ರತ್ನಾಕರವರ್ಣಿ ವೇದಿಕೆಯಲ್ಲಿ ಸಂಗೀತ ಸಂಜೆ

ಮೂಡುಬಿದಿರೆ: ಸಂಗೀತ ಎಂದರೇನೇ ಹಾಗೆ ನಮ್ಮನ್ನೆಲ್ಲಾ ಗಂಧರ್ವ ಲೋಕಕ್ಕೆ ಕರೆದೊಯ್ಯವ ಒಂದು ಮಾಯಾಜಾಲ, ತನ್ನ ಕಲಾಶ್ರೀಮಂತಿಕೆಯಿಂದಲೇ ವಿಶ್ವದ ಗಮನ ಸೆಳೆದಿರುವ ನುಡಿಸಿರಿಯ ಸಂಜೆಯಲ್ಲಿ ರತ್ನಾಕರವರ್ಣಿ ವೇದಿಕೆ ಒಂದರ್ಥದಲ್ಲಿ ಗಾನಮಯವಾಗಿತ್ತು. ರಾಜ್ಯದ ಸುಪ್ರಸಿದ್ಧ ಗಾಯಕರ ದಂಡೇ ಅಲ್ಲಿ ನೆರೆದಿತ್ತು. ಒಂದಕ್ಕಿಂತ ಒಂದು ಸುಂದರ ಎನಿಸುವಂತೆ ಸಂಗೀತ ಸಂಜೆ ನಡೆಯಿತು.
ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ಗಾಯನ ಕಲಾರಸಿಕರನ್ನು ರಂಜಿಸಿತು. ಅದಲ್ಲದೆ ‘ಶಾರದೆ ದಯತೋರಿದೆ…. ಕರುಣೆಯ ಕಡಲಲ್ಲಿ…’ ಎಂದು ಅಜಯ್ ವಾರಿಯರ್ ಅವರ ಕಂಠದಲ್ಲಿ ಮೂಡಿಬಂದ ಗೀತೆ ಒಂದರೆಕ್ಷಣ ಇಡೀ ಸಭಾಗಂಣವನ್ನು ಮಂತ್ರಮುಗ್ಧಗೊಳಿಸಿತ್ತು. ಹೇಮಂತ್, ಎಂ.ಡಿ.ಪಲ್ಲವಿ, ದಿವ್ಯಾ ರಾಘವನ್ ಅವರ ಸಾಥ್ ಇಡೀ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು.
   ಒಟ್ಟಾರೆ ಚಿತ್ರಗೀತೆಗಳ ಸುಧೆ ನೆರೆದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು ಎರಡು ಗಂಟೆಗಳ ಕಾಲ ಜನತೆಯನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.