ಆಳ್ವರೊಂದಿಗೆ ಸಂದರ್ಶನ: ಸ್ಪರ್ಧೆಗಿಂತ ಕಾಯಕತನದ ಗಟ್ಟಿ ಮನಸ್ಸು ಮುಖ್ಯ

ಮೂಡುಬಿದಿರೆ: ನುಡಿಸಿರಿ ವಿರಾಸತ್ ಸಂಘಟಕ ಡಾ; ಮೋಹನ ಆಳ್ವ ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ತಮ್ಮ ಸಂಘಟನಾ ಚಾತುರ್ಯದಿಂದ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನಂತಹ ಕಾರ್ಯಕ್ರಮವನ್ನು  ಸಂಫಟಿಸಿರುವ ಡಾ ಎಂ ಮೋಹನ್ ಆಳ್ವರೊಂದಿಗೆ ಸಂದರ್ಶನ

ಪ್ರಶ್ನೆ; ನೀವು ಕಲೆ, ಸಂಸ್ಕೃತಿ   ಪ್ರಿಯರಾಗಲು ಕಾರಣವೇನು?
ಡಾ ಆಳ್ವ: ಬಾಲ್ಯದಿಂದಲೂ ನನ್ನಲ್ಲಿ ತಂತಾನೆ ಮೂಡಿಬಂದ ಚಿಂತನೆ, ಅರಳಿದ ಮನಸ್ಸು, ಸದಾ ಹೊಸದನ್ನು ಹುಡುಕುವ ತವಕ. ಆಚಾರ, ವಿಚಾರ, ಆಲಿಸುವ ಹವ್ಯಾಸದ ಬೆಳವಣಿಗೆ.

ಪ್ರಶ್ನೆ; ನಿಮ್ಮ ಕ್ರಿಯಾತ್ಮಕ ಶಿಕ್ಷಣ ಪ್ರೇಮಕ್ಕೆ ನಾಂದಿ ಯಾವುದು?
ಡಾ ಆಳ್ವ: ಶಿಕ್ಷಣವಿಲ್ಲದ ಮನುಷ್ಯ ಜೀವವಿಲ್ಲದ ದೇಹದಂತಾಗುತ್ತಾನೆ ಅದೆಷ್ಟೋ ಜನರು ಒಳ್ಳೆಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ವಿಶಿಷ್ಟ ಶಿಕ್ಷಣ ವ್ಯವಸ್ಥೆಗೆ   ಶ್ರಮಿಸುವವರ ಸಂಖ್ಯೆ ಕಡಿಮೆಯಿರುವುದನ್ನು ಕಂಡು ನನ್ನ ಮನಸ್ಸಲ್ಲಿ ಏನಾದರೂ ಸಾಧಿಸಬೇಕೆಂಬ ಛಲದ ದಿವ್ಯಜ್ಯೋತಿ ಹೊತ್ತಿತು.

ಪ್ರಶ್ನೆ; ನಿಮ್ಮ ಶಿಸ್ತುಬದ್ಧ ಸರಳತೆಯ ಗುಟ್ಟೇನು?
ಡಾ ಆಳ್ವ: ಮೊದಲು ನಾನು ಶಿಸ್ತು ಅಳವಡಿಸಿಕೊಂಡು ಇತರರಿಗೆ ಹೇಳುತ್ತೇನೆ, ಆಗ ಅದು ತಂತಾನೆ ಪರಿಣಾಮವಾಗುತ್ತದೆ, ಪ್ರತಿಹೆಜ್ಜೆಗೂ ನನ್ನ ಮನದಲ್ಲಿ ಶಿಸ್ತುಪ್ರಜ್ಞೆಯು ಇರುವಂತೆ ಮಾಡಿದ ನನ್ನ ತಂದೆ ತಾಯಿ ಅವರು ಬಾಲ್ಯದಲ್ಲಿ ನನಗೆ ನೀಡಿದ ಸಂಸ್ಕಾರಗಳೇ ನನ್ನ ಶಿಸ್ತುಬದ್ದ ಹಾಗೂ ಸರಳತೆಯ ಜೀವನಕ್ಕೆ ಗಟ್ಟಿಬೇರುಗಳಾದವು.

ಪ್ರಶ್ನೆ; ನಿಮ್ಮನ್ನು ಟೀಕಿಸುವವರ ಬಗ್ಗೆ ನಿಮಗೇನನಿಸುತ್ತದೆ?
ಡಾ ಆಳ್ವ: ಟೀಕಿಸುವವರ ಬಗ್ಗೆ ನಾನೆಂದೂ ಚಿಂತಿಸಿಲ್ಲ, ಆದರೆ ಯಾರು. ಯಾರನ್ನಾದರೂ ಟೀಕಿಸುವುದಾದರೆ ಆ ಟೀಕೆ ಎನ್ನುವುದು ಶಿಸ್ತು ಮತ್ತು ಸತ್ಯವಿಷಯವನ್ನಾಧರಿಸಿದ್ದರೆ, ಯಾರ ವಿರುದ್ಧ ಟೀಕಿಸಲಾಗಿದೆಯೋ ಅವರು ಎಚ್ಚರದಿಂದ ಹೆಜ್ಜೆ ಇಡಲು ಸಹಕಾರಿಯಾಗುತ್ತದೆ, ಆದರೆ ಒಳ್ಳೆಯತನದ ಟೀಕೆಗೆ ನಾನು ಸ್ವಾಗತಿಸುತ್ತೇನೆ, ಆದರೆ ಆ ಟೀಕೆಗಳು ಸುಳ್ಳು ನೆಪಹುಡುಕಿ ಮಾಡಿದ್ದಿರಬಾರದು, ಟೀಕೆಗಳಿಂದ ನಾನು ಹೆದರುವವನಲ್ಲ, ಯಾವುದನ್ನೂ ಲೆಕ್ಕಿಸದೇ ನಾನು ನನ್ನ ಕರ್ತವ್ಯ ಮುಂದುವರೆಸಿದ್ದೇನೆ, ಇನ್ನೂ ನನ್ನ ಸೇವೆಯ ಪಯಣ ಬಹುದೂರವಿದೆ.

ಪ್ರಶ್ನೆ; ನಿಮ್ಮ ಬಗ್ಗೆ ಯಾರದರೂ ಸವಾಲ್ ಹಾಕಿದರೆ ಅದನ್ನು ನೀವು ಸ್ಪರ್ಧೆಯಾಗಿ ಸ್ವೀಕರಿಸುವಿರಾ?
ಡಾ ಆಳ್ವ: ನನ್ನದು ಯಾರ ವಿರುದ್ಧವೂ, ಯಾವ ವಿಷಯಕ್ಕೂ ಸ್ಪರ್ಧೆಯಿಲ್ಲ, ನನ್ನ ಕೈಲಾದ ಪ್ರಕಾರ ನಮ್ಮ ದೇಶ. ಭಾಷೆ, ನಾಡು, ನುಡಿಸಿರಿಯ ಸುಂದರ ಸಂಸ್ಕಂತಿಯ ರಕ್ಷಣೆಗೆ ಕೆಲಸ ಮಾಡುವುದು, ಶಿಕ್ಷಣ ಕ್ಷೇತ್ರಕ್ಕೆ ಶ್ರಮಿಸುವುದು ನನ್ನ ಆಸಕ್ತಿ, ಈ ಸಮಾಜದಲ್ಲಿನ ಎಲ್ಲರಿಗಿಂತಲೂ ಚಿಕ್ಕವನೆಂಬ ಭಾವನೆಯಿಟ್ಟುಕೊಂಡು ಸಮಾಜವೇ ದೊಡ್ಡದೆಂದು ತಿಳಿದುಕೊಂಡು ಮುನ್ನುಗ್ಗುತ್ತಿದೇನೆ, ಇದೇ ಅಲ್ಲವೇ ಹಿಂದಿನ ಬಸವಾದಿ ಶಿವಶರಣರು ಹೇಳಿರುವುದು?

ಪ್ರಶ್ನೆ; ನೀವೀಗ ವಿಶ್ವ ನುಡಿಸಿರಿ-ವಿರಾಸತ್ ನಡೆಸಿ ಯಶಸ್ವಿಯಾಗಿ ಜನಮನದ ಗಮನ   ಸೆಳೆಯುವಂತೆ ಮಾಡಿದ್ದೀರಿ ಏನನಿಸುತ್ತಿದೆ?
ಡಾ ಆಳ್ವ: ನಾನೇನು ಮಾಡಿಲ್ಲ, ಇದೆಲ್ಲಾ ಸಾಧ್ಯವಾದದ್ದು ನನ್ನೊಂದಿಗೆ ಸಹಕರಿಸಿ ತನುಮನ ಧನದ ಸಹಕಾರ ನೀಡಿದ ಜನರ, ಸ್ವಯಂಸೇವಕರಾಗಿ ಶ್ರಮಿಸಿದ ವಿದ್ಯಾರ್ಥಿ ಯುವಜನರ ಶ್ರಮವೇ ಮೂಲ. ನಾನೊಬ್ಬ ನೆಪ ಮಾತ್ರ, ಈ ಕೆಲಸ ನನ್ನ ಸ್ವಂತ ಸಾಧನೆಯೆಂದು ನಾನು ಭಾವಿಸಿಲ್ಲ, ಇದು ಇಡೀ ಕನ್ನಡ ನೆಲದ ಜನರ ಸಾಧನೆ. ವಿಶ್ವನುಡಿಸಿರಿ ವಿರಾಸತ್‍ನಂತಹ ಸಮಾರಂಭಗಳು ವಿಶ್ವ ಮೂಲೆಗಳಲ್ಲಿ  ನಡೆಯಬೇಕು, ನಮ್ಮ ದೇಶದ ನಾಡು,ನುಡಿ ಸಂಸ್ಕøತಿಯನ್ನು ಭವಿಷ್ಯದ ಜನತೆಗೆ ತಿಳಿಸುವ ವ್ಯವಸ್ಥೆ ಸದಾ ಹಚ್ಚಹಸಿರಾಗಿರಬೇಕು, ಅದರ ಜೊತೆಗೆ  ಕುವೆಂಪು ಅವರು ಕಂಡ ವಿಶ್ವ ಕನ್ನಡ ಕಟ್ಟುವಂತಹ ವಾತಾವರಣ ನಿರ್ಮಾಣವಾಗಬೇಕು, ಯುವ ಜನತೆ ಕನ್ನಡದಿಂದ ಬಹುದೂರ ಹೊರಟಂತೆ ತೋರುತ್ತಿದ್ದು ಅವರನ್ನು ಕನ್ನಡದಿಂದ ದೂರ ಹೋಗದಂತೆ ತಡೆಯಲು ಇಂತಹ ಕಾರ್ಯಕ್ರಮಗಳುಪೂರಕವಾಗಬೇಕು.

ಪ್ರಶ್ನೆ; ಸಮಾಜದಲ್ಲಿನ ಭಾಷಾ ಭೇದಕ್ಕೆ ಕಾರಣಗಳೇನು ?
ಡಾ ಆಳ್ವ: ಜಾತಿ-ಭಾಷೆ, ವಿವಿಧ ರೀತಿಯ ಸಿದ್ಧಾಂತಗಳ ಹೆಸರಲ್ಲಿ ದೇಶದಲ್ಲಿನ   ಜನರ ಮನಸ್ಸು ಒಂದುಗೂಡುವಂತೆ ನೋಡಿಕೊಂಡು ಬರುತ್ತಿರುವ ಮತ್ತು ತಮ್ಮ ರಾಜಕೀಯ ಬೇಳೆ ಬೆಳೆಸಿಕೊಳ್ಳುವ ಕೆಲವೇ ಕೆಲವು ಜನರ ಆ ಕೆಟ್ಟ ನೀತಿ ಭಾಷೆಯ ಭೇದಕ್ಕೆ ಕಾರಣವಾಗುತ್ತಿದೆ .ವಿಶ್ವದ ಯಾವ ಭಾಷೆಯೂ ಮಾನವನ ಕಲ್ಯಾಣಕ್ಕೆ ಧಕ್ಕೆ ತರಬೇಕೆಂದು ಹೇಳಿಲ್ಲ, ಭಾಷೆಗಳು ಪರಸ್ಪರ ಮನಸ್ಸು ಕಟ್ಟುವ ಅಭಿವ್ಯಕ್ತಪಡಿಸುವ ಕೊಂಡಿಯಾಗಬೇಕೆ ಹೊರತು ಮಾನವರ ನಡುವೆ ಮನಸ್ಸೊಡೆಯುವಂತಾಗಬಾರದು. ಇಡೀ ವಿಶ್ವದ ಭಾಷೆಗಳಿಗೆ ಗೌರವಿಸುವ ಕೀರ್ತಿ ಭಾರತದ್ದು, ಇದು ನಮಗೆ ಹೆಮ್ಮೆ, ಅದರೂ ನಮ್ಮಲೇ ಕೆಲವರೂ ಭಾಷೆಯ ಭೇದ ಸೃಷ್ಠಿಸುತ್ತಿದ್ದು ಅದರಿಂದ ಜನತೆ ಎಚ್ಚರದಿಂದರಬೇಕು ಎಂದು ಉತ್ತರಿಸಿದರು.

ಪ್ರಶ್ನೆ; ನೀವಿಷ್ಟು ಬೆಳೆದರೂ ಸಹಿತ ನೀವಿನ್ನೂ ಬಾಡಿಗೆ ಮನೆಯಲ್ಲಿದ್ದೀರಂತಲ್ಲ ಹೌದಾ..?
ಡಾ ಆಳ್ವ: ಬಾಡಿಗೆ ಮನೆಯೆಂದು ನನಗೆ ಬೇಸರವಿಲ್ಲ, ಮನೆ ಸ್ವಂತದ್ದಾದರೇನು, ಬಾಡಿಗೆಯಾದರೇನು, ಮನಸ್ಸು ಬಾಡಿಗೆಯಾಗದಿರಲಿ ಮತ್ತು ಸಮಾಜಪರ ಚಿಂತಿಸುವ ಮನಸ್ಸು ಬಾಡದಿರಲಿ. ಮನುಷ್ಯನಾದವನು ಸುಂದರ ಮನೆಯಲ್ಲಿದ್ದು ಮನಸ್ಸು ಸುಂದರವಾಗಿಸಿಕೊಳ್ಳದಿದ್ದರೆ ಸಮಾಜಕ್ಕೆ ಉಪಯೋಗವಿಲ್ಲ. ಸಮಾಜದ ಉತ್ತಮ ಮನಸ್ಸುಗಳ್ಳಲ್ಲಿ ಒಬ್ಬ ಸೇವಕನೆಂಬ ಭಾವನೆಯಾಗಿ ವಾಸಮಾಡಿದರೆ ಅದರಿಂದ ಸಿಗುವ ಸಂತೊಷವೇ ಬೇರೆ ಅಲ್ವ?

ಪ್ರಶ್ನೆ; ಯುವಜನರೊಂದಿಗೆ ನೀವು ಬೆರೆಯುವ ರೀತಿ ?
ಡಾ ಆಳ್ವ: ಒಂದು ಕುಟುಂಬದ ರೀತಿಯಲ್ಲಿ ಪ್ರತಿಯೊಬ್ಬರ ಜೊತೆ ಬೆರೆಯುತ್ತೇನೆ, ಒಳಗಿನವರು, ಹೊರಗಿನವರು ಎನ್ನುವ ಭೇದ-ಭಾವ ನನ್ನಲ್ಲಿಲ್ಲ, ಕವಿರಾಜ ಮಾರ್ಗದಲ್ಲಿ ಹೇಳಿದ ವಸುದೈವ ಕುಟುಂಬಕಂ ಮಾರ್ಗದಲ್ಲಿ ನಂಬಿಕೆಯಿರಿಸಿ ನಡೆಯುತ್ತಿದ್ದೇನೆ.

ಪ್ರಶ್ನೆ; ಮುಂದಿನ ನಿಮ್ಮ ಗುರಿ ಏನು?
ಡಾ ಆಳ್ವ: ಉತ್ತಮ ಸುಂದರ ಸಾಂಸ್ಕøತಿಕ ಸಮಾಜ ಕಟ್ಟುವ ಈ ನಡುವೆ ಶಿಕ್ಷಣಕ್ಕೆ ಇಡೀ ವಿಶ್ವದಲ್ಲೇ ಭಾರತ ಇನ್ನೂ ಉನ್ನತಮಟ್ಟಕ್ಕೇರುವ ಕೀರ್ತಿ ತರಲು ಶ್ರಮಿಸುವುದು.

                    ಸಂದರ್ಶನ: ಮಲ್ಲಿಕಾರ್ಜುನ ಭೃಂಗಿಮಠ