ಮೂಡಬಿದಿರೆ: ಕೃಷಿ ಮೇಳದ ಕಾರ್ಯಕ್ರಮದಿಂದ ರಾಜ್ಯದ ಕೃಷಿಕರು ಪ್ರಬುದ್ಧರಾಗಿದ್ದಾರೆ. ನೂತನ ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಕೃಷಿಕರಲ್ಲಿ ಕುತೂಹಲ ಸೃಷ್ಟಿಸಿ ಹೊಸ ಆವಿಷ್ಕಾರದಲ್ಲಿ ತೊಡಗುವ ನಿಟ್ಟಿನಲ್ಲಿ ಕೃಷಿ ಮೇಳ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು. ಅವರು 34ನೇ ರಾಜ್ಯ ಮಟ್ಟದ ಕೃಷಿ ಮೇಳದ ಸಮಾರೋಪ ಭಾಷಣ ಮಾಡಿದರು.
ಕೃಷಿಕರಲ್ಲಿ ತಂತ್ರಜ್ಞಾನದ ಮಾಹಿತಿ ಪಡೆಯುವ ತುಡಿತ ಬದಲಾವಣೆಯ ಪ್ರತೀಕ. ಪರಿವರ್ತನೆ ಕೃಷಿ ಮೇಳದ ಉದ್ದೇಶ. ಮೇಳದಲ್ಲಿ ಸರಕಾರದ ಅನೇಕ ಸವಲತ್ತುಗಳ ಮೇಲೆ ಬೆಳಕು ಚೆಲ್ಲಲಾಯಿತು. ಗ್ರಾಮೀಣ ಪ್ರದೇಶದ ರೈತರು ಕೆಲ ಮೂಢನಂಬಿಕೆಯ ಕೃಷಿ ಪದ್ಧತಿಯಲ್ಲಿ ಬೆಳೆ ಮಾಡುತ್ತಿದ್ದಾರೆ. ಇದನ್ನು ಹೋಗಲಾಡಿಸಿ ಪರಿವರ್ತನೆಯ ಜ್ಞಾನವನ್ನು ಬಿತ್ತುವ ಕೆಲಸ ಧರ್ಮಸ್ಥಳ ಯೋಜನೆಯಿಂದ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ನಿರ್ದೇಶಕ ಕೃಷ್ಣ ಪ್ರಸಾದ್, ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತ ಸೀತಾರಾಮ ಎಂ. ಶೆಟ್ಟಿ ಪಾಲಡ್ಕ, ಬ್ರಹ್ಮಾವರ ಕೃಷಿ ವಲಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಎಂ ಹನುಮಂತಪ್ಪ, ಶಿರ್ವದ ಯಶಸ್ವಿ ಕೃಷಿಕ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

