ಮೂಡುಬಿದಿರೆ: ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ 2013ರ ಅಂಗವಾಗಿ ನಾಡಿನ ಹಿರಿಯ ಸಾಹಿತಿಗಳನ್ನು, ನಾಡು ನುಡಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಾಧಕರನ್ನು ಸನ್ಮಾನಿಸಿ, ಗೌರವಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
90 ವರ್ಷಕ್ಕೆ ಮೇಲ್ಪಟ್ಟ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಡಿ.20ರಂದು ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ.
ನಾಡೋಜ ವೆಂಕಟಸುಬ್ಬಯ್ಯ, ಮೈಸೂರು ವಿವಿಯ ನಿವೃತ್ತ ಕುಲಪತಿ ನಾಡೋಜ ಜವರೇಗೌಡ, ಗಡಿನಾಡ ಕನ್ನಡಿಗ ಕಯ್ಯರ ಕಿಂಞಣ್ಣ ರೈ, ಹಿರಿಯ ಕವಿ ನಾಡೋಜ ಚನ್ನವೀರ ಕಣವಿ, ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ, ಖ್ಯಾತ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ 117 ವರ್ಷ ವಯಸ್ಸಿನ ಪಂಡಿತ ಸುಧಾಕರ ಚತುರ್ವೇದಿ, ರಾಷ್ಟ್ರ ಪ್ರಶಸ್ತಿ ವಿಜೇತೆ ನಾಡೋಜ ಸಾಲುಮರದ ತಿಮ್ಮಕ್ಕ, ಹಿರಿಯ ಯಕ್ಷಗಾನ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ ನಡಿಸಿರಿ ವಿಶೇಷ ಗೌರವ ಸನ್ಮಾನಕ್ಕೆ ಭಾಜನರಾಗಲಿದ್ದಾರೆ.
ಸನ್ಮಾನವು ಪ್ರಶಸ್ತಿ, ಹಾಗೂ ರೂ. 50,000 ಗೌರವ ಸಂಭಾವನೆಯನ್ನು ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.


