ರಾಜ್ಯ ಮಟ್ಟದ 34ನೇ ಕೃಷಿಮೇಳ.

ಮೂಡುಬಿದಿರೆ: ಆಳ್ವಾಸ್‌ ವಿಶ್ವ ನುಡಿಸಿರಿ-ವಿರಾಸತ್‌ (ಡಿ. 19-22) ಅಂಗವಾಗಿ ವಿದ್ಯಾಗಿರಿಯಲ್ಲಿ ಡಿ. 20 - 22ರ ವರೆಗೆ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ 34ನೇ ಕೃಷಿಮೇಳದಲ್ಲಿ ಸಮಗ್ರ ಕೃಷಿ ಘಟಕದ ಚಿತ್ರಣ ಮತ್ತು ಜಿಲ್ಲಾ ಮಾದರಿಗಳು ಗಮನ ಸೆಳೆಯಲಿವೆ. ವಿದ್ಯಾಗಿರಿಯ 10.5 ಎಕರೆ ಪ್ರದೇಶದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಸಮಗ್ರ ಕೃಷಿ ಘಟಕ

60 ಅಡಿ ಉದ್ದ 50 ಅಡಿ ಅಗಲ = 3,000 ಚದರ ಅಡಿ ವಿಸ್ತೀರ್ಣದಲ್ಲಿ ಸಮಗ್ರ ಕೃಷಿ ಘಟಕವನ್ನು ಮಾಡಿ ಅದರಲ್ಲಿ ಆರ್‌ಸಿಸಿ ಮನೆ ರಚನೆ, ಶೌಚಾಲಯ, ಬಾವಿ ರಚನೆ, ಮಾದರಿ ಹಟ್ಟಿ, ಗೋಬರ್‌ ಗ್ಯಾಸ್‌ ಘಟಕ, ಸೋಲಾರ್‌ ಇತ್ಯಾದಿ ಮಾದರಿ ನಿರ್ಮಾಣ, 4 ಗದ್ದೆಯ ಮಾದರಿಯಲ್ಲಿ ಶ್ರೀ ಪದ್ಧತಿ, ಸಾಮಾನ್ಯ ಪದ್ಧತಿ, ನೇರ ಬಿತ್ತನೆ, ಧಾನ್ಯ ಬಿತ್ತನೆ ಮಾದರಿಯನ್ನು ಮಾಡಿ ತೋರಿಸಲಾಗುವುದು.

ಅಡಿಕೆ ಕೃಷಿ ಮತ್ತು ತೆಂಗು ಮಾದರಿಯಲ್ಲಿ ಅಂತರ್‌ ಬೇಸಾಯ (ಬಾಳೆ, ಅನನಾಸು, ಕೊಕ್ಕೊ, ಕಾಳು ಮೆಣಸು ಇತ್ಯಾದಿ), ಕೈತೋಟ, ತರಕಾರಿ ಕೃಷಿ ಮಾದರಿ ರಚನೆ, ಇತರ ಪಶುಸಂಗೋಪಣೆಯಲ್ಲಿ ಮೀನುಗಾರಿಕೆ, ಕೋಳಿ ಸಾಕಣೆ, ಮೊಲ, ಆಡು ಸಾಕಣೆಯ ಮಾದರಿ ರಚನೆ, ಗುಡ್ಡ ನಿರ್ಮಾಣ ಮಾಡಿ ರಬ್ಬರ್‌ ಕೃಷಿ ಮಾದರಿ, ಜಲಾನಯನ ಮಾದರಿ, ನೀರಾವರಿ ವಿಧಾನದ ಮಾದರಿ, ಭತ್ತ ಕುಟ್ಟುವ ಮತ್ತು ಭತ್ತ ಬೇರ್ಪಡಿಸುವ ಪ್ರಾತ್ಯಕ್ಷಿಕೆಯನ್ನು ತೋರಿಸುವ ಕಾರ್ಯಕ್ರಮ ಈ ಸಮಗ್ರ ಕೃಷಿ ಘಟಕದಲ್ಲಿದೆ.

ಜಿಲ್ಲಾ ಮಾದರಿಗಳು:

ಉಡುಪಿಯಿಂದ ತುಳುನಾಡಿನ ನಾಗಮಂಡಲ ಪ್ರಾತ್ಯಕ್ಷಿಕೆ, ಮೀನುಗಾರಿಕೆ, ದೇವಸ್ಥಾನಗಳ ಮಾದರಿಗಳು. ಅಡಿಕೆ, ತೆಂಗಿನ ಕಾಯಿ, ಸೀಯಾಳ ಒಳಗೊಂಡ ರಥದ ಮಾದರಿ, ದ.ಕ. ಜಿಲ್ಲೆಯಿಂದ ಪ್ರಗತಿಬಂಧು ಮತ್ತು ಸ್ವ-ಸಹಾಯ ಮಾದರಿ, ಶಿವಮೊಗ್ಗ ಜಿಲ್ಲೆಯ ಜೋಳದ ಮನೆ, ಕೊಡಗು ಜಿಲ್ಲೆಯಿಂದ ಕೊಡಗಿನ ಬೆಳೆ ಮನೆ, ಉತ್ತರ ಕನ್ನಡ ಜಿಲ್ಲೆ 1ರಿಂದ ಭತ್ತದ ಕುಟೀರ, ಉತ್ತರ ಕನ್ನಡ ಜಿಲ್ಲೆ 2ರಿಂದ ಅನಾನಸ್‌ ಚಪ್ಪರ ಮಳಿಗೆ, ಕೃಷಿ ಸಾಧಕರಾದ ರವೂಫ್‌ ಸಾಹೇಬ್‌ ಅವರ ವರದಿಗಳು, ಚಿತ್ರದುರ್ಗದ ಕಂಬಳಿ ತಯಾರಿ, ಮೊಳಕಾಲ್ಮೂರು ಸೀರೆ, ಹಾವೇರಿಯಿಂದ ಬ್ಯಾಡಗಿ ಮೆಣಸು ಹಾಗೂ ಮೆಣಸಿನ ಪುಡಿ, ಬೆಳಗಾವಿ 1ರಿಂದ ಕಬ್ಬಿನ ಶ್ರೀ ಬೇಸಾಯ ಪದ್ಧತಿ, ಧಾರಾವಾಡದ ಶ್ಯಾವಿಗೆ, ರೊಟ್ಟಿ ತಯಾರಿ/ರೊಟ್ಟಿ ಮನೆ ಹಾಗೂ ಗದಗ ಜಿಲ್ಲೆಯಿಂದ ಕೃಷಿ ತಾಕುಗಳ ಪ್ರದರ್ಶನ ಈ ಜಿಲ್ಲಾ ಮಾದರಿಯಲ್ಲಿ ಒಳಗೊಂಡಿವೆ.