲಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ದೇವರಾಜಅರಸು ಅವರು ಜಾರಿಗೆ ತಂದ ಕರ್ನಾಟಕ ಭೂಸುಧಾರಣಾ ಕಾನೂನಿನ ಕಲಂ ೧೦೭ರಲ್ಲಿ ಈ ಶಾಲಾ ಜಮೀನಿನ ಗೇಣಿದಾರರಿಗೆ ಭೂಒಡೆತನದ ಹಕ್ಕುಪತ್ರ ನೀಡದೆ ಅನ್ಯಾಯ ಮಾಡಲಾಗಿದೆ. ಆದರೆ ಇದೇ ಕಾನೂನು ರಾಜ್ಯದಲ್ಲಿನ ಮಠಮಾನ್ಯಗಳು ಹಾಗು ದೇವಸ್ಥಾನಗಳ ಜಮೀನುಗಳನ್ನು ಗೇಣಿಸಾಗುವಳಿ ಮಾಡುತ್ತಿದ್ದ ಗೇಣಿರೈತರಿಗೆ ಖಾತೆ ಮಾಡಿಕೊಟ್ಟಿದೆ.  ರಾಜ್ಯದಲ್ಲಿ ಕಳೆದ ಹಲವಾರು ದಶಕಗಳಿಂದ ಜಾರಿಯಲ್ಲಿರುವ ಅವೈಜ್ಞಾನಿಕ ಹಾಗು ಅಮಾನವೀಯ ಶಾಲಾಜಮೀನು ಗೇಣಿಪದ್ಧತಿಯನ್ನು ರದ್ದುಪಡಿಸಿ, ಈ ಶಾಲಾಜಮೀನು ಗೇಣಿದಾರರಿಗೆ ಕೂಡಲೆ ಈ ಜಮೀನುಗಳ ಅದಿಭೋಗದಾರಿಕೆ(ಹಕ್ಕುಪತ್ರ)ಯನ್ನು ನೀಡಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಹೆಚ್.ಎಸ್.ದೊರೆಸ್ವಾಮಿಯವರು, ಕಾಗೋಡು ಹೋರಾಟದ ರೂವಾರಿ ಶ್ರೀ ಗಣಪತಿಯಪ್ಪನವರು, ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿಯವರು, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಎನ್.ಡಿ.ವೆಂಕಟೇಶ್‌ರವರು, ರೈತ ಮುಖಂಡರಾದ ಶ್ರೀಕಡಿದಾಳ್‌ಶಾಮಣ್ಣನವರು, ಹೋರಾಟಗಾರರಾದ ಶ್ರೀ ಕಲ್ಲೂರುಮೇಘರಾಜ್ ಮತ್ತು ಮುಂತಾದವರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಸರ್ಕಾರ ಶಾಲಾಜಮೀನು ಗೇಣಿದಾರರ ವಿಚಾರದಲ್ಲಿ ಮೀನಾಮೇಷ ಎಣಿಸದೆ ಕೂಡಲೇ ೧೯೭೪ರ ಕರ್ನಾಟಕ ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ತಂದು ಅರ್ಹ ಶಾಲಾಜಮೀನು ಗೇಣಿದಾರರಿಗೆ ಹಕ್ಕುಪತ್ರ ನೀಡಿ ಅದಿಭೋಗದಾರಿಕೆಯನ್ನು ಮಂಜೂರು ಮಾಡಲು ಮನವಿಮಾಡುತ್ತೇನೆ.
ಕರ್ನಾಟಕದಲ್ಲಿ ಜೀತಪದ್ಧತಿ ಇನ್ನೂ ಜೀವಂತವಾಗಿರುವುದು ಆತಂಕಕಾರಿಯಾಗಿದೆ. ಜೀತಪದ್ಧತಿ ಗುಲಾಮಗಿರಿಯ ಪರಿಷ್ಕೃತ ರೂಪವೆಂದರೂ ತಪ್ಪಾಗಲಾರದು.  ಹಿಂದಿನ ಕಾಲದಲ್ಲಿ ಇಡೀ ದಲಿತ ಸಮುದಾಯಕ್ಕೆ ಅಂಟಿಕೊಂಡಿದ್ದ ಈ ಕಳಂಕವು ಈಗಲೂ ದಲಿತ ಮತ್ತು ಬುಡಕಟ್ಟು ಜನಾಂಗವನ್ನು ಕಾಡುತ್ತಿದೆ.  ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಭಾರತವನ್ನು ಒಳಗೊಂಡಂತೆ ದಕ್ಷಿಣ ಏಷ್ಯಾದಲ್ಲಿ ಸುಮಾರು ಹನ್ನೆರಡು ದಶಲಕ್ಷ ಜೀತದಾಳುಗಳಿರುವುದನ್ನು ಅಂದಾಜು ಮಾಡಿದೆ.  ಕರ್ನಾಟಕದಲ್ಲಿ ಸುಮಾರು ಮೂರರಿಂದ ನಾಲ್ಕು ಲಕ್ಷ ಜೀತದಾಳುಗಳಿರುವ ಸಾಧ್ಯತೆ ಇದೆ.  ಜೀತವಿಮುಕ್ತ ಕರ್ನಾಟಕ-ಜೀವಿಕವು ಕಳೆದ ವರ್ಷ ನಡೆಸಿದ ಒಂದು ಸಮೀಕ್ಷೆಯಲ್ಲಿ ಸುಮಾರು ಹತ್ತುಸಾವಿರ ಜೀತದಾಳುಗಳನ್ನು ಕರ್ನಾಟಕದ ೨೮ ಜಿಲ್ಲೆಗಳಲ್ಲಿ ಗುರುತಿಸಿದ್ದು, ಅವರ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದೆ.  ಜೀತಕ್ಕಿರುವವರು ತಮ್ಮ ಮಕ್ಕಳ ಮದುವೆ, ಹಬ್ಬ, ಕಾಯಿಲೆಗಳು ಮತ್ತು ಇತರ ಖರ್ಚುಗಳಿಗೆ ಸಾಲ ತೆಗೆದುಕೊಂಡು ಜಮೀನುದಾರರ ಮನೆಯಲ್ಲಿ ಹಗಲುರಾತ್ರಿ ಎನ್ನದೆ, ವರ್ಷಗಟ್ಟಲೆ ದುಡಿಯುತ್ತಿರುವುದನ್ನು ಕಾಣುತ್ತಿದ್ದೇವೆ.  ಕಾಯಿಲೆ ಬಿದ್ದರೂ ಜೀತದಾಳುಗಳು ಕೆಲಸಕ್ಕೆ ಹೋಗುವುದು ತಪ್ಪುವುದಿಲ್ಲ, ಹಗಲುರಾತ್ರಿ ಕೆಲಸ ಮಾಡಿದರೂ ಸಾಲದಹೊರೆ ಹೆಚ್ಚಾಗುತ್ತಲೇ ಹೋಗುತ್ತದೆ.  ಯಾದಗಿರಿ ತಾಲ್ಲೂಕಿನ ಎಲ್ಲೇರಿ ಗ್ರಾಮದ ಭದ್ರಪ್ಪ ಎಂಬುವವರು ಗ್ರಾಮ ಪಂಚಾಯಿತಿಯ ಸದಸ್ಯರಾಗಿದ್ದಾಗಲೂ, ಭೂಮಾಲೀಕರ ಮನೆಯಲ್ಲಿ ಜೀತ ಮಾಡುತ್ತಿದ್ದರು. ಈಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿರುವ ಭದ್ರಪ್ಪನವರು ತಾವು ಜೀತಕ್ಕೆ ಹೋಗದೆ ಎಸ್.ಎಸ್.ಎಲ್.ಸಿ. ಓದುತ್ತಿದ್ದ ತಮ್ಮ ಮಗನನ್ನು ಶಾಲೆಯಿಂದ ಬಿಡಿಸಿ ಅದೇ ಭೂಮಾಲೀಕರ ಮನೆಯಲ್ಲಿ ಜೀತಕ್ಕಿಟ್ಟಿದ್ದಾರೆ. ಈ ಕರುಣಾಜನಕ ಕಥೆಯನ್ನು ಭದ್ರಪ್ಪನವರಿಂದಲೇ ನಾನು ಕಿವಿಯಾರೆ ಕೇಳಿದ್ದೇನೆ. ಇಂಥ ಕಠೋರ ವಾಸ್ತವಗಳು ಕರ್ನಾಟಕದಾದ್ಯಂತ ಈಗಲೂ ಕಂಡುಬರುತ್ತಿವೆ. ಜೀತಪದ್ಧತಿಯಂಥ ಬಲತ್ಕಾರ ದುಡಿಮೆಯನ್ನು ನಮ್ಮ ಸಂವಿಧಾನವೇ ರದ್ದುಗೊಳಿಸಿದೆ.  ಜೀತಪದ್ಧತಿ ರದ್ದತಿ ಎಂಬ ಕಾನೂನು  ೧೯೭೫ರಿಂದ ಅಸ್ತಿತ್ವದಲ್ಲಿದೆ. ಜೀವಿಕ ಸಂಘಟನೆಯ ಮೂಲಕ ಪ್ರೊ.ಕಮಲ್‌ಕಿರಣ್‌ಪ್ರಸಾದ್ ಅವರು ಅನೇಕ ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಕಾನೂನಿನ ಪರಿಣಾಮಕಾರಿ, ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರವು ಒಂದು ಕ್ರಿಯಾಯೋಜನೆಯನ್ನು ೨೦೦೭ರಲ್ಲಿ ಜಾರಿಗೊಳಿಸಿದೆ. ಆದರೂ ಕೆಳಮಟ್ಟದ ಅಧಿಕಾರಿಗಳು ಇದನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.  ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲರು, ಹಿರಿಯ ಪತ್ರಕರ್ತ ಶ್ರೀ ಶಿವಾಜಿಗಣೇಶನ್‌ರವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದಾರೆ. ಆ ಸಮಿತಿಯು ಹಲವಾರು ಶಿಫಾರಸುಗಳನ್ನು ಸರ್ಕಾರಕ್ಕೆ ಮಾಡಿದೆ.  ಈಗಲಾದರೂ ಸರ್ಕಾರವು ಎಚ್ಚೆತ್ತುಕೊಂಡು ಈ ಶಿಫಾರಸ್ಸುಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಈ ಶಿಫಾರಸುಗಳ ಅನ್ವಯ ಎಲ್ಲಾ ಜೀತದಾಳುಗಳನ್ನು ಗುರುತಿಸಿ ಕೂಡಲೇ ಬಿಡುಗಡೆ ಮಾಡಿ ಅವರಿಗೆ ಸಮಗ್ರ ಪುನರ್ವಸತಿ ಕಲ್ಪಿಸುವ ಹೊಣೆ ಸರ್ಕಾರದ ಮೇಲಿದೆ.       
ರಾಜ್ಯದಲ್ಲಿ ವಿಶೇಷ ಆರ್ಥಿಕವಲಯದ ಹೆಸರಿನಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಬೃಹತ್ ಕೈಗಾರಿಕೆಗಳ ಪಾಲಾಗುತ್ತಿದೆ. ಇದಕ್ಕೆ ಕೊಟ್ಟ ಪರಿಹಾರವೂ ಅಲ್ಪ.  ಈ ವಿಶೇಷ ಆರ್ಥಿಕವಲಯಕ್ಕೆ ಬಲಿಯಾಗಿ ಭೂಮಿ ಕಳೆದುಕೊಂಡು ಬೀದಿಪಾಲಾದವರ ಗೋಳು ಹೇಳತೀರದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮಂಗಳೂರು ಸಮೀಪದ ಕುಡುಬಿಪದವು ಗ್ರಾಮದ ಪರಿಸ್ಥಿತಿಯನ್ನು ಗಮನಿಸಬಹುದು.  ಕೈಗಾರಿಕೆ ಬರಬೇಕೆನ್ನುವುದು ನಿಜ; ಆದರೆ ಕೃಷಿಭೂಮಿ ಕೈಗಾರಿಕೆಗಳ ಪಾಲಾಗುವ ಭರದಲ್ಲಿ ಧ್ವನಿ ಇಲ್ಲದವರ ಮೇಲೆ ಸವಾರಿ ನಡೆಯುತ್ತಿರುವುದು ಶೋಚನೀಯ.  ಕುಡುಬಿಪದವು ಗ್ರಾಮದ ನಲವತ್ತೆರೆಡು ಕುಟುಂಬಗಳು ಬಲಾಢ್ಯ ಕುಟುಂಬಗಳ ಪುನರ್‌ವಸತಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.  ಸಾಮಾಜಿಕವಾಗಿ ಹಿಂದುಳಿದ, ಧ್ವನಿಯೂ ಇಲ್ಲದ ಈ ನಲವತ್ತೆರೆಡು ಕುಟುಂಬಗಳನ್ನು ಕಾರಣವಿಲ್ಲದೆ ಒಕ್ಕಲೆಬ್ಬಿಸಿರುವುದು ಮಾನವಘನತೆಯನ್ನು ಮಣ್ಣುಪಾಲು ಮಾಡಿದೆ. ಎಂಟು ವರ್ಷಗಳ ಹೋರಾಟದ ನಂತರವೂ ಈ ಕುಟುಂಬಗಳಿಗೆ ನ್ಯಾಯ ಸಿಗದಿರುವುದು ದುರದೃಷ್ಟಕರ.
ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆಯ ಆಚರಣೆ, ಸುದ್ದಿಮಾಧ್ಯಮಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ.  ಮಾನವ, ಮಂಗಳಗ್ರಹವನ್ನು ತಲುಪುವ ಈ ಸಂದರ್ಭದಲ್ಲೂ ಸಾವಿರಾರು ಕುಗ್ರಾಮಗಳಲ್ಲಿ ಅಸ್ಪೃಶ್ಯತೆಯು ಆಚರಣೆಯಲ್ಲಿದ್ದು, ದಲಿತವರ್ಗದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದಂತಾಗಿದೆ.  ಈ ವರ್ಗದವರನ್ನು ದೇವಾಲಯ, ಉಪಹಾರಗೃಹ, ಸಾರ್ವಜನಿಕ ಬಾವಿಗಳಿಂದ ದೂರ ಇಡಲಾಗಿದೆ. ಇವರಿಗೆ ಕ್ಷೌರವನ್ನು ನಿರಾಕರಿಸಿದ ಘಟನೆಗಳೂ ವರದಿಯಾಗುತ್ತಿವೆ. ಗಾಂಧಿ, ಅಂಬೇಡ್ಕರ್ ಅವರುಗಳ ಕನಸು ನನಸಾಗಬೇಕಾಗಿದೆ.  ಈ ಅನಿಷ್ಟಪದ್ಧತಿಯನ್ನು ತೊಡೆದು ಹಾಕಲು ದಲಿತವರ್ಗದವರು ಜಾಗೃತವಾಗುವುದರ ಜೊತೆಗೆ ಅಸ್ಪೃಶ್ಯತಾನಿವಾರಣಾ ಚಳುವಳಿಗೆ ಮೇಲ್ವರ್ಗದ ಯುವಕರೂ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ.
ನಮ್ಮ ರಾಜ್ಯದ ಅರಣ್ಯಗಳಲ್ಲಿ ಹಲವು ಶತಮಾನಗಳಿಂದ ವಾಸವಾಗಿರುವ ಅರಣ್ಯವಾಸಿ ಗಿರಿಜನರ ಬದುಕು ದುಸ್ತರವಾಗಿದೆ.  ಅರಣ್ಯಕಾಯ್ದೆಯ ನೆಪದಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಂಡು ಕಾಡಿನ ಮೂಲನಿವಾಸಿಗಳನ್ನು ಅಲ್ಲಿಂದ ಎತ್ತಂಗಡಿಮಾಡುವ ಕಾರ್ಯ ನಡೆಯುತ್ತಿದೆ.  ಕಾಡಿನಲ್ಲೇ ಇರಲು ಇಷ್ಟಪಟ್ಟವರ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಅವರು ಕಾಡಿನಲ್ಲಿ ಇರಬಹುದು, ಆದರೆ ಅವರು ಜೀವನಾಧಾರವಾದ ಅರಣ್ಯದ ಸಂಪನ್ಮೂಲಗಳನ್ನು ಬಳಸುವಂತಿಲ್ಲ.  ಹಣ್ಣುಗಳನ್ನು ಬಿಟ್ಟ ಮರವನ್ನು ಅವರು ದೂರನಿಂತು ಕಣ್ತುಂಬ ನೋಡಬಹುದೆ ಹೊರತು ಹಣ್ಣುಗಳನ್ನು ಕೀಳುವಂತಿಲ್ಲ.  ಕೊಳದಲ್ಲಾಡುವ ಮೀನುಗಳನ್ನು ನೋಡಬಹುದೆ ಹೊರತು ಅವುಗಳನ್ನು ಹಿಡಿದು ಆಹಾರವಾಗಿ ಬಳಸುವಂತಿಲ್ಲ.  ಜೇನನ್ನು ನೋಡಬಹುದೆ ಹೊರತು ಇವರಿಗೆ ಅದನ್ನು ಕಿತ್ತು ಸವಿಯುವ ಸೌಭಾಗ್ಯ ಇಲ್ಲ. ಅರಣ್ಯಕಾಯ್ದೆ ಬಡಗಿರಿಜನರ ಮೇಲೆ ಅರಣ್ಯನ್ಯಾಯವನ್ನು ಹೇರಿದೆ ಎಂದರೆ ಉತ್ಪ್ರೇಕ್ಷೆಯಲ್ಲ.  ಇಂಥ ಪರಿಸ್ಥಿತಿಯ ನಡುವೆಯೂ, ಡಾ.ಮೋಹನ್ ಆಳ್ವರವರ ವಿದ್ಯಾಸಂಸ್ಥೆಯಲ್ಲಿ ಕೊರಗ, ಸಿದ್ದಿ, ಮಲೆಕುಡಿಯ, ಜೇನುಕುರುಬ, ಹಸಲ, ಸೋಲಿಗ, ಹಕ್ಕಿಪಿಕ್ಕಿ, ಕುಡುಬಿ ಸಮುದಾಯಗಳ ನಾನೂರೈವತ್ತು ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಉಚಿತ ವಸತಿ, ಊಟ ಮತ್ತು ಶಿಕ್ಷಣ ನೀಡುತ್ತಿರುವುದಕ್ಕಾಗಿ ಡಾ.ಆಳ್ವರವರನ್ನು ಶ್ಲಾಘಿಸುತ್ತೇನೆ. ಈ ಸಂಸ್ಥೆಯಲ್ಲಿ ಓದಿದ ಕೊರಗ ಜನಾಂಗದ ಹೆಣ್ಣುಮಗಳಾದ ಕುಮಾರಿ ಕೆ.ಸ್ನೇಹ ಕೊರಗ ಜನಾಂಗದ ಚರಿತ್ರೆಯಲ್ಲಿ ಮೊಟ್ಟಮೊದಲಬಾರಿಗೆ ಎಂ.ಬಿ.ಬಿ.ಎಸ್ ಪದವಿ ಅಧ್ಯಯನಕ್ಕೆ ಪ್ರವೇಶಪಡೆದವಳಾಗಿದ್ದಾಳೆ.  ಅವಳ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.    
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಕೊರಗಜನಾಂಗದ ಮುಖಂಡರಾದ ಶ್ರೀ ಗೋಕುಲ್‌ದಾಸ್‌ರವರು ಬೆಂಗಳೂರಿನಲ್ಲಿ ನನ್ನನ್ನು ಭೇಟಿ ಮಾಡಿ ಅಜಲುಪದ್ಧತಿಯಿಂದ ತಮ್ಮ ಜನಾಂಗಕ್ಕೆ ಆಗುತ್ತಿರುವ ಅನ್ಯಾಯವನ್ನು ವಿವರಿಸಿದರು. ನಾನು ಕೊರಗಜನಾಂಗದ ಸಂಕಷ್ಟವನ್ನು ವಿಧಾನಪರಿಷತ್ತಿನಲ್ಲಿ ಪ್ರಸ್ತಾಪಿಸಿದಾಗ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ನನ್ನ ಬೆಂಬಲಕ್ಕೆ ನಿಂತರು.  ಆಗ ಸಮಾಜಕಲ್ಯಾಣ ಸಚಿವರಾಗಿದ್ದ ಶ್ರೀ ಕಾಗೋಡುತಿಮ್ಮಪ್ಪನವರು ಅಜಲುಪದ್ಧತಿ ನಿಷೇಧ ಕಾಯಿದೆಯನ್ನು ಜಾರಿಗೆ ತಂದರು.  ಈ ಗೌರವವನ್ನು ಕೊರಗಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಸಮಾಜಸುಧಾರಕ ಶ್ರೀ ಕುದ್ಮುಲ್ ರಂಗರಾಯರಿಗೆ ನಾನು ಸಮರ್ಪಿಸುತ್ತೇನೆ.  
ಆಳ್ವಾಸ್ ನುಡಿಸಿರಿಯ ೧೧ನೇ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಮಾಡಿ ತಮ್ಮ ಔದಾರ್ಯವನ್ನು ಮೆರೆದ ಡಾ.ಎಂ.ಮೋಹನ್ ಆಳ್ವ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗು ಆಳ್ವಾಸ್ ನುಡಿಸಿರಿ ೨೦೧೪ರ ಸ್ವಾಗತಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ನಾನು ಆಭಾರಿಯಾಗಿದ್ದೇನೆ.  ನಾಡಿನ ಮೂಲೆ ಮೂಲೆಗಳಿಂದ, ದೇಶದ ಎಲ್ಲೆಡೆಯಿಂದ, ದೇಶವಿದೇಶಗಳಿಂದ ಇಲ್ಲಿಗೆ ಆಗಮಿಸಿದ ನಾಡುನುಡಿಯ ಅಭಿಮಾನಿಗಳಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

Read more...

ನುಡಿಸಿರಿಗೆ ಕೊನೆ ಕ್ಷಣದ ತಯಾರಿ...

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಇಂದಿನಿಂದ ಮೂರುದಿನಗಳ ಕಾಲ ನಡೆಯುವ “ಆಳ್ವಾಸ್ ನುಡಿಸಿರಿ-2014″ರಲ್ಲಿ 150 ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ತುಳುನಾಡಿನ ವಿಶೇಷ ತಿಂಡಿತಿನಿಸುಗಳ ಪ್ರದರ್ಶನ ಮತ್ತು ಕೃಷಿಗೆ ಸಂಬಂಧಿಸಿದ ಅಪರೂಪದ ವಸ್ತುಗಳ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರಗನ್ನು ನೀಡಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
11ನೇ ವರ್ಷದ ಈ ನುಡಿಸಿರಿಯಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ಸಂಜೆ 6 ಗಂಟೆಗೆ ಆರು ವೇದಿಕೆಗಳಲ್ಲಿ ಸಮಯಕ್ಕೆ ಸರಿಯಾಗಿ ಏಕಕಾಲದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಸಾಹಸ ಕ್ರೀಡೆಗಳು : ಹಗಲು ಹೊತ್ತಿನಲ್ಲಿ ವಿದ್ಯಾಗಿರಿಯ ಆವರಣದಲ್ಲಿ ವಿವಿಧ ಕಲಾ ತಂಡಗಳಿಂದ ಸಾಹಸ ಕ್ರೀಡೆಗಳ ಪ್ರದರ್ಶನ, ಮ್ಯಾಜಿಕ್‍ಗಳು, ಅಂಧ ಮಕ್ಕಳಿಂದ ಮಲ್ಲಕಂಬ ಸಾಹಸ ಕ್ರೀಡೆಗಳು, ಆವರಣದಲ್ಲಿ ಹಕ್ಕಿಪಿಕ್ಕಿ ತಂಡಗಳಿಂದ ಸಂಗೀತ ಕಾರ್ಯಕ್ರಮ, ಜನಪದ ತಂಡಗಳಿಂದ ಸಂಗೀತ ಕಾರ್ಯಕ್ರಮಗಳು, ಕೃಷಿಗೆ ಸಂಬಂಧಿಸಿದ ಪರಿಕರಗಳು ವಿಶೇಷವಾಗಿ ಮಣಿಪುರದ 22 ಫೀಟ್ ಎತ್ತರದ ಬಾಳೆಗಿಡ, ಕಲಾಕೃತಿಗಳ ಪ್ರದರ್ಶನ, ಫಲಪುಷ್ಪಗಳ ಪ್ರದರ್ಶನ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷಿಗರ ತಿಂಡಿ ತಿನಿಸುಗಳು ಪ್ರದರ್ಶನಗೊಳ್ಳಲಿರುವುದು ವಿಶೇಷ.
ಊಟ-ತಿಂಡಿ : ಊಟ ತಿಂಡಿಗಾಗಿ ವಿದ್ಯಾಗಿರಿಯ ಆವರಣದಲ್ಲಿ 9 ಕೌಂಟರ್‍ಗಳನ್ನು ತೆರೆಯಲಾಗಿದ್ದು ಏಕಕಾಲದಲ್ಲಿ 10,000 ಜನರಿಗೆ ಊಟೋಪಚಾರಕ್ಕಾಗಿ 45 ಕಡೆಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ.
ದಿನವೊಂದಕ್ಕೆ 22000 ಜನರ ನಿರೀಕ್ಷೆ ಇದ್ದು ಒಟ್ಟು 1ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಇದಲ್ಲದೆ ಈ ಬಾರಿ ವೇದಿಕೆಗಳನ್ನು ವಿಶೇಷವಾಗಿ ಶೃಂಗರಿಸಲಾಗಿದೆ. ಬೆಳಿಗ್ಗೆ ನಡೆಯುವ ಮೆರವಣಿಗೆಯಲ್ಲಿ 50 ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಲಿವೆ ಎಂದು ಆಳ್ವರು ತಿಳಿಸಿದ್ದಾರೆ.

























Read more...

ಆಳ್ವಾಸ್ ನುಡಿಸಿರಿಗೆ ಭರದ ತಯಾರಿ

   ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ಹಮ್ಮಿಕೊಂಡು ಬರುತ್ತಿರುವ ಆಳ್ವಾಸ್ ನುಡಿಸಿರಿ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನವು ಸುಂದರಿ ಆನಂದ ಆಳ್ವ ಆವರಣದ ರತ್ನಾಕರವರ್ಣಿ ವೇದಿಕೆ, ಡಾ.ಯು.ಆರ್.ಅನಂತಮೂರ್ತಿ ಸಭಾಂಗಣದಲ್ಲಿ ನವೆಂಬರ್ 14, 15 ಮತ್ತು 16ನೇ ದಿನಾಂಕಗಳಂದು ಸಾಹಿತ್ಯ- ಸಾಂಸ್ಕಂತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
    ಕಾದಂಬರಿಕಾರ, ಮಕ್ಕಳ ಸಾಹಿತಿ, ಡಾ.ನಾ.ಡಿಸೋಜರವರು ನವೆಂಬರ್ 14 ರಂದು ಬೆಳಗ್ಗೆ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ದೀಪ ಪ್ರಜ್ವಲನೆಯ ಮೂಲಕ ಚಾಲನೆಯನ್ನು ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ಧಲಿಂಗಯ್ಯನವರು ವಹಿಸಿಕೊಳ್ಳಲಿದ್ದಾರೆ.

11 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 11 ಮಂದಿ ಖ್ಯಾತನಾಮರ ಹೆಸರುಗಳನ್ನು ಪ್ರಕಟಿಸಲಾಗಿದೆ. ಅನನ್ಯ ಸಂಶೋಧಕ, ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ, ಸಾಹಿತಿ, ಸಂಶೋಧಕ ಪ್ರೊ. ವಸಂತ ಕುಷ್ಠಗಿ, ಖ್ಯಾತ ಕವಿ, ಅಂಕಣಕಾರ ಪ್ರೊ. ಎಚ್.ಎಸ್. ಶಿವಪ್ರಕಾಶ್, ಸಂಶೋಧಕ ಪ್ರೊ ಷ. ಶೆಟ್ಟರ್, ಕವಯಿತ್ರಿ ಡಾ. ಮಾಲತಿ ಪಟ್ಟಣಶೆಟ್ಟಿ, ನಟ, ನಿರ್ದೇಶಕ ಶ್ರೀ ಟಿ.ಎಸ್.ನಾಗಾಭರಣ, ಸಂಘಟಕ ಪ್ರೊ. ಹೆರಂಜೆ ಕೃಷ್ಣಭಟ್ಟ, ಜಾನಪದ ವಿದ್ವಾಂಸ, ಖ್ಯಾತ ಗಾಯಕ ಬಾನಂದೂರು ಕೆಂಪಯ್ಯ, ಯಕ್ಷಗಾನ ಸವ್ಯಸಾಚಿ ಶ್ರೀ ಮಂಟಪ ಪ್ರಭಾಕರ ಉಪಾಧ್ಯ, ನೃತ್ಯ ವಿದುಷಿ ಡಾ. ವಸುಂಧರಾ ದೊರೆಸ್ವಾಮಿ, ಪ್ರಖ್ಯಾತ ರಥ ಶಿಲ್ಪಿ ಶ್ರೀ ಅಶ್ವತ್ಥಪುರ ಬಾಬುರಾಯ ಆಚಾರ್ಯರನ್ನು ಆಳ್ವಾಸ್ ನುಡಿಸಿರಿ 2014ರ ಗೌರವಕ್ಕಾಗಿ ಆಯ್ಕೆ ಮಾಡಲಾಗಿದೆ.

ನಾಲ್ಕು ಪ್ರಧಾನ ಗೋಷ್ಠಿಗಳು
ನಾಡು – ನುಡಿಯ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಪರಿಕಲ್ಪನೆಯಾಗಿ ‘ ಕರ್ನಾಟಕ : ವರ್ತಮಾನದ ತಲ್ಲಣಗಳು’ ಎಂಬ ವಿಷಯವನ್ನು ಆರಿಸಲಾಗಿದೆ. ಈ ವಿಚಾರವಾಗಿ ನಾಲ್ಕು ಪ್ರಧಾನ ಗೋಷ್ಟಿಗಳಿದ್ದು ಶಿವಾನಂದ ಕಳವೆ, ನಾಗೇಶ ಹೆಗಡೆ, ಡಾ.ಮೋಹನ ಚಂದ್ರಗುತ್ತಿ, ಡಾ.ಗುರುರಾಜ ಕರ್ಜಗಿ, ಎ.ಈಶ್ವರಯ್ಯ ಮಣಿಪಾಲ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಪ್ರತಿಭಾ ನಂದಕುಮಾರ್, ಡಾ.ಸಿ.ಎನ್.ರಾಮಚಂದ್ರನ್‍ರವರು ಪ್ರಬಂಧ ಮಂಡಿಸಲಿದ್ದಾರೆ.
ಮಹತ್ವದ ವಿಶೇಷೋಪನ್ಯಾಸಗಳು : ಈ ವರ್ಷದ ಆಳ್ವಾಸ್ ನುಡಿಸಿರಿಯಲ್ಲಿ ಹೆಚ್ಚು ವಿಚಾರಗಳು ಚರ್ಚಿತವಾಗಬೇಕೆಂಬ ದೃಷ್ಟಿಯಿಂದ ಎಂಟು ವಿಶೇಷೋಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರೇಕ್ಷಕರ ಆಸಕ್ತಿ ಹೆಚ್ಚುವಂತೆ ಮೂರು ದಿನಗಳ ಕಾಲವೂ ಈ ವಿಶೇಷೋಪನ್ಯಾಸಗಳನ್ನು ಹದವರಿತು ಬೆರೆಸಿಕೊಳ್ಳಲಾಗಿದೆ. ಡಾ.ಡಿ.ಎಸ್.ಚೌಗಲೆ, ಮನೋಹರ ಪ್ರಸಾದ್, ಡಾ.ಪುಂಡಿಕಾೈ ಗಣಪಯ್ಯ ಭಟ್, ಡಾ.ನಟರಾಜ ಹುಳಿಯಾರ್, ಡಾ.ನಿರಂಜನ ವಾನಳ್ಳಿ ಮೈಸೂರು, ವೈ.ಎಸ್.ವಿ.ದತ್ತ, ಪ್ರೊ.ಶಶಿಕಲ ಗುರುಪುರ, ವೀಣಾ ಬನ್ನಂಜೆಯವರು ತಮ್ಮ ವಿಚಾರಧಾರೆಗಳನ್ನು ಹರಿಸಲಿದ್ದಾರೆ .

ಶತಮಾನದ ನಮನ :
ಶತಮಾನದ ಸಂಭ್ರಮವನ್ನು ಹಂಚಿಕೊಳ್ಳುವ, ಗೌರವಿಸುವ ಶತಮಾನದ ನಮನ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಜಾನಪದ ತಜ್ಞರಾಗಿದ್ದ ನಾಡೋಜ ಡಾ.ಎಚ್.ಎಲ್.ನಾಗೇಗೌಡರಿಗೆ ನುಡಿನಮನವನ್ನು ಡಾ.ಚೆಕ್ಕೆರೆ ಶಿವಶಂಕರ ಸಲ್ಲಿಸಲಿದ್ದಾರೆ. ಶತಾಯುಷಿ ಗಡಿನಾಡ ಕಿಡಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈಯವರಿಗೆ ಡಾ.ಸದಾನಂದ ಪೆರ್ಲರವರು ನುಡಿನಮನ ಸಲ್ಲಿಸಲಿದ್ದಾರೆ.

ಹಿರಿಯರ ಸಂಸ್ಮರಣೆ:
ನಮ್ಮನ್ನಗಲಿದ ಹಿರಿಯ ಸಾಹಿತಿಗಳನ್ನು ನೆನಪಿಸುವ ಅವರ ಸಾಧನೆಗಳನ್ನು ತಿಳಿಸುವ ಸಂಸ್ಮರಣ ಕಾರ್ಯಕ್ರಮದಲ್ಲಿ ಸಮನ್ವಯದ ಕವಿಯೆಂದೇ ಪ್ರಸಿದ್ಧರಾದ ರಾಷ್ಟ್ರಕವಿ ನಾಡೋಜ ಡಾ.ಜಿ.ಎಸ್.ಶಿವರುದ್ರಪ್ಪನವರ ಸಾಹಿತ್ಯದ ವಿಚಾರವಾಗಿ ಡಾ.ಟಿ.ಪಿ.ಅಶೋಕರು ಮಾತನಾಡುತ್ತಾರೆ. ಪ್ರೀತಿಯ ಮೇಷ್ಟ್ರು ಖ್ಯಾತಿಯ ಜ್ಞಾನಪೀಠ ಪುರಸ್ಕøತ ಡಾ.ಯು.ಆರ್.ಅನಂತಮೂರ್ತಿಯವರ ಸಾಧನೆಗಳನ್ನು ಎನ್.ಮನು ಚಕ್ರವರ್ತಿಯವರು ಪರಿಚಯಿಸಲಿದ್ದಾರೆ.

ಕವಿಸಮಯ – ಕವಿನಮನದಲ್ಲಿ ಕವಿಗಳು:
ಆಳ್ವಾಸ್ ನುಡಿಸಿರಿಯ ವಿಶೇಷ ಕೊಡುಗೆ ಕವಿಸಮಯ ಕವಿನಮನದಲ್ಲಿ ಕನ್ನಡದ ಖ್ಯಾತ ಕವಿಗಳು ಕವನ ವಾಚನದ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಅವರ ಕವನಗಳನ್ನು ಎಂ.ಎಸ್.ಗಿರಿಧರ್ ತಂಡ ಸಂಗೀತಕ್ಕೆ ಅಳವಡಿಸಿ ಹಾಡಿನ ಹೊಳೆ ಹರಿಸಲಿದೆ. ಈ ಸಲದ ಕವಿಸಮಯ – ಕವಿನಮನದಲ್ಲಿ ಸುಬ್ಬು ಹೊಲೆಯಾರ್, ರಘುನಾಥ ಚ.ಹ, ಡಾ.ವಿಕ್ರಮ ವಿಸಾಜಿ, ಎಚ್.ಗೋವಿಂದಯ್ಯ, ಬಿ.ಆರ್. ಲಕ್ಷ್ಮಣ ರಾವ್, ರವಿಶಂಕರ ಶೆಟ್ಟಿ ಒಡ್ಡಂಬೆಟ್ಟು, ಪ್ರೊ.ಎಚ್.ಎಸ್.ಶಿವಪ್ರಕಾಶ್ ಮತ್ತು ರಜಿಯಾ ಡಿ.ಬಿ.ಯವರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಸಿದ್ಧಲಿಂಗಯ್ಯನವರ ಹಾಡುಗಳ ಗಾಯನ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಜೆನ್ನಿ (ಜನಾರ್ಧನ) ಮತ್ತು ರಮೇಶ್ಚಂದ್ರರವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಭಾಷಾ ಸಾಮರಸ್ಯಕ್ಕೆ ಕೀಲಿಕೈ ತುಳುಸಿರಿ-ಕೊಂಕಣ ಸಿರಿ-ಬ್ಯಾರಿ ಸಿರಿ
ಪ್ರಧಾನ ಭಾಷೆ ಕನ್ನಡದ ಜೊತೆಗೆ ಪ್ರಾದೇಶಿಕ ಭಾಷೆಗಳಾದ ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಕೊಡು-ಕೊಳೆ ಅನನ್ಯವಾದುದು. ಈ ಅನನ್ಯತೆಯನ್ನು ಉಳಿಸಿಕೊಂಡೇ ಭಾಷಾ ಸಾಮರಸ್ಯ ಮುಂದುವರಿಯಬೇಕೆಂಬುದು ಆಳ್ವಾಸ್ ನುಡಿಸಿರಿಯ ಉದ್ದೇಶ. ಪ್ರಾದೇಶಿಕ ಭಾಷೆಗಳು ಹಾಗೂ ಪ್ರಧಾನ ಭಾಷೆಗಳೊಂದಿಗೆ ಸಾಮರಸ್ಯ ಏರ್ಪಟ್ಟಾಗ ಸಮಾಜದಲ್ಲಿ ಶಾಂತಿ – ಸುವ್ಯವಸ್ಥೆಗಳು ತನ್ನಿಂದ ತಾನೇ ಏರ್ಪಡುತ್ತದೆ. ಅದಕ್ಕಾಗಿ ಭಾಷಿಕ- ಸಾಂಸ್ಕøತಿಕ ನೆಲೆಯನ್ನು ಪರಸ್ಪರ ಅರಿತುಕೊಳ್ಳುವ ಉದ್ದೇಶದಿಂದ ಈ ವರ್ಷ ಸಮಾನಾಂತರ ವೇದಿಕೆಯಲ್ಲಿ ದಿನವೊಂದರಂತೆ ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಮುಸ್ಸಂಜೆ 5.30ಕ್ಕೆ ಪ್ರಾರಂಭವಾಗುವ ಸಮ್ಮೇಳನದಲ್ಲಿ ಒಂದು ಗಂಟೆಯ ಸಭಾ ಕಾರ್ಯಕ್ರಮವಿದ್ದು ಆಯಾಭಾಷೆಗಳಿಗೆ ದುಡಿದ ಮಹನೀಯರನ್ನು ಸನ್ಮಾನಿಸುವ ಹಾಗೂ ಉಪನ್ಯಾಸದ ಕಾರ್ಯಕ್ರಮಗಳಿರುತ್ತವೆ. ಸಮಯ 6.30ರಿಂದ 10.00ಗಂಟೆಯವರೆಗೆ ಆಯಾ ಸಂಸ್ಕøತಿಯನ್ನು ಪರಿಚಯಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಶಿಕ್ಷಕರಿಗೆ ಒ.ಒ.ಡಿ. ಸೌಲಭ್ಯ:
ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ, ಪ್ರೌಢ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಅನ್ಯಕಾರ್ಯ ನಿಮಿತ್ತ(ಒ.ಒ.ಡಿ.) ರಜಾ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಪುಸ್ತಕ ಮಳಿಗೆಗಳು:
ಸುಮಾರು ಇನ್ನೂರಕ್ಕೂ ಅಧಿಕ ಕನ್ನಡ ಪುಸ್ತಕಗಳ ಮಾರಾಟ ಮಳಿಗೆಗಳು, ತಿಂಡಿ ತಿನಿಸುಗಳ ಹಾಗೂ ಇನ್ನಿತರ ಮಳಿಗೆಗಳಿಗೆ ಈ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ. 150ಕ್ಕಿಂತ ಹೆಚ್ಚು ಪುಸ್ತಕ ಮಳಿಗೆಗಳು ಈಗಾಗಲೇ ನೋಂದಾವಣೆಗೊಂಡಿದೆ. ಒಂದು ಮಳಿಗೆಗೆ ಕೇವಲ 500 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ ಉಪಚಾರಗಳ ಸೌಲಭ್ಯ
ಸಮ್ಮೇಳನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.

500ಕ್ಕೂ ಹೆಚ್ಚು ವಿಶೇಷ ಆಹ್ವಾನಿತರು:
ರಾಜ್ಯದಾದ್ಯಂತ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಿಂದ ಹೆಸರುವಾಸಿಯಾದ ಸಾಹಿತಿಗಳು, ವಿದ್ವಾಂಸರು ಆಳ್ವಾಸ್ ನುಡಿಸಿರಿಯಲ್ಲಿ ವಿಶೇಷ ಆಹ್ವಾನಿತರಾಗಿ 3 ದಿನಗಳ ಕಾಲ ಇದ್ದು ಸಮ್ಮೇಳನಕ್ಕೆ ವಿಶೇಷ ಗೌರವವನ್ನು ತಂದುಕೊಡಲಿದ್ದಾರೆ. ರಾಜ್ಯದಾದ್ಯಂತ 85 ಆಳ್ವಾಸ್ ನುಡಿಸಿರಿ ಘಟಕಗಳು ಕಾರ್ಯೋನ್ಮುಖವಾಗಿದ್ದು ಘಟಕಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
Read more...

15ರಂದು ಆಳ್ವಾಸ್ ನುಡಿಸಿರಿಯಲ್ಲಿ ’ಕೊಂಕಣಿ ಸಿರಿ’

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನ.14ರಿಂದ 16ರ ವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿರುವ 'ಆಳ್ವಾಸ್ ನುಡಿಸಿರಿ-2014'ಕ್ಕೆ ಪೂರಕವಾಗಿ ಆಳ್ವಾಸ್ ಕೊಂಕಣಿ ಸಿರಿ- 2014 ನ.15ರಂದು ವಿದ್ಯಾಗಿರಿಯಲ್ಲಿ ನಡೆಯಲಿದೆ. 

ನ.15 ರ ಸಂಜೆ 5.30ರಿಂದ 10.30ರವರೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ಈ ಆಳ್ವಾಸ್ ಕೊಂಕಣಿ ಸಿರಿ ನಡೆಯುವ ವೇದಿಕೆಗೆ ವಿಲ್ಫಿ ರೆಬಿಂಬಸ್ ವೇದಿಕೆ ಎಂದು ಹೆಸರಿಸಲಾಗಿದ್ದು ಬಿ.ವಿ.ಬಾಳಿಗಾ ದ್ವಾರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಕೊಂಕಣಿ ಸಿರಿ ಮೂಡಿ ಬರಲಿದೆ. 

ಸಂಜೆ 5.30ರಿಂದ ಮೂಡುಬಿದಿರೆಯ ನೂರು ಗಾಯಕರಿಂದ ಸ್ವಾಗತಗೀತೆಯೊಂದಿಗೆ ಆರಂಭವಾಗುವ ಕೊಂಕಣಿ ಸಿರಿಯನ್ನು ಮಂಗಳೂರಿನ ಬಿಷಪ್ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಲಿದ್ದಾರೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರೋಯ್ ಕ್ಯಾಸ್ತೆಲಿನೋ ಮುಖ್ಯ ಅತಿಥಿಯಾಗಿ ಹಾಗೂ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎರಿಕ್ ಒಝಾರಿಯೋ, ಕಾಸರಗೋಡು ಚಿನ್ನಾ, ಕುಡುಬಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಎಂ.ರಾಮ ಗೌಡ, ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಭಾಗವಹಿಸಲಿದ್ದಾರೆ. 

ಮಂಗಳೂರಿನ ಮಾಂಡ್ ಸೊಭಾಣ್, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಭಟ್ಕಳದ ಅಂಜುಮಾನ್ - ಇ-ರಹಮ್ಮಾನಿಯಾ ಅಹಮ್ಮದೀಯ ಸುನ್ನಿ ಟ್ರಸ್ಟ್, ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ, ಗಿನ್ನೆಸ್ ದಾಖಲೆಯ ಈಜುಗಾರ ಗೋಪಾಲ ಖಾರ್ವಿ ಅವರಿಗೆ ಸಮ್ಮಾನ ಕಾರ್ಯಕ್ರಮವಿದೆ. 

ಬಳಿಕ ಕೊಂಕಣಿ ನಿನ್ನೆ ಇಂದು ಮತ್ತು ನಾಳೆ ಪರಿಕಲ್ಪನೆಯಲ್ಲಿ ಕೊಂಕಣಿ ಕಲೆ ಮತ್ತು ಸಂಸ್ಕೃತಿ ಕುರಿತು ಪ್ರೊ. ಜಯವಂತ ನಾಯಕ್, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತು ಪ್ರೊ. ವಿನ್ಸೆಂಟ್ ಆಳ್ವ ಪಾಂಬೂರು ಅವರಿಂದ ಉಪನ್ಯಾಸ ನಡೆಯಲಿದೆ. 

ಸಂಜೆ 7ರಿಂದ 10.30ರವರೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಡಪದವಿನ ಕುಡ್ಮಿ ಜಾನಪದ ಕಲಾವೇದಿಕೆಯಿಂದ ಕುಡ್ಮಿ ಗುಮ್ಟಾಂ ತ್ತು ಕೋಲಾಟ, ಭಟ್ಕಳದ ಖಾರ್ವಿ ಕಲಾಮಾಂಡ್ ವತಿಯಿಂದ ಖಾರ್ವಿ ಕಲಾ ಪ್ರದರ್ಶನ, ಮುಂಡಗೋಡದ ಸಿದ್ಧಿ ಕಲಾತಂಡದಿಂದ ಸಿದ್ಧಿ ಕಲಾ ಪ್ರದರ್ಶನ, ಶೀರೂರಿನ ನಾಕುದಾ ದಫ್ ಸಮಿತಿ ವತಿಯಿಂದ ದಾಲ್ದಿ-ದಫ್, ಕೊಂಕಣಿ ಸಾಂಸ್ಕೃತಿಕ ಸಂಘದಿಂಧ ಜಿ.ಎಸ್.ಬಿ. ಸಾಂಸ್ಕೃತಿಕ ಪ್ರದರ್ಶನ, ಕೊಂಕ್ಣಿ ಮ್ಹಜೊ ಫುಡಾರ್ -ಕಲಾಕುಲ್ ತಂಡದಿಂದ ಬೀದಿ ನಾಟಕ, ಮಂಗಳೂರಿನ ನಾಚ್ ಸೊಭಾಣ್ ವತಿಯಿಂದ ಕೊಂಕಣಿ ನೃತ್ಯ , ಕಾರ್ಕಳದ ಮಹಾಲಕ್ಷ್ಮೀ ಶೆಣೈ ಅವರಿಂದ ಹಾಡುಗಾರಿಕೆ ನಡೆಯಲಿದೆ. 

ಭಾಷಾ ಸಾಮರಸ್ಯ ಇಂದಿನ ಬಹು ಮುಖ್ಯ ಅಗತ್ಯವಾಗಿರುವುದರಿಂದ ಪ್ರಾದೇಶಿಕ ಭಾಷೆಯ ಜನರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶದ ಮೂಲಕ ಪ್ರಧಾನ ಭಾಷೆಯಾದ ಕನ್ನಡದ ಜತೆಗೆ ಅನುಸಂಧಾನ ನಡೆಸಿದಂತಾಗುತ್ತದೆ. ಜತೆಗೆ ಆಯಾ ಭಾಷಾ ಸಂಸ್ಕೃತಿಯನ್ನು ಇತರ ಭಾಷಾ ಬಾಂಧವರಿಗೆ ಪರಿಚಯಿಸಿ ಪರಸ್ಪರ ಗೌರವ, ತಮ್ಮ ತಮ್ಮ ಭಾಷೆ - ಸಂಸ್ಕೃತಿಗಳಲ್ಲಿ ಗೌರವನ್ನಿಟ್ಟುಕೊಂಡು ಅನ್ಯ ಭಾಷಾ ಸಂಸ್ಕೃತಿಗಳನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕು. ಆ ಮೂಲಕ ಪ್ರದೇಶ-ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಮರಸ್ಯ ಮೂಡಬೇಕು. ಈ ಸಣ್ಣ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಮೂಲಕ ಕೊಂಕಣಿ ಭಾಷಾ ನುಡಿವೈಭವದ ಯಶಸ್ಸಿಗೆ ಸಹಕರಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ವಿನಂತಿಸಿದ್ದಾರೆ.
Read more...

ಆಳ್ವಾಸ್ ನುಡಿಸಿರಿ: ಅಧ್ಯಕ್ಷರಾಗಿ ಡಾ. ಸಿದ್ದಲಿಂಗಯ್ಯ, ಉದ್ಘಾಟಕರಾಗಿ ನಾ.ಡಿಸೋಜ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 11ನೇ ವರ್ಷದ ಆಳ್ವಾಸ್ ನುಡಿಸಿರಿ- 2014 'ಕರ್ನಾಟಕ: ವರ್ತಮಾನದ ತಲ್ಲಣಗಳು' ಎಂಬ ಮುಖ್ಯ ಪರಿಕಲ್ಪನೆಯಲ್ಲಿ  ನ.14ರಿಂದ 16ರ ವರೆಗೆ ಇಲ್ಲಿನ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. 

ತಮ್ಮ ಸಾಹಿತ್ಯದ ಮೂಲಕ ದನಿಯಿಲ್ಲದ ಜನರ ಸ್ವಾಭಿಮಾನವನ್ನು ಎಚ್ಚರಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ನಾಡಿನ ಹೆಸರಾಂತ ಕವಿ, ನಾಡೋಜ ಡಾ. ಸಿದ್ದಲಿಂಗಯ್ಯ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಲಿರುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. 

ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಅಲಂಕರಿಸಿದ್ದ ನಾಡಿನ ಹೆಮ್ಮೆಯ ಸಾಹಿತಿ, ಹಿರಿಯ ಕಾದಂಬರಿಕಾರ ನಾ.ಡಿಸೋಜ ನುಡಿಸಿರಿ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು. 

ಕಳೆದ 10 ವರ್ಷಗಳಿಂದ ನಿರಂತರವಾಗಿ ನಾಡು- ನುಡಿ- ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಆಳ್ವಾಸ್ ನುಡಿಸಿರಿಯನ್ನು ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನೂ, ಸಂಸ್ಕೃತಿಯ ಪ್ರೀತಿ, ಗೌರವಗಳನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಹಿಂದಿನ ವರ್ಷದ ದಶಮಾನೋತ್ಸವ ಸಂಭ್ರಮವನ್ನು 'ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013' ಎಂದು ಆಚರಿಸಿ ಕನ್ನಡದ ಖ್ಯಾತಿಯನ್ನು ಜಗದಗಲಕ್ಕೆ ಪಸರಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡಿದೆ. ದಶಮಾನೋತ್ಸ ಆಚರಿಸಿದ ಮೇಲೂ ಆಳ್ವಾಸ್ ನುಡಿಸಿರಿ ತನ್ನ ನಿರಂತರತೆ ಕಾಯ್ದಕೊಂಡು 2014ರ ಸಂಭ್ರಮಕ್ಕಾಗಿ ಕಾರ್ಯತತ್ಪರವಾಗಿದೆ ಎಂದರು. 

ವಿದ್ಯಾರ್ಥಿ ಪ್ರತಿನಿಧಿಗಳಿಗೆ ಸಂಪೂರ್ಣ ಉಚಿತವಾಗಿ, ಇತರ ಪ್ರತಿನಿಧಿಗಳಿಗೆ 100 ರೂ. ಪ್ರತಿನಿಧಿ ಶುಲ್ಕದೊಂದಿಗೆ ಮೂರು ದಿನಗಳ ಕಾಲ ವಸತಿ, ಊಟೋಪಚಾರದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ನಾಡಿನ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು, ಕವಿಗಳು ಭಾಗವಹಿಸುವ ಈ ಸಮ್ಮೇಳನವನ್ನು ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. 

ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ನಾ.ದಾ. ಶೆಟ್ಟಿ, ಕಾರ್ಯದರ್ಶಿಗಳಾದ ಉದಯ ಮಂಜುನಾಥ ಮತ್ತು ವೇಣುಗೋಪಾಲ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Read more...

14ರಂದು ತುಳುಸಿರಿಗೆ ಡಾ.ವೀರೇಂದ್ರ ಹೆಗ್ಗಡೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಮೊದಲ ದಿನ ನವಂಬರ್ 14ರಂದು ಸಂಜೆ 5.30 ಕ್ಕೆ ತುಳುಸಿರಿ ನಡೆಯಲಿದೆ. 

ವಿದ್ಯಾಗಿರಿಯ ವಿದ್ವಾನ್ ಕಾಂತ ರೈ ದ್ವಾರದಿಂದ ಪ್ರವೇಶಿಸಿ ರಾಣಿ ಅಬ್ಬಕ್ಕ ಚಾವಡಿ, ಮಂದಾರ ಕೇಶವ ಭಟ್ಟ ಸಭಾಂಗಣದಲ್ಲಿ ತುಳು ಭಾಷೆ, ಸಂಸ್ಕೃತಿಯ ಉತ್ಸವ 'ಆಳ್ವಾಸ್ ತುಳುಸಿರಿ 2014', ಕರ್ನಾಟಕ ತುಳು ಅಕಾಡೆಮಿಯ ಸಹಕಾರದೊಂದಿಗೆ ನಡೆಯಲಿದೆ . ಹೆಚ್ಚಿನ ಸಂಖ್ಯೆಯ ತುಳುಬಾಂಧವರು ಈ ಸಮ್ಮೇಳನದಲ್ಲಿ ಭಾಗವಹಿಸಿ ತುಳು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಸಮಯ 5.30 ಗಂಟೆಗೆ ತುಳು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ತಂಡಗಳ ಅದ್ದೂರಿಯ ಮೆರವಣಿಗೆ ನಡೆಯಲಿದ್ದು ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಮ್ಮೇಳನಕ್ಕೆ ಚಾಲನೆಯನ್ನು ನೀಡಲಿದ್ದಾರೆ. 

ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಆಶಯ ಭಾಷಣ ಮಾಡಲಿದ್ದಾರೆ. ಜಾನಪದ ವಿದ್ವಾಂಸ ಡಾ.ಗಣೇಶ ಅಮೀನ್ ಸಂಕಮಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. 

ಅರಣ್ಯ ಮತ್ತು ಪರಿಸರ ಖಾತೆ ಹಾಗೂ ದ. ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ, ದ.ಕ. ಜಿಲ್ಲೆಯ ಮಂತ್ರಿಗಳು, ಸಂಸದರು, ಶಾಸಕರು, ಮಾಜಿ ಶಾಸಕರು, ತುಳು ಅಕಾಡೆಮಿಯ ಪದಾಧಿಕಾರಿಗಳು, ತುಳುಕೂಟದ ಪದಾಧಿಕಾರಿಗಳು ಹಾಗೂ ತುಳು ನಾಡಿನ ವಿವಿಧ ಸಮುದಾಯಗಳ ನಾಯಕರು ಉಪಸ್ಥಿತರಿರುವರು. 

ತುಳು ಸಂಸ್ಕೃತಿಯ ಆವರಣ: 'ಆಳ್ವಾಸ್ ತುಳುಸಿರಿ' ನಡೆಯುವ ಪ್ರದೇಶದಲ್ಲಿ ತುಳು ಸಂಸ್ಕೃತಿಯನ್ನು ಬಿಂಬಿಸುವ ಪರಿಸರವನ್ನು ನಿರ್ಮಿಸಲು ವಿಶೇಷ ಕಾಳಜಿಯನ್ನು ವಹಿಸಲಾಗಿದೆ. ತುಳು ಭಾಷಾ-ಸಂಸ್ಕೃತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ವಿಶೇಷ ಕಾಳಜಿಯನ್ನು ವಹಿಸಲಾಗಿದೆ. ವಸ್ತು ಪ್ರದರ್ಶನ, ವೇಷಭೂಷಣ, ತುಳು ಪರಿಕರಗಳು ಹಾಗೂ ತುಳುವಿನ ಸಸ್ಯಾಹಾರಿ ಮತ್ತು ಮಾಂಸಾಹಾರಿ ತಿಂಡಿತಿನಿಸುಗಳ ವಿಶೇಷ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ತುಳು ಸಂಸ್ಕೃತಿಯ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿರಳಾತಿ ವಿರಳ ಜಾನಪದ ನತ್ಯಗಳಾದ ಪಾರ್ದನ ಮೇಳ, ಪುರುಸೆರ್, ದಾರಿನ, ಮಾರಿಭೂತ ಮೊದಲಾದ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಳವಡಿಸಲಾಗಿದೆ. ಮಕ್ಕಳಿಂದ ಹಿಡಿದು ಹಿರಿಯವರೆಗೆ ಸಾಂಸ್ಕೃತಿಕ ತಿಳಿವಳಿಕೆಯನ್ನು ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾ ವರ್ಗಗಳ ಜನರನ್ನು ಸಂತೋಷಗೊಳಿಸುವುದರಲ್ಲಿ ಸಂಶಯವಿಲ್ಲ ಎಂದು ಅವರು ತಿಳಿಸಿದರು. 

ತುಳು ಸಾಧಕರಿಗೆ ತುಳುಸಿರಿ ಸಮ್ಮಾನ: ತುಳುನಾಡಿನ ಭಾಷೆ-ಸಂಸ್ಕೃತಿಯ ಪ್ರಸರಣಕ್ಕೆ ದುಡಿದ ಹನ್ನೆರಡು ಮಂದಿ ಸಾಧಕರಿಗೆ 'ತುಳುಸಿರಿ' ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ತುಳು ಅಕಾಡೆಮಿ ವಿಶ್ರಾಂತ ಅಧ್ಯಕ್ಷರು, ತುಳು ಸಾಹಿತಿ, ವಿದ್ವಾಂಸ ಡಾ.ಪಾಲ್ತಾಡಿ ರಾಮಕಷ್ಣ ಆಚಾರ್, ತುಳು ಸಾಹಿತಿ, ಸಂಶೋಧಕರಾದ ಡಾ.ವಾಮನ ನಂದಾವರ, ತುಳು ಸಾಹಿತಿ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ, ತುಳು ರಂಗಭೂಮಿ ಕಲಾವಿದ, ಸಾಹಿತಿ ಕೆ.ಎನ್.ಟೈಲರ್, ತುಳು ಯಕ್ಷಗಾನ ಕ್ಷೇತ್ರದ ಅದ್ವೀತಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ತುಳು ರಂಗಭೂಮಿ ಕಲಾವಿದ ವಿ.ಜಿ.ಪಾಲ್ ಹಲವು ವರ್ಷಗಳಿಂದ ದೈವಾರಾಧನಾ ಕಲಾವಿದ ಉಮೇಶ ಪಂಬದ, ಶಿವಪ್ಪ ನಲಿಕೆ ಮತ್ತು ಗಂಗಯ್ಯ ಪರವ, ತುಳು ಪತ್ರಿಕೋದ್ಯಮದ ಜಯಂತಿ ಎಸ್. ಬಂಗೇರ ಹಾಗೂ ತುಳು ಹಾಸ್ಯ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ದೇವದಾಸ್ ಕಾಪಿಕಾಡ್ ಇವರಿಗೆ ಈ ವರ್ಷದ ತುಳುಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
Read more...

ಆಳ್ವಾಸ್ ವಿದ್ಯಾರ್ಥಿ ಸಿರಿ ಸಂಪನ್ನ

ಮೂಡುಬಿದಿರೆ: ಇಂದು ಗೆಲುವಿನ ಜಗತ್ತೇ ನಮ್ಮ ಕೈಯಲ್ಲಿದೆ. ಸಾಧನೆಗೆ ಅಡ್ಡಿ ಆತಂಕಗಳು ಬಂದಾಗ ಅವುಗಳನ್ನು ತೊಡೆದು ಹಾಕಿ ಮುಂದೆ ಸಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರೊತ್ಸಾಹ ನೀಡುವ ಗುರು ಮತ್ತು ಸಾಧಿಸುವ ಛಲ, ಗುರಿ ಮುಖ್ಯವಾದಾಗ ಸಾಧನೆ ಸಾಧ್ಯ ಎಂದು ಗಿನ್ನೆಸ್ ದಾಖಲೆಯ ನಿರ್ದೇಶಕ ಮಾಸ್ಟರ್ ಕಿಶಾನ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಆಳ್ವಾಸ್ ವಿದ್ಯಾರ್ಥಿಸಿರಿ-೨೦೧೪ ಸಮ್ಮೇಳನಕ್ಕೆ ಶುಕ್ರವಾರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸಾಹಿತ್ಯ, ಸಾಂಸ್ಕೃತಿಯ ಸೊಬಗು ನಗರ ಪ್ರದೇಶದಲ್ಲಿ ಸಿಗುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಸಾಧನೆಯ ಕಿಚ್ಚಿದೆ. ಹೊಸತದತ್ತ ತೆರೆದುಕೊಳ್ಳುವ ಹಂಬಲವಿದೆ. ಆದರೆ ಪ್ರೊತ್ಸಾಹಕರ ಕೊರತೆಯಿಂದಾಗಿ ಪ್ರತಿಭೆಗಳು ಸೊರಗುತ್ತಿದ್ದಾರೆ ಎಂದು ಹೇಳಿದ ಅವರು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವಿದ್ಯಾರ್ಥಿ ಸಮ್ಮೇಳನ ಸುಂದರ ವೇದಿಕೆಯಾಗಿದೆ ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿರುವುದಕ್ಕೆ ಡಾ.ಮೋಹನ ಆಳ್ವರಿಗೆ ಕೃತಜ್ಞತೆಗಳು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರದ್ಧಾ ಎನ್. ಪೈವಳಿಕೆ ಮಾತನಾಡಿ ಸಾಹಿತ್ಯ ಮತ್ತು ನಮ್ಮ ನಾಡಿನ ಕಲೆಗಳು ಅವುಗಳ ನೈಜ್ಯ ಸತ್ವಕ್ಕೆ ಅಭಿಮುಖವಾಗಿ ಮುನ್ನಡೆದರೆ ಇಡೀ ಭಾರತ ಮಾನವೀಯತೆಯ, ಸತ್ಯದ, ಅಹಿಂಸೆಯ ಸದಾಚಾರದ ಗಣಿಯಾದೀತು. ಕನ್ನಡ ಹಿರಿಮೆಗೆ ಶಿರೋಮಣಿಯಾಗಿ ವಿಶ್ವಕ್ಕೆ ಮಾದರಿಯಾಗುತ್ತದೆ.
“ಇಂದಿನ ಮಕ್ಕಳೇ ಮುಂದಿನ ಜನಾಂಗ”, ಮುಂದಿನ ಪೀಳಿಗೆ ಸನ್ಮಾರ್ಗದಲ್ಲಿ ಸಾಗಬೇಕೆಂದಿದ್ದರೆ ವಿದ್ಯಾರ್ಥಿಗಳಿಗೆ ಸಾಹಿತ್ಯ ಕಲೆಯನ್ನು ಬೋಧಿಸಬೇಕು. ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಬಿಟ್ಟರೆ ನಮಗೆ ಜೀವನವೇ ಇಲ್ಲ ಆದುದರಿಂದ ಹಿರಿಯರು ಇದಕ್ಕೆ ಪ್ರವರ್ಧನಿಸಬೇಕು ಎಂದು ಹೇಳಿದ ಶ್ರದ್ಧಾ ಹುಟ್ಟಿದ ಜೀವಿ ಬಾಳಲೇಬೇಕು. ನಾವು ತರಗತಿಗಳು ಒಡ್ಡುವ ಪರೀಕ್ಷೆಗಳ ಕೊಠಡಿಗಳಿಗೆ ತಪ್ಪಿಸಬಹುದು ಆದರೆ ವಿಧಿಯೊಡ್ಡುವ ಪರೀಕ್ಷೆಯನ್ನು ತಪ್ಪಿಸಲು ಪ್ರತಿಯೊಬ್ಬನೂ ಅಸಮರ್ಥನೇ ಸರಿ. ಆದ್ದರಿಂದ ನಾವು ಎಷ್ಟು ಸಮಯ ಬಾಳಿ ನಮ್ಮ ಕರ್ತವ್ಯವನ್ನು ನಿಭಾಯಿಸಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಸಮ್ಮೇಳನದ ರೂವಾರಿ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ನುಡಿಸಿರಿ, ವಿರಾಸತ್, ಮಕ್ಕಳಸಿರಿ ಬೂಟಾಟಿಕೆಯ ಸಮ್ಮೇಳನವಾಗದೆ ಮನಸ್ಸು ಕಟ್ಟು, ಸಾಹಿತಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ದೇಶಿ ಜೀವನ ಪದ್ಧತಿಯಿಂದ ವಿಮುಖರಾಗುತ್ತಿರುವ ಈ ಸನ್ನಿವೇಶದಲ್ಲಿ ನಮ್ಮ ಮೂಲ ಪರಂಪರೆ, ಸಂಸ್ಕೃತಿ ತೆರೆಗೆ ಸರಿಯುತ್ತಿದೆ. ಅವುಗಳನ್ನು ಜತನದಿಂದ ಕಾಪಾಡುವ ಮುಂದಿನ ಪೀಳಿಗೆ ಅರ್ಥಪೂರ್ಣವಾಗಿ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿದ್ಯಾರ್ಥಿಗಳಲ್ಲಿ ಇಂತಹ ಜಾಗೃತಿ ಮೂಡಿಸಲು ಆಳ್ವಾಸ್ ಸಂಸ್ಥೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿದೆ. ಯೋಚನೆ, ಯೋಜನೆಯನ್ನು ಮೇಲ್ದರ್ಜೆಗೆ ಕೊಂಡೊಯ್ಯಲು ‘ವಿದ್ಯಾರ್ಥಿಸಿರಿ’ ಸಮ್ಮೇಳನ ಪೂರಕವಾಗಿದೆ. ಕಾಲ ಕಾಲಕ್ಕೆ ಚಿಂತನೆಗಳನ್ನು ಅಂಕುರಿಸದೆ. ಮೇಲ್ದರ್ಜೆಗೆ ಕೊಂಡೊಯ್ಯದೆ ವಿದ್ಯಾರ್ಥಿಗಳನ್ನು ಸಾಹಿತ್ಯದಿಂದ ದೂರ ಮಾಡುತ್ತಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಪುರಸ್ಕಾರ: ಉಡುಪಿ ವಳಕಾಡು ಸರ್ಕಾರಿ ಪ್ರೌಢಶಾಲೆ ಅಕ್ಷಯ್ ಹೆಗಡೆ, ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಬ ಅಯಣ.ವಿ.ರಮಣ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಗೀತಾಲಕ್ಷ್ಮೀ.ಕೆ ಅವರಿಗೆ ೨೦೧೪ನೇ ಸಾಲಿನ ಆಳ್ವಾಸ್ ವಿದ್ಯಾರ್ಥಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಮಕ್ಕಳ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ,ಡಾ. ಚಿನ್ನಪ್ಪ ಗೌಡ, ಮೂಡುಬಿದಿರೆ ಕ್ಷೇತ್ರಾ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ,ಉಪಸ್ಥಿತರಿದ್ದರು.


ಪುತ್ತೂರು ವಿವೇಕಾನಂದ ಪ.ಪೂ ಕಾಲೇಜಿನ ಉಷಾ.ಎ.ಸ್ವಾಗತಿಸಿದರು. ಉಜಿರೆ ಎಸ್‌ಡಿ‌ಎಂ ಆಂಗ್ಲ ಮಾಧ್ಯಮ ಶಾಲೆಯ ರಶ್ಮಿ ಪಲ್ಲವಿ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಸುಶ್ಮಿತಾ.ಕೆ. ವಂದಿಸಿದರು.
Read more...

ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಆಳ್ವಾಸ್ ಚಿತ್ರಸಿರಿ ರಾಜ್ಯಮಟ್ಟದ ನಾಲ್ಕು ದಿನಗಳ ಚಿತ್ರಕಲಾ ಶಿಬಿರದ ಸಮಾರೋಪ ಹಾಗೂ ಆಳ್ವಾಸ್ ಚಿತ್ರಸಿರಿ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ಭಾನುವಾರ ಜರುಗಿತು.

ಈಗ ಕಲಾ ಶಾಲೆಗಳು ಹೆಚ್ಚುತ್ತಿದ್ದು ದುಡ್ಡುಮಾಡುವ ದಂಧೆಯಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕಲಾ ಶಾಲೆಗಳು ಶಿಸ್ತು ಮತ್ತು ಗೌರವವನ್ನು ಉಳಿಸಿಕೊಂಡಿವೆ. ಚಿತ್ರಕಲಾವಿದರ ಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು. 

ಅಧ್ಯಕ್ಷತೆ ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹಿರಿಯ ಚಿತ್ರಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರಿಗೆ 10ಸಾವಿರ ನಗದು ಸಹಿತ ಚಿತ್ರಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ಆಳ್ವಾಸ್ ಕ್ಯಾಂಪಸ್‌ನಲ್ಲಿ ಬೆಲೆ ಕಟ್ಟಲಾಗದ ಅಮೂಲ್ಯ ಮೂರು ಸಾವಿರಕ್ಕೂ ಅಧಿಕ ಕಲಾಕೃತಿಗಳು ಸಂಗ್ರಹದಲ್ಲಿವೆ. ಈ ಕಲಾಕೃತಿಗಳನ್ನು ದುರುಪಯೋಗಪಡಿಸಿಕೊಳ್ಳದೆ ಸಂರಕ್ಷಿಸಿಡಲಾಗುವುದು. ಆಯ್ದ ಕಲಾಕೃತಿಗಳನ್ನು ಮ್ಯೂಸಿಯಂನಲ್ಲಿ ಇಡಲಾಗುವುದು ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ಣಾಟಕ ಬ್ಯಾಂಕಿನ ಸಿಇಒ ಜಯರಾಮ್ ಭಟ್ ಮಾತನಾಡಿ, ಕಲೆ ಇರುವಲ್ಲಿ ಸಂಸ್ಕೃತಿ ವಿಜೃಂಭಿಸುತ್ತದೆ. ತಮ್ಮ ಬ್ಯಾಂಕ್ ಕಲಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದೆ ಎಂದರು. 

ಕಲಾವಿದರ ಪರವಾಗಿ ರಾಜು ತೇರದಾಳ ಕೊಪ್ಪಳ, ನಾಗೇಶ್ ಎಸ್. ಹಾಸನ ಮಾತನಾಡಿ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ ಕಲಾವಿದರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಗಣೇಶ ಸೋಮಯಾಜಿ ಸ್ವಾಗತಿಸಿ ಪಿ.ಎಸ್.ಪುಣಿಂಚಿತ್ತಾಯರನ್ನು ಪರಿಚಯಿಸಿದರು. ಅಧ್ಯಾಪಕ ಉದಯ್ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. 
Read more...

ನ.14ರಿಂದ ಆಳ್ವಾಸ್ ನುಡಿಸಿರಿ ಸಂಭ್ರಮ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 11ನೇ ವರ್ಷದ ಆಳ್ವಾಸ್ ನುಡಿಸಿರಿ- 2014 ನ.14,15 ಮತ್ತು 16ರಂದು 'ಕರ್ನಾಟಕ: ವರ್ತಮಾನದ ತಲ್ಲಣಗಳು' ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಮೂಡುಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. 

ನಾಡಿನ ಹೆಸರಾಂತ ಕವಿ, ನಾಡೋಜ ಡಾ. ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ದನಿಯಿಲ್ಲದ ಜನರ ಸ್ವಾಭಿಮಾನವನ್ನು ಎಚ್ಚರಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ಡಾ.ಸಿದ್ದಲಿಂಗಯ್ಯ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸುವುದು ಸಂತಸವನ್ನುಂಟು ಮಾಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. 

ಹಿರಿಯ ಕಾದಂಬರಿಕಾರ, ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಅಲಂಕರಿಸಿದ್ದ ನಾಡಿನ ಹೆಮ್ಮೆಯ ಸಾಹಿತಿ ನಾ.ಡಿಸೋಜ ನುಡಿಸಿರಿ ಉದ್ಘಾಟಿಸಲಿದ್ದಾರೆ. ಮೂರು ದಿನಗಳಲ್ಲಿ ತುಳು, ಕೊಂಕಣಿ, ಬ್ಯಾರಿ ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. 

ನಾಡು- ನುಡಿ- ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಆಳ್ವಾಸ್ ನುಡಿಸಿರಿಯನ್ನು 11 ವರ್ಷಗಳಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನೂ, ಸಂಸ್ಕೃತಿಯ ಪ್ರೀತಿ, ಗೌರವಗಳನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷವಂತೂ ಆಳ್ವಾಸ್ ನುಡಿಸಿರಿಗೆ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮವನ್ನು 'ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013' ಎಂದು ಆಚರಿಸಿ ಕನ್ನಡದ ಖ್ಯಾತಿಯನ್ನು ಜಗದಗಲಕ್ಕೆ ಪಸರಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡಿದೆ. ದಶಮಾನೋತ್ಸ ಆಚರಿಸಿದ ಮೇಲೂ ಆಳ್ವಾಸ್ ನುಡಿಸಿರಿ ತನ್ನ ನಿರಂತರತೆ ಕಾಯ್ದಕೊಂಡು 2014ರ ಸಂಭ್ರಮಕ್ಕಾಗಿ ಕಾರ್ಯತತ್ಪರವಾಗಿದೆ ಎಂದರು. 

ವಿದ್ಯಾರ್ಥಿ ಪ್ರತಿನಿಧಿಗಳಿಗೆ ಸಂಪೂರ್ಣ ಉಚಿತವಾಗಿ, ಇತರ ಪ್ರತಿನಿಧಿಗಳಿಗೆ 100 ರೂ. ಪ್ರತಿನಿಧಿ ಶುಲ್ಕದೊಂದಿಗೆ ಮೂರು ದಿನಗಳ ಕಾಲ ವಸತಿ, ಊಟೋಪಚಾರದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ನಾಡಿನ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು, ಕವಿಗಳು ಭಾಗವಹಿಸುವ ಈ ಸಮ್ಮೇಳನವನ್ನು ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. 

ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ನಾ.ದಾ. ಶೆಟ್ಟಿ, ಕಾರ್ಯದರ್ಶಿಗಳಾದ ಉದಯ ಮಂಜುನಾಥ ಮತ್ತು ವೇಣುಗೋಪಾಲ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Read more...