ಮೂಡುಬಿದಿರೆ: ಕಳೆದ ಮೂರು ದಿನಗಳಿಂದ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯುತ್ತಿದ್ದ ‘ಆಳ್ವಾಸ್ ಚಿತ್ರಸಿರಿ’ಯ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಈ ಸಂದರ್ಭ ಮೈಸೂರು ಲಲಿತಕಲಾ ಮಹಾ ಸಂಸ್ಥಾನದ ಡಿಎಂಎಸ್ ಪ್ರೊ. ಬಿ.ವಿ.ಹಿರೇಗೌಡರ್‌ಗೆ ಆರನೆ ವರ್ಷದ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ಲಲಿತಕಲಾ ಅಕಾಡಮಿಯ ಅಧ್ಯಕ್ಷ ಚಿ.ಸು ಕೃಷ್ಣ ಸೆಟ್ಟಿ, ಸಾಹಿತ್ಯಕ್ಕೆ ಸಿಗುವಷ್ಟು ಮಾನ್ಯತೆಯು ಇಂದು ಕಲಾ ಮಾಧ್ಯಮಕ್ಕೆ ಸಿಗುತ್ತಿಲ್ಲ. ಕಲೆಯ ಬಗ್ಗೆ ಅಜ್ಞಾನವೇ ಹೆಚ್ಚಿದೆ. ಕಲೆಯ ಶಕ್ತಿಯನ್ನು ಅರ್ಥೈಸಿಕೊಳ್ಳದಿದ್ದರೆ ಸಮಾಜದ ಪರಿವರ್ತನೆ ಸಾಧ್ಯವಿಲ್ಲ ಎಂದು ಹೇಳಿದರು.
ನಮ್ಮ ಭಾವನೆಗಳನ್ನು ಅಭಿವ್ಯಕ್ತ ಪಡಿಸುವಾಗ ನಕಾರತ್ಮಕ ಅಂಶಗಳೇ ಹೆಚ್ಚಾಗುತ್ತದೆ. ಇದು ಸರಿಯಲ್ಲ ಅದರ ಬದಲು ಬದುಕನ್ನು ಸಂಭ್ರಮಿಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಹಿರೇಗೌಡರ್, ಬದುಕಿನಲ್ಲಿರುವ ಹಲವು ನೋವುಗಳನ್ನು ಬದಿಗೊತ್ತಿ ನಾನು ಆಯ್ದುಕೊಂಡ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಲೆಯಲ್ಲಿ ತೊಡಗಿದ್ದೇನೆಯೇ ವಿನಹ ಇದು ಹಣಗಳಿಸಲು ಅಲ್ಲ. ನನಗೆ ಬಂದ ಪ್ರಶಸ್ತಿ ಎಲ್ಲಾ ಸಾಧಕ ಕಲಾವಿದರಿಗೆ ಸಂದ ಪ್ರಶಸ್ತಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡಮಿಯ ಸದಸ್ಯ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಸನ್ಮಾನಿತರನ್ನು ಪರಿಚಯಿಸಿದರು. ಭಾಸ್ಕರ್ ನೆಲ್ಯಾಡಿ ಸ್ವಾಗತಿಸಿದರು. ಗುರುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

