ಮೂಡುಬಿದಿರೆ: ಅನಿಶ್ಚಿತ ಬೆಲೆ, ಕೂಲಿಕಾರರು ಹಾಗೂ ಬಂಡವಾಳದ ಸಮಸ್ಯೆಗಳ ನಡುವೆ ಸ್ವಯಂಸ್ಪೂರ್ತಿ ಹಾಗೂ ವಿಶ್ವಾಸ ಪ್ರಮುಖವಾಗುತ್ತದೆ. ಇಂದು ಮಹಿಳೆಯರಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು ಸ್ವ ಉದ್ಯೋಗಳು ಅಭಿವೃಧ್ಧಿಯಾಗಿವೆ. ಹಾಗಾಗಿ ಕೃಷಿಕರಿಗೂ ಗೌರವ ಬಂದಿದೆ. ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟರು.
ಅವರು ಮೂಡಬಿದ್ರೆಯ ಆಳ್ವಾಸ್ ವಿಶ್ವ ನುಡಿಸಿರಿಯೊಂದಿಗೆ ಆಯೋಜಿಸಲಾದ 34ನೇ ಕೃಷಿ ಸಿರಿಯನ್ನು ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡುತ್ತಿದ್ದರು. ಅಡಿಕೆ ಬೆಳೆಯು ಅರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ಸಂಶೋಧನಾತ್ಮಕವಾಗಿ ಸಾಬೀತು ಪಡಿಸಬೇಕಾಗಿದ್ದು ಅದಕ್ಕೆ ಧರ್ಮಸ್ಥಳ ಗ್ರಾಮಾಭಿವೃಧ್ಥಿ ಯೋಜನೆಯ ವತಿಯಿಂದ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಈ ವೇಳೆ ಕೃಷಿಮೇಳದ ವಸ್ತು ಪ್ರದರ್ಶನವನ್ನು ಸಸಿ ವಿತರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಸಚಿವ ಅಭಯಚಂದ್ರ ಜೈನ್ ಹಿಂದಿನಿಂದಲೂ ತುಳು ನಾಡಿನಲ್ಲಿ ಭತ್ತದ ಕೃಷಿ ಪ್ರಮುಖವಾಗಿದ್ದು ಅದಕ್ಕೆ ಈಗಲೂ
ನೀರಿನ ಕೊರತೆಯಿದೆ ಈ ಸಮಸ್ಯೆ ನಿವಾರಿಸಲು 400 ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ಸಚಿವ ವಿನಯ ಕುಮಾರ್ ಸೊರಕೆ ಜಾನುವಾರು ಪ್ರದರ್ಶನವನ್ನು, ಭತ್ತದ ಕಣಜವನ್ನು ನೀಡುವುದರ ಮೂಲಕ ಉದ್ಘಾಟಿಸಿದರೆ, ಫಲಪುಷ್ಪ ಪ್ರದರ್ಶನವನ್ನು ಸಚಿವ ಬಿ.ರಮನಾಥ ರೈ ಹಾಗೂ ವಿಚಾರಗೋಷ್ಠಿಯನ್ನು ಸಚಿವ ಯು.ಟಿ.ಖಾದರ್, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ ಕೆ ನಾರಾಯಣಗೌಡ ಇವರು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು
ಪ್ರಫುಲ್ ಚಂದ್ರ ವಿರಚಿತ ಕೃಷಿ ಸಂಶೋಧನಾತ್ಮಕ ಗ್ರಂಥ ‘ಭೂಮಿಗೀತೆ’ವನ್ನು ಸಂಸದ ನಳೀನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು. ಕೃಷಿಯಲ್ಲಿ ಜೀವಮಾನ ಸಾಧಕ ಪ್ರಶಸ್ತಿ ಪಡೆದ ಜೀವಾನಂದ ಕುಮಾರ್
ಎಡಪದವು, ಸಾಧಕ ಪ್ರಶಸ್ತಿ ವಿಜೇತರಾದ ಅರುಣ್‍ಕುಮಾರ್ ಎಸ್.ಆರ್, ಪಿ,ಟಿ. ಜೋಸ್, ಶಾಮಣ್ಣ ನಾಯಕ ಓಡಿಲ್ನಾಳ ಇವರುಗಳನ್ನು ಗೌರವಿಸಲಾಯಿತು. ಡಾ. ಎನ್.ಹೆಚ್. ಮಂಜುನಾಥ ಸ್ವಾಗತಿಸಿ, ಶ್ರೀ ಪರ್ಣೇಗೌಡ ವಂದಿಸಿದರು.



