ನುಡಿಸಿರಿಯ ಕುರಿತು ಆಳ್ವರ ನುಡಿ


             ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿಯ ಪ್ರೀತಿಯಿಂದ ಜನ್ಮ ತಳೆದ ಸಾಹಿತ್ಯ ಸಮ್ಮೇಳನ. ಕನ್ನಡಾಭಿಮಾನ ಹುಟ್ಟಿಸುವ, ಯುವ ತಲೆಮಾರಿನ ಮನಸ್ಸಿನಲ್ಲಿ ನಮ್ಮ ನೆಲಭಾಷೆಯ ಸಂಸ್ಕೃತಿಯನ್ನು ಗಾಢಗೊಳಿಸುವ, ಆತ್ಮೀಯಗೊಳಿಸುವ ಸದುದ್ದೇಶದೊಂದಿಗೆ ಈ ಸಮ್ಮೇಳನ ಕಳೆದ ಎಂಟು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. 
ಸಮ್ಮೇಳನಕ್ಕಿರಬೇಕಾದ ಶಿಸ್ತು, ಅಚ್ಚುಕಟ್ಟುತನ, ಸಂಭ್ರಮ ಹಾಗೂ ವೈಚಾರಿಕ ಪಾತಳಿ ಹೇಗಿರಬೇಕೆಂಬ ನಮ್ಮ ಯೋಚನೆಯನ್ನು ಈ ನುಡಿಸಿರಿ ಸಮ್ಮೇಳನಗಳ ಮೂಲಕ ಸಾಕಾರಗೊಳಿಸಿದ್ದೇವೆ. ಇದಕ್ಕೆ ನಾಡಿನ ಕನ್ನಡಿಗರು ತೋರುತ್ತಿರುವ ಪ್ರೀತಿ ಪ್ರಶಂಸೆಗಳು ನಮ್ಮನ್ನು ಸಹಜವಾಗಿಯೇ ಸಂತೋಷ ಪಡಿಸಿದೆ. ಇನ್ನಷ್ಟು ಪ್ರೀತಿಯಿಂದ ಜವಾಬ್ದಾರಿಯಿಂದ ಮುಂದಿನ ನುಡಿಸಿರಿಯನ್ನು ಸಂಘಟಿಸಲು ಉತ್ತೇಜನ ನೀಡಿದೆ.
         ಸಮ್ಮೇಳನ ಜಾತ್ರೆಯಾಗಿ ಕರಗಿ ಹೋಗದೇ ಅದಕ್ಕೊಂದು ಅರ್ಥಪೂರ್ಣವಾದ ಚಿಂತನೆಯ ಚೌಕಟ್ಟು ಒದಗಬೇಕು ಎಂಬ ಉದ್ದೇಶದಿಂದ ಇಡೀ ಸಮ್ಮೇಳನಕ್ಕೆ ಸೂತ್ರಪ್ರಾಯವಾದ ಒಂದು ಮುಖ್ಯ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ. ಒಂಬತ್ತನೇ ವರ್ಷದ ಈ ನುಡಿಸಿರಿಯ ಪರಿಕಲ್ಪನೆ 'ಕನ್ನಡ ಮನಸ್ಸು: ಜನಪರ ಚಳವಳಿಗಳು' 
     ನಿಸಾರರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನ ನಾಡಿನ ಘನತೆವೆತ್ತ ವಿದ್ವಾಂಸರು  ಕವಿಗಳು ಕಥೆಗಾರರು ಕಲಾವಿದರು ಹಾಗೂ ನಾಡಿನಾದ್ಯಂತದಿಂದ ಆಗಮಿಸುವ ಸಹೃದಯಿ ಕನ್ನಡಿಗರ ಕೂಡುವಿಕೆಯಿಂದ ಅರ್ಥಪೂರ್ಣವಾಗಲಿ ಎಂಬ ಸದಾಶಯ ನನ್ನದು.
     ಮುಂದಿನ ವರ್ಷ ಆಳ್ವಾಸ್ ನುಡಿಸಿರಿಗೆ ಹತ್ತರ ಖುಷಿ. ಒಂದೊಂದೇ ಮೆಟ್ಟಿಲನ್ನು ಹತ್ತುತ್ತ ಹತ್ತಕ್ಕೆ ತಲಪಿದ ಈ ಸಂಭ್ರಮವನ್ನು ವಿಶ್ವ ನುಡಿಸಿರಿಯಾಗಿಸುವ ಮೂಲಕ ಅವಿಸ್ಮರಣೀಯವಾಗಿಸಬೇಕೆಂಬ ಹಂಬಲ ನಮ್ಮದು. ಈ ಸಮ್ಮೇಳನದಲ್ಲಿ ರಾಜ್ಯದ, ಹೊರರಾಜ್ಯದ ಹಾಗೂ ವಿದೇಶದ ಕ್ರಿಯಾಶೀಲ ಕನ್ನಡದ ಮನಸುಗಳು ವಿದ್ಯಾಗಿರಿಯನ್ನು ತುಂಬಬೇಕು. ತನ್ಮೂಲಕ ನುಡಿಸಿರಿ ಆರಂಭಿಸಿದ ಕನ್ನಡ ನಾಡು ನುಡಿಯ ಚಳವಳಿ ಆಂದೋಲನ ಸ್ವರೂಪವನ್ನು ತಾಳಬೇಕು ಎಂಬ ಆಶಯ ನಮ್ಮದು. ನಾಡಿನ ಸುಮನಸರೆಲ್ಲ ಇದಕ್ಕೆ ಕೈಜೋಡಿಸಬೇಕೆಂದು ವಿನಂತಿಸುತ್ತೇನೆ.