ಇಂದಿನಿಂದ ವಿದ್ಯಾರ್ಥಿಸಿರಿ ವೈಭವ

ಮೂಡಬಿದಿರೆ: ಆಳ್ವಾಸ್‌ ವಿಶ್ವ ನುಡಿಸಿರಿಯಲ್ಲಿ ಭಾಗವಹಿಸಲು ಈಗಾಗಲೇ 10,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
    ನಾಲ್ಕೂ ದಿನಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟೋಪಾಚಾರದ ವ್ಯವಸ್ಥೆ ಮಾಡಲಾಗಿದೆ. 600ಕ್ಕೂ ಮಿಕ್ಕಿದ ಪುಸ್ತಕ ಮಳಿಗೆಗಳಿಂದ ಅತ್ಯುತ್ತಮ ಪುಸ್ತಕಗಳನ್ನು ಶಾಲಾ ಕಾಲೇಜುಗಳ ಗ್ರಂಥಾಲಯಕ್ಕೆ ಖರೀದಿಸುವ ಅವಕಾಶ, ಮಕ್ಕಳ ಕವಿ, ಸಾಹಿತಿಗಳನ್ನು ನೋಡುವ, ಮಾತನಾಡುವ ಸದವಕಾಶ ನುಡಿಸಿರಿಯಲ್ಲಿದೆ. ವಿದ್ಯಾರ್ಥಿಗಳ ವಿಚಾರಗೋಷ್ಠಿ, ಉಪನ್ಯಾಸ, ಕಥನ ಕುತೂಹಲ ಕಾರ್ಯಕ್ರಮಗಳಲ್ಲಿ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಏಳು ವರ್ಷ ವಯಸ್ಸಿನ ಹುಬ್ಬಳ್ಳಿಯ ಆದಿತ್ಯ ಜೋಷಿ, ಹೇಮಂತ ಜೋಷಿ ಸಹೋದರರಿಂದ ಕೊಳಲು - ತಬಲವಾದನ, ಮಡಿಕೇರಿಯ ಅಂಬಳೆ ಹೇರಂಬ, ಅಂಬಳೆ ಹೇಮಂತ ಅವಳಿ ಸಹೋದರರಿಂದ ಕೊಳಲು ವಾದನ, ಕೋಟದ ಅಶ್ವಿ‌ನಿ ಪ್ರಭು ಅವರಿಂದ ಭಾವಗೀತೆಯ ತಿರುವು-ಮುರುವು ಹಾಡು, ಮಂಗಳೂರಿನ ಸುನಾದ ಕೃಷ್ಣನಿಂದ ತಬಲಾ ವಾದನ, ಬೆಂಗಳೂರಿನ 10 ವರ್ಷದ ನಾಗಶ್ರೀ ಅವರಿಂದ ಮೃದಂಗವಾದನ, ಮಕ್ಕಳಿಂದಲೇ ಗಮಕ, ವಚನ, ಕೀರ್ತನೆ, ಭಾವಗೀತೆ, ಯಕ್ಷಲಹರಿ, ಮಕ್ಕಳ ನಾಟಕ, ಸುಗಮ ಸಂಗೀತ, ಶಿವರಾಮ ಕಾರಂತ, ಪಂಜೆಯವರ ಸಂಸ್ಮರಣೆ ಅಲ್ಲದೆ ವಿದ್ಯಾರ್ಥಿಸಿರಿ ವೇದಿಕೆಯಲ್ಲಿ ಕುಂ. ವೀರಭದ್ರಪ್ಪ, ತಾರಾನಾಥ ವರ್ಕಾಡಿ, ಚಂದ್ರಕಲಾ ನಂದಾವರ ಅವರಿಂದ ಕಥನ ಕುತೂಹಲ, ಜಯಂತ ಕಾಯ್ಕಿಣಿ, ಗಂಗಾಧರ ಬೆಳ್ಳಾರೆ, ಮಂಡ್ಯ ರಮೇಶ್‌, ಚಕ್ರವರ್ತಿ ಸೂಲಿಬೆಲೆಯವರಿಂದ ವಿಶೇಷ ಉಪನ್ಯಾಸಗಳು, ರಾಧೇಶ್‌ ತೋಳ್ಪಾಡಿ, ಎಳೆಯರ ಗೆಳೆಯ ಮುಳಿಯ, ಟಿ.ಎಸ್‌. ನಾಗರಾಜ ಶೆಟ್ಟಿ ಅವರಿಂದ ಹಿರಿಯರ ಕವಿಸಮಯ, ಭುವನೇಶ್ವರಿ ಹೆಗಡೆ, ಡುಂಢಿರಾಜ್‌ ಅವರ ಮಾತಿನ ಮಂಟಪ, ಬ್ರಹ್ಮಾವರದ ಪ್ರಧೀ ತಂಡದ ಗಾನ-ನೃತ್ಯ-ಚಿತ್ರ ಸಂಭ್ರಮ, ಆಳ್ವಾಸ್‌ ಮತ್ತು ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಾಸರಗೋಡು, ಉಪ್ಪಿನಕುದ್ರು ತಂಡಗಳ ಬೊಂಬೆಯಾಟ, ಡಿ.ಕೆ. ಚೌಟ, ಮೂರ್ತಿ ದೇರಾಜೆ, ಜೀವನ ರಾಂ ಸುಳ್ಯ ನಿರ್ದೇಶನದ ನಾಟಕಗಳು, ಸಾಲಿಗ್ರಾಮದ ಮಕ್ಕಳ ಯಕ್ಷಗಾನ, ಟಿ.ವಿ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಬಾಲ ಪ್ರತಿಭೆಗಳಿಂದ ಗೀತಲಹರಿ, ಪ್ರಸಿದ್ಧ ಜಾನಪದ ವಾದ್ಯ ಮತ್ತು ಜಾನಪದ ಕುಣಿತಗಳ ಪ್ರಾತ್ಯಕ್ಷಿಕೆ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳಿದ್ದು, ಅವುಗಳನ್ನು ವೀಕ್ಷಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಕೊಡಬೇಕೆಂದು ನುಡಿಸಿರಿಯ ರೂವಾರಿ ಡಾ| ಮೋಹನ ಆಳುÌ ರಾಜ್ಯದ ವಿವಿಧ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕರಲ್ಲಿ ವಿನಂತಿಸಿದ್ದಾರೆ.