ನುಡಿಸಿರಿಗೆ ಬೆರಗು ತಂದ ಶಿಲ್ಪಕಲೆಗಳು

 ಮೂಡುಬಿದಿರೆ: ಕರ್ನಾಟಕವೆಂದರೆ ಶಿಲ್ಪಕಲೆಗಳ ತವರೂರು.ಬೇಲೂರು, ಹಳೆಬೀಡಿನ ವಾಸ್ತುಶಿಲ್ಪವನ್ನು ಕರ್ನಾಟಕವು ವಿಶ್ವಕ್ಕೆ ಕೊಡುಗೆಯಗಿ ನೀಡಿದೆ. ಇದರ ದ್ಯೋತಕವಗಿ ಜೈನಕಾಶಿ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಭಾರಿ ಉತ್ಸವದಿಂದ ನಡೆಯುತ್ತಿರುವ ಕನ್ನಡ ತೇರಿನ ಮಹಾಜಾತ್ರೆಯಲ್ಲಿಯೂ ಶಿಲ್ಪಕಲೆಗಳ ಮೆರುಗು ವಿಶ್ವನುಡಿಸಿರಿ ವಿರಾಸತ್‍ಗೆ ರಂಗುತಂದಿದೆ.
ಕಣ್ಣಿಗೆ ಮುದನೀಡುವ ಈ ಶಿಲ್ಪಕಲೆಗಳು ನೋಡುಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.ಪ್ರವೇಶದ್ವಾರದಿಂದ ಹಿಡಿದು ಅಲ್ಲಲ್ಲಿ ಕಾಣಸಿಗುವಂತಹ ಪುಟ್ಟ ಪುಟ್ಟ ಕಲಾಕೃತಿಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂದರೆ ತಪ್ಪಾಗಲಾರದು.
ಇಲ್ಲಿ ನಾನಾ ಬಗೆಯ ಮೂರ್ತಿಗಳನ್ನು ಬಲು ಚೆಂದವಾಗಿ ನಿರ್ಮಿಸಿದ್ದಾರೆ.ಅದರಲ್ಲೂ ತುಳುನಾಡ ಸೃಷ್ಟಿಕರ್ತ ಮುನಿ ಪರಶುರಾಮನ ಮೂರ್ತಿ ಮತ್ತು ತುಳುನಾಡಿನ ವೀರ ಶೂರರಾದ ಕೋಟಿ-ಚೆನ್ನಯರ ಶಿಲ್ಪಕಲೆಗಳಂತು ನೋಡುಗರ ಕಣ್ಣನ್ನು ತಂಪುಮಾಡುವಂತಿದೆ.
ಈ ಶಿಲ್ಪಕಲೆಗಳಲ್ಲಿ ಪ್ರಮುಖವಾದುದೆಂದರೆ ಋಷಿ ಶ್ರೇಷ್ಠ ಪರಶುರಾಮ,ತುಳುನಾಡಿನ ಹೆಮ್ಮೆಯ ಕುವರರಾದ ಕೋಟಿ-ಚೆನ್ನಯರು, ಅಹಿಂಸೆಯ ಮಹಾನ್ ಪ್ರತಿಪಾದಕ ಬಾಹುಬಲಿ ಹಾಗೂ ಗಣಪತಿಯ ಮೂರ್ತಿಗಳು ಸುಂದರವಾಗಿ ಕೆತ್ತಲ್ಪಟ್ಟಿವೆ. ಜೊತೆಗೆ ನಾವು ಇನ್ನಷ್ಟು ಪ್ರಾಮುಖ್ಯತೆಯನ್ನು ನೀಡುವ ಗಂಡುಕಲೆ ಎಂದೇ ಪ್ರಸಿದ್ದಿ ಪಡೆದಿರುವ ಯಕ್ಷಗಾನದ ಮೂರ್ತಿಗಳು ಮತ್ತಷ್ಟು ಶೋಭೆತರುತ್ತಿದೆ.
-ಶಿಲ್ಪಶ್ರೀ ಮನ್ನಡ್ಕ