ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯಲ್ಲಿ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಸಂದರ್ಭದಲ್ಲಿ ನಡೆಯಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 34ನೇ ರಾಜ್ಯಮಟ್ಟದ ಕೃಷಿಮೇಳದಲ್ಲಿ ಸ್ಥಳೀಯ ರೈತರ ಕೃಷಿಭೂಮಿಯ ಮಣ್ಣನ್ನು ಸ್ಥಳದಲ್ಲೇ ಪರೀಕ್ಷೆ ನಡೆಸಿ ವರದಿ ನೀಡಬಲ್ಲ ಸಂಚಾರಿ ಪ್ರಯೋಗಾಲಯದ ವ್ಯವಸ್ಥೆ ಇದೆ.
ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫೆರ್ಟಿ ಲೈಸರ್ಸ್ ಲಿಮಿಟೆಡ್ ಕಂಪೆನಿಯು ಹೊಸತಾಗಿ 50 ಲಕ್ಷ ವೆಚ್ಚದ ಸಂಚಾರಿ ಮಣ್ಣು ಮಾದರಿ ವಿಶ್ಲೇಷಣೆ ಮಾಡುವ ವಾಹನವನ್ನು ಖರೀದಿಸಿದೆ. ಈ ವಾಹನವು ಪ್ರತಿದಿನ ರೈತರ ಸುಮಾರು 3 ಸಾವಿರದಷ್ಟು ಮಣ್ಣಿನ ಮಾದರಿಗಳನ್ನು ಸ್ಥಳದಲ್ಲೇ ಪರೀಕ್ಷೆ ನಡೆಸಿ ಫಲಿತಾಂಶದ ವರದಿಯನ್ನು ನೀಡಲಿದೆ. ಈ ಮಣ್ಣಿನ ಪರೀಕ್ಷೆಯಿಂದಾಗಿ ಮಣ್ಣಿನ ರಸಸಾರ ಪ್ರಮಾಣ, ರೈತ ಬೆಳೆಯುವ ಬೆಳೆಗಳಿಗೆ ಬಳಸಬಹುದಾದ ರಾಸಾಯನಿಕ ಗೊಬ್ಬರದ ಬಗ್ಗೆ ಮಾಹಿತಿ ಸಿಗುತ್ತದೆ. ಇದರಿಂದಾಗಿ ಮಣ್ಣಿನ ಫಲವತ್ತತೆಯನ್ನು ರೈತರಿಗೆ ನಿರಂತರವಾಗಿ ಕಾಯ್ದುಕೊಳ್ಳಲು ಪೂರಕವಾಗುತ್ತದೆ. ಭತ್ತ ಬೆಳೆಯುವ ಕೃಷಿಕರು ತಮ್ಮ ಜಮೀನಿನ ನಾಲ್ಕೈದು ಕಡೆಯ ಮಾದರಿಗಳನ್ನು ಒಟ್ಟಗೂಡಿಸಿ ಅರ್ಧ ಕೆ.ಜಿಯಷ್ಟನ್ನು, ತೋಟಗಾರಿಕಾ ಬೆಳೆಗಾರರು ತಮ್ಮ ಭೂಮಿಯ ಒಂದುವರೆ ಅಡಿ ಆಳದ ನಾಲ್ಕು ಗಿಡಗಳ ಮಧ್ಯದ ಮಣ್ಣನು ತೆಗೆದು ವಿ ಆಕಾರದಲ್ಲಿ ತೆಗೆದು ಪರೀಕ್ಷೆಗೆ ಒಳಪಡಿಸಬಹುದು. ಸಾವಾಯವ, ರಾಸಾಯನಿಕ ಗೊಬ್ಬರ ಹಾಕಿದ ಆರು ತಿಂಗಳ ಹಿಂದಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸುವುದು ಉತ್ತಮ. ಮಣ್ಣು ಪರೀಕ್ಷೆಯನ್ನು ತ್ವರಿತವಾಗಿ ಮಾಡುವ ವ್ಯವಸ್ಥೆ ದ.ಕ ಜಿಲ್ಲೆಯಲ್ಲಿ ಇಲ್ಲದಿರುವುದು ಮತ್ತು ಖಾಸಗಿಯಾಗಿ ಮಾಡಿಸಿದಲ್ಲಿ 300 ರೂ.ವೆಚ್ಚ ತಗಲುವುದರಿಂದ ರೈತರು ಉಚಿತವಾಗಿ ನಡೆಯುವ ಈ ಮಣ್ಣು ಪರೀಕ್ಷೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕೃಷಿ ಯೋಜನಾಧಿಕಾರಿ ವಿಜಯ್ ನಾಗನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


