ಮೂಡಬಿದಿರೆ: ರವಿವಾರ ಮುಕ್ತಾಯಗೊಂಡ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಧಿ- 2013ರಲ್ಲಿ ಮೂರು ದಿನಗಳ ಪರ್ಯಂತ ಸಂಯೋಜಿಸಲಾದ ಜಾನಪದ ಸಿರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಾಡಿನ ಜಾನಪದ ಕಲಾವಿದರು ಹಾಗೂ ತಜ್ಞರನ್ನು ಸಮ್ಮಾನಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಡಾ| ಬಿ.ಎ. ವಿವೇಕ ರೈ ಅವರು ಗಂಗಯ್ಯ ಪರವ ಮೂಡಬಿದಿರೆ (ದೈವ ಪಾತ್ರಿ), ಡಾ| ಯು.ಪಿ. ಉಪಾಧ್ಯಾಯ, ಡಾ| ಎನ್. ನಾರಾಯಣ ಶೆಟ್ಟಿ ಶಿಮಂತೂರು, ಹಿರಿಯಡಕ ಗೋಪಾಲ ರಾವ್, ಶ್ಯಾಮ ಶೆಟ್ಟಿ ದರೆಗುಡ್ಡೆ ಮೂಡಬಿದಿರೆ (ಕುಮಾರ ಪಾತ್ರಿ), ಸೋಮಲಿಂಗಪ್ಪ ಫಕೀರಪ್ಪ ದೊಡವಾಡ, ಅಂಜನಪ್ಪ (ಮುಖ ವೀಣೆ), ಎಲ್. ಮಹಾದೇವಪ್ಪ (ನಂದಿಧ್ವಜ), ಬುರ್ರಕಥಾ ಜಯಮ್ಮ, ಪೈಲ್ವಾನ್ ಮಹದೇವಪ್ಪ (ದೊಣ್ಣೆ ವರಸೆ, ಕತ್ತಿ ವರಸೆ) ಇವರನ್ನು ಸಮ್ಮಾನಿಸಿದರು. ಸಮ್ಮಾನ ರೂ. 25,000 ನಗದು, ಪ್ರಶಸ್ತಿ ಫಲಕ, ಯಕ್ಷ ಸ್ಮರಣಿಕೆ ಒಳಗೊಂಡಿದೆ.
ಅಧ್ಯಯನ ನಡೆಯಬೇಕು
ಸರಕಾರ ಜಾನಪದ ಕಲಾವಿದರನ್ನು ಸಾಂಸ್ಕೃತಿಕ ರಾಯಭಾರಿಗಳೆಂದು ಗೌರವಿಸಬೇಕು. ಅವರ ಅಪೂರ್ವ ಜ್ಞಾನ, ಪರಿಶ್ರಮದ ಅಧ್ಯಯನ ನಡೆಯಬೇಕು. ವಿಶ್ವ ನುಡಿಸಿರಿ ವಿರಾಸತ್ ಈ ದಿಸೆಯಲ್ಲಿ ಮುಂದಡಿಯಿಟ್ಟಿರುವುದು ಶ್ಲಾಘನೀಯ ಎಂದು ವಿವೇಕ ರೈ ಅಭಿನಂದನಾ ಭಾಷಣದಲ್ಲಿ ತಿಳಿಸಿದರು.
ಜಾನಪದ ವಿದ್ವಾಂಸ, ಗುಲಬರ್ಗಾ ವಿ.ವಿ.ಯ ಡಾ| ಈರಣ್ಣ ದಂಡೆ ಸಮಾರೋಪ ಭಾಷಣ ಮಾಡಿ, ಜೀವನ ಬರಿದಾಗುತ್ತಿದೆ ಎಂದರೆ ಜನಪದ ನಮ್ಮಿಂದ ದೂರವಾಗುತ್ತಿದೆ ಎಂದೇ ಅರ್ಥ. ಅಕಾಡೆಮಿಗಳು ಅಭಿಜಾತ ಕಲೆಗಳ ಮೂಲ ಬೇರೆನಿಸಿದ ಜಾನಪದ ಕಲೆಗಳತ್ತಲೂ ಗಮನಹರಿಸಬೇಕು. ಹಳ್ಳಿ ಹಳ್ಳಿಗಳಲ್ಲಿರುವ ಅಮೂಲ್ಯ ಜನಪದ ಕಲೆಗಳನ್ನು ಸಂಪತ್ತಿನಂತೆ ಸಂರಕ್ಷಿಸುವುದು ಎಲ್ಲರ ಹೊಣೆ ಎಂದರು. ಕಾರ್ಯದರ್ಶಿ ಕಿದೂರು ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.


