Cultural Wonder Alvas Nudisiri virasat- Article by Jeevanram Sullia

                                          ಸಾಂಸ್ಕೃತಿಕ ಕ್ರಾಂತಿ ತಂದ ಆಳ್ವಾಸ್ ನುಡಿಸಿರಿ- ವಿರಾಸತ್

ಮಹಾವೀರ ಕಾಲೇಜಿನಿಂದ ಸಾವಿರ ಕಂಬದ ಬಸದಿಗೆ, ಸಾವಿರ ಕಂಬದ ಬಸದಿಯಿಂದ ಮಿಜಾರು ಶೋಭವನದ ಬೆಟ್ಟಕ್ಕೆ, ಅಲ್ಲಿಂದ ಮೂಡಬಿದಿರೆಯ ಅತ್ಯಂತ ಎತ್ತರದ ವಿದ್ಯಾಗಿರಿಗೆ ಇದೀಗ ವಿರಾಸತ್ ವೈಭವದ ಪಯಣ!
ನಿಜಕ್ಕೂ ಆಶ್ಚರ್ಯ ಮತ್ತು ಅಷ್ಟೇ ಅದ್ಭುತ!! ಒಂದು ಸಾಧಾರಣ ಕೃಷಿ ಕುಟುಂಬದಿಂದ ಬಂದ ಮಧ್ಯಮ ವರ್ಗದ ಹುಡುಗನೊಬ್ಬನ ಒಳ್ಳೆಯ ಮನಸ್ಸು, ಜಗತ್ತಿನ ಸಾಂಸ್ಕೃತಿಕ ಲೋಕದಲ್ಲಿ ಯಾರೂ ಮಾಡಲಾಗದಂತಹ ಕ್ರಾಂತಿಗೆ ಕಾರಣವಾಗುವುದೆಂದರೆ ವಿಸ್ಮಯದೊಳಗೊಂದು ವಿಸ್ಮಯ!
"ಆಳ್ವಾ.....ಸ್" ಅನ್ನುವ ಮೂರಕ್ಷರ ವಿರಾಸತ್ ನುಡಿಸಿರಿಗಳ ಮೂಲಕ ಜಗತ್ತಿನ ಕಲಾಸಕ್ತರ ಕದ ತಟ್ಟಿ, ಮನಮುಟ್ಟಿ ಸಂಭ್ರಮಿಸಿ ಮೆರೆಯುವ ಮೋಡಿಯ ಮುಗ್ಧ ಪದ.
   ೨೦ ವರ್ಷಗಳ ಹಿಂದೆ ಆಳ್ವಾಸ್ ಸ್ಟಿಕ್‌ಮೆಕೆಯ ಮೂಲಕ ಮೂಡಬಿದಿರೆಯಲ್ಲಿ ಬಿತ್ತಿದ ಸಾಂಸ್ಕೃತಿಕ ಬೀಜ ಇದೀಗ ಹೆಮ್ಮರವಾಗಿ ಬೆಳೆದು ಜಗತ್ತಿನ ಸಾಂಸ್ಕೃತಿಕ ಜ್ಞಾನದ ಬೇಗೆ ತಣಿಸಲು ಆಳ್ವಾಸ್ ನುಡಿಸಿರಿ-ವಿರಾಸತ್ ಆಗಿ ಶಾಶ್ವತ ನಿಂತಿರುವುದು ಸಣ್ಣ ಮಾತಲ್ಲ. ’ಆಳ್ವಾಸ್’ ಎಂಬ ಈ ಎತ್ತರ ಮತ್ತು ಅಗಾಧವಾದ ಸಾಂಸ್ಕೃತಿಕ ಹೆಮ್ಮರ ಅದೆಷ್ಟೋ ಕಲಾವಿದರನ್ನು ಬೆಳೆಸಿ ಉತ್ತುಂಗಕ್ಕೇರಿಸಿದ, ಲಕ್ಷ ಅಲ್ಲ ಕೋಟಿ ಜನರ ಹೃದಯ ಸಂಪತ್ತಿಗೆ ತಂಪು ನೀಡುತ್ತಾ, ಆರೋಗ್ಯಕರ ಸಮಾಜ ನಿರ್ಮಾಣದ ಕನಸು ಹೊತ್ತ ಸಾವಿರದಲ್ಲೊಂದು ’ಸಾವಿ’ರದ ಮರ.
     ವರ್ಷವಿಡೀ ಯಕ್ಷಗಾನ ಅದು ಬಿಟ್ರೆ ಒಂದಷ್ಟು ನಾಟಕಗಳನ್ನೇ ಹೆಚ್ಚು ನೋಡುತ್ತಾ ಬಂದಿರುವ ಮೂಡಬಿದ್ರೆ ಮತ್ತು ಕರಾವಳಿಯ ಜನರಿಗೆ ಸಾಂಸ್ಕೃತಿಕ ಲೋಕದ ಸರ್ವ ಪ್ರಾಕಾರಗಳನ್ನು ’ಆಳ್ವಾಸ್’ ಮೂಲಕ ಪರಿಚಯಿಸಿದ  ಕೀರ್ತಿ ಡಾ| ಎಂ.ಮೋಹನ್ ಆಳ್ವರದ್ದು. ಇವರನ್ನು ಸಕಲಕಲಾ ವಲ್ಲಭ, ಸಾಂಸ್ಕೃತಿಕ ಭೀಷ್ಮ, ಸಂಘಟನಾ ಚತುರ, ಸಾಂಸ್ಕೃತಿಕ ಹರಿಕಾರ, ಸಂಸ್ಕೃತಿ ಸಿರಿ.... ಹೇಗೆ ಕರೆದರೂ ಕಡಿಮೆಯೇ. ತಜ್ಞರು, ವಿಮರ್ಶಕರು, ಸಂಶೋಧಕರು ಯಾವ ದಿಕ್ಕಿನಿಂದ ವಿಶ್ಲೇಷಿಸಿದರೂ ಡಾ| ಆಳ್ವರು ಹೇಗೆ-ಏನು ಎಂಬುವುದನ್ನು ಪರಿಪೂರ್ಣವಾಗಿ ಹೇಳುವುದು ಅಸಾಧ್ಯ .
   ಆಳ್ವಾಸ್ ಸ್ಟಿಕ್‌ಮೆಕೆ ಕಾರ್ಯಕ್ರಮದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಈಗಿನ ವೈಭವದ ಆಳ್ವಾಸ್ ನುಡಿಸಿರಿ-ವಿರಾಸತ್ ಗೆ ಅಡಿಪಾಯ ಆಗಿದ್ದರೂ, ಡಾ| ಆಳ್ವರ ಅದ್ಭುತ ಆಸಕ್ತಿ, ಅವರೊಳಗಿದ್ದ ಅಪ್ರತಿಮ ಕಲಾವಿದ, ಅವರ ಸೌಂದರ್ಯ ಪ್ರಜ್ಞೆ, ಸಾಂಸ್ಕೃತಿಕ ಸೂಕ್ಷ್ಮತೆ ಹಾಗೂ ದೇಶೀಯ ಸಂಸ್ಕೃತಿ ಕಾಳಜಿ ಎಲ್ಲವೂ ಮೇಲಿನ ಅಡಿಪಾಯಕ್ಕೇ ಅಡಿಪಾಯವಾಗಿದ್ದು ಎಂದೂ ಅಲುಗಾಡಿಸಲು ಸಾಧ್ಯವಾಗದಷ್ಟು ಸುಭದ್ರವಾಗಿ ನಿಂತಿದೆ.
     ಆರಂಭದ ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮಕ್ಕೆ ಇದ್ದಂತಹ ಪ್ರೇಕ್ಷಕರ ಸಂಖ್ಯೆ ದಿನ-ವರ್ಷ ಕಳೆದಂತೆ ನೂರು-ಸಾವಿರ ದಾಟಿ ಇಂದು ಲಕ್ಷ ಮೀರಿರುವುದು ಆಶ್ಚರ್ಯ ಆದ್ರೂ ನಿಜ ತಾನೇ?!
     ಮಹಾವೀರದಲ್ಲಿ ಕಾರ್ಯಕ್ರಮ ಸವಿಯುತ್ತಾ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದ ಪ್ರೇಕ್ಷಕರು, ಆಳ್ವಾಸ್ ಸ್ಟಿಕ್‌ಮೇಕೆ ಸಾವಿರ ಕಂಬದ ಬಸದಿಗೆ ಶಿಫ್ಟ್ ಆದಾಗ ಬಯ್ಯತೊಡಗಿದರು. "ಛೆ! ಇಲ್ಲಿ ಎಷ್ಟು ಚೆನ್ನಾಗಿತ್ತು. ಇಲ್ಲಿಯ ಹಾಗೆ ಅಲ್ಲಿ Pಷ್ಟ ಸಂಗೀತ ಆಲಿಸಲು, ನೃತ್ಯ ನೋಡಲು ಒಳ್ಳೆಯ ಜಾಗ ಅಲ್ಲ ಅದು. ಆಳ್ವರು ಯಾಕೆ ಹೀಗೆ ಮಾಡ್ತಿದ್ದಾರೆ?"....ಅಂದ್ರು.
ಆದ್ರೆ ಸಾವಿರ ಕಂಬದ ಬಸದಿ ಆವರಣದಲ್ಲಿ ನಡೆದದ್ದೇ ಪವಾಡ! ಮ್ಯಾಜಿಕ್! ಮಹಾವೀರದಲ್ಲಿ ಸೇರುತ್ತಿದ್ದ ಪ್ರೇಕ್ಷಕರ ಸಂಖ್ಯೆ ಬಸದಿಯಲ್ಲಿ ಒಂದಲ್ಲ ಎರಡಲ್ಲ ಹತ್ತು ಪಟ್ಟು ಹೆಚ್ಚುತ್ತಾ ಹೋಯ್ತು. ಕೇವಲ ಎರಡು ದಿನ ನಡೆಯುತ್ತಿದ್ದ ಕಾರ್ಯಕ್ರಮ ಒಂದು ವಾರ ನಡೆಯುವಂತಾಯ್ತು. ಕಾರ್ಯಕ್ರಮ ನೀಡಲು ದೇಶದ ನೂರಾರು ಪ್ರಸಿದ್ಧ ಕಲಾವಿದರು ಮೂಡಬಿದಿರೆಗೆ ಬಂದ್ರು. ಇಲ್ಲಿನ ಸೌಂದರ್ಯ, ಪ್ರೇಕ್ಷಕರ ಕಲಾಭಿರುಚಿಯನ್ನು ಕಂಡು ಬೆರಗಾದರು.
     ಕರಾವಳಿಯಲ್ಲಿ ನಡೆಯುತ್ತಿದ್ದ ಇತರ ಕಾರ್ಯಕ್ರಮಗಳಿಗೆ ಅಷ್ಟಾಗಿ ಸೇರದ ಜನ ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಆವರಣದಲ್ಲಿ ನಡೆಯುವ ಆಳ್ವಾಸ್ ವಿರಾಸತ್ ಗೆ ಸಾಗರದ ಅಲೆಯಂತೆ ಬರತೊಡಗಿದ್ರು. ಆಳ್ವರ ಯೋಜನೆ ಸಾಂಸ್ಕೃತಿಕ ಹುಚ್ಚುತನದ ಬಗ್ಗೆ ಟೀಕೆ ಮಾಡುತ್ತಾ ದೂರದಲ್ಲೇ ಉಳಿದ ಅನೇಕರು" ಅವೆಂಚಯಾ...! ಆತ್ ಜನ ಸೇರುನ? ಒಲ್ಪೊಲ್ಪಡ್ತ್ ಪೂರಾ ಬರೊಂದುಲ್ಲೆರ್‌ಗೇ....." ಅಂತ ಮೂಗು ತುರಿಸುತ್ತಾ ವಿರಾಸತ್ ನೋಡಬಂದ್ರು....ನೋಡಿ ಮೂಕರಾದ್ರು!.
     ಲಕ್ಷಗಟ್ಟಲೇ ಖರ್ಚು ಮಾಡಿ ಕರೆಸಿದ ರಾಷ್ಟ್ರೀಯ ಕಲಾವಿದರ ಕಾರ್ಯಕ್ರಮಗಳನ್ನು ಜನ ನೋಡದೇ ಇದ್ರೆ ಹೇಗೆ? ಅದೆಷ್ಟು ನಷ್ಟ ಅಲ್ವಾ? ಅದು ಶಾಸ್ತ್ರೀಯ ಸಂಗೀತ ಇರಬಹುದು, ಪಕ್ಕವಾದ್ಯ ಇರಬಹುದು, ಭರತನಾಟ್ಯ, ಒಡಿಸ್ಸಿ, ಕಥಕ್, ಮೋಹಿನಿಯಟ್ಟಂ, ಮಣಿಪುರಿ, ಮುಂತಾದ ಶಾಸ್ತ್ರೀಯ ನೃತ್ಯಗಳಿರಬಹುದು, ಜಾನಪದ ಕಲಾ ಪ್ರಕಾರಗಳು, ಅನ್ವೇಷಣೆಯ ಹೊಸ ಸಾಧ್ಯತೆಯ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿರಬಹುದು ...ಜನ ನೋಡ್ಲೇ ಬೇಕಲ್ಲಾ! ನೋಡುವುದಿರಲಿ, ಕರಪತ್ರ ಕಂಡತಕ್ಷಣ" ಅದೆಲ್ಲ ಗೊತ್ತು ನಮಗೆ..ನೋಡಿದ್ದೇವೆ..." ಅನ್ನುವ ನಿರಾಸಕ್ತ ಜನಗಳೇ ಜಾಸ್ತಿ ಇರುವ ಸಂದರ್ಭದಲ್ಲಿ ಜನರನ್ನು ಸೆಳೆಯಲು ಡಾ.ಆಳ್ವರು ತನ್ನೊಳಗಿನ ಸೌಂದರ್ಯ ಪ್ರಜ್ಞೆಗೊಂದು ಮೂರ್ತರೂಪ ಕೊಡುತ್ತಾ ಹೋದರು.
ಕಾರ್ಯಕ್ರಮದ ಮುಖ್ಯ ವೇದಿಕೆ ಕಲಾತ್ಮಕ ಆಗಿರಬೇಕೆಂದು ಯೋಚಿಸಿದ್ರು. ಸುತ್ತಲಿನ ವಾತಾವರಣವನ್ನು ಇಲ್ಲಿನ ಸಂಸ್ಕೃತಿ ಬಿಂಬಿಸುವ ಪರಿಕರಗಳನ್ನು ಬಳಸಿ ಕಣ್ಮನ ಸೆಳೆಯುವಂತೆ ಸಿಂಗರಿಸಿದರು. ಅಬ್ಬ! ಅದೆಂಥಹ ಶ್ರಮದ ಕೆಲಸ! ಅದೆಂತಹ ಶಕ್ತಿಶಾಲಿ ಟೀಂ ವರ್ಕ್. ರಾತ್ರಿಯಿಡೀ ನಿದ್ದೆಗೆಟ್ಟು ದುಡಿಯುವ ಕಲಾವಿದರೊಂದಿಗೆ ಸ್ವತಃ ಮೋಹನ ಆಳ್ವರೇ ಬ್ರಶ್ ಹಿಡಿದು ಬಣ್ಣ ಬಳಿಯುತ್ತಾ, ಸುತ್ತಿಗೆ ಹಿಡಿದು ಮೊಳೆ ಹೊಡೆಯುತ್ತಾ, ಆಗಾಗ ಹಾಸ್ಯ ಚಟಾಕಿಗಳನ್ನು ಹಾರಿಸಿ ದಣಿದ ದೇಹಗಳಿಗೆ ತಂಪು ನೀಡುತ್ತಾ ವೇದಿಕೆ ನಿರ್ಮಾಣದಲ್ಲಿ ಕೈಜೋಡಿಸುವ ಕ್ಷಣವನ್ನು ನೆನಪಿಸಿಕೊಳ್ಳುವುದರಲ್ಲೂ ಒಂದು ಸುಖಃ ಅಡಗಿದೆ. ಏಳು ದಿನಗಳ ಕಾರ್ಯಕ್ರಮಕ್ಕೆ ಏಳು ತರಹದ ವೇದಿಕೆ! ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ವಿಭಿನ್ನ, ವೈವಿಧ್ಯಮಯ.
ಮೊದಲ ದಿನ ವೇದಿಕೆಯ ಪರದೆ, ಸೈಡ್‌ವಿಂಗ್ ಮೇಲ್ಛಾವಣೆ ಎಲ್ಲವೂ ಬಿದಿರುi ಯ ಆಗಿದ್ರೆ ಮಾರಣೇದಿನ ಬಿದಿರು ಮಾಯಾವಾಗಿ ವೇದಿಕೆ ಪೂರ್ತಿ ಸಿರಿಮಯವಾಗುತ್ತಿತ್ತು. ಹಸಿರು ಎಲೆಗಳಿಂದ, ಬಂಗಾರ ಬಣ್ಣ, ಮುಖವಾಡಗಳಿಂದ, ಹಾಳೆಯ ತಟ್ಟೆಗಳಿಂದ, ಬಣ್ಣಬಣ್ಣದ ಹೂವುಗಳಿಂದ , ಹೂವಿನ ಚಟ್ಟಿ ಮುಂತಾದವುಗಳಿಂದ ವೈವಿಧ್ಯಮಯ ವೇದಿಕೆ ನಿರ್ಮಾಣ. ಪಕ್ಕದಲ್ಲೇ ಬೃಹತ್ ಪೆಂಡಾಲಿನೊಳಗೆ ಡಾ| ಆಳ್ವರ ಸಂಗ್ರಹದಲ್ಲಿದ್ದ ಸಾವಿರಾರು ಅಮೂಲ್ಯ ವಸ್ತುಗಳ ಪ್ರದರ್ಶನ! ಕಣ್ತುಂಬಾ ನೋಡಲು ಎಲ್ಲವೂ ಉಚಿತ.

ಊರಿಡೀ ಸುದ್ಧಿ!
"ವಿರಾಸತ್ ಗೆ ಹೋಗಿದ್ಯನಾ?"
"ದಿನಕ್ಕೊಂದು ವೇದಿಕೆ ಅಂತೆ ಮಾರ್ರೆ!"
......"ಹೌದಂತೆ! ನಿನ್ನೆ ಇದ್ದ ಹಾಗೆ ಇವತ್ತು ಇಲ್ಲಂತೆ!"ಫುಲ್ಲು ಚೇಂಜ್ ಅಂತೇ!"
......"ಮೋನಾಳ್ವರ ಎಗ್ಝಿಬಿಷನ್ ಅದ್ಭುತ ಅಂತೆ! .......
" ಮೊನ್ನೆ ವೇದಿಕೆ ಪೂರ್ತಿ ಬಿದಿರು ಬಿದಿರು. ಮಧ್ಯೆ ಹರಿಪ್ರಸಾದ್ ಚೌರಾಸಿಯಾ ಅವರ 
ಬಾನ್ಸುರಿ! ಏನೋ ಕೊಳಲು ಬಾರಿಸ್ತಾರೆ ಸ್ವಲ್ಪ ಕೇಳುವಾಂತ ಕೂತೆ. ಎದ್ದು ಬರ್‍ಲಿಕ್ಕೇ ಮನಸ್ಸಾಗಲಿಲ್ಲ. ಅದ್ಭುತ ಮಾರಾಯ್ಯಾ!"

     ಆಳ್ವಾಸ್  ವಿರಾಸತ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಿಗಿಂತ ಆಳ್ವರು ದಿನಾ ನಿರ್ಮಿಸುತ್ತಿದ್ದ ಕಲಾತ್ಮಕ ವೇದಿಕೆಗಳ ಬಗ್ಗೆ ಮತ್ತು ಅವರ ವಸ್ತು ಸಂಗ್ರಹಾಲಯದ ಬಗ್ಗೆನೇ ಹೆಚ್ಚು ಕುತೂಹಲ ಜನರಿಗೆ. ಕೂತೂಹಲ ತಣಿಸಿಕೊಳ್ಳಲು ಓಡೋಡಿ ಬಂದ್ರು. ಬಂದವರು ಬರೀ ಅಷ್ಟನ್ನೇ ನೋಡದೇ ವಿರಾಸತ್‌ನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿದರು. ಮನಸಾರೆ ಸ್ವೀಕರಿಸಿದರು. ಕಲಾವಿದರ ಪ್ರತಿಭೆಗೆ ಮಾರು ಹೋದರು, ಆಳ್ವರ ಸಂಘಟನೆಗೆ ಬೆರಗಾದರು....... ಮತ್ತೆ ಮತ್ತೆ ಬಂದರು. ಮತ್ತಷ್ಟು ಜನರನ್ನು ಅವರೇ ಕರೆತಂದರು....ಹಾಡಿ ಹೊಗಳಿದರು.
     ಮೂಲತಃ ಆಯುರ್ವೇದ ವೈದ್ಯರಾಗಿರುವ ಡಾ| ಆಳ್ವರು ಕಲಾತ್ಮಕ ವೇದಿಕೆ, ಕಲಾತ್ಮಕ ದ್ವಾರ, ಕಲಾತ್ಮಕ ಶೃಂಗಾರ, ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತುಪ್ರದರ್ಶನ ಸಮಯಪ್ರಜ್ಞೆ ಮುಂತಾದವುಗಳನ್ನು ಚಿಕಿತ್ಸಕ ರೂಪದಲ್ಲಿ ನೀಡುತ್ತಾ ಪ್ರೇಕ್ಷಕರ  ಸೌಂದರ್ಯ ಪ್ರಜ್ಞೆ ಮತ್ತು ಕಲಾ ಅಭಿರುಚಿಯನ್ನು ಬೆಳೆಸುವ ಸಂಜೀವಿನಿಯಾದರು. ಈ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ, ಸಂಸ್ಕೃತಿಯ ಓರೆ ಕೋರೆಗಳನ್ನು ತೋರಿಸುವ ಗುರುವಾಗಿ ಕಂಡರು ಆಳ್ವರು.
     ಸಾವಿರ ಕಂಬದ ಬಸದಿಯಿಂದ ಅನಿರಿಕ್ಷಿತವಾಗಿ ಏಳು ಕಿ.ಮೀ ದೂರದ ಮಿಜಾರಿನ ಶೋಭಾವನದ ಬೆಟ್ಟಕ್ಕೆ ವಿರಾಸತ್ ಸ್ಥಳಾಂತರಗೊಂಡಾಗ ಸಹಜವಾಗಿ ಎಲ್ಲರಿಗೂ ಆತಂಕ.
’ಅಷ್ಟು ದೂರ ಯಾರು ಬರ್‍ತಾರೆ?  ಅಲ್ಲಿ ಜನ ಸೇರುವುದು ಅನುಮಾನ’...ಅಂದ್ರು. ಆದರೆ ಆಳ್ವರ ಕನಸು, ಕಲ್ಪನೆ, ದೂರದರ್ಶಿತ್ವ ಅನುಮಾನಿಗಳ ಅನುಮಾನಗಳನ್ನು ಹುಸಿಮಾಡಿತು.
ಗುಣಮಟ್ಟದ ಕಾರ್ಯಕ್ರಮಗಳನ್ನು ನೋಡಲು ಕಲಾಸಕ್ತರು ’ದೂರ’ವನ್ನು ಲೆಕ್ಕಿಸದೆ ಬಂದರು. ವಿರಾಸತ್ ವೈಭವದ ಬಗ್ಗೆ ಕೇಳಿ ತಿಳಿದ ನೂರಾರು ವಿದೇಶಿಗರೂ ಬರ ತೊಡಗಿದರು. ಸೂರ್ಯಾಸ್ತಮಾನವನ್ನು ನೋಡುತ್ತಾ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸವಿಯುವುದೇ ಒಂದು ಅದ್ಭುತ ಅನುಭವ.
     ಐನೂರಕ್ಕಿಂತ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮಗಳು ಇಂದು ಪೊಲೀಸರಿಲ್ಲದೆ ಅಷ್ಟು ಸುಸೂತ್ರವಾಗಿ ನಡೆಯುವುದು ಕಷ್ಟ. ಆದರೆ ಆಳ್ವಾಸ್ ನುಡಿಸಿರಿ-ವಿರಾಸತ್‌ಗಳಲ್ಲಿ ಲಕ್ಷ ಜನ ಸೇರಿದ್ರೂ, ಸಾವಿರಾರು ವಾಹನಗಳು ಬಂದರೂ ಯಾವುದೇ ಗೊಂದಲಗಳಿಲ್ಲ, ಗಲಾಟೆಗಳಿಲ್ಲ, ಟ್ರಾಫಿಕ್ ಜಾಮ್‌ಗಳಿಲ್ಲ. ಪೊಲಿಸರು ಇಲ್ಲಿ ಮುಂದಿನ ಸಾಲಿನಲ್ಲಿ ಕುಳಿತು
ನಿರುಮ್ಮಳವಾಗಿ ಕಾರ್ಯಕ್ರಮಗಳನ್ನು ಸವಿಯಬಹುದು.
     ಯುವಜನಾಂಗದಲ್ಲಿ ಬಹಳ ಭರವಸೆಯಿರುವ ಡಾ/ಆಳ್ವರು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ವಿರಾಸತ್-ನುಡಿಸಿರಿಯ ಮೂಲಕ ಸಂಸ್ಕೃತಿ ಪ್ರಿಯರನ್ನಾಗಿ ಮಾಡುತ್ತಾ ಬಂದರು. ದೇಶದ ಮಹಾನ್ ಕಲಾವಿದರನ್ನು ಮೂಡುಬಿದಿರೆಗೆ ಕರಿಸಿ, ಅವರಿಂದ ತಮ್ಮ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೊಡಿಸಿ ತಾವೂ ವಿರಾಸತ್-ನುಡಿಸಿರಿ ವೇದಿಕೆ ಏರುವಂತೆ ಮಾಡಿದರು.
      ಇತ್ತೀಚೆಗೆ ಕುಮಟಾದಲ್ಲಿ ನಡೆದ ಕೃಷಿ ಮೇಳ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವವನ್ನು ಸ್ವತಃ ವೀಕ್ಷಿಸಿ ಪುಳಕಿತರಾದ ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಎಲ್ಲಾ ಕಲಾವಿದರನ್ನೂ ಅಭಿನಂದಿಸಿ, ಅಲ್ಲಿಂದಲೇ ಆಳ್ವರಿಗೆ ಫೋನಾಯಿಸಿ ಆಳ್ವರೇನಿ॒ಜಕ್ಕೂ ಅದ್ಭುತ. ನಿಮ್ಮ ವಿದ್ಯಾರ್ಥಿಗಳು ಯಾವ ರಾಷ್ಟ್ರೀಯ ಕಲಾವಿದರಿಗೂ ಕಡಿಮೆ ಇಲ್ಲದಂತೆ ಕಾರ್ಯಕ್ರಮ ನೀಡಿದ್ದನ್ನು ನೋಡಿ ತುಂಬಾ ಸಂತಸವಾಯ್ತು. ನಿಮಗೆ ತುಂಬು ಹೃದಯದ ಅಭಿನಂದನೆಗಳು.
ಪೂಜ್ಯ ಖಾವಂದರ ಈ ಮಾತು ಆಳ್ವರ ಸಾಂಸ್ಕೃತಿಕ ತಂಡಕ್ಕೆ ಆನೆಬಲ ನೀಡಿದ ಆಶೀರ್ವಾದದ ಗೌರವ ಸರ್ಟಿಫಿಕೇಟ್ ಆಯ್ತು.
      ಮೂಡುಬಿದಿರೆಯಲ್ಲಿ ನಡೆದ ೭೧ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ಸಮ್ಮೇಳನವೆಂದರೆ ಹೀಗಿರಬೇಕು ಎಂದು ನಾಡಿಕೆ ತೋರಿಸಿಕೊಟ್ಟ ಡಾ.ಅಳ್ವರು ತಮಗಾದ ಆ ಅನುಭವದ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿ ಕಟ್ಟಿದರು. ಆ ಮೂಲಕ ಕನ್ನಡ ನಾಡು ನುಡಿಯ ಸೇವೆಯನ್ನು ನಿಜ ಅರ್ಥದಲ್ಲಿ ನಡೆಸುತ್ತಾ ಬಂದರು. ಹೆಚ್ಚಾಗಿ ಗೋಷ್ಠಿಗಳು, ಚಿಂತನೆಗಳಿಗೆ ಜನ ಸೇರುವುದು ತೀರಾ ಕಡಿಮೆ. ಆದರೆ ಆಳ್ವಾಸ್ ನುಡಿಸಿರಿಯ ಗೋಷ್ಠಿಗಳಿಗೆ ಎಂದೂ ಸಾಹಿತ್ಯಾಸಕ್ತರ, ಪ್ರೇಕ್ಷಕರ ಕೊರತೆ ಬಂದದ್ದಿಲ್ಲ.
ಲೇಖನ: ಜೀವನ್‌ರಾಂ ಸುಳ್ಯ, ರಂಗನಿರ್ದೇಶಕರು

ಸಾಹಿತಿಗಳಿಗೆ, ಕವಿಗಳಿಗೆ ನುಡಿಸಿರಿಯಲ್ಲಿ ಭಾಗವಹಿಸುವುದೆಂದರೆ ತುಂಬು ಸಂತಸ. ಕಾರ್ಯಕ್ರಮವನ್ನು ಆಯೋಜನೆ ಮಾಡುವ ಡಾ.ಆಳ್ವ ಮತ್ತವರ ಸಮಾನ ಮನಸ್ಸಿನ ತಂಡಕ್ಕೆ ಇಲ್ಲಿ ಯಾವುದೇ ಗೊಂದಲಗಳಿಲ್ಲ.ಕನ್ನಡ ನಾಡುನುಡಿಯ ಮೂಲ ಆಶಯಕ್ಕೆ ದಕ್ಕೆ ಬಾರದಂತೆ ಗೋಷ್ಠಿಗಳ ಮಧ್ಯೆ ಮಧ್ಯೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ಸಮ್ಮೇಳನಕ್ಕೆ ಕಲಶವಿಟ್ಟಂತೆ. ತಮ್ಮ ಸಂಸ್ಕೃತಿ, ಭಾಷೆ,ಸಾಹಿತ್ಯ, ಸಾಹಿತಿಗಳು, ಕಲೆ ಮತ್ತು ಕಲಾವಿದರನ್ನು ಸಮಾನವಾಗಿ ಗೌರವಿಸುವ ಡಾ.ಆಳ್ವರು ಸಮಯಪಾಲನೆ ಮತ್ತು ಗುಣಮಟ್ಟದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ.
     ಇದೀಗ ವಿರಾಸತ್‌ಗೆ ಇಪ್ಪತ್ತು, ನುಡಿಸಿರಿಗೆ ಹತ್ತು ವರ್ಷ. ವಿದ್ಯಾಗಿರಿಯಲ್ಲಿ ವಿಶ್ವ ನುಡಿಸಿರಿ ವಿರಾಸತ್ ನಡೆಸಲು ಇಡೀ ಮೂಡುಬಿದಿರೆಯೇ ಸಜ್ಜಾಗಿ ನಿಂತಿದೆ. ನಾಲ್ಕು ಮುಖ್ಯ ವೇದಿಕೆಗಳಲ್ಲಿ ಕನ್ನಡ ಮನಸ್ಸು ಅಂದು-ಇಂದು-ಮುಂದು ವಿಷಯದ ಚಿಂತನೆ. ಒಂಬತ್ತು ವೇದಿಕೆಗಳಲ್ಲಿ ಅದ್ಭುತ ಸಾಂಸ್ಕೃತಿಕ ಲೋಕದ ಅನಾವರಣ. ನಾಲ್ಕು ದಿನಗಳಲ್ಲಿ ರಂಗವನ್ನು ವೈಭವಿಕರೀಸುವ ಕಲಾವಿದರ ಸಂಖ್ಯೆ ಮೂರು ಸಾವಿರಕ್ಕಿಂತಲೂ ಅಧಿಕ.ಕಳೆದ ಒಂದೂವರೆ  ವರ್ಷದಿಂದ ದೇಶ-ವಿದೇಶಗಳಲ್ಲಿ, ಕರ್ನಾಟಕ ಪ್ರತಿ ಜಿಲ್ಲೆಗಳಲ್ಲಿ, ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಗಳ ಪ್ರತಿ ತಾಲೂಕು, ಹೋಬಳಿಗಳು ಸೇರಿದಂತೆ ಸುಮಾರು ೮೦ ಕಡೆಗಳಲ್ಲಿ ಉದ್ಘಾಟನೆಗೊಂಡ ಆಳ್ವಾಸ್ ವಿಶ್ವನುಡಿಸಿರಿಯ ಘಟಕಗಳು ಮತ್ತು ಆಳ್ವಾಸ್‌ನ ೨೫೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಸಾಂಸ್ಕೃತಿಕ ಅಭಿಯಾನದಿಂದಾಗಿ ಲಕ್ಷಾಂತರ ಕನ್ನಡಾಭಿಮಾನಿಗಳು, ಸಂಸ್ಕೃತಿ ಪ್ರಿಯರು ಮೂಡುಬಿದಿರೆಗೆ ಆಗಮಿಸಿ ವಿಶ್ವ ನುಡಿಸಿರಿ ವಿರಾಸತ್‌ಗೆ ಸಾಕ್ಷಿಯಾಗಲಿದ್ದಾರೆ.