ಮೂಡು ಬಿದಿರೆ : ಒಬ್ಬ ನಟನಿಗೆ ಜನಪ್ರಿಯತೆಯೆಂಬುವುದು ದೊರಕಬೇಕಾದರೆ ಅದು ಕೇವಲ ಆತನ ನಟನೆಂದಲೇ ದೊರಕಬೇಕು ಹೊರತು ಮತ್ತ್ಯಾವುದರಿಂದಲೂ ಅಲ್ಲ, ಅದು ನಟರಾಜರಿಗೆ ದೊರೆತಿದೆ ಎಂದು ನಿರ್ದೇಶಕ, ರಂಗಭೂಮಿ ಕಲಾವಿದ ಬಿ.ಸುರೇಶ್ ಹೇಳಿದರು.
ಆಳ್ವಾಸ್ ನುಡಿಸಿರಿ ರತ್ನಾಕರವರ್ಣಿ ವೇದಿಕೆಯಲ್ಲಿ ಮೂರನೇ ದಿನ ನಡೆದ 'ಏಣಗಿ ನಟರಾಜ ನೆನಪು' ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಏಣಗಿ ನಟರಾಜ ರಂಗಭೂಮಿಯಲ್ಲಿ ಹುಟ್ಟಿ , ಅದರಲ್ಲೇ ಬೆಳೆದವರು. ಅಭಿನಯ ಅನ್ನೋದು ಅವರಿಗೆ ರಕ್ತಗತವಾಗಿ ಬಂದಿತ್ತು. ನಟನೆಯೇ ಪ್ರಧಾನವಾದ ರಂಗಭೂಮಿಯಲ್ಲಿ ಅವರು ಅಕ್ಷರಶಃ ಒಡೆಯರಾಗಿ ಮೆರೆದವರು ಹಾಗೂ ರಂಗಭೂಮಿಯಲ್ಲಿ ನಟನೇ ಪ್ರಧಾನ ಅನ್ನುವುದನ್ನು ಅನೇಕ ನಿರ್ದೇಶಕರಿಗೆ ತಿಳಿಸಿಕೊಟ್ಟ ಹೆಗ್ಗಳಿಕೆಯು ನಟರಾಜರದ್ದು.
ಅವರ ಅಭಿನಯದಲ್ಲಿ ಮಾತು ಎಷ್ಟೊಂದು ಶಕ್ತಿಶಾಲಿಯಾಗಿರುತ್ತಿತ್ತೆಂದರೆ ಅದು ಕೊನೆಯ ಸಾಲಿನ ಪ್ರೇಕ್ಷಕನಿಗೂ ಮುಂದಿನ ಸಾಲಿನ ಪ್ರೇಕ್ಷಕನಿಗೂ ಸಮಾನವಾಗಿ ತಲುಪುತ್ತಿತ್ತು. ಆದರೆ ಬರು ಬರುತ್ತಾ ಅವರ ಪ್ರಯೋಗ ಶೀಲತೆಗೆ ಸರಿಯಾದ ವೇದಿಕೆ ದೊರೆಯಲಿಲ್ಲ. ಅದುವೇ ಅವರಲ್ಲಿ ನಿಶ್ಯಕ್ತಿಯನ್ನುಂಟು ಮಾಡಿತು. ಕೊನೆಗೆ ನಮ್ಮಿಂದ ಅವರನ್ನು ಶಾಶ್ವತವಾಗಿ ದೂರ ಮಾಡಿಸಿತು. ಆದರೆ ಇಂದಿನ ನಟರು ಏಣಗಿ ನಟರಾಜರಿಂದ ಕಲಿಯುವಂತಹದ್ದು ಅನೇಕವಿದೆ. ಅಂತಹ ಅದ್ಭುತ ನಟ ಮತ್ತೊಮ್ಮೆ ಹುಟ್ಟಿ ಬರಲಿ ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಕೆ.ಎಸ್ .ನಿಸಾರ್ ಅಹಮದ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೊಹನ್ ಆಳ್ವ ಉಪಸ್ಥಿತರಿದ್ದರು.

