ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್: ಇಂದಿನಿಂದ ಚಾಲನೆ

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಕಾರ್ಯಕ್ರಮಗಳಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಚಾಲನೆ ದೊರೆಯಲಿದ್ದು ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ಕವಿಸಮಯದಲ್ಲಿ ಗಾನ ನೃತ್ಯ ಕುಂಚ ವೈಭವ
      ಆಳ್ವಾಸ್ ನುಡಿಸಿರಿಯ ಕವಿಸಮಯದಲ್ಲಿ ಕನ್ನಡದ ಖ್ಯಾತ ಹತ್ತು ಕವಿಗಳು ಭಾಗವಹಿಸಲಿದ್ದು ಅವರು ತಮ್ಮ ಕಾವ್ಯದ ನಿಲುವು ಧೋರಣೆಗಳ ಬಗೆಗೆ ಮಾತನಾಡಿ ಕವಿತಾವಾಚನ ಮಾಡಿದ ಬಳಿಕ ಆ ಕವಿತೆಗೆ ರಾಗ ಸಂಯೋಜಿಸಿ, ನೃತ್ಯ ಸಂಯೋಜನೆ ಮಾಡಿ ಪ್ರದರ್ಶಿಸುವ ವಿಶಿಷ್ಠ ಪ್ರಯೋಗವಿದೆ. ಇದರೊಂದಿಗೆ ಕಲಾವಿದ ವಿಲಾಸ್ ಕುಮಾರ್ ಅವರ ಚಿತ್ರವೂ ಗಮನಸೆಳೆಯಲಿದೆ. ಡಾ.ಕೆ.ಎಸ್ ನಿಸಾರ್ ಅಹಮ್ಮದ್, ಎಚ್ ಡುಂಡೀರಾಜ್, ಲಕ್ಕೂರ್ ಸಿ.ಆನಂದ, ಡಾ.ಸಿದ್ಧಲಿಂಗಯ್ಯ, ಡಾ.ನಾ.ದಾಮೋದರ ಶೆಟ್ಟಿ, ಸುಬ್ರಾಯ ಚೊಕ್ಕಾಡಿ, ಡಾ.ದೊಡ್ಡರಂಗೇಗೌಡ, ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಡಾ.ಬಿ.ಟಿ.ಲಲಿತಾ ನಾಯಕ್, ಸುಕನ್ಯಾ ಮಾರುತಿ ಇವರು ಕವಿಗಳಾಗಿ ಭಾಗವಹಿಸಲಿದ್ದಾರೆ.


ಮೂರು ಸಮಾವೇಶ ಗೋಷ್ಠಿ, ನಾಲ್ಕು ವಿಚಾರಗೋಷ್ಠಿ
    ಆಶಯ, ವಿಷಯ, ಸಮನ್ವಯ ಎಂಬ ದೃಷ್ಠಿಯನ್ನಿಟ್ಟುಕೊಂಡು ಸಮ್ಮೇಳನದಲ್ಲಿ ಮೂರು ಸಮಾವೇಶ ಗೋಷ್ಠಿಗಳು ನಡೆಯಲಿದೆ. ದಶಂ.20ರಂದು ನಡೆಯಲಿರುವ ಸಾಹಿತ್ಯ ಗೋಷ್ಠಿಯಲ್ಲಿ ಡಾ.ಚಂದ್ರಶೇಖರ ಕಂಬಾರ ಮತ್ತು ಡಾ.ಎಸ್.ಎಲ್ ಭೈರಪ್ಪ ಭಾಗವಹಿಸಿದರೆ, ದಶಂ.21 ರಂದು ನಡೆಯಲಿರುವ ರಾಜಕಾರಣ ಕುರಿತ ಸಮಾವೇಶ ಗೋಷ್ಠಿಯಲ್ಲಿ ಎಂ.ಸಿ.ನಾಣಯ್ಯ, ಬಿ.ಸುರೇಶ್ ಕುಮಾರ್ ಮತ್ತು ಬಿ.ಎಲ್.ಶಂಕರ್ ಭಾಗವಹಿಸಲಿದ್ದಾರೆ. 22ರಂದು ನಡೆಯುವ ಮಾಧ್ಯಮ ಗೋಷ್ಠಿಯಲ್ಲಿ ಪದ್ಮರಾಜ ದಂಡಾವತೆ, ವಿಶ್ವೇಶ್ವರ ಭಟ್ ಮತ್ತು ಟಿ.ಎನ್.ಸೀತಾರಾಂ ಭಾಗವಹಿಸಲಿದ್ದಾರೆ.
    ಸಮ್ಮೇಳನದಲ್ಲಿ ಒಟ್ಟು ನಾಲ್ಕು ವಿಚಾರಗೋಷ್ಠಿಗಳು ನಡೆಯಲಿದ್ದು ವಿಶ್ವ ಕನ್ನಡ ಎಂಬ ಗೋಷ್ಠಿಯಲ್ಲಿ ಹೊರದೇಶದಲ್ಲಿ ಕನ್ನಡ, ಹೊರನಾಡಿನಲ್ಲಿ ಕನ್ನಡ ಮತ್ತು ಗಡಿನಾಡಿನಲ್ಲಿ ಕನ್ನಡ ಎಂಬ ವಿಚಾರಗಳ ಕುರಿತು ಕ್ರಮವಾಗಿ ಡಾ.ನಾಗ ಐತಾಳ್, ಅಮೇರಿಕ, ಡಾ.ಪುರುಷೋತ್ತಮ ಬಿಳಿಮಲೆ, ದೆಹಲಿ ಮತ್ತು ಡಾ.ಬಸವರಾಜ ಜಗಜಂಪಿ ಬೆಳಗಾವಿ ಇವರು ಮಾತನಾಡಲಿದ್ದಾರೆ. 

     ಕನ್ನಡ ಸಾಹಿತ್ಯದ ಲೋಕ ದೃಷ್ಠಿ ಎಂಬ ಗೋಷ್ಠಿಯಲ್ಲಿ ವಚನ ಸಾಹಿತ್ಯದ ಕುರಿತು ಡಾ.ವಿ.ಚಂದ್ರಶೇಖರ ನಂಗಲಿ, ಕೋಲಾರ ಮತ್ತು ದಾಸ ಸಾಹಿತ್ಯದ ಕುರಿತು ಡಾ.ಸ್ವಾಮಿರಾವ್ ಕುಲಕರ್ಣಿ ಗುಲ್ಬರ್ಗಾ ಇವರು ಮಾತನಾಡಲಿದ್ದಾರೆ. ಕನ್ನಡ ಮತ್ತು ಅವಕಾಶ ಎಂಬ ವಿಚಾರಗೋಷ್ಠಿಯಲ್ಲಿ ಡಾ.ಯು.ಬಿ.ಪವನಜ ಇವರು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ, ಡಾ. ನಿತ್ಯಾನಂದ ಬಿ.ಶೆಟ್ಟಿ ಇವರು ಶಿಕ್ಷಣ ಮತ್ತು ಕನ್ನಡ ಮಾಧ್ಯಮದ ಕುರಿತು ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯ ಸಮಾಜ ಚಿಂತನೆ ಎಂಬ ಗೋಷ್ಠಿಯಲ್ಲಿ ಹಳೆಗನ್ನಡ ಸಾಹಿತ್ಯದ ಕುರಿತು ಡಾ.ಎನ್.ಎಸ್.ತಾರಾನಾಥ್, ಹೊಸಗನ್ನಡ ಸಾಹಿತ್ಯದ ಕುರಿತು ಡಾ.ಸಿ.ಎನ್.ರಾಮಚಂದ್ರನ್ ವಿಷಯ ಮಂಡಿಸಲಿದ್ದಾರೆ. 


ವಿಶೇಷ ಉಪನ್ಯಾಸ, ಸಂಸ್ಮರಣೆ, ಮಾತಿನ ಮಂಟಪ
    ಸಮ್ಮೇಳನದಲ್ಲಿ ಡಾ.ಹಂಪ ನಾಗರಾಜಯ್ಯ, ಧರಣೀದೇವಿ ಮಾಲಗತ್ತಿ, ಡಾ.ಪಿ.ಕೆ ರಾಜಶೇಖರ, ಕೆ.ಎಸ್.ಪುಟ್ಟಣ್ಣಯ್ಯ ಇವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ನಾಲ್ಕು ಸಂಸ್ಮರಣೆಯ ಮಾತುಗಳಿದ್ದು ರತ್ನಾಕರ ವರ್ಣಿಯ ಕುರಿತು ಮುನಿರಾಜ ರೆಂಜಾಳ, ಸರಸ್ವತಿ ಬಾಯಿ ರಾಜವಾಡೆ ಕುರಿತು ಬಿ.ಎನ್.ಸುಮಿತ್ರಾಬಾಯಿ, ಪೇಜಾವರ ಸದಾಶಿವ ರಾವ್ ಕುರಿತು ಡಾ.ಎಸ್.ಆರ್.ವಿಜಯಶಂಕರ್ ಮತ್ತು ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರ ಕುರಿತು ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಲಿದ್ದಾರೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ರವಿ ಬೆಳಗೆರೆ, ಹಿರೇಮಗಳೂರು ಕಣ್ಣನ್, ಇಂದುಮತಿ ಸಾಲಿಮಠ್, ವೈ.ವಿ.ಗುಂಡೂರಾವ್ ಭಾಗವಹಿಸಲಿದ್ದಾರೆ.


ವಿದ್ಯಾರ್ಥಿ ಸಿರಿ, ಜಾನಪದ ಸಿರಿ, ಕೃಷಿ ಮೇಳ
     ಪಂಜೆ ಮಂಗೇಶರಾಯ ವೇದಿಕೆಯಲ್ಲಿ ನಡೆಯಲಿರುವ ವಿದ್ಯಾರ್ಥಿಸಿರಿ ಸಮ್ಮೇಳನವು ಡಿಸೆಂ 20ರಂದು ಬೆಳಗ್ಗೆ 9 ಗಂಟೆಗೆ ಲೇಖಕಿ ವೈದೇಹಿಯವರ ಆಶಯ ಭಾಷಣದೊಂದಿಗೆ ಆರಂಭವಾಗಲಿದೆ. ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಕವಿಗೋಷ್ಠಿ, ಅಭಿನಯ ಗೀತೆ, ವಿಶೇಷ ಉಪನ್ಯಾಸ, ಹಿರಿಯರಿಂದ ಕವಿಸಮಯ, ಸಂಸ್ಮರಣೆ, ಮಾತಿನ ಮಂಟಪ, ವಿದ್ಯಾರ್ಥಿ ವಿಚಾರಗೋಷ್ಠಿ, ಜನಪದ ವಾದ್ಯ, ಕುಣಿತ ಪ್ರಾತ್ಯಕ್ಷಿಕೆ ಇತ್ಯಾದಿಗಳು ಮೂರು ದಿನಗಳ ಕಾಲ ನಡೆಯಲಿದೆ. 
     ಈ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಕ್ಕೆ ಅನುಪಮ ಕೊಡುಗೆ ಸಲ್ಲಿಸಿದ ನಾ’ಡಿಸೋಜ,ಸಾಗರ, ಶರಣಪ್ಪ ಕಾಂಚಾಣಿ, ಬಿಜಾಪುರ, ಎಳೆಯರ ಗೆಳೆಯ ಮುಳಿಯ ಕಾಸರಗೋಡು ಇವರನ್ನು ಮತ್ತು ಮಕ್ಕಳ ಸಾಹಿತ್ಯ ಸಂಬಂಧಿ ಕಾರ್ಯದಲ್ಲಿ ನಿಡುಗಾಲದಿಂದ ತೊಡಗಿಕೊಂಡಿರುವ ಮುಂಬೈಯ ಚಿಣ್ನರ ಬಿಂಬ, ಬೆಂಗಳೂರಿನ ಮಕ್ಕಳ ಕೂಟ, ಮಂಗಳೂರಿನ ಮಕ್ಕಳ ಸಾಹಿತ್ಯ ಸಂಗಮ ಇವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವಿದೆ.
    20ರಂದು ಬೆಳಗ್ಗೆ 9.30ಕ್ಕೆಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅಂಬಳಿಕೆ ಹಿರಿಯಣ್ಣ ಇವರ ಆಶಯ ಭಾಷಣದೊಂದಿಗೆ ಆರಂಭಗೊಳ್ಳುವ ಜಾನಪದ ಸಿರಿಯಲ್ಲಿ ಕರ್ನಾಟಕದ ಮೌಖಿಕ ಪರಂಪರೆ, ಜನಪದ ಕುಣಿತಗಳು,ಜನಪದ ಆರಾಧನೆಗಳು, ಜನಪದ ವಾದ್ಯ, ಯಕ್ಷಗಾನ ಮತ್ತು ಸಮಾನಾಂತರ ಕಲಾ ಪ್ರಕಾರಗಳ ಕುರಿತ ವಿಚಾರಗೋಷ್ಠಿ, ಪ್ರಾತ್ಯಕ್ಷಿಕೆಗಳು ನಡೆಯಲಿವೆ. 22 ರಂದು ಮದ್ಯಾಹ್ನ 2 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಡಾ.ವೀರಣ್ನ ದಂಡೆ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಜಾನಪದ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಿದ ಹತ್ತು ಮಂದಿಗೆ ಆಳ್ವಾಸ್ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ.ಯು.ಪಿ.ಉಪಾಧ್ಯಯ, ಹಿರಿಯಡಕ ಗೋಪಾಲ ರಾವ್, ಶಿಮಂತೂರು ಡಾ.ಎನ್ ನಾರಾಯಣ ಶೆಟ್ಟಿ, ಸೋಮಲಿಂಗಪ್ಪ ಫಕೀರಪ್ಪ, ದೊಡವಾಡ, ಬುರ್ರಕಥಾ ಜಯಮ್ಮ, ವೀರ ಮಕ್ಕಳ ಕುಣಿತದ ಸೀನಪ್ಪ, ದ್ಯವಪಾತ್ರಿ ಗಂಗಯ್ಯ ಪರವ, ಕುಮಾರಪಾತ್ರಿ ಶ್ಯಾಮ ಶೆಟ್ಟಿ, ಮುಖವೀಣೆಯ ಅಚಿಜನಪ್ಪ, ನಂದಿಧ್ವಜದ ಎಲ್ ಮಹಾದೇವಪ್ಪ, ಕತ್ತಿವರಸೆಯ ಪೈಲ್ವಾನ್ ಮಹಾದೇವಪ್ಪ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

    ಪದ್ಮಭೂಷಣ ವರ್ಗಿಸ್ ಕುರಿಯನ್ ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಮೇಳವನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಲಿದ್ದಾರೆ. ಕೃಷಿ ಸಂಬಂಧಿ ವಿವಿಧ ವಿಚಾರ ಸಂಕಿರಣಗಳು ತಜ್ಞರಿಂದ ನಡೆಯಲಿದೆ.
      ಸಂಜೆ ಆರರ ಬಳಿಕ 9 ವೇದಿಕೆಗಳಲ್ಲಿ ನಾಡಿನ ಪ್ರಸಿದ್ಧ ಕಲಾವಿರ ಕೂಡುವಿಕೆಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಹೊರೆಕಾಣಿಕೆ ಸ್ಪಂದನ
    ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಕಾರ್ಯಕ್ರಮದಲ್ಲಿ ಆಗಮಿಸುವ ಲಕ್ಷಾಂತರ ಮಧಿಗೆ ಭೋಜನ ವ್ಯವಸ್ಥೆಗೆ ಅನುಕೂಲವಾಗುವಂತೆ ತೆಂಗಿನ ಕಾಯಿ, ಅಕ್ಕಿ, ತರಕಾರಿ, ಬೆಲ್ಲ, ಸಕ್ಕರೆ ಮೊದಲಾದ ಆಹಾರ ತಯಾರಿಗೆ ಬೇಕಾದ ಸಾಮಗ್ರಿಗಳು ಊರೂರುಗಳಿಂದ ಹೊರೆಕಾಣಿಕೆ ರೂಪದಲ್ಲಿ ಬರುತ್ತಿದೆ. ಸುಳ್ಯ ದಿಂದ 24,000, ಬೆಳ್ತಂಗಡಿಯಿಂದ 16,000, ಅಳದಂಗಡಿ, ವಾಮದಪದವು, ಸಿದ್ಧಕಟ್ಟೆ, ವಿಟ್ಲ, ಪದ್ಯಾಣದಿಂದ 8000 ತೆಂಗಿನ ಕಾಯಿಗಳು ಈಗಾಗಲೆ ಬಂದು ಸೇರಿವೆ. ಬೆಳ್ತಂಗಡಿಯ ಹಂಸ , ವಿನಾಯಕ, ರೈತಬಂಧು ಮಿಲ್ಲುಗಳ ಮಾಲಿಕರು ಸುಮಾರು ಒಂದು ಲೋಡ್ ಅಕ್ಕಿ, ಬಂಟ್ವಾಳದಿಂದ ಅಕ್ಕಿ, ಅರಸೀಕೆರೆ, ಬೇಲೂರಿನಿಂದ ತರಕಾರಿ, ಮಂಡ್ಯದಿಂದ ಬೆಲ್ಲ, ಬೆಳಗಾಂನಿಂದ ಸಕ್ಕರೆ ಹೀಗೆ ವಿವಿಧೆಡೆಗಳಿಂದ ಹೊರೆಕಾಣಿಕೆಗಳು ಹರಿದು ಬರುತ್ತಿದೆ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ


ಐದು ನೆನಪಿನ ಸಂಪುಟಗಳು
    ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ಸಂದರ್ಭದಲ್ಲಿ ಐದು ನೆನಪಿನ ಸಂಪುಟಗಳನ್ನು ಪ್ರಕಟಿಸಲಾಗುವುದು. ಸಿರಿಗನ್ನಡ (ಸಮಗ್ರ ಕರ್ನಾಟಕ ಸಂಪುಟ), ಕರಾವಳಿ ಕರ್ನಾಟಕ, ಕನ್ನಡ ವೈಜಯಂತಿ (ಗಡಿನಾಡು ಹೊರನಾಡು ವಿದೇಶದ ಕನ್ನಡದ ಕುರಿತ ಸಂಪುಟ), ಸಿರಿಹೆಜ್ಜೆ (ನುಡಿಸಿರಿ ವಿರಾಸತ್ ನಡೆದು ಬಂದ ದಾರಿಯ ಕುರಿತ ಸಂಪುಟ) ಹಾಗೂ ಈವರೆಗಿನ ಹತ್ತು ನುಡಿಸಿರಿಗಳ ಅಧ್ಯಕ್ಷೋಪನ್ಯಾಸಗಳ ಸಂಪುಟ ‘ಕನ್ನಡ ಮನಸ್ಸು’ ಎಂಬ ಸಂಪುಟಗಳು ಈಗಾಗಲೇ ಪ್ರಕಟಣೆಗೊಳ್ಲುತ್ತಿದೆ. ಸಮ್ಮೇಳನದ ಉದ್ಘಾಟನೆಯ ದಿನ ಈ ಕೃತಿ ಸಂಪುಟಗಳ ಲೋಕಾರ್ಪಣೆ ನಡೆಯಲಿದೆ ಎಂದು ಡಾ. ಮೋಹನ ಆಳ್ವ ತಿಳಿಸಿದ್ದಾರೆ.


ನುಡಿಸಿರಿ ಸಮಾರೋಪಕ್ಕೆ ಮೊಯ್ಲಿ, ವಿರಾಸತ್ ಉದ್ಘಾಟನೆಗೆ ಉಮಾಶ್ರೀ
    ಡಿಸೆಂ.22 ರಂದು ನಡೆಯಲಿರುವ ಸಮ್ಮೇಳನದ ಸಮಾರೋಪ ಭಾಷಣವನ್ನು ಸಾಹಿತಿ, ಕೇಂದ್ರ ಸರಕಾರದ ಸಚಿವರಾದ ಡಾ.ಎಂ.ವೀರಪ್ಪ ಮೊಯಿಲಿ ಮಾಡಲಿದ್ದಾರೆ. ಡಿಸೆಂ.20 ರಂದು ಸಂಜೆ 6 ಗಂಟೆಗೆ ಆಳ್ವಾಸ್ ವಿಶ್ವ ವಿರಾಸತ್ ಕಾರ್ಯಕ್ರಮವನ್ನು ಕನ್ನಡ ಸಂಸ್ಕøತಿ ಇಲಾಖೆ ಸಚಿವರಾದ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿಟ್ಟೆ ಡಾ.ವಿನಯ ಹೆಗ್ಡೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಡಾ.ಬಿ.ಎ ವಿವೇಕ ರೈ, ಜಿಲ್ಲಾಧಿಕಾರಿ ಎನ್ ಪ್ರಕಾಶ್, ಅಬುದಾಬಿಯ ಸರ್ವೋತ್ತಮ ಶೆಟ್ಟಿ, ಬೆಹರಿನ್ ಕನ್ನಡ ಸಂಘದ ರಾಜ್ ಕುಮಾರ್ ಉಪಸ್ಥಿತರಿರುವರು.