ಮೂಡಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 'ಕನ್ನಡ ಮನಸ್ಸು: ಜನಪರ ಚಳವಳಿಗಳು' ಎಂಬ ಪರಿಕಲ್ಪನೆಯಲ್ಲಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಶುಭ ಸೇಸೆಯೊಂದಿಗೆ 9ನೇ ವರುಷದ ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಜರಗಲಿದೆ.
ಬೆಳಿಗ್ಗೆ 9ಕ್ಕೆ ಸಾಂಸ್ಕೃತಿಕ ಮೆರವಣಿಗೆಯಿಂದ ಆರಂಭಗೊಳ್ಳಲಿದೆ ನುಡಿಸಿರಿ ಸಂಭ್ರಮ. 9.30ಕ್ಕೆ ಉದ್ಘಾಟನಾ ಸಮಾರಂಭ ಪದ್ಮಶ್ರೀ ನಾಡೋಜ ಪ್ರೊ| ಕೆ.ಎಸ್. ನಿಸಾರ್ ಅಹಮದ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ| ಯು.ಆರ್. ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಶಾಸಕರಾದ ಕೆ. ಅಭಯಚಂದ್ರ ಹಾಗೂ ಕ್ಯಾ| ಗಣೇಶ್ ಕಾರ್ಣಿಕ್ ಉಪಸ್ಥಿತರಿರುವರು. ಅನಂತಮೂರ್ತಿ ಅವರು 'ಕನ್ನಡ ಮನಸ್ಸು: ಸಂಘರ್ಷ ಮತ್ತು ಸಾಮರಸ್ಯ' ಕಳೆದ ಸಾಲಿನ ನುಡಿಸಿರಿ ನೆನಪಿನ ಸಂಚಿಕೆ ಅನಾವರಣಗೈಯುವರು.
ಶತಾಯುಷಿ ವಿದ್ವಾಂಸ ಪ್ರೊ| ಜಿ. ವೆಂಕಟಸುಬ್ಬಯ್ಯ ಅವರನ್ನು ಡಾ| ಪಿ.ವಿ. ನಾರಾಯಣ ಅವರ ಅಭಿವಂದನೆಯೊಂದಿಗೆ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಗೌರವಿಸುವರು.
ಕನಕಗಿರಿ ಹುಸೇನ್ ಸಾಬ್ ಅವರಿಂದ ದಾಸವಾಣಿ, ಜಿನದತ್ತ ದೇಸಾಯಿ ಅವರಿಂದ ಕವಿ ಸಮಯ- ಕವಿನಮನ 2.20ರ ವರೆಗೆ ನಡೆಯಲಿದೆ.
ಅಪರಾಹ್ನ 2.20ರಿಂದ 4ರ ವರೆಗೆ ನಡೆಯುವ 'ಕನ್ನಡ ಸಾಹಿತ್ಯಕ ಚಳವಳಿಗಳು' ಶೀರ್ಷಿಕೆಯ ಮೊದಲ ವಿಚಾರಗೋಷ್ಠಿಯಲ್ಲಿ ಡಾ| ರಂಜಾನ್ ದರ್ಗಾ (ಹಳೆಗನ್ನಡಾನಂತರ ಚಳವಳಿಗಳು), ಡಾ| ನಿತ್ಯಾನಂದ ಬಿ. ಶೆಟ್ಟಿ ( ಅಚ್ಚಗನ್ನಡದ ಎಚ್ಚರ) ಹಾಗೂ ಡಾ| ಸಿ.ಆರ್. ಗೋವಿಂದ ರಾಜು ( ಕನ್ನಡ ಭಾಷಾ ಚಳವಳಿಗಳು) ಭಾಗವಹಿಸುವರು.
ಡಾ| ಪಾದೆಕಲ್ಲು ವಿಷ್ಣು ಭಟ್ಟರು ಡಾ| ವೆಂಕಟರಾಜ ಪುಣಿಂಚಿತ್ತಾಯ ನೆನಪು ಕಟ್ಟಿಕೊಡುವರು. ಎಸ್. ದಿವಾಕರ್ ಅವರಿಂದ ಕಥಾ ಸಮಯ, ನಾಗತಿ ಹಳ್ಳಿ ಚಂದ್ರಶೇಖರ್ ಅವರಿಂದ 'ನಮ್ಮ ಹಳ್ಳಿ ನಮ್ಮ ಜಗತ್ತು' ವಿಶೇಷ ಉಪನ್ಯಾಸ, ವಿನಯಾ ವಕ್ಕುಂದ ಅವರಿಂದ ಕವಿಸಮಯ - ಕವಿನಮನ, ಸಂಜೆ 6.05ಕ್ಕೆ ಡಾ| ಕೃಷ್ಣೇ ಗೌಡರಿಂದ ಮಾತಿನ ಮಂಟಪ ಕಾರ್ಯಕ್ರಮಗಳಿರುತ್ತವೆ.
.jpg)

