ಮೂಡಬಿದಿರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಾಲ್ಕೂವರೆ ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 400 ಮೀ. ಸಿಂಥೆಟಿಕ್ ಟ್ರಾಕ್ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸವಿನೆನಪಿಗಾಗಿ 6 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೂಡಬಿದಿರೆಯ ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಕನ್ನಡ ಭವನದ ಶಿಲಾನ್ಯಾಸ ಕಾರ್ಯವನ್ನು ಕೇಂದ್ರ ಸಚಿವ, ಡಾ| ಎಂ. ವೀರಪ್ಪ ಮೊಲಿ ರವಿವಾರ ಸಂಜೆ ನೆರವೇರಿಸಿದರು.
'ಮೋಹನ ಆಳ್ವರು ಮೂಡಬಿದಿರೆಯಲ್ಲಿ ಅದ್ಭುತ ಕ್ರೀಡಾ ವಾತಾವರಣವನ್ನು ರೂಪಿಸುತ್ತ ಬಂದಿದ್ದಾರೆ. ಸಾಧಕ ಕ್ರೀಡಾಳುಗಳಿಗೆ ಪೆಟ್ರೋಲಿಯಂ ಖಾತೆಯಿಂದ ವಿದ್ಯಾರ್ಥಿವೇತನ, ದೊಡ್ಡ ಮಟ್ಟದ ಕ್ರೀಡಾಕೂಟಗಳನ್ನು ಸಂಘಟಿಸಲು ನೆರವು ಒದಗಿಸಲು ಖಂಡಿತ ಸಾಧ್ಯವಿದೆ; ಅದನ್ನು ಮಾಡಿಸಿಕೊಡುತ್ತೇನೆ' ಎಂದು ತಿಳಿಸಿದ ಮೊಲಿ ಅವರು 'ಕನ್ನಡ ಭವನಕ್ಕೂ ತಮ್ಮ ಇಲಾಖೆಯ ಸಾಮಾಜಿಕ ನಿಧಿಯಿಂದ ಒದಗಿಸಲು ಪ್ರಯತ್ನಿಸುತ್ತೇನೆ' ಎಂದು ಭರವಸೆ ಇತ್ತರು.
ಬೆಂಕಿ ತುಳಿದೇ ಬೆಳೆದವ...
'ಹುಡುಗನಾಗಿದ್ದಾಗ ಹೊಲಗಳಲ್ಲಿ ಹಾಕಲಾಗುತ್ತಿದ್ದ ತೂಂಟಾನ್ (ಮಣ್ಣು , ತರಗೆಲೆ ಬೆರೆಸಿ ಉರಿಸುವುದು - ಸುಡುಮಣ್ಣು) ತುಳಿದುಕೊಂಡೇ ಮುಂದೆ ಸಾಗಿದವನು ನಾನು. ಇಂದಿಗೂ ಆ ಸುಟ್ಟ ಗಾಯಗಳು ನನ್ನ ಕಾಲಿನಲ್ಲಿ ಉಳಿದುಕೊಂಡಿವೆ. ನನ್ನನ್ನು ಬೆಂಕಿ ಕೂಡ ಸುಡದಂಥ ಮನೋಭಾವವನ್ನು ರೂಢಿಸಿಕೊಂಡೇ ಬೆಳೆದಿದ್ದೇನೆ' ಎಂದು ಕೊಂಚ ಭಾವೋದ್ವಿಗ್ನತೆಯಿಂದಲೇ ಮಾತನಾಡಿದ ಮೊಲಿ 'ಕ್ರಿಕೆಟ್‌ಗುರು, ಅಭಯಚಂದ್ರರ ಪಿತ ಅನಂತ್ರಾಜರು ನಿರ್ದೇಶಿಸಿದಂತೆ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಕೊನೆಯವರೆಗೂ ಔಟಾಗದೆ ಉಳಿದವನು ನಾನು; ರಾಜಕೀಯ ಸಹಿತ ಜೀವನದಲ್ಲೂ' ಎಂದು ಹೇಳಿದರು.
ಯುವ ಸಬಲೀಕರಣ ಕೇಂದ್ರ
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಅವರು ಮಾತನಾಡಿ, ಸ್ವರಾಜ್ಯ ಮೈದಾನದಲ್ಲಿ ನಾಲ್ಕೂವರೆ ಕೋ.ರೂ. ವೆಚ್ಚದಲ್ಲಿ ಮಳೆಗಾಲದ ಒಳಗಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಲಿದೆ. 25 ಮಂದಿ ಕ್ರೀಡಾ ಕೋಚ್‌ಗಳ ಮೂಲಕ ನಾಡಿನ ವಿವಿಧೆಡೆಗಳಿಂದ ಬಂದಿರುವ 600 ಮಂದಿ ವಿದ್ಯಾರ್ಥಿಗಳನ್ನು ಸಾಧಕ ಕ್ರೀಡಾಳುಗಳನ್ನಾಗಿ ರೂಪಿಸಿ ನಾಡಿಗೆ ನೀಡುತ್ತಿರುವ ಆಳ್ವಾಸ್‌ನ ಸಾಧನೆಗೆ ಸರಕಾರದ ಕಡೆಯಿಂದ ಸೂಕ್ತ ಪ್ರೋತ್ಸಾಹ ನೀಡುವ ಜತೆಗೆ ಊರಿನ ಇತರ ಕ್ರೀಡಾಚಟುವಟಿಕೆಗಳನ್ನೂ ಪ್ರೋತ್ಸಾಹಿಸುವ ನೆಲೆಯಲ್ಲಿ ಸ್ವರಾಜ್ಯ ಮೈದಾನದ ಕಾಯಕಲ್ಪ ನಡೆಯುತ್ತಿದೆ ಎಂದು ಸಮರ್ಥಿಸಿದರು. ಪ್ರತ್ಯೇಕವಾಗಿ ನಡೆಯುತ್ತಿರುವ ಪೆವಿಲಿಯನ್ ನಿರ್ಮಾಣ ಕಾಮಗಾರಿಗೆ ಈಗಿರುವ 1 ಕೋ.ರೂ.ಗೆ ಇನ್ನೂ 1 ಕೋ. ರೂ. ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ರಿಸುವುದಾಗಿ ಅವರು ಹೇಳಿದರು.
ಒಳಚರಂಡಿ
ಮೂಡಬಿದಿರೆಯ ಬಹುನಿರೀಕ್ಷಿತ ಒಳಚರಂಡಿ ಯೋಜನೆಯು 66 ಕೋ. ರೂ. ವೆಚ್ಚದಲ್ಲಿ ನೆರವೇರಲಿದ್ದು ಈ ಬಗ್ಗೆ ವೀರಪ್ಪ ಮೊಲಿಯವರಿಂದಾಗಿ ಕೇಂದ್ರದ ಅಂಗೀಕಾರವೂ ಲಭಿಸಿದೆ ಎಂದು ಅಭಯಚಂದ್ರ ಘೋಷಿಸಿದರು.
ಮುಖ್ಯ ಅತಿಥಿಗಳಾಗಿ ಸಚಿವರಾದ ವಿನಯಕುಮಾರ ಸೊರಕೆ, ಬಿ. ರಮಾನಾಥ ರೈ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ನಿರ್ದೇಶಕ ವಿಕಾಶ್ ಕುಮಾರ್, ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹಾಗೂ ಪುರಸಭಾ (ಚುನಾಯಿತ) ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳಕ್ಕೂ ಕೊಡಿ
ಪುರಸಭಾ ಪ್ರದೇಶವಾದ ಮೂಡಬಿದಿರೆಗೆ ಸಿಂಥೆಟಿಕ್ ಟ್ರ್ಯಾಕ್ ಒದಗಿಬಂದಿರುವಂತೆ ಬಂಟ್ವಾಳಕ್ಕೂ ಸಚಿವ ಅಭಯಚಂದ್ರ ಅವರು ಇಂಥ ಕೊಡುಗೆ ನೀಡಬೇಕು ಎಂದು ಸಚಿವ ಬಿ. ರಮಾನಾಥ ರೈ ವಿನಂತಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಡಾ| ಎಂ. ಮೋಹನ ಆಳ್ವ ಸ್ವಾಗತಿಸಿದರು.
ಈ ಕಳೆದ 10 ವರ್ಷಗಳಲ್ಲಿ ಸ್ವರಾಜ್ಯಮೈದಾನಕ್ಕೆ ಕಾಯಕಲ್ಪ ನೀಡಲು ಆಳ್ವಾಸ್ ವತಿಯಿಂದ 80 ಲಕ್ಷ ರೂ., ಜಿಮ್ ಕಟ್ಟಡಕ್ಕಾಗಿ 15 ಲಕ್ಷ ರೂ. ವೆಚ್ಚ ಮಾಡಿದೆ ಎಂದು ಹೇಳಿದ ಅವರು ಸ್ಕೌಟ್ಸ್ ಸ್ಥಳೀಯ ಸಂಸ್ಥೆಗೆ ಒದಗಿಸಲಾಗಿರುವ ಜಾಗದಲ್ಲಿ ನಿರ್ಮಿಸಲಾಗುವ ಕನ್ನಡ ಭವನಕ್ಕೆ ವಿಶೇಷ ಅನುದಾನ ಒದಗಿಸಬೇಕು ಎಂದು ಆಳ್ವರು ಅಭಯಚಂದ್ರ ಹಾಗೂ ವೀರಪ್ಪ ಮೊಲಿ ಅವರಲ್ಲಿ ವಿನಂತಿಸಿದರು.
ವೀರಪ್ಪ ಮೊಲಿ ಅವರು ಸ್ವರಾಜ್ಯ ಮೈದಾನದಲ್ಲಿ ಕೆಲ ಸಮಯದ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಸ್ಥಾಪಿಸಿರುವ ಜಿಮ್ನೆàಶಿಯಂನ್ನು ಅತಿಥಿಗಳು, ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪಿ. ಪಾರ್ಶ್ವನಾಥ್ ವಂದಿಸಿದರು. ಅಂಡಾರು ಗುಣಪಾಲ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

