ಮೂಡುಬಿದಿರೆ: ನಾವು ಸಾಮಾನ್ಯವಾಗಿ ಹಿಂದೂ ಪುರಾಣಗಳಲ್ಲಿ ನವಗ್ರಹ, ನವರತ್ನ, ನವದುರ್ಗೆ ಹಾಗೂ ನವರಸಗಳನ್ನು ಕೇಳಿರುತ್ತೇವೆ ಆದರೆ ನವ ವೇದಿಕೆಯನ್ನು ನೀವು ಕೇಳಿದ್ದೀರಾ? ಹೌದು ಇದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನಲ್ಲಿ ಕಾಣಸಿಗುತ್ತದೆ.
ಕಲೆ ಸಾಹಿತ್ಯಕ್ಕೆ ವಿಶ್ವ ವಿಖ್ಯಾತಿಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ವಿರಾಸತ್‍ಗೆ ಇದೀಗಾಗಲೇ ಅಮೃತ ಘಳಿಗೆ ಬಂದೊದಗಿದೆ. ಇಲ್ಲಿ ಒಂಭತ್ತು ವೇದಿಕೆಗಳು ಸಾಂಸ್ಕøತಿಕ ವರ್ಷಾಧಾರೆಗೆ ಸಜ್ಜುಗೊಂಡಿದೆ. ನವ ವೇದಿಕೆಯು ಆಳ್ವಾಸ್ ವಿರಾಸತ್ ವೇದಿಕೆ, ರತ್ನಾಕರವರ್ಣಿ ವೇದಿಕೆ, ಪಂಜೆಮಂಗೇಶರಾಯ ವೇದಿಕೆ, ನಾಡೋಜ ಎಚ್.ಎಲ್ ನಾಗೇಗೌಡ ವೇದಿಕೆ, ಪದ್ಮವಿಭೂಷಣ ವರ್ಗಿಸ್ ಕುರಿಯನ್ ವೇದಿಕೆ , ಕೆ.ವಿ ಸುಬ್ಬಣ್ಣ ಬಯಲು ರಂಗಮಂದಿರ ವೇದಿಕೆ, ಕು.ಶಿ ಹರಿದಾಸ ಭಟ್ಟ ವೇದಿಕೆ , ಸಂತ ಭದ್ರಗಿರಿ ಅಚ್ಯುತದಾಸ ವೇದಿಕೆ ಹಾಗೂ , ಡಾ,ವಿ.ಎಸ್ ಆಚಾರ್ಯ ವೇದಿಕೆಗಳಾಗಿ ನಾಮಾಂಕಿತಗೊಂಡಿವೆ.
ವೇದಿಕೆಯಲ್ಲಿ ಕಲಾಸರಸ್ವತಿಯ ಆರಾಧನೆ ಮಾಡಿ ಕಲೆಯನ್ನು ಒಲಿಸಿಕೊಂಡಿರುವ ಕಲಾಗಾರರ ಕಲೆಯು ಇಲ್ಲಿ ಪ್ರದರ್ಶನಗೊಳ್ಳುವುದಲ್ಲದೆ ಇದೀಗಾಗಲೇ ಕಲಾರಂಗಕ್ಕೆ ಪ್ರವೇಶ ಹೊಂದಿದ ನವ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಕರಾವಳಿಯ ಗಂಡುಕಲೆಯಾದ ಯಕ್ಷಗಾನ ಹಾಗೂ ತಾಳ ಮದ್ದಳೆ, ದಕ್ಷಿಣ ಭಾರತದಲ್ಲಿ ಪ್ರಸಿದ್ದವಾದ ಭರತನಾಟ್ಯ, ಉತ್ತರಭಾರತದ ಕಥಕ್, ಒಡಿಸ್ಸಿ, ದಾಸರ ಪದ, ವಚನಗಾಯನ ನೃತ್ಯ ರೂಪಕ, ಹರಿಕಥೆ,ಜಾನಪದ ನೃತ್ಯ-ಹಾಡು, ನಾದ ವಾದ್ಯ ಇಲ್ಲಿ ಮೈದೆಳೆದಿವೆ. ಇಷ್ಟು ಮಾತ್ರವಲ್ಲದೆ ಕೃಷಿಯು ನಮ್ಮ ಸಂಸ್ಕøತಿಯ ಕೈಗನ್ನಡಿ ಹಾಗಾಗಿ ಅದರ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮಗಳು ಇಲ್ಲಿ ನೆಲೆಗೊಂಡಿವೆ.
ಪಾಶ್ಚಾತ್ಯ ಸಂಸ್ಕøತಿಗೆ ವಾಲಿರುವ ಜನತೆಗೆ ಮತ್ತೆ ನಮ್ಮ ಸಂಸ್ಕøತಿಯತ್ತ ಎಚ್ಚೆತ್ತುಕೊಳ್ಳುವ ಕರೆಯೋಲೆಯಾಗಿದೆ ಈ ವಿಶ್ವ ನುಡಿಸಿರಿ ವಿರಾಸತ್. ಅದೇನೇ ಇರಲಿ ಇಲ್ಲಿ ಒಮ್ಮೆ ಕಲಾಸಕ್ತರು ಭೇಟಿಮಾಡಿದರೆ ಗಾಂಧರ್ವ ಲೋಕದ ಸಪ್ತ ಸ್ವರನೃತ್ಯಾವಳಿಯನ್ನು ಆಸ್ವಾದಿಸಿ, ಸಾಂಸ್ಕøತಿಕ ರಸ ಲೋಕದಲ್ಲಿ ಮಿಂದು ಎದ್ದಂತಹ ಅನುಭವವಾಗುವುದು ಖಂಡಿತ.
- ಅಕ್ಷತಾ ದೇವಾಡಿಗ

