ಮಂಗಳೂರು: ದೇಶದಲ್ಲಿ ಯಾರು, ಎಲ್ಲಿ ಬೇಕಾದರೂ ಸಮಾವೇಶ ಮಾಡಬಹುದು. ಅವರವರ ವಿಚಾರಗಳನ್ನು ಮಂಡಿಸಲು ಎಲ್ಲರಿಗೂ ಅವಕಾಶವಿದೆ. ಯಾವುದೇ ಸಮಾವೇಶ ಯಾರಿಗೂ ಪರ್ಯಾಯವಲ್ಲ. ಪರ್ಯಾಯ ಎಂದು ಹೇಳುವುದೂ ಸರಿಯಲ್ಲ ಎಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಕಾರ್ಯಾಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ವಿಶ್ವ ನುಡಿಸಿರಿ ಸಮಾವೇಶಕ್ಕೆ ಪರ್ಯಾಯವಾಗಿ 'ಜನನುಡಿ ಸಮಾವೇಶ' ನಡೆದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಸಮ್ಮೇಳನಾಧ್ಯಕ್ಷರ ಪಲ್ಲಕ್ಕಿ ಮೆರವಣಿಗೆ
ಆಳ್ವಾಸ್ ನುಡಿಸಿರಿಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ| ಆಳ್ವ, ಅದು ಸಮ್ಮೇಳನಾಧ್ಯಕ್ಷರಿಗೆ ಕೊಡುವ ಗೌರವ. ನಾನು ಕೂಡ ಪಲ್ಲಕ್ಕಿಗೆ ಹೆಗಲು ಕೊಡುತ್ತೇನೆ. ಇಲ್ಲಿಯ ವರೆಗೆ ಒಂಬತ್ತು ಸಮಾವೇಶಗಳಲ್ಲಿ ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ನಡೆಸಲಾಗಿದೆ. ಯಾರೂ ಪಲ್ಲಕ್ಕಿ ಬೇಡ ಅನ್ನಲಿಲ್ಲ. ಮುಂದೆಯೂ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸುತ್ತೇನೆ. ಒಂದು ವೇಳೆ ಸಮ್ಮೇಳನಾಧ್ಯಕ್ಷರೇ ಬೇಡ ಅಂದರೆ ಮಾತ್ರ ಬೇರೆ ವ್ಯವಸ್ಥೆ ಮಾಡುತ್ತೇನೆ ಎಂದರು.

