ಇಂದು ಎಚ್‌.ಎಲ್‌. ನಾಗೇಗೌಡ ವೇದಿಕೆಯಲ್ಲಿ ಜಾನಪದ ಸಿರಿ

ಮೂಡುಬಿದಿರೆ: ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ - 2013ರ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಒಂದಾದ ನಾಡೋಜ ಎಚ್‌.ಎಲ್‌. ನಾಗೇಗೌಡರ ಹೆಸರಿನ ವೇದಿಕೆಯಲ್ಲಿ 'ಜಾನಪದ ಸಿರಿ' ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಜಾನಪದದ ಅಮೂಲಾಗ್ರ ತಿಳುವಳಿಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಪಡಿಸಲಿರುವ ಜನಪದ ಕಲಾವಿದರು ಕಲಾಸಕ್ತರಿಗೆ ಗಾಢ ಅನುಭವ ನೀಡಲಿದ್ದಾರೆ.

ಹಾವೇರಿ ಜಿಲ್ಲೆಯ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಅಂಬಳಿಕೆ ಹಿರಿಯಣ್ಣ ಅವರ ಆಶಯ ಭಾಷಣ, ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಜಾನಪದ ತಜ್ಞ ಡಾ| ವೀರಣ್ಣ ದಂಡೆಯವರ ಸಮಾರೋಪ ಭಾಷಣ ಜಾನಪದ ಸಿರಿಯ ವಿಶೇಷತೆ.

ಕರಾವಳಿ ಮತ್ತು ದಕ್ಷಿಣ ಕರ್ನಾಟಕ ಮೌಖೀಕ ಪರಂಪರೆ, ಮಧ್ಯ ಮತ್ತು ಉತ್ತರ ಕರ್ನಾಟಕ ಮೌಖೀಕ ಪರಂಪರೆ, ಕರಾವಳಿ ಜನಪದ ಕುಣಿತ, ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಜನಪದ ಕುಣಿತ, ದಕ್ಷಿಣ ಕರ್ನಾಟಕದ ಜನಪದ ಆರಾಧನೆ, ಮಧ್ಯ ಮತ್ತು ಉತ್ತರ ಕರ್ನಾಟಕದ ಜನಪದ ಆರಾಧನೆ, ದಕ್ಷಿಣ ಕರ್ನಾಟಕದ ಜನಪದ ವಾದ್ಯ, ಉತ್ತರ ಕರ್ನಾಟಕದ ಜನಪದ ವಾದ್ಯ, ಕರ್ನಾಟಕದ ಯಕ್ಷಗಾನ ಮತ್ತು ಸಮಾನಾಂತರ ಕಲಾಪ್ರಕಾರಗಳು ಎಂಬ ವಿಚಾರವಾಗಿ ಉಪನ್ಯಾಸ - ಪ್ರಾತ್ಯಕ್ಷಿಕೆ ನಡೆಯಲಿವೆ. ವಿದ್ವಾಂಸರಾದ ಡಾ| ಕೆ. ಚಿನ್ನಪ್ಪ ಗೌಡ, ಡಾ| ಪೂವಪ್ಪ ಕಣಿಯೂರು, ಡಾ| ಕೃಷ್ಣಮೂರ್ತಿ ಹನೂರು, ಡಾ| ರಂಗಾರೆಡ್ಡಿ ಕೋಡಿರಾಂಪುರ, ಡಾ| ಅಭಯ ಕುಮಾರ್‌, ಯದುಪತಿ ಗೌಡ, ಡಾ| ಚಕ್ಕೆರೆ ಶಿವಶಂಕರ್‌, ಡಾ| ಮೀರಸಾಬಿಹಳ್ಳಿ ಶಿವಣ್ಣ, ಪ್ರೊ| ಎ.ವಿ. ನಾವಡ, ಡಾ| ಅಶೋಕ ಆಳ್ವ, ಡಾ| ತೀ.ನಂ. ಶಂಕರ ನಾರಾಯಣ, ಡಾ| ಚಂದ್ರಪ್ಪ ಸೊಬಡಿ, ಡಾ| ಕುರುವ ಬಸವರಾಜ್‌, ಡಾ| ಕಿಶೋರ್‌ ಕುಮಾರ್‌ ಶೇಣಿ, ಡಾ| ಪಿ.ಕೆ. ಖಂಡೋಬ, ಡಾ| ಎಚ್‌.ಡಿ. ಪೋತೆ, ಡಾ| ಎಂ. ಪ್ರಭಾಕರ ಜೋಷಿ, ಉಜಿರೆ ಅಶೋಕ ಭಟ್‌, ಡಾ| ಶ್ರೀ ಶೈಲ ಹುದ್ದಾರ್‌, ಡಾ| ಬಸವಲಿಂಗಪ್ಪ ಹಿರೇಮಠ ವಿಚಾರ ಮಂಡನೆ ಮಾಡಲಿದ್ದಾರೆ.

ಕರ್ನಾಟಕದ ಜನಪದ ಮೌಖೀಕ ಪರಂಪರೆ, ಜನಪದ ಕುಣಿತ, ಜನಪದ ಆರಾಧನೆ, ಜನಪದ ವಾದ್ಯ, ತೆಂಕುತಿಟ್ಟು - ಬಡಗುತಿಟ್ಟು ಯಕ್ಷಗಾನ, ದೊಡ್ಡಾಟ, ಸಣ್ಣಾಟ ಹಾಗೂ ಶ್ರೀ ಕೃಷ್ಣ ಪಾರಿಜಾತ ಪರಂಪರೆಗೆ ಸಂಬಂಧಿಧಿಸಿದಂತೆ ಕರ್ನಾಟಕದ ವಿವಿಧ ತಂಡಗಳಿಂದ ಪ್ರಾತ್ಯಕ್ಷಿಕೆ ನಡೆಯಲಿವೆ.