ಮೂಡಬಿದಿರೆ: ಮುಂದಿನ ತಿಂಗಳು ಜರಗಲಿರುವ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆನ್‌ಲೈನ್ ಮೂಲಕ ಛಾಯಾ ಚಿತ್ರಗಳನ್ನು ಸ್ವೀಕರಿಸಿದ ಪ್ರಥಮ ಸ್ಪರ್ಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ವಿವಿಧ ಭಾಗಗಳಿಂದ 4 ವಿಭಾಗಕ್ಕೆ 3,648 ಛಾಯಾಚಿತ್ರಗಳು ಆಗಮಿಸಿದ್ದವು. ನ. 20ರಂದು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾದ ಮೈಸೂರಿನ ಎಸ್. ತಿಪ್ಪೇಸ್ವಾಮಿ, ಬೆಂಗಳೂರಿನ ಸಿ.ಆರ್. ಸತ್ಯನಾರಾಯಣ ಹಾಗೂ ಸಾಗರದ ಅಮಚಿ ಲಕ್ಷ್ಮೀನಾರಾಯಣ ತೀರ್ಪುಗಾರರಾಗಿ ಆಗಮಿಸಿದ್ದರು.
ಕಲ್ಚರಲ್ ಇಂಡಿಯಾ ವಿಭಾಗದಲ್ಲಿ ಕರ್ನಾಟಕದ ಬಾಗಲಕೋಟೆಯ ಇಂದ್ರಕುಮಾರ್ ಪ್ರಥಮ, ಪಶ್ಚಿಮ ಬಂಗಾಳದ ಅಭ್ಯುತ್ ಘೋಷ್ ದ್ವಿತೀಯ ಹಾಗೂ ಆಂಧ್ರಪ್ರದೇಶದ ಅಮಲಾಪುರಮ್‌ನ ವಿ.ಕೆ.ಆರ್.ಎಸ್. ಶರ್ಮಾ ತೃತೀಯ ಬಹುಮಾನ ಪಡೆದಿದ್ದಾರೆ.
ರೂರಲ್ ಇಂಡಿಯಾ ವಿಭಾಗದಲ್ಲಿ ಆಂಧ್ರಪ್ರದೇಶದ ವಿಜಯವಾಡದ ತಮ್ಮ ಶ್ರೀನಿವಾಸ ರೆಡ್ಡಿ ಪ್ರಥಮ, ಬೆಂಗಳೂರಿನ ಎಚ್. ಸತೀಶ್ ದ್ವಿತೀಯ ಹಾಗೂ ಸುಧಿಧೀರ್ ಭಜನೆಹಟ್ಟಿ ತೃತೀಯ ಸ್ಥಾನ ಗಳಿಸಿದ್ದಾರೆ.
ಲ್ಯಾಂಡ್‌ಸ್ಕೇಪ್ ಆಫ್ ಇಂಡಿಯಾ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಡೆ ಗರ್ಗಿ ಪ್ರಥಮ, ಮುಂಬಯಿಯ ಕಲ್ಪನಾ ಶಾ ದ್ವಿತೀಯ ಹಾಗೂ ಮದ್ಯಪ್ರದೇಶದ ಇಂದೋರ್‌ನ ಸುಧಿರ್ ಸಕ್ಸೇನಾ ತೃತೀಯ ಸ್ಥಾನ ಗಳಿಸಿದ್ದಾರೆ.
ಟೂರಿಸಂ ಸ್ಪಾಟ್ಸ್ ಆಫ್ ಇಂಡಿಯಾ ವಿಭಾಗದಲ್ಲಿ ಹೌರಾದ ಅವಿಕ್ ಘೋಷ್ ಪ್ರಥಮ, ಬೆಂಗಳೂರಿನ ಗಣಪತಿ ಹೆಗಡೆ ದ್ವಿತೀಯ ಹಾಗೂ ಮುಂಬಯಿಯ ಹರಿಯ ತಿಲಕ್ ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಪ್ರತಿ ವಿಭಾಗದಲ್ಲೂ ತಲಾ ಹತ್ತು ಸರ್ಟಿಫಿಕೆಟ್ ಆಫ್ ಮೆರಿಟ್ ಪ್ರಶಸ್ತಿ ನೀಡಲಾಗಿದೆ. ಎಲ್ಲ ವಿಜೇತರ ಚಿತ್ರಗಳನ್ನು ಮೂಡಬಿದಿರೆಯಲ್ಲಿ ಜರಗುವ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು ಹಾಗೂ ವಿಜೇತರಿಗೆ ಬಹುಮಾನವನ್ನು ಇದೇ ಸಂದರ್ಭ ನೀಡಲಾಗುವುದು.
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ರಾಷ್ಟ್ರೀಯ ಛಾಯಾಗ್ರಹಣದ ಗೌರವಾಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಸಂಕಲ್ಪದಂತೆ ಭಾರತ ಕಂಡ 50 ಮಹಾನ್ ಛಾಯಾಚಿತ್ರಕಾರರ ಕೃತಿಗಳನ್ನು ಇದೇ ಸಂದರ್ಭ ಪ್ರದರ್ಶಿಸಲಾಗುವುದು ಎಂದು ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ರಾಷ್ಟ್ರೀಯ ಛಾಯಾಗ್ರಹಣ ಸಲೋನ್ ಅಧ್ಯಕ್ಷರಾದ ಯಜ್ಞ ಮತ್ತು ಕಾರ್ಯದರ್ಶಿ ಆಸ್ಟ್ರೋ ಮೋಹನ್ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

