ಯುವಜನತೆ ಕೈಯಲ್ಲಿ ಭಾರತದ ಭವಿಷ್ಯ: ಚಕ್ರವರ್ತಿ ಸೂಲಿಬೆಲೆ

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿಯ ವಿರಾಸತ್‍ನ 4ನೇ ದಿನವಾದ ಇಂದು ಪಂಜೆಮಂಗೇಶರಾಯ ವೇದಿಕೆಯೂ ಇಡೀ ಯುವಜನೆತೆಯಿಂದ ಕೂಡಿತ್ತು. ಅದು ಖ್ಯಾತ ಮಾತಿನ ಮೋಡಿಗಾರ ಚಕ್ರವರ್ತಿ ಸೂಲಿಬೆಲೆಯ ಮಾತಿಗಾಗಿ. ಹೌದು ಅವರಿಗೆ ನೀಡಿದ್ದ ‘ಯುವ ಜನತೆ ಮತ್ತು ಭಾರತ ಭವಿಷ್ಯ’ ವಿಷಯದ ಕುರಿತು ಮಾತನಾಡಿದ ಅವರು ನೆರೆದಿದ್ದ ಇಡೀ ಯುವಜನತೆನ್ನು ಜಾಗೃತಿಗೊಳಿಸಿದರು. ಭಾರತದ ಶಕ್ತಿ ಅಂದರೆ ಅದು ನಾವು ಮತ್ತು ನೀವು ಮಾತ್ರ. ಯಾವ ದೇಶದಲ್ಲಿಯೂ ಇರದ ಸಂಪನ್ಮೂಲ ಭಾರತ ದೇಶದಲ್ಲಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲಾಗದೆ ವ್ಯತೆಪಡುತ್ತಿದ್ದೇವೆ.
ಯುವಕರು ಒಂದಾದರೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದು. ಇಡೀ ಭಾರತ ಶ್ರೇಷ್ಠ ದೇವಸ್ಥಾನವಿದ್ದಂತೆ. ಅಮೇರಿಕಾದಂತ ದೇಶ ತಾನು ಬದುಕದೆ, ಬರೀ ಬುದ್ಧಿ ಹೇಳಿಕೊಂಡು ಬದುಕುತ್ತದೆ. ಆದರೆ ನಮ್ಮ ದೇಶ ತಾನು ಬದುಕಿ ಇತರರನ್ನು ಬದುಕಲು ಬಿಡುತ್ತದೆ. ನಿನ್ನನ್ನು ನೀನು ಅರಿತುಕೊಳ್ಳಬೇಕು, ನಿನ್ನ ಸ್ವರೂಪವನ್ನು ಅರಿಯಬೇಕು ಎಂದು ಸಾರಿದ ದೇಶ ಈ ಭಾರತ. ಜಗತ್ತನ್ನು ಪೋಷಿಸಿಕೊಂಡ, ಒಪ್ಪಿಕೊಂಡ, ಎಲ್ಲರಿಗೂ ಜಾಗವನ್ನು ಕಲ್ಪಿಸಿದ್ದು ಭಾರತ. ಜಗತ್ತಿನ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಭಾರತದ ಪಾಲುದಾರಿಕೆ ಇದೆ. ಆದರೆ ಇಂದು ಈ ಶ್ರೇಷ್ಠ ಭಾರತದಿಂದ ಯುವಜನತೆ ದೂರ ಸರಿಯುತ್ತಿದೆ. ನಾವೀಗ ಅಂತರ್ಮುಖಿಗಳಾಗಬೇಕು. ನಮ್ಮೊಳಗಿರುವ ಶಕ್ತಿಯನ್ನು ನಾವು ಅರಿಯಬೇಕು ಎಂದರು.
ಪ್ರಪಂಚಕ್ಕೆ ಶೂನ್ಯವನ್ನು ನೀಡಿದ ಭಾರತ ನೀನು ಎಲ್ಲಿಗೋದರು ಬಿಟ್ಟ ಸ್ಥಳವನ್ನು ಬಂದು ಸೇರುತ್ತೀಯ. ಶೂನ್ಯ ಬದುಕಿನ ಎಲ್ಲಾ ದಿಕ್ಕಿನಲ್ಲಿ ಹರಿದಾಡುತ್ತದೆ. ಪ್ರತಿಯೊಂದು ತಪ್ಪಿಗೆ ಶಿಕ್ಷೆಯನ್ನು ಕೊಡುವ ಶ್ರೇಷ್ಠತೆಯನ್ನು ಭಾರತ ಹೊಂದಿದೆ. ಇವತ್ತಿನ ಯುವಜನತೆ ತುಂಬಾ ಭಾವನೆಗಳನ್ನು ಕಳೆದುಕೊಳ್ಳುತ್ತಿದೆ. ಇದು ದೇಶಕ್ಕೆ ಮಾರಕವಾಗಿದೆ. ಭಾವನೆಗಳಿಲ್ಲದ ವ್ಯಕ್ತಿ ಸತ್ತ ವ್ಯಕ್ತಿ ಇದ್ದಂತೆ. ಮಾತಿನ, ಬರವಣಿಗೆಯ ಶಕ್ತಿ ಎಲ್ಲರಲ್ಲಿಯೂ ಇದೆ. ಅದನ್ನು ಹೊರತರುವಲ್ಲಿ ಸೋತಿದ್ದೇವೆ. ಬದುಕಿನೊಂದಿಗೆ ಒಂದಾಗುವುದನ್ನು ಕಲಿಯಬೇಕು. ವಾಸ್ತವವಾಗಿ ಭಾರತದ ಸ್ಥಿತಿ ಕರಾಳವಾಗಿಲ್ಲ. ದೇಶ ಬದಲಾಗುವ ಸ್ಥಿತಿಯಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆ ಇಂದು ಇಷ್ಟೊಂದು ಯುವಜನತೆ ಈ ನುಡಿಸಿರಿಯಲ್ಲಿ ಪಾಲುಗೊಂಡಿದೆ. ಇಲ್ಲೇ ತಿಳಿಯುತ್ತದೆ ಯುವಜನತೆ ಬದಲಾವಣೆಯ ದಾರಿಯಲ್ಲಿದ್ದಾರೆ. ಹಾಗಾಗಿ ಇಡೀ ಜಗತ್ತು ಭಾರತದ ಕುರಿತು ಗಡಿಬಿಡಿಯಲ್ಲಿದ್ದಾರೆ.
ಇಷ್ಟಾದರೆ ಸಾಲದು ವಾಸ್ತವವಾಗಿ ಗಮನಿಸಿದರೆ ಆಂತರಿಕ ಗಟ್ಟಿತನವನ್ನು ಕಳೆದುಕೊಳ್ಲೂತ್ತಿದ್ದೇವೆ. ನಮಗೆ ಗೊತ್ತಿಲ್ಲದೆ ಹಾಗೆ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ದೇಶದ ಪರಿಸ್ಥಿತಿ ಬದಲಾಗಬೇಕಾದರೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ನಮ್ಮ ಸಾಮಥ್ರ್ಯವನ್ನು ಬಳಸಿಕೊಳ್ಳಬೇಕು. ಆಗ ನಿಜವಾಗಿಯೂ ಭಾರತ ಶ್ರೇಷ್ಠ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಯುವಜನತೆಗೆ ಮನ ಮುಟ್ಟುವಂತೆ ಹೇಳಿದರು.
ಭಾರತದ ಭವಿಷ್ಯ ಅಧ್ಬುತ, ಉಜ್ವಲವಾಗಿದೆ. ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದನ್ನು ಅರಿತುಕೊಳ್ಳೋಣ. ಸಾಮಾನ್ಯರಂತೆ ಜೀವಿಸುವುದನ್ನು ಬಿಟ್ಟು ಶ್ರೇಷ್ಠ ಕನಸು, ವಿಚಾರಗಳನ್ನು ಇಟ್ಟುಕೊಳ್ಳೋಣ. ಯುವಜನತೆ ಹೆಚ್ಚು ಸಮಯವನ್ನು ಮೊಬೈಲ್ ಜೊತೆ ಕಳೆಯುವುದನ್ನು ಬಿಟ್ಟು ದೇಶ ಕಟ್ಟುವಲ್ಲಿ ಮುಂದಾಗಬೇಕು, ಆಗ ಎಲ್ಲವೂ ಸರಿಯಾಗಿತ್ತದೆ ಎಂದು ಸೂಲಿಬೆಲೆ ಯುವಜನತೆಗೆ ಜಾಗೃತಿ ಮೂಡಿಸುವಲ್ಲಿ ಸಫಲವಾದರು. ಇದಕ್ಕೆ ದಿವ್ಯ ಸಾಕ್ಷಿಯೇ ಕಾರ್ಯಕ್ರಮದ ನಂತರ ಇಡೀ ಸಭೆ ಅವರ ಹಿಂದೆ ನಡೆದಿತ್ತು. ಆ ರೀತಿ ಮಾತಿನಲ್ಲೇ ಮೋಡಿ ಮಾಡಿದ ಚಕ್ರವರ್ತಿ ಸೂಲಿಬೆಲೆ ಎಲ್ಲರ ಮನಸ್ಸನ್ನು ಎಚ್ಚರಗೊಳಿಸಿದರು.