ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷ ಡಾ. ಸಿದ್ಧಲಿಂಗಯ್ಯ ಭಾಷಣ






ಮೂಡುಬಿದಿರೆ: 11ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಾದೇಶಿಕ ಭಾಷೆಗಳ ಐಸಿರಿಯೊಂದಿಗೆ ನ.14ರಿಂದ ಮೂರು ದಿನಗಳ ವರೆಗೆ ಸಂಪನ್ನಗೊಳ್ಳುತ್ತಿದ್ದು 
ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆಯುಳ್ಳ ಕನ್ನಡಭಾಷೆ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ.  ಕನ್ನಡಸಂಸ್ಕೃತಿ ಬಹುಮುಖೀ ಸಂಸ್ಕೃತಿಯಾಗಿದ್ದು ತನ್ನ ವೈವಿಧ್ಯತೆಗೆ ಹೆಸರಾಗಿದೆ.  ಸಹನೆ, ಕನ್ನಡಸಂಸ್ಕೃತಿಯ ಮೂಲಗುಣ. ಎಲ್ಲಾ ಜಾತಿ, ಧರ್ಮಗಳು, ಭಾಷೆ, ಉಪಭಾಷೆಗಳು, ಸಂಸ್ಕೃತಿ, ಉಪಸಂಸ್ಕೃತಿಗಳು ಶತಶತಮಾನಗಳ ಕಾಲ ಸಹಬಾಳ್ವೆ ಮಾಡಿದ್ದು ಇಲ್ಲಿಯ ವಿಶೇಷ.  ಆಗಾಗ ಸಣ್ಣ ಪ್ರಮಾಣದ ಸಂಘರ್ಷಗಳು ಸಂಭವಿಸಿದರೂ, ಅದನ್ನು ಅರಗಿಸಿಕೊಂಡು ಮೀರಿ ಬೆಳೆಯುವ ಶಕ್ತಿಯನ್ನು ಕನ್ನಡಭಾಷೆ ತೋರುತ್ತ ಬಂದಿದೆ.  ಪ್ರಸ್ತುತ ಕನ್ನಡಭಾಷೆಗೆ ಒದಗಿರುವ ಗಂಡಾಂತರ ಕನ್ನಡಪ್ರೇಮಿಗಳನ್ನು ಆತಂಕಕ್ಕೆ ಈಡುಮಾಡಿದೆ. ನಮ್ಮ ಕಣ್ಮುಂದೆಯೇ ನಮ್ಮ ಮಕ್ಕಳು ಕನ್ನಡದಿಂದ ದೂರವಾಗಿ ಸಂಸ್ಕೃತಿಯ ಬೇರುಗಳನ್ನು ಕಳೆದುಕೊಂಡು ತ್ರಿಶಂಕು ಸ್ಥಿತಿಯತ್ತ ಸಾಗುತ್ತಿರುವ ದುರಂತವನ್ನು ನಾವು ನೋಡುತ್ತಿದ್ದೇವೆ. ಮಾತನಾಡಲು ಕಲಿಯುತ್ತಿರುವ ಮಕ್ಕಳು ಕೂಡ ಇಂಗ್ಲೀಷಿನಲ್ಲೇ ತೊದಲುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ.
      ೧೯೨೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸರ್.ಎಂ.ಪುಟ್ಟಣ್ಣಚೆಟ್ಟಿ ಅವರು ಹೇಳಿದ ಒಂದು ಪ್ರಸಂಗ ನೆನಪಾಗುತ್ತದೆ.  ಕನ್ಯಾಪಿತೃ ಒಬ್ಬ ತನ್ನ ಮಗಳನ್ನು ಸೂಕ್ತ ವರನಿಗೆ ಕೊಟ್ಟು ಮದುವೆ ಮಾಡಿದ್ದ. ಅಳಿಯನಾದವನು ಮಾವನ ಕ್ಷೇಮ ಸಮಾಚಾರವನ್ನು ವಿಚಾರಿಸಿ ಒಂದು ಪತ್ರ ಬರೆದ.  ಪತ್ರವನ್ನು ಒಡೆದು ನೋಡಿದ ಮಾವ, ಪತ್ರದಲ್ಲಿರುವ ವಿಷಯಗಳನ್ನು ಓದುವುದಕ್ಕಿಂತ ಮೊದಲೇ ಕೂಗಾಡಲು ತೊಡಗಿದ.  ಅಳಿಯನ ಮೇಲೆ ಕಿಡಿಕಾರ ತೊಡಗಿದ. ಮಾವನ ಕೋಪಕ್ಕೆ ಕಾರಣವೇನೆಂದರೆ ಅಳಿಯ ಪತ್ರವನ್ನು ಕನ್ನಡದಲ್ಲಿ ಬರೆದದ್ದು.  ಇವನು ಕನ್ನಡದಲ್ಲಿ ಪತ್ರ ಬರೆಯುತ್ತಾನೆಂದು ಗೊತ್ತಿದ್ದರೆ ನನ್ನ ಮಗಳನ್ನು ಇವನಿಗೆ ಕೊಟ್ಟು ಮದುವೆ ಮಾಡುತ್ತಿರಲಿಲ್ಲ ಎಂದು ಇಂಗ್ಲೀಷ್ ಪ್ರೇಮಿ ಮಾವ ರೇಗಾಡಿದ.  ಆದರೆ ಇಂಗ್ಲೀಷ್ ಮಾವ ಅಸಹಾಯಕನಾಗಿದ್ದ. ಆಗಲೇ ಮಗಳು ಮದುವೆಯಾಗಿ ಗಂಡನ ಮನೆ ಸೇರಿ ಆಗಿತ್ತು.
    ಈ ಮಾತನ್ನು ಸುಮಾರು ತೊಂಬತ್ತು ವರ್ಷಗಳ ಹಿಂದೆ ಪುಟ್ಟಣ್ಣಚೆಟ್ಟರು ಹೇಳಿದ್ದರೂ ಕೂಡ, ಇಂಗ್ಲೀಷ್ ಮಾವಂದಿರ ಸಂತಾನ ಹೆಚ್ಚುತ್ತಲೇ ಇದೆ.  ಪ್ರಾಥಮಿಕ ಪೂರ್ವಶಿಕ್ಷಣವನ್ನು ತಮ್ಮ ಮಕ್ಕಳಿಗೆ ಆಂಗ್ಲಭಾಷೆಯಲ್ಲೇ ಕೊಡಿಸಬೇಕೆಂಬ ಗೀಳನ್ನು ಹಚ್ಚಿಕೊಂಡ ಪೋಷಕರು ಬೆಳಗಿನ ಜಾವದ ಚಳಿಯಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಮುಂದೆ ನಡುಗುತ್ತ ಸರತಿಯ ಸಾಲಿನಲ್ಲಿ ನಿಲ್ಲುವುದನ್ನು ಕಂಡಾಗ ವ್ಯಥೆಯಾಗುತ್ತದೆ.  ಕೆಲವು ಶಾಲೆಗಳಲ್ಲಿ ವಿದ್ಯಾವಂತರಲ್ಲದ ತಂದೆತಾಯಿಯರ ಮಕ್ಕಳಿಗೆ ಪ್ರವೇಶವಿಲ್ಲ.  ಹೆತ್ತವರಿಗೂ ಆಂಗ್ಲಭಾಷೆಯ ಪರಿಜ್ಞಾನ ಕಡ್ಡಾಯ.  ಶಾಲೆಗೆ ಸೇರಿದ ಮಕ್ಕಳು ಅಕಸ್ಮಾತ್ ಕನ್ನಡದಲ್ಲಿ ಮಾತಾಡಿದರೆ ಅವರಿಗೆ ದಂಡ, ಬೆತ್ತದೇಟು.  ಶುಲ್ಕದ ವಿಷಯ ಬಂದರೆ ಬಡವರು ಬೆಚ್ಚಿ ಬೀಳುವಂತಾಗುತ್ತದೆ.  ಏಕೆಂದರೆ ಶಾಲೆಯ ಆಡಳಿತ ಮಂಡಳಿಯವರಿಗೆ ಪೋಷಕರು ಕೇಜಿಗಟ್ಟಲೆ ರೂಪಾಯಿಗಳನ್ನು ಕಕ್ಕಬೇಕು. ಇದಕ್ಕೆ ಪರಿಹಾರವೇನು? ಏಕರೂಪ ಶಿಕ್ಷಣ ನೀತಿಯೇ ಇದಕ್ಕೆ ಪರಿಹಾರ.  ಇತ್ತೀಚೆಗೆ ಬಂದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ.  ಪ್ರಾಥಮಿಕ ಶಿಕ್ಷಣದ ಭಾಷಾಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟದ್ದು ಎಂಬ ತೀರ್ಪು ಬಡವರು ಮತ್ತು ಶ್ರೀಮಂತರ ನಡುವೆ ಶೈಕ್ಷಣಿಕ ಕಂದಕವನ್ನು ಹೆಚ್ಚಿಸುವುದಲ್ಲದೆ, ವರ್ಗವ್ಯವಸ್ಥೆಯನ್ನು ಪೋಷಣೆ ಮಾಡಿದಂತಾಗುತ್ತದೆ.  ನಮ್ಮ ಸರ್ಕಾರ ಈ ತೀರ್ಪನ್ನು ವಿರೋಧಿಸಿ ಕೂಡಲೇ ಮೇಲ್ಮನವಿಯನ್ನು ಸಲ್ಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ.  ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯನ್ನು ಮಾಡುತ್ತಿರುವುದು ಖಂಡನೀಯ.  ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.  ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದಲ್ಲಿ ಕನ್ನಡಭಾಷೆಯೇ ವಿಜೃಂಭಿಸಬೇಕು. ನಮ್ಮ ಜನ ಜಗಳವಾಡುವುದು ಕನ್ನಡದಲ್ಲಿ.  ಆ ಜಗಳ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದಾಗ ವಕೀಲರು ವಾದ ಮಾಡುವುದು ಇಂಗ್ಲೀಷಿನಲ್ಲಿ. ಕೊನೆಗೆ ನ್ಯಾಯಾಧೀಶರು ತೀರ್ಪು ಕೊಡುವುದೂ ಇಂಗ್ಲೀಷಿನಲ್ಲಿ. ಕಕ್ಷಿದಾರರು ಆ ತೀರ್ಪನ್ನು ಅರ್ಥಮಾಡಿಕೊಳ್ಳಲು ಇಂಗ್ಲೀಷ್ ಗೊತ್ತಿದ್ದವರನ್ನು ಅವಲಂಬಿಸಬೇಕಾದ ಅಸಾಹಯಕ ಸ್ಥಿತಿ ಏರ್ಪಟ್ಟಿದೆ.  ಈ ವಿಪರ್ಯಾಸ ಕೊನೆಯಾಗಬೇಕು.  ಕಾನೂನಿನ ಅಜ್ಞಾನ, ಅಪರಾಧ ಎಂದು ಕಾನೂನು ಹೇಳುತ್ತದೆ.  ನಮ್ಮ ಕಾನೂನುಗಳೆಲ್ಲ ಇಂಗ್ಲೀಷಿನಲ್ಲೇ ಇವೆ.  ಕನ್ನಡಕ್ಕೆ ಭಾಷಾಂತರವಾಗಿರುವುದು ಅತ್ಯಲ್ಪ.  ಇದರ ಅರ್ಥ ಇಂಗ್ಲೀಷ್ ಗೊತ್ತಿಲ್ಲದಿರುವುದು ಅಪರಾಧ ಎಂದಾಗುತ್ತದೆ.  ಇದಕ್ಕಿಂತ ಅನ್ಯಾಯ ಮತ್ತೊಂದಿಲ್ಲ. ಜಿಲ್ಲಾನ್ಯಾಯಾಲಯ ಮತ್ತು ಕೆಳಗಿನ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ಕೊಡಬೇಕೆಂದು ಉಚ್ಚನ್ಯಾಯಾಲಯದ ಆದೇಶವಿದ್ದರೂ ಅದು ಪಾಲನೆ ಆಗದಿರುವುದು ಸರಿಯಲ್ಲ.  ಈ ನಡುವೆಯೂ ಕನ್ನಡದಲ್ಲಿ ತೀರ್ಪುಕೊಡುತ್ತಿರುವ ನ್ಯಾಯಾಧೀಶರನ್ನು, ಸಾವಿರಕ್ಕೂ ಮೇಲ್ಪಟ್ಟು ತೀರ್ಪುಗಳನ್ನು ಕನ್ನಡದಲ್ಲಿ ನೀಡಿದ ಜಿಲ್ಲಾನ್ಯಾಯಾಧೀಶರಾಗಿದ್ದ ಶ್ರೀ ಮಿಠ್ಠಲ್‌ಕೋಡ್ ಅವರನ್ನು ಅಭಿನಂದಿಸುತ್ತೇನೆ.  
ಈ ತಿಂಗಳ ಮೊದಲವಾರದಲ್ಲಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರು ಒಂದು ದಿಟ್ಟ ಹೆಜ್ಜೆಯಿರಿಸಿದರು. ಇಂಗ್ಲಿಷ್‌ನಲ್ಲಿ ಕಡತ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಸಹಿಪಡೆಯಲೆಂದು ಬಂದ ಅಧಿಕಾರಿಗಳಿಗೆ ಮಂಗಳಾರತಿ ಮಾಡಿದರು. ಕಡತ ಕನ್ನಡದಲ್ಲಿದ್ದರೆ ಮಾತ್ರ ಸಹಿ ಮಾಡುವೆನೆಂದು ಹೇಳಿ ಅದನ್ನು ಹಿಂದಿರುಗಿಸಿದ್ದು ಕನ್ನಡ ನಾಡಿನ ಪ್ರತಿಯೊಬ್ಬ ಸರಕಾರಿ ಅಧಿಕಾರಿಗೂ ಒಂದು ಎಚ್ಚರಿಕೆಯ ಕರೆಗಂಟೆ ಎಂದು ನಾನು ಭಾವಿಸುತ್ತೇನೆ.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಅಂಥ ತರಗತಿಗಳನ್ನು ಮುಚ್ಚುವ ಕುರಿತು ೨೭.೭.೧೯೯೯ ರಂದು ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಒಂದು ಸುತ್ತೋಲೆ ಹೊರಡಿಸಿದ್ದರು. ಅದರಲ್ಲಿ 'ಕನ್ನಡವನ್ನು ಐಚ್ಛಿಕ ವಿಷಯವಾಗಿ ಬೋಧಿಸುವಲ್ಲಿಯು ಸಹ ತರಗತಿಯನ್ನು ಮುಚ್ಚಬೇಕಾಗುತ್ತದೆ. ಆದರೆ ಕನ್ನಡವು ರಾಜ್ಯಭಾಷೆಯಾಗಿದ್ದು ಇದಕ್ಕೆ ಸರಕಾರದಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕೇ ಹೊರತು ಯಾವುದೇ ನಿಬಂಧಗಳು ರಾಜ್ಯಭಾಷೆಯನ್ನು ಅಭಿವೃದ್ಧಿಗೊಳಿಸುವಲ್ಲಿ ತಡೆಯಾಗಬಾರದು ಎಂಬ ಕಾರಣದಿಂದ ೧೫ ವಿದ್ಯಾರ್ಥಿಗಳ ಕನಿಷ್ಠ ಮಿತಿ ವಿಧಿಸಿರುವುದು ಕನ್ನಡ ಐಚ್ಛಿಕ ವಿಷಯದ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ' ಎಂದು ಹೇಳಲಾಗಿದೆ. ಶಿಕ್ಷಣ ಇಲಾಖೆಯ ಈ ಸುತ್ತೋಲೆಯನ್ನು  ಇಂದೀಗ ತಿಪ್ಪೆಗೆ ಎಸೆಯಲಾಗಿz. ಉತ್ತರ ಭಾರತದಿಂದ ಬಂದು ನಮ್ಮ ತಲೆಮೇಲೆ ಕುಳಿತ ಐ.ಎ.ಎಸ್. ಆಯುಕ್ತರಿಗೆ ಕನ್ನಡದ ಮೇಲೆ ಅಭಿಮಾನವಾದರೂ ಎಲ್ಲಿಂದ ಬರಬೇಕು? ಇದೇ ಅಕ್ಟೋಬರಿನಲ್ಲಿ ಹೊರಡಿಸಿದ ಇನ್ನೊಂದು ಸುತ್ತೋಲೆಯ ಪ್ರಕಾರ ಹತ್ತು ವಿದ್ಯಾರ್ಥಿಗಳಿದ್ದ ಕನ್ನಡ ಐಚ್ಛಿಕ ತರಗತಿಗಳನ್ನು ರದ್ದುಗೊಳಿಸಲಾಗಿದೆ ಹಾಗೂ ಹೆಚ್ಚುವರಿ ಅಧ್ಯಾಪಕರನ್ನು ಸಿಕ್ಕಸಿಕ್ಕೆಡೆಗೆ ವರ್ಗಾಯಿಸಲಾಗಿದೆ. ಕನ್ನಡವನ್ನು ನಮ್ಮ ಅಧಿಕಾರಿಗಳು 'ನಿಧಾನವಿಷ' ಕೊಟ್ಟು ಕೊಲ್ಲುತ್ತಿರುವುದನ್ನು ಸರಕಾರ ಇನ್ನಾದರೂ ಗಮನಿಸಿ, ಆದ ತಪ್ಪನ್ನು ತಕ್ಷಣ ಸರಿಪಡಿಸಬೇಕು ಹಾಗೂ ಮುಂದೆ ಇಂತಹ ತಪ್ಪು ಆಗದಂತೆ ನಿಗಾ ವಹಿಸಬೇಕು.
ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯ ನೆಪವೊಡ್ಡಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ವಿಷಾದನೀಯ.  ಸರ್ಕಾರ, ಕನ್ನಡ ಶಾಲೆಗಳಿಗೆ ಸ್ವಂತ ಕಟ್ಟಡ, ನೀರು, ಪೀಠೋಪಕರಣ, ಉಪಾಧ್ಯಾಯರ ನೇಮಕ, ಶೌಚಾಲಯಗಳ ವ್ಯವಸ್ಥೆ ಇನ್ನೂ ಮುಂತಾದ ಮೂಲಭೂತ ಸೌಕರ್ಯಗಳನ್ನು ನೀಡಿ, ಕನ್ನಡಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷನ್ನು ಒಂದು ಭಾಷೆಯನ್ನಾಗಿ ಕಲಿಸುವ ಏರ್ಪಾಟನ್ನು ಪರಿಣಾಮಕಾರಿಯಾಗಿ ಮಾಡಬೇಕು. ಕನ್ನಡಮಾಧ್ಯಮಶಾಲೆಗಳನ್ನು ಸರ್ಕಾರ ಉನ್ನತೀಕರಿಸಬೇಕು.  ಸರ್ಕಾರ, ಕನ್ನಡಮಾಧ್ಯಮ ಶಾಲೆಗಳನ್ನು ಮುಚ್ಚುತ್ತಿರುವಾಗ, ಡಾ.ಎಂ.ಮೋಹನ್ ಆಳ್ವ ಅವರು ಕನ್ನಡಮಾಧ್ಯಮ ಶಾಲೆಗಾಗಿ ಸುಮಾರು ಎರಡು ಕೋಟಿ ರೂ. ವೆಚ್ಚದ ಭವ್ಯ ಕಟ್ಟಡವೊಂದನ್ನು ನಿರ್ಮಿಸಿರುವುದು ಅಭಿನಂದನೀಯವಾಗಿದೆ. ಡಾ.ಮೋಹನ್ ಆಳ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ನಾನೂರ ಅರವತ್ತ ನಾಲ್ಕು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲದೆ ಊಟ, ವಸತಿ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ.     
ನಾನು ಪ್ರಾರಂಭದಲ್ಲಿ ಹೇಳಿದಂತೆ ಸೈರಣೆ ಕನ್ನಡಸಂಸ್ಕೃತಿಯ ಮೂಲಗುಣ.  ಇದರಿಂದ ನಮ್ಮ ಜನತೆ ದೂರ ಸರಿಯುತ್ತಿರುವುದು ವಿಷಾದಕರ. 'ಕಸವರಂ ಎಂಬುದು ನೆರೆಸೈರಿಸಲಾರ್ಪುಡೆ ಪರವಿಚಾರಮುಂ, ಪರಧರ್ಮಮುಮಂ' ಎಂಬ ಕವಿರಾಜಮಾರ್ಗಕಾರನ ಮಾತನ್ನು ನಾವು ಮರೆತಿದ್ದೇವೆ.  ಇದೇ ಕವಿ 'ಸರ್ವಧರ್ಮಧೇನುನಿವಕ್ಕೆ ಕರ್ನಾಟಕ ಆಡೊಂಬಲಂ' ಎಂದು ಹೇಳಿದ್ದನ್ನು ಕೂಡ ಅವಗಣನೆ ಮಾಡಿದ್ದು ನಮ್ಮ ಸಾಂಸ್ಕೃತಿಕ ದುರಂತವೆನ್ನಬಹುದು.  ಕರ್ನಾಟಕ ಸರ್ವಧರ್ಮ ಸಮನ್ವಯದ ಬೀಡಾಗಿತ್ತು ಎಂಬುದಕ್ಕೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನ ಹತ್ತಿರ ಇರುವ ಬಸ್ತಿಹಳ್ಳಿ ಎಂಬಲ್ಲಿ ಸಿಕ್ಕಿದ ಕ್ರಿ.ಶ. ೧೬೩೮ರ ಒಂದು ಶಾಸನ ಸಾಕ್ಷಿಯಾಗಿದೆ. ಈ ಶಾಸನದ ಒಕ್ಕಣಿಕೆ ಕೆಳಕಂಡಂತಿದೆ;  
ಬಸ್ತಿಹಳ್ಳಿಯ ಪಾರ್ಶ್ವನಾಥ ಕಂಬಗಳಿಗೆ ಹುಚ್ಚಪ್ಪದೇವ ಎಂಬಾತ ಲಿಂಗಮುದ್ರೆ ಹಾಕಿದಾಗ, ಸಂಘರ್ಷ ಉಂಟಾಗುತ್ತದೆ.  ಆಗ ಹಳೇಬೀಡಿನ ಮಠಾಧೀಶರಾದ ಬಸವಪ್ಪದೇವರು, ಪುಷ್ಪಗಿರಿ ಮಠದ ಪಟ್ಟದದೇವರು ಇಬ್ಬರೂ ಸೇರಿ ಜೈನರ ಪೂಜೆಗೆ ಅಡ್ಡಿ ಪಡಿಸಿದವರು ಶಿವದ್ರೋಹಿಗಳು, ಜಂಗಮದ್ರೋಹಿಗಳು, ವಿಭೂತಿ, ರುದ್ರಾಕ್ಷಿಗೆ ತಪ್ಪಿದವರು, ಕಾಶಿರಾಮೇಶ್ವರದ ಲಿಂಗಕ್ಕೆ ತಪ್ಪಿದವರು ಎಂದು ಹೇಳಿ ಜೈನಧರ್ಮದವರ ಪೂಜೆಗೆ ಅವಕಾಶ ಮಾಡಿಕೊಡುತ್ತಾರೆ.  ವೀರಶೈವರು ತಮ್ಮನ್ನು ರಕ್ಷಿಸಿಕೊಂಡು ಅನ್ಯಧರ್ಮದವರನ್ನೂ ರಕ್ಷಿಸಿದ ಪ್ರಕರಣ ಇದಾಗಿದೆ.  ದುರದೃಷ್ಟವಶಾತ್ ಈ ಬಗೆಯ ಔದಾರ್ಯ ಮತ್ತು ಸಹನೆ ಕಣ್ಮರೆ ಆಗುತ್ತಿರುವುದು ದುಃಖದಾಯಕ ಸಂಗತಿಯಾಗಿದೆ.   
    ಕೆಲವು ವರ್ಷಗಳ ಹಿಂದೆ ಗ್ರಾಮದೇವತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಗ್ರಾಮವೊಂದರಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದೆ.  ನನ್ನೊಡನೆ ಮಾತನಾಡುತ್ತಿದ್ದ ವ್ಯಕ್ತಿಯನ್ನು ದಾರಿಯಲ್ಲಿ ನಡೆದುಹೋಗುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಕೇಳಿದೆ.  ಅವನು ಇದೇ ಊರಿನವನ? ಎಂದು ಕೇಳಿದ್ದಕ್ಕೆ ಈ ವ್ಯಕ್ತಿ ಮುಖ ಸಿಂಡರಿಸಿಕೊಂಡನು, ಕೋಪಗೊಂಡನು. ನಾನು ಈ ವ್ಯಕ್ತಿಯನ್ನು ಆತನ ಬಗ್ಗೆ ಕೇಳಿದಕ್ಕೆ ನಿಮಗೇಕೆ ಇಷ್ಟು ಕೋಪ, ಅವನೂ ನೀವು ಜಗಳವಾಡಿದ್ದೀರ ಎಂದು ಕೇಳಿದೆ. ಆಗ ಆ ವ್ಯಕ್ತಿ ಅವನಿಗು ನನಗು ಜಗಳವೇನೂ ಆಗಿಲ್ಲ; ಆದರೆ ಅವರ ದೇವರಿಗು ನಮ್ಮ ದೇವರಿಗು ಜಗಳವಾಗಿದೆ; ಅದಕ್ಕಾಗಿ ಕಾಲಾಂತರದಿಂದ ಆ ದೇವರ ಒಕ್ಕಲಿನವರು ನಮ್ಮ ದೇವರ ಒಕ್ಕಲಿನವರು ಪರಸ್ಪರ ಮಾತುಬಿಟ್ಟಿದ್ದೇವೆ ಎಂದನು.  
ಗ್ರಾಮೀಣ ಪ್ರದೇಶದ ಕೆಲವು ದೇವತೆಗಳು ಅಕ್ಕತಂಗಿಂiiರಾಗಿದ್ದರೂ, ಅನೇಕ ಸಲ ಜಗಳವಾಗಿರುತ್ತದೆ.  ಈ ಎರಡೂ ದೇವತೆಗಳನ್ನು ಪೂಜಿಸುವ ಭಕ್ತರು ಆ ಕಾರಣಕ್ಕಾಗಿಯೆ ಪರಸ್ಪರ ವಿರೋಧಿಗಳಂತೆ ವರ್ತಿಸುತ್ತಾರೆ. ದೇವರು, ಧರ್ಮ ಇರುವುದು ಮನುಷ್ಯರ ಕಲ್ಯಾಣಕ್ಕೆ ಹೊರತು ಸಂಘರ್ಷ ಉಂಟು ಮಾಡುವುದಕ್ಕಲ್ಲ.  ಮೇಲೆ ಹೇಳಿದ ನಂಬಿಕೆಯು ಜನವಿರೋಧಿ ಆದದ್ದು. ದೇವರು, ಧರ್ಮದ ಹೆಸರಿನಲ್ಲಿ ಜಾತಿ, ಮತಗಳ ನಡುವೆ ದ್ವೇಷದ ಕಿಚ್ಚನ್ನು ಹಚ್ಚಿ ಮೈ ಕಾಯಿಸಿಕೊಳ್ಳುವವರು ಮನುಷ್ಯರೇ ಅಲ್ಲ.  ಅವರು ಯಾವುದೇ ಜಾತಿ, ಮತಕ್ಕೆ ಸೇರಿರಲಿ ಅವರೆಲ್ಲರೂ ಭಾರತೀಯರು.  ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಎಲ್ಲ ಜಾತಿ, ಮತದ ಬಂಧುಗಳು ಅಣ್ಣ ತಮ್ಮಂದಿರಂತೆ ಬಾಳುವ ವಾತಾವರಣ ಸೃಷ್ಟಿಯಾಗಬೇಕು.  ಈ ಬಗೆಯ ಸೌಹಾರ್ದ ಇಂದಿನ ತುರ್ತು ಅಗತ್ಯವಾಗಿದೆ. ಈ ಸಮ್ಮೇಳನದಲ್ಲಿ ಸೋದರ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಸಾಹಿತ್ಯಸಮಾವೇಶಗಳು ವಿವಿಧ ವೇದಿಕೆಗಳಲ್ಲಿ ಸಮಾನಾಂತರವಾಗಿ ನಡೆಯುತ್ತಿರುವುದು ಆಳ್ವಾಸ್ ನುಡಿಸಿರಿಯ ಭಾಷಾ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ದೇವರ ಹೆಸರಿನಲ್ಲಿ ನಿಧಿಗಾಗಿ ನರಬಲಿ ಕೊಡುವುದು, ಬೆತ್ತಲೆಸೇವೆ ಮಾಡುವುದು ಜೀವಂತ ವ್ಯಕ್ತಿಯ ಬೆನ್ನಿಗೆ ಕಬ್ಬಿಣದ ಕೊಂಡಿಯನ್ನು ಸಿಕ್ಕಿಸಿ ಅವನ ದೇಹವನ್ನು ಸುಮಾರು ಹದಿನೈದು ಅಡಿ ಮೇಲಕ್ಕೇರಿಸಿ ಸಿಡಿ ಎಂದು ನೇತಾಡಿಸುವ ಮೌಢ್ಯ ಸಂಪೂರ್ಣವಾಗಿ ಇಲ್ಲವಾಗಬೇಕಾಗಿದೆ. ಕೆಲವು ಗ್ರಾಮಗಳಲ್ಲಿ, ಸ್ತ್ರೀಯರನ್ನು ಅವರ ಮಾಸಿಕ ದೈಹಿಕ ಬದಲಾವಣೆಯ ಕಾರಣಕ್ಕಾಗಿ ಮತ್ತು ಗರ್ಭಿಣಿಯರು, ಬಾಣಂತಿಯರನ್ನು ಸೂತಕವೆಂಬ ನೆಪವೊಡ್ಡಿ ಊರಹೊರಗೆ ಗುಡಿಸಿಲಿನಲ್ಲಿ ಇರಿಸುವ ಪದ್ಧತಿ ಇನ್ನೂ ರೂಢಿಯಲ್ಲಿದೆ. ಇದಲ್ಲದೆ ಒಂದು ಜಾತಿಯ ಜನರು ತಿಂದುಬಿಟ್ಟ ಎಂಜಲಿನ ಮೇಲೆ ಇನ್ನೊಂದು ಜಾತಿಯವರು ಹೊರಳಾಡುವುದು ಧರ್ಮವೂ ಅಲ್ಲ, ಆರೋಗ್ಯಕರವೂ ಅಲ್ಲ. ಈ ಬಗೆಯ ಅಂಧಶ್ರದ್ಧೆ, ಮೂಢನಂಬಿಕೆಗಳು ಎಲ್ಲಾ ಜಾತಿ, ಧರ್ಮಗಳಲ್ಲೂ ಇವೆ.  ಮಾನವನಿಗೆ ನೈತಿಕಶಕ್ತಿ ಮತ್ತು ಮನೋಬಲ ಕೊಡುವ, ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ನಾನು ವಿರೋಧಿಸುವುದಿಲ್ಲ. ಮನುಷ್ಯನ ಘನತೆಯನ್ನು ಕುಗ್ಗಿಸುವ ಮೌಢ್ಯಾಚರಣೆಗಳನ್ನು ವಿರೋಧಿಸುತ್ತೇನೆ. ನನ್ನ ಆಕ್ಷೇಪಣೆ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮಗಳಲ್ಲಿರುವ ಮೌಢ್ಯತೆ ಅಳಿದು ಅಲ್ಲಿ ಮಾನವೀಯತೆ ನೆಲೆಗೊಳ್ಳಲೆಂದು ಆಶಿಸುತ್ತೇನೆ.  ಇಂಥ ಕಂದಾಚಾರಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮೌಢ್ಯವಿರೋಧಿ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ.

ಶಿಕ್ಷಣದಂತೆ ಆರೋಗ್ಯವೂ ಬಡವರ ಕೈಗೆ ಎಟುಕದ ವಸ್ತುವಾಗಿದೆ.  ದೊಡ್ಡ ದೊಡ್ಡ ನಗರಗಳಲ್ಲಿ ಉದ್ಭವಗೊಂಡಿರುವ ಹೈಟೆಕ್‌ಆಸ್ಪತ್ರೆಗಳು ವಿಧಿಸುವ ಮೊತ್ತವನ್ನು ಭರಿಸುವ ಶಕ್ತಿ ಜನಸಾಮಾನ್ಯರಿಗೆ ಇಲ್ಲವಾಗಿದೆ. ಮಧ್ಯಮವರ್ಗದವರು, ಕೆಳಮಧ್ಯಮವರ್ಗದವರು ಮತ್ತು ಬಡವರು ಈ ಆಸ್ಪತ್ರೆಗಳಿಗೆ ಹೋಗಲು ಹೆದರುತ್ತಾರೆ.  ಈ ಆಸ್ಪತ್ರೆಗಳ ಮೇಲೆ ಸರ್ಕಾರದ ಯಾವುದೇ ನಿಯಂತ್ರಣ ಇಲ್ಲ.  ಯಮನು ಪ್ರಾಣವನ್ನು ಮಾತ್ರ ಹರಣ ಮಾಡಿದರೆ, ಈ ಆಸ್ಪತ್ರೆಗಳು ಪ್ರಾಣ ಮತ್ತು ಹಣ ಎರಡನ್ನೂ ಹರಣ ಮಾಡುತ್ತವೆ.  ಹಿಂದೆ ಬಡಜನರು ಮದುವೆ ಹಬ್ಬಗಳಿಗಾಗಿ ಸಾಲ ಮಾಡಿ ಜೀವನ ಪೂರ್ತಿ ತೀರಿಸಲು ಹೆಣಗಾಡುತ್ತಿದ್ದರು.  ಇಂದು ಜನಸಾಮಾನ್ಯರು ಆಸ್ಪತ್ರೆಗಳ ವೆಚ್ಚವನ್ನು ಭರಿಸಲು ಸಾಲಮಾಡುವ ಪರಿಸ್ಥಿತಿ ಉಂಟಾಗಿದೆ.  ಒಂದು ಕುಟುಂಬದ ಸದಸ್ಯನೊಬ್ಬನನ್ನು ಉಳಿಸಲು, ಮನೆಮಠವನ್ನು ಮಾರಿಕೊಂಡು ಅನೇಕರು ಬೀದಿಪಾಲಾಗಿದ್ದಾರೆ.  ಈ ಹೈಟೆಕ್‌ಆಸ್ಪತ್ರೆಗಳ ಮೇಲೆ ಸರ್ಕಾರ ನಿಗಾ ವಹಿಸಬೇಕೆಂದು ನಾನು ವಿನಂತಿಸುತ್ತೇನೆ. 
ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯ ಮಾಡುವ ರೈತನ ಬಾಳು ಗೋಳಾಗಿದೆ.  ಅವನು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ದಕ್ಕುತ್ತಿಲ್ಲ.  ರೈತರು ತಾವು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಲೋಡುಗಟ್ಟಲೆ ಬೀದಿಗೆ ತಂದು ಚೆಲ್ಲಿ ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕೃಷಿಗಾಗಿ ವಿವಿಧ ಬ್ಯಾಂಕುಗಳಲ್ಲಿ ತನ್ನ ಜಮೀನನ್ನು ಅಡವಿಟ್ಟ ರೈತ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಗಂಭೀರ ಸಂಗತಿಯಾಗಿದೆ. ರೈತನು ದೇಶದ ಬೆನ್ನೆಲುಬು ಎಂದು ಪ್ರಾಜ್ಞರು ಹೇಳಿದ್ದರೂ, ರೈತನ ಬೆನ್ನು ಮುರಿದು ಹೋಗಿರುವುದನ್ನು ಕಂಡು ವಿಷಾದವಾಗುತ್ತದೆ. ಇಂದು ರೈತನ ಮಕ್ಕಳು ರೈತರಾಗಲು ಇಷ್ಟಪಡುತ್ತಿಲ್ಲ. ಇಂದು ಹಳ್ಳಿಗಳಲ್ಲಿ ಕೃಷಿಕಾರ್ಮಿಕರೂ ಸಿಗುತ್ತಿಲ್ಲ.  ಕೃಷಿಯೋಗ್ಯ ಭೂಮಿಯಲ್ಲೂ ಕೃಷಿಚಟುವಟಿಕೆ ನಡೆಯುತ್ತಿಲ್ಲ.
ಹೊಲಗದ್ದೆಗಳಲ್ಲಿ ದುಡಿಯುವುದಕ್ಕಿಂತ, ನಗರಗಳಿಗೆ ವಲಸೆ ಹೋಗುವುದೆ ಲೇಸೆಂದು ಗ್ರಾಮೀಣ ಯುವಕರು ಪಟ್ಟಣ ಸೇರುತ್ತಿದ್ದಾರೆ.  ಒಂದೊಂದು ಹಳ್ಳಿಯೂ ಕ್ರಮೇಣ ಒಂದೊಂದು ಹಾಳೂರಿನಂತಾಗುತ್ತಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಆಹಾರದ ಕ್ಷಾಮ ಉಂಟಾಗಿ, ತುತ್ತು ಅನ್ನಕ್ಕಾಗಿ ಜನ ಪರದಾಡುವ ಕಾಲ ಬಂದರೆ ಆಶ್ಚರ್ಯವಿಲ್ಲ. ಕೃಷಿಯನ್ನು ಕೈಗಾರಿಕೆ ಎಂದು ಭಾವಿಸಿ, ರೈತನು ಬೆಳೆದ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಲೆಯನ್ನು ನಿಗದಿ ಪಡಿಸುವ ತನಕ ಅನ್ನದಾತನ ಕಷ್ಟಕ್ಕೆ ಕೊನೆಯೇ ಇಲ್ಲ. ಕೃಷಿಯನ್ನು ಪ್ರೋತ್ಸಾಹಿಸಲು ರೈತನಿಗೆ ಬೇಕಾದ ನೀರು, ಗೊಬ್ಬರ ಮತ್ತು ವಿದ್ಯುತ್ತನ್ನು ಸರ್ಕಾರ ಒದಗಿಸಲು ಕೂಡಲೇ ಕ್ರಮ ಜರುಗಿಸಬೇಕು. 
ರೈತನಂತೆ ಸಂಕಷ್ಟಕ್ಕೀಡಾಗಿರುವ ಮತ್ತೊಂದು ನೊಂದವರ್ಗ ಕೈಮಗ್ಗದ ನೇಕಾರರು. ೧೯೮೫ರ ಕೈಮಗ್ಗ ಮೀಸಲಾತಿ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.  ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರಗಳನ್ನು ಪೂರೈಸುವ ವಿದ್ಯಾವಿಕಾಸ ಯೋಜನೆಯನ್ನು ಸಂಪೂರ್ಣವಾಗಿ ಕೈಮಗ್ಗ ಕ್ಷೇತ್ರಕ್ಕೆ ಮೀಸಲಿಡಬೇಕು. ಕೈಮಗ್ಗ ಮತ್ತು ಖಾದಿ ಉತ್ಪನ್ನಗಳ ಕಲಬೆರೆಕೆಯನ್ನು ತಡೆಯಬೇಕು.  ಕೈಮಗ್ಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಮಾರ್ಗಸೂಚಿಗಳನ್ನು ರೂಪಿಸಬೇಕು.  ಕೈಮಗ್ಗ ಮತ್ತು ವಿದ್ಯುತ್‌ಮಗ್ಗಗಳ ನೇಕಾರರ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳಾದ ಪೊಲೀಸ್ ಸಮವಸ್ತ್ರ, ಸರ್ಕಾರಿ ಆಸ್ಪತ್ರೆಗಳಿಗೆ ವಸ್ತ್ರ ಪೂರೈಕೆ ಇತ್ಯಾದಿಗಳಿಗೆ ಕರ್ನಾಟಕದ ನೇಕಾರರಿಂದಲೇ ಬಟ್ಟೆ ಖರೀದಿಸಬೇಕು. ವಿಶೇಷವಾಗಿ ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದ ಜಾತಿವರ್ಗಗಳಿಗೆ ಸೇರಿದ ಜನರೇ ಹೆಚ್ಚಾಗಿರುವ ಕೈಮಗ್ಗ ನೇಕಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು. ಇದರ ಜೊತೆಗೆ ಗ್ರಾಮೀಣ ಕರಕುಶಲಕರ್ಮಿಗಳು ಮತ್ತು ಗುಡಿಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆಗೆ ಒತ್ತಾಸೆ ನೀಡಬೇಕು. ಗ್ರಾಮೀಣ ಪ್ರದೇಶದ ಕುಂಬಾರರು, ಬಡಗಿಗಳು, ಚಮ್ಮಾರರು ಮುಂತಾದವರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸುವ ಸೂಕ್ತ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ಕೈಮಗ್ಗದ ಕಸುಬುದಾರರ ಪರವಾಗಿ ಸತ್ಯಾಗ್ರಹ ಮಾಡಿದ ರಾಷ್ಟ್ರೀಯ ಖ್ಯಾತಿಯ ರಂಗ ನಿರ್ದೇಶಕ ಶ್ರೀ ಪ್ರಸನ್ನ ಅವರ ಹೋರಾಟಕ್ಕೆ ಕರ್ನಾಟಕ ಸರ್ಕಾರ ಸ್ಪಂದಿಸಿರುವುದು ಸಮಾಧಾನಕರ ಸಂಗತಿಯಾಗಿದೆ.    
ಬೆಳಗ್ಗೆ ಎದ್ದು ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿದಾಗ ಒಂದಲ್ಲ, ಎರಡುಮೂರು ಅತ್ಯಾಚಾರ ಪ್ರಕರಣಗಳು ವರದಿಯಾಗಿರುವುದನ್ನು ನೋಡುತ್ತೇವೆ. ಇದು ದಿನನಿತ್ಯ ನಡೆಯುವ ದುರಂತ ಸಂಗತಿಯಾಗಿದೆ.  ಘನತೆ ಗೌರವದಿಂದ ಸಮಾಜದಲ್ಲಿ ತಲೆ ಎತ್ತಿ ಬಾಳಬೇಕಾದ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ನಿತ್ಯವೂ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಸ್ತ್ರೀಭ್ರೂಣಹತ್ಯೆ ಅನಾಗರೀಕ ಕೃತ್ಯ. ಇದರಿಂದ ಹೆಣ್ಣುಗಂಡಿನ ಜನಸಂಖ್ಯೆಯ ಅನುಪಾತದಲ್ಲಿ ಏರುಪೇರಾಗಿ ಸ್ತ್ರೀಕುಲ ಕಡಿಮೆಯಾಗುತ್ತಿರುವುದು ಅಪಮಾನಕರ ಸಂಗತಿಯಾಗಿದೆ. ಪತಿಯಿಂದ ಹಿಂಸೆಗೊಳಗಾಗಿ ನೋವನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳ ಗೋಳನ್ನು ಕೇಳುವವರೆ ಇಲ್ಲವಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ತಾಯಂದಿರು ಹಾಡಿದ ಒಂದು ತ್ರಿಪದಿ ನೆನಪಾಗುತ್ತಿದೆ;  
ಹೆಣ್ಣಿನ ಗೋಳಟ್ಟಿ ಬನ್ನೀಯ ಮರಬೆಂದೊ
ಅಲ್ಲಿ ಸನ್ಯಾಸಿ ಮಠಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೊ
ಈ ತ್ರಿಪದಿ ಈಗಲೂ ಪ್ರಸ್ತುತವೆಂದು ನನ್ನ ಭಾವನೆ.  ಈ ಅತ್ಯಾಚಾರಿಗಳು ಎಷ್ಟೇ ಶ್ರೀಮಂತರಾಗಿರಲಿ, ಪ್ರಭಾವ ಶಾಲಿಗಳಾಗಿರಲಿ ನ್ಯಾಯಾಂಗ ಅವರಿಗೆ ಉಗ್ರಶಿಕ್ಷೆ ವಿಧಿಸಬೇಕೆಂದು ಕೋರುತ್ತೇನೆ. ಇಂತಹ ವ್ಯಕ್ತಿಗಳನ್ನು ಸಮಾಜ ಬಹಿಷ್ಕರಿಸಬೇಕೆಂದು ವಿನಂತಿಸುತ್ತೇನೆ. ಪತ್ನಿಪೀಡಕ ಗಂಡಂದಿರಿಗೆ ಶಿಕ್ಷೆ ವಿಧಿಸುವುದಷ್ಟೇ ಅಲ, ಪತ್ನಿ ತನ್ನಿಂದ ಹುಟ್ಟಿದ ಮಗುವಿಗೆ ಜನ್ಮ ಕೊಡುವಾಗ ಆಕೆಯ ಪ್ರಸವವೇದನೆಯ ಸಮಯದಲ್ಲಿ ಗಂಡನಾದವನು ಕಡ್ಡಾಯವಾಗಿ ಆಕೆಯ ಬಳಿ ಇರುವಂತೆ, ಅವಳ ನೋವನ್ನು ಅರ್ಥಮಾಡಿಕೊಳ್ಳುವಂತೆ ಮಾಡಬೇಕೆಂದು ನಾನು ಸಮಾಜ ಮತ್ತು ಸರ್ಕಾರವನ್ನು ವಿನಂತಿಸುತ್ತೇನೆ.  
ಯುವಜನತೆ ಮೌಲ್ಯಗಳಿಂದ, ಪ್ರತಿಭಟನೆಗಳಿಂದ ವಿಮುಖರಾಗುತ್ತಿರುವುದು ದುರದೃಷ್ಟಕರವಾಗಿದೆ.  ಇಂದಿನ ಬಹುಸಂಖ್ಯೆಯ ಯುವಕರಿಗೆ ಆದರ್ಶಗಳಾಗಲಿ, ಮಾದರಿಗಳಾಗಲಿ ಇಲ್ಲವಾಗಿದೆ. ಸಂಸ್ಕೃತಿಯ ಮೇಲಿನ ಅಭಿಮಾನ ಇವರಿಗೆ ಲವಲೇಶವೂ ಇಲ್ಲ.  ಗುರುಹಿರಿಯರ ಮೇಲೆ ಗೌರವ ಮೊದಲೇ ಇಲ್ಲ.  ಹಿಂದೆ ಯಾವುದೇ ಸಮಸ್ಯೆ ಬಂದಾಗ ಹಿರಿಯರಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದ ಯುವಕರು ಇಂದು ಗೊತ್ತುಗುರಿ ಇಲ್ಲದೆ, ತಿಳುವಳಿಕೆ ಇಲ್ಲದೆ ಅತಂತ್ರರಾಗಿದ್ದಾರೆ.  ಅನೇಕ ದುಶ್ಚಟಗಳಿಗೆ ಬಲಿಯಾಗಿದ್ದಾರೆ.  ಹಿರಿಯರ ಗುಂಪು ನಮ್ಮ ಸಮಾಜದಲ್ಲಿ ಅವಗಣನೆಗೆ ಒಳಗಾದ ಒಂದು ವರ್ಗವಾಗಿದೆ.  ತಂದೆತಾಯಿ ಬಂಧುಬಳಗದೊಂದಿಗೆ ಇಂದಿನ ಯುವಜನತೆ ಭಾವನಾತ್ಮಕ ಸಂಬಂಧಗಳನ್ನು ಕಡಿದುಕೊಂಡಿದೆ.  ಆದ್ದರಿಂದಲೇ ಎಲ್ಲಾ ಕಡೆ ವೃದ್ಧಾಶ್ರಮಗಳು ಪ್ರಾರಂಭವಾಗಿವೆ. ಇಲ್ಲಿಗೆ ತಿಂಗಳಿಗೊ, ವರ್ಷಕ್ಕೊ ಒಮ್ಮೆ ಭೇಟಿಕೊಟ್ಟರೆ ಅದೇ ಮಾತೃ ದೇವೋಭವ, ಪಿತೃ ದೇವೋಭವ ಎಂಬಂತಾಗಿದೆ. ಕೆಲವು ವರ್ಷಗಳ ಹಿಂದೆ ನಾನೊಂದು ವೃದ್ಧಾಶ್ರಮಕ್ಕೆ ಹೋಗಿದ್ದಾಗ, ಸರ್ಕಾರದ ನಿವೃತ್ತ ಉನ್ನತ ಅಧಿಕಾರಿಗಳು, ಕರ್ನಾಟಕದ ವಿಶ್ವವಿದ್ಯಾಲಯ ಒಂದರ ವಿಶ್ರಾಂತ ಕುಲಪತಿಗಳು ಅಲ್ಲಿ ನಿವಾಸಿಗಳಾಗಿದ್ದನ್ನು ಕಂಡು ಚಕಿತಗೊಂಡೆ. ನಾನು ಕ್ಷಣ ಸ್ತಂಭೀಭೂತನಾದರೂ ಅವರು ಸಂತೋಷದಿಂದ ಇದ್ದುದ್ದನ್ನು ಕಂಡು ನಿಟ್ಟುಸಿರುಬಿಟ್ಟೆ.    
ಕರ್ನಾಟಕ ರಾಜ್ಯದಲ್ಲಿ ಕಳೆದ ಶತಮಾನದ ೧೯೫೪-೫೫ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ       ಶ್ರೀ ಕೆಂಗಲ್ ಹನುಮಂತಯ್ಯನವರು ಪ್ರಾರಂಭಿಸಿದ ಭೂ-ವಿದ್ಯಾದಾನದ ಚಳುವಳಿಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಿಗೆ ದಾನವಾಗಿ ಬಂದಿದ್ದ ಸುಮಾರು ಹತ್ತುಸಾವಿರ ಎಕರೆ ಶಾಲಾಜಮೀನುಗಳನ್ನು ಸುಮಾರು ಮೂರೂವರೆ ಸಾವಿರ ಕುಟುಂಬಗಳು ಗೇಣಿಸಾಗುವಳಿ ಮಾಡುತ್ತಿದ್ದಾರೆ.  ಈ ಶಾಲಾಜಮೀನುಗಳ ಖಾತೆ ಸಂವಿಧಾನಬಾಹಿರವಾಗಿ ರಾಜಪ್ರಮುಖರ ಹೆಸರಿನಲ್ಲಿವೆ.  ಈ ಶಾಲಾ ಜಮೀನು ಗೇಣಿದಾರರು ಆಯಾ ಸರ್ಕಾರಿ ಶಾಲೆಗಳಿಗೆ ಅಲ್ಪಸ್ವಲ್ಪ ಗೇಣಿ ಹಣವನ್ನು ಈಗಲೂ ಕಟ್ಟುತ್ತಿದ್ದಾರೆ.  ಈ ಎಲ್ಲಾ ಗೇಣಿಸಾಗುವಳಿಯಲ್ಲಿರುವ ಶಾಲಾಜಮೀನುಗಳು ಶಾಲೆಗಳಿಂದ ೪-೫ ಕಿ.ಮೀ. ದೂರದಲ್ಲಿದ್ದು, ಶಾಲೆಗಳ ಬಳಕೆಗೆ ಸಾಧ್ಯವಾಗದ ಜಮೀನುಗಳಾಗಿವೆ. ಈ ಶಾಲೆಗಳಿಗೆ ಸರ್ಕಾರ, ಆಟದಮೈದಾನ, ಪೀಠೋಪಕರಣಗಳು ಮತ್ತು ಶಿಕ್ಷಕರಿಗೆ ವೇತನವನ್ನು ಕೊಡುತ್ತಿದೆ. ಈ ಹಿನ್ನಲೆಯಲ್ಲಿ ಶಾಲಾಜಮೀನುಗಳ ಗೇಣಿದಾರರಿಂದ ಬರುವ ಗೇಣಿ ಹಣದ ಅಗತ್ಯ ಈಗ ಯಾವ ಶಾಲೆಗಳಿಗೂ ಇಲ್ಲ.  ಉಳುವವನೆ ಹೊಲದ ಒಡೆಯ ಎಂಬ ಐತಿಹಾಸಿಕ ಕಾಗೋಡು ಸತ್ಯಾಗ್ರಹದ ಸಿದ್ಧಾಂತದ ಅಡಿಯಲ್ಲಿ ೧೯೭೪ರಲ್ಲಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ದೇವರಾಜಅರಸು ಅವರು ಜಾರಿಗೆ ತಂದ ಕರ್ನಾಟಕ ಭೂಸುಧಾರಣಾ ಕಾನೂನಿನ ಕಲಂ ೧೦೭ರಲ್ಲಿ ಈ ಶಾಲಾ ಜಮೀನಿನ ಗೇಣಿದಾರರಿಗೆ ಭೂಒಡೆತನದ ಹಕ್ಕುಪತ್ರ ನೀಡದೆ ಅನ್ಯಾಯ ಮಾಡಲಾಗಿದೆ. ಆದರೆ ಇದೇ ಕಾನೂನು ರಾಜ್ಯದಲ್ಲಿನ ಮಠಮಾನ್ಯಗಳು ಹಾಗು ದೇವಸ್ಥಾನಗಳ ಜಮೀನುಗಳನ್ನು ಗೇಣಿಸಾಗುವಳಿ ಮಾಡುತ್ತಿದ್ದ ಗೇಣಿರೈತರಿಗೆ ಖಾತೆ ಮಾಡಿಕೊಟ್ಟಿದೆ.  ರಾಜ್ಯದಲ್ಲಿ ಕಳೆದ ಹಲವಾರು ದಶಕಗಳಿಂದ ಜಾರಿಯಲ್ಲಿರುವ ಅವೈಜ್ಞಾನಿಕ ಹಾಗು ಅಮಾನವೀಯ ಶಾಲಾಜಮೀನು ಗೇಣಿಪದ್ಧತಿಯನ್ನು ರದ್ದುಪಡಿಸಿ, ಈ ಶಾಲಾಜಮೀನು ಗೇಣಿದಾರರಿಗೆ ಕೂಡಲೆ ಈ ಜಮೀನುಗಳ ಅದಿಭೋಗದಾರಿಕೆ(ಹಕ್ಕುಪತ್ರ)ಯನ್ನು ನೀಡಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಹೆಚ್.ಎಸ್.ದೊರೆಸ್ವಾಮಿಯವರು, ಕಾಗೋಡು ಹೋರಾಟದ ರೂವಾರಿ ಶ್ರೀ ಗಣಪತಿಯಪ್ಪನವರು, ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿಯವರು, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಎನ್.ಡಿ.ವೆಂಕಟೇಶ್‌ರವರು, ರೈತ ಮುಖಂಡರಾದ ಶ್ರೀಕಡಿದಾಳ್‌ಶಾಮಣ್ಣನವರು, ಹೋರಾಟಗಾರರಾದ ಶ್ರೀ ಕಲ್ಲೂರುಮೇಘರಾಜ್ ಮತ್ತು ಮುಂತಾದವರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಸರ್ಕಾರ ಶಾಲಾಜಮೀನು ಗೇಣಿದಾರರ ವಿಚಾರದಲ್ಲಿ ಮೀನಾಮೇಷ ಎಣಿಸದೆ ಕೂಡಲೇ ೧೯೭೪ರ ಕರ್ನಾಟಕ ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ತಂದು ಅರ್ಹ ಶಾಲಾಜಮೀನು ಗೇಣಿದಾರರಿಗೆ ಹಕ್ಕುಪತ್ರ ನೀಡಿ ಅದಿಭೋಗದಾರಿಕೆಯನ್ನು ಮಂಜೂರು ಮಾಡಲು ಮನವಿಮಾಡುತ್ತೇನೆ.
ಕರ್ನಾಟಕದಲ್ಲಿ ಜೀತಪದ್ಧತಿ ಇನ್ನೂ ಜೀವಂತವಾಗಿರುವುದು ಆತಂಕಕಾರಿಯಾಗಿದೆ. ಜೀತಪದ್ಧತಿ ಗುಲಾಮಗಿರಿಯ ಪರಿಷ್ಕೃತ ರೂಪವೆಂದರೂ ತಪ್ಪಾಗಲಾರದು.  ಹಿಂದಿನ ಕಾಲದಲ್ಲಿ ಇಡೀ ದಲಿತ ಸಮುದಾಯಕ್ಕೆ ಅಂಟಿಕೊಂಡಿದ್ದ ಈ ಕಳಂಕವು ಈಗಲೂ ದಲಿತ ಮತ್ತು ಬುಡಕಟ್ಟು ಜನಾಂಗವನ್ನು ಕಾಡುತ್ತಿದೆ.  ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಭಾರತವನ್ನು ಒಳಗೊಂಡಂತೆ ದಕ್ಷಿಣ ಏಷ್ಯಾದಲ್ಲಿ ಸುಮಾರು ಹನ್ನೆರಡು ದಶಲಕ್ಷ ಜೀತದಾಳುಗಳಿರುವುದನ್ನು ಅಂದಾಜು ಮಾಡಿದೆ.  ಕರ್ನಾಟಕದಲ್ಲಿ ಸುಮಾರು ಮೂರರಿಂದ ನಾಲ್ಕು ಲಕ್ಷ ಜೀತದಾಳುಗಳಿರುವ ಸಾಧ್ಯತೆ ಇದೆ.  ಜೀತವಿಮುಕ್ತ ಕರ್ನಾಟಕ-ಜೀವಿಕವು ಕಳೆದ ವರ್ಷ ನಡೆಸಿದ ಒಂದು ಸಮೀಕ್ಷೆಯಲ್ಲಿ ಸುಮಾರು ಹತ್ತುಸಾವಿರ ಜೀತದಾಳುಗಳನ್ನು ಕರ್ನಾಟಕದ ೨೮ ಜಿಲ್ಲೆಗಳಲ್ಲಿ ಗುರುತಿಸಿದ್ದು, ಅವರ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದೆ.  ಜೀತಕ್ಕಿರುವವರು ತಮ್ಮ ಮಕ್ಕಳ ಮದುವೆ, ಹಬ್ಬ, ಕಾಯಿಲೆಗಳು ಮತ್ತು ಇತರ ಖರ್ಚುಗಳಿಗೆ ಸಾಲ ತೆಗೆದುಕೊಂಡು ಜಮೀನುದಾರರ ಮನೆಯಲ್ಲಿ ಹಗಲುರಾತ್ರಿ ಎನ್ನದೆ, ವರ್ಷಗಟ್ಟಲೆ ದುಡಿಯುತ್ತಿರುವುದನ್ನು ಕಾಣುತ್ತಿದ್ದೇವೆ.  ಕಾಯಿಲೆ ಬಿದ್ದರೂ ಜೀತದಾಳುಗಳು ಕೆಲಸಕ್ಕೆ ಹೋಗುವುದು ತಪ್ಪುವುದಿಲ್ಲ, ಹಗಲುರಾತ್ರಿ ಕೆಲಸ ಮಾಡಿದರೂ ಸಾಲದಹೊರೆ ಹೆಚ್ಚಾಗುತ್ತಲೇ ಹೋಗುತ್ತದೆ.  ಯಾದಗಿರಿ ತಾಲ್ಲೂಕಿನ ಎಲ್ಲೇರಿ ಗ್ರಾಮದ ಭದ್ರಪ್ಪ ಎಂಬುವವರು ಗ್ರಾಮ ಪಂಚಾಯಿತಿಯ ಸದಸ್ಯರಾಗಿದ್ದಾಗಲೂ, ಭೂಮಾಲೀಕರ ಮನೆಯಲ್ಲಿ ಜೀತ ಮಾಡುತ್ತಿದ್ದರು. ಈಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿರುವ ಭದ್ರಪ್ಪನವರು ತಾವು ಜೀತಕ್ಕೆ ಹೋಗದೆ ಎಸ್.ಎಸ್.ಎಲ್.ಸಿ. ಓದುತ್ತಿದ್ದ ತಮ್ಮ ಮಗನನ್ನು ಶಾಲೆಯಿಂದ ಬಿಡಿಸಿ ಅದೇ ಭೂಮಾಲೀಕರ ಮನೆಯಲ್ಲಿ ಜೀತಕ್ಕಿಟ್ಟಿದ್ದಾರೆ. ಈ ಕರುಣಾಜನಕ ಕಥೆಯನ್ನು ಭದ್ರಪ್ಪನವರಿಂದಲೇ ನಾನು ಕಿವಿಯಾರೆ ಕೇಳಿದ್ದೇನೆ. ಇಂಥ ಕಠೋರ ವಾಸ್ತವಗಳು ಕರ್ನಾಟಕದಾದ್ಯಂತ ಈಗಲೂ ಕಂಡುಬರುತ್ತಿವೆ. ಜೀತಪದ್ಧತಿಯಂಥ ಬಲತ್ಕಾರ ದುಡಿಮೆಯನ್ನು ನಮ್ಮ ಸಂವಿಧಾನವೇ ರದ್ದುಗೊಳಿಸಿದೆ.  ಜೀತಪದ್ಧತಿ ರದ್ದತಿ ಎಂಬ ಕಾನೂನು  ೧೯೭೫ರಿಂದ ಅಸ್ತಿತ್ವದಲ್ಲಿದೆ. ಜೀವಿಕ ಸಂಘಟನೆಯ ಮೂಲಕ ಪ್ರೊ.ಕಮಲ್‌ಕಿರಣ್‌ಪ್ರಸಾದ್ ಅವರು ಅನೇಕ ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಕಾನೂನಿನ ಪರಿಣಾಮಕಾರಿ, ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರವು ಒಂದು ಕ್ರಿಯಾಯೋಜನೆಯನ್ನು ೨೦೦೭ರಲ್ಲಿ ಜಾರಿಗೊಳಿಸಿದೆ. ಆದರೂ ಕೆಳಮಟ್ಟದ ಅಧಿಕಾರಿಗಳು ಇದನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.  ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲರು, ಹಿರಿಯ ಪತ್ರಕರ್ತ ಶ್ರೀ ಶಿವಾಜಿಗಣೇಶನ್‌ರವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದಾರೆ. ಆ ಸಮಿತಿಯು ಹಲವಾರು ಶಿಫಾರಸುಗಳನ್ನು ಸರ್ಕಾರಕ್ಕೆ ಮಾಡಿದೆ.  ಈಗಲಾದರೂ ಸರ್ಕಾರವು ಎಚ್ಚೆತ್ತುಕೊಂಡು ಈ ಶಿಫಾರಸ್ಸುಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಈ ಶಿಫಾರಸುಗಳ ಅನ್ವಯ ಎಲ್ಲಾ ಜೀತದಾಳುಗಳನ್ನು ಗುರುತಿಸಿ ಕೂಡಲೇ ಬಿಡುಗಡೆ ಮಾಡಿ ಅವರಿಗೆ ಸಮಗ್ರ ಪುನರ್ವಸತಿ ಕಲ್ಪಿಸುವ ಹೊಣೆ ಸರ್ಕಾರದ ಮೇಲಿದೆ.       
ರಾಜ್ಯದಲ್ಲಿ ವಿಶೇಷ ಆರ್ಥಿಕವಲಯದ ಹೆಸರಿನಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಬೃಹತ್ ಕೈಗಾರಿಕೆಗಳ ಪಾಲಾಗುತ್ತಿದೆ. ಇದಕ್ಕೆ ಕೊಟ್ಟ ಪರಿಹಾರವೂ ಅಲ್ಪ.  ಈ ವಿಶೇಷ ಆರ್ಥಿಕವಲಯಕ್ಕೆ ಬಲಿಯಾಗಿ ಭೂಮಿ ಕಳೆದುಕೊಂಡು ಬೀದಿಪಾಲಾದವರ ಗೋಳು ಹೇಳತೀರದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮಂಗಳೂರು ಸಮೀಪದ ಕುಡುಬಿಪದವು ಗ್ರಾಮದ ಪರಿಸ್ಥಿತಿಯನ್ನು ಗಮನಿಸಬಹುದು.  ಕೈಗಾರಿಕೆ ಬರಬೇಕೆನ್ನುವುದು ನಿಜ; ಆದರೆ ಕೃಷಿಭೂಮಿ ಕೈಗಾರಿಕೆಗಳ ಪಾಲಾಗುವ ಭರದಲ್ಲಿ ಧ್ವನಿ ಇಲ್ಲದವರ ಮೇಲೆ ಸವಾರಿ ನಡೆಯುತ್ತಿರುವುದು ಶೋಚನೀಯ.  ಕುಡುಬಿಪದವು ಗ್ರಾಮದ ನಲವತ್ತೆರೆಡು ಕುಟುಂಬಗಳು ಬಲಾಢ್ಯ ಕುಟುಂಬಗಳ ಪುನರ್‌ವಸತಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.  ಸಾಮಾಜಿಕವಾಗಿ ಹಿಂದುಳಿದ, ಧ್ವನಿಯೂ ಇಲ್ಲದ ಈ ನಲವತ್ತೆರೆಡು ಕುಟುಂಬಗಳನ್ನು ಕಾರಣವಿಲ್ಲದೆ ಒಕ್ಕಲೆಬ್ಬಿಸಿರುವುದು ಮಾನವಘನತೆಯನ್ನು ಮಣ್ಣುಪಾಲು ಮಾಡಿದೆ. ಎಂಟು ವರ್ಷಗಳ ಹೋರಾಟದ ನಂತರವೂ ಈ ಕುಟುಂಬಗಳಿಗೆ ನ್ಯಾಯ ಸಿಗದಿರುವುದು ದುರದೃಷ್ಟಕರ.
ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆಯ ಆಚರಣೆ, ಸುದ್ದಿಮಾಧ್ಯಮಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ.  ಮಾನವ, ಮಂಗಳಗ್ರಹವನ್ನು ತಲುಪುವ ಈ ಸಂದರ್ಭದಲ್ಲೂ ಸಾವಿರಾರು ಕುಗ್ರಾಮಗಳಲ್ಲಿ ಅಸ್ಪೃಶ್ಯತೆಯು ಆಚರಣೆಯಲ್ಲಿದ್ದು, ದಲಿತವರ್ಗದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದಂತಾಗಿದೆ.  ಈ ವರ್ಗದವರನ್ನು ದೇವಾಲಯ, ಉಪಹಾರಗೃಹ, ಸಾರ್ವಜನಿಕ ಬಾವಿಗಳಿಂದ ದೂರ ಇಡಲಾಗಿದೆ. ಇವರಿಗೆ ಕ್ಷೌರವನ್ನು ನಿರಾಕರಿಸಿದ ಘಟನೆಗಳೂ ವರದಿಯಾಗುತ್ತಿವೆ. ಗಾಂಧಿ, ಅಂಬೇಡ್ಕರ್ ಅವರುಗಳ ಕನಸು ನನಸಾಗಬೇಕಾಗಿದೆ.  ಈ ಅನಿಷ್ಟಪದ್ಧತಿಯನ್ನು ತೊಡೆದು ಹಾಕಲು ದಲಿತವರ್ಗದವರು ಜಾಗೃತವಾಗುವುದರ ಜೊತೆಗೆ ಅಸ್ಪೃಶ್ಯತಾನಿವಾರಣಾ ಚಳುವಳಿಗೆ ಮೇಲ್ವರ್ಗದ ಯುವಕರೂ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ.
ನಮ್ಮ ರಾಜ್ಯದ ಅರಣ್ಯಗಳಲ್ಲಿ ಹಲವು ಶತಮಾನಗಳಿಂದ ವಾಸವಾಗಿರುವ ಅರಣ್ಯವಾಸಿ ಗಿರಿಜನರ ಬದುಕು ದುಸ್ತರವಾಗಿದೆ.  ಅರಣ್ಯಕಾಯ್ದೆಯ ನೆಪದಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಂಡು ಕಾಡಿನ ಮೂಲನಿವಾಸಿಗಳನ್ನು ಅಲ್ಲಿಂದ ಎತ್ತಂಗಡಿಮಾಡುವ ಕಾರ್ಯ ನಡೆಯುತ್ತಿದೆ.  ಕಾಡಿನಲ್ಲೇ ಇರಲು ಇಷ್ಟಪಟ್ಟವರ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಅವರು ಕಾಡಿನಲ್ಲಿ ಇರಬಹುದು, ಆದರೆ ಅವರು ಜೀವನಾಧಾರವಾದ ಅರಣ್ಯದ ಸಂಪನ್ಮೂಲಗಳನ್ನು ಬಳಸುವಂತಿಲ್ಲ.  ಹಣ್ಣುಗಳನ್ನು ಬಿಟ್ಟ ಮರವನ್ನು ಅವರು ದೂರನಿಂತು ಕಣ್ತುಂಬ ನೋಡಬಹುದೆ ಹೊರತು ಹಣ್ಣುಗಳನ್ನು ಕೀಳುವಂತಿಲ್ಲ.  ಕೊಳದಲ್ಲಾಡುವ ಮೀನುಗಳನ್ನು ನೋಡಬಹುದೆ ಹೊರತು ಅವುಗಳನ್ನು ಹಿಡಿದು ಆಹಾರವಾಗಿ ಬಳಸುವಂತಿಲ್ಲ.  ಜೇನನ್ನು ನೋಡಬಹುದೆ ಹೊರತು ಇವರಿಗೆ ಅದನ್ನು ಕಿತ್ತು ಸವಿಯುವ ಸೌಭಾಗ್ಯ ಇಲ್ಲ. ಅರಣ್ಯಕಾಯ್ದೆ ಬಡಗಿರಿಜನರ ಮೇಲೆ ಅರಣ್ಯನ್ಯಾಯವನ್ನು ಹೇರಿದೆ ಎಂದರೆ ಉತ್ಪ್ರೇಕ್ಷೆಯಲ್ಲ.  ಇಂಥ ಪರಿಸ್ಥಿತಿಯ ನಡುವೆಯೂ, ಡಾ.ಮೋಹನ್ ಆಳ್ವರವರ ವಿದ್ಯಾಸಂಸ್ಥೆಯಲ್ಲಿ ಕೊರಗ, ಸಿದ್ದಿ, ಮಲೆಕುಡಿಯ, ಜೇನುಕುರುಬ, ಹಸಲ, ಸೋಲಿಗ, ಹಕ್ಕಿಪಿಕ್ಕಿ, ಕುಡುಬಿ ಸಮುದಾಯಗಳ ನಾನೂರೈವತ್ತು ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಉಚಿತ ವಸತಿ, ಊಟ ಮತ್ತು ಶಿಕ್ಷಣ ನೀಡುತ್ತಿರುವುದಕ್ಕಾಗಿ ಡಾ.ಆಳ್ವರವರನ್ನು ಶ್ಲಾಘಿಸುತ್ತೇನೆ. ಈ ಸಂಸ್ಥೆಯಲ್ಲಿ ಓದಿದ ಕೊರಗ ಜನಾಂಗದ ಹೆಣ್ಣುಮಗಳಾದ ಕುಮಾರಿ ಕೆ.ಸ್ನೇಹ ಕೊರಗ ಜನಾಂಗದ ಚರಿತ್ರೆಯಲ್ಲಿ ಮೊಟ್ಟಮೊದಲಬಾರಿಗೆ ಎಂ.ಬಿ.ಬಿ.ಎಸ್ ಪದವಿ ಅಧ್ಯಯನಕ್ಕೆ ಪ್ರವೇಶಪಡೆದವಳಾಗಿದ್ದಾಳೆ.  ಅವಳ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.    
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಕೊರಗಜನಾಂಗದ ಮುಖಂಡರಾದ ಶ್ರೀ ಗೋಕುಲ್‌ದಾಸ್‌ರವರು ಬೆಂಗಳೂರಿನಲ್ಲಿ ನನ್ನನ್ನು ಭೇಟಿ ಮಾಡಿ ಅಜಲುಪದ್ಧತಿಯಿಂದ ತಮ್ಮ ಜನಾಂಗಕ್ಕೆ ಆಗುತ್ತಿರುವ ಅನ್ಯಾಯವನ್ನು ವಿವರಿಸಿದರು. ನಾನು ಕೊರಗಜನಾಂಗದ ಸಂಕಷ್ಟವನ್ನು ವಿಧಾನಪರಿಷತ್ತಿನಲ್ಲಿ ಪ್ರಸ್ತಾಪಿಸಿದಾಗ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ನನ್ನ ಬೆಂಬಲಕ್ಕೆ ನಿಂತರು.  ಆಗ ಸಮಾಜಕಲ್ಯಾಣ ಸಚಿವರಾಗಿದ್ದ ಶ್ರೀ ಕಾಗೋಡುತಿಮ್ಮಪ್ಪನವರು ಅಜಲುಪದ್ಧತಿ ನಿಷೇಧ ಕಾಯಿದೆಯನ್ನು ಜಾರಿಗೆ ತಂದರು.  ಈ ಗೌರವವನ್ನು ಕೊರಗಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಸಮಾಜಸುಧಾರಕ ಶ್ರೀ ಕುದ್ಮುಲ್ ರಂಗರಾಯರಿಗೆ ನಾನು ಸಮರ್ಪಿಸುತ್ತೇನೆ.  
ಆಳ್ವಾಸ್ ನುಡಿಸಿರಿಯ ೧೧ನೇ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಮಾಡಿ ತಮ್ಮ ಔದಾರ್ಯವನ್ನು ಮೆರೆದ ಡಾ.ಎಂ.ಮೋಹನ್ ಆಳ್ವ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗು ಆಳ್ವಾಸ್ ನುಡಿಸಿರಿ ೨೦೧೪ರ ಸ್ವಾಗತಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ನಾನು ಆಭಾರಿಯಾಗಿದ್ದೇನೆ.  ನಾಡಿನ ಮೂಲೆ ಮೂಲೆಗಳಿಂದ, ದೇಶದ ಎಲ್ಲೆಡೆಯಿಂದ, ದೇಶವಿದೇಶಗಳಿಂದ ಇಲ್ಲಿಗೆ ಆಗಮಿಸಿದ ನಾಡುನುಡಿಯ ಅಭಿಮಾನಿಗಳಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.