ಗ್ರಾಮೀಣ ಝಲಕ್ ಸಾರಿದ ಕೃಷಿ ಮೇಳ.

ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಆಯೋಜಿಸಿದ ಕೃಷಿ ಮೇಳವು ವಿಶ್ವ ನುಡಿಸಿರಿಗೆ ಮೆರಗು ತಂದುಕೊಟ್ಟಿದ್ದು, ನೂತನ ಪೀಳಿಗೆಯ ಮನದಲ್ಲಿ ಹೊಸತನವಾಗಿ ಕಂಡುಬಂದು ಚಲನಚಿತ್ರಗಳಲ್ಲಿ ಮಾತ್ರ ನೋಡುತ್ತಿದ್ದ ಅದೆಷ್ಟೋ ದೃಶ್ಯಗಳು ಕೃಷಿ ಮೇಳದಲ್ಲಿ  ಗ್ರಾಮೀಣ ಝಲಕನ ಕಾಯಕ ಸಾಂಸ್ಕಂತಿ ಸಾರುವಂತಿತ್ತು.
ಕೃಷಿ ಮೇಳದಲ್ಲಿ ವಿವಿಧ ತಳಿಯ ಜಾನುವಾರುಗಳ, ಶ್ವಾನಗಳ, ಮೊಲಗಳ, ಕುಕ್ಕುಟಗಳ, ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಜನರ ಗಮನ ಸೆಳೆದಿವೆ. ಅಮೃತ್ ಮಹಲ್, ಮುರ್ರಾ, ಸಾಹಿವಾಲ, ಕಾಂಕ್ರೇಜ್, ಗಿರ್, ಹಳ್ಳಿಕಾರು, ಮಲೆನಾಡು ಗಿಡ್ಡ, ಜರ್ಸಿ, ಕಾರ್ ಪಾರ್ಕರ್, ಕಪಿಲಾ, ಥಾರ್ ಪಾರ್ಕರ್ ಮುಂತಾದ ತಳಿಯ ಜಾನುವಾರುಗಳು, ರಷ್ಯನ್ ವ್ಹೈಟ್, ಚಿಂಚಲ ತಳಿಯ ಮುದ್ದು ಮುದ್ದಾದ ಮೊಲಗಳು, ವಿವಿಧ ಜಾತಿಯ ಶ್ವಾನಗಳು, ಕುಕ್ಕುಟಗಳು ಈ ಪ್ರದರ್ಶನದಲ್ಲಿದ್ದು, ಇವು ಕೃಷಿ ಮೇಳಕ್ಕೆ ಭೇಟಿ ನೀಡುತ್ತಿರುವ ಜನರನ್ನು  ತಮ್ಮತ್ತ ಆಕಷಿಸುತ್ತಾ ನಾವೇ ನಿಜವಾದ ಭಾರತೀಯ ಕೃಷಿಪರಂಪರೆಯ ರಾಯಭಾರಿಗಳು ನಮ್ಮನ್ನು ಮರೆಯಬೇಡಿ ಎಂಬ ಭಾವನೆಗಳು ತೋರುತ್ತಿವೆ. 
ಸಹಸ್ರಾರು ಪುಷ್ಪಗಳಿಂದ ತಯಾರಿಸಿದ ಆನೆಗಳು, ಎಳೆನೀರು ಹಾಗೂ ಅಡಿಕೆಗಳಿಂದ ನಿರ್ಮಿಸಿದ ರಥ, ಭತ್ತದ ತೆನೆಗಳ, ಮೆಕ್ಕೆತೆನೆಗಳ(ಗೋವಿನ ಜೋಳ), ಅನಾನಸ್(ಪೈನಾಪಲ್) ಹಣ್ಣಿನ ಗುಡಿಸಲುಗಳು, ಸಿಮೆಂಟು ಮನೆಗಳೇಕೆ ನಿಸರ್ಗದತ್ತವಾದ ನಮ್ಮನ್ನೇ ನೋಡಿ ಆನಂದಿಸಿ ಎಂದು ವಿವಿಧ ಒಣ ಹುಲ್ಲಿಂದ ನಿರ್ಮಿಸಿದ ಮನೆಗಳು ಸಂದೇಶ ಸಾರುವಂತೆ ತೋರುತ್ತಿವೆ. ಆಲೆಮನೆ, ರೈತರು ಬಳಸುವ ಕೃಷಿ ಉಪಕರಣಗಳು ಕೃಷಿ ಮೇಳದ ವಿಶೇಷ ಆಕರ್ಷಣೆಗಳಾಗಿದ್ದು, ನೋಡುಗರಲ್ಲಿಯ ಕೆಲವು ಹಿರಿಯರು ತಮ್ಮ ಬಾಲ್ಯದಲ್ಲಿ ಕಂಡ ಅದ್ದನ,ಸೇರು, ಪಾವ್ ಸೇರು, ಗಿದ್ದನ ಸಲಕರಣೆಗಳು ನೆನಪಿಗೆ ಬರುವಂತೆ ಮಾಡಿದ್ದು ವಿಶೇಷವೆನಿಸಿತು.
ಕೃಷಿ ಮೇಳದಲ್ಲಿ ವಿವಿಧ ಪ್ರಕಾರದ ವಸ್ತುಗಳನ್ನು ಮಾರಾಟ ಮಾಡುವ 600 ಮಳಿಗೆಗಳಿದ್ದು, ಕೃಷಿ ಸಂಬಂಧಿತ ವಿವಿಧ ಯಂತ್ರೋಪಕರಣಗಳು ಜನಸ್ತೋಮವನ್ನು ಕೈ ಮಾಡಿ ಕರೆಯುತ್ತಿವೆ. ಕೃಷಿ ಮೇಳದಲ್ಲಿ ಜಾತ್ರೆಯ ಮಾದರಿಯಲ್ಲಿ ಎಲ್ಲಿ ನೋಡಿದಲ್ಲಿ ಜನರೇ ಕಾಣುವರು. ಕೃಷಿ ಸಂಸ್ಕøತಿಯನ್ನು ಅನಾವರಣಗೊಳಿಸಿದ ಈ ಕೃಷಿ ಮೇಳಕ್ಕೆ  ಜನಸಾಗರವೇ ಹರಿದು ಬರುತ್ತಿದ್ದು ಭಾರತೀಯ ಕೃಷಿ ಪದ್ದತಿ ರಕ್ಷಿಸಿ ಎಂಬ ಸಂದೇಶ ಸಾರುತ್ತಿರುವುದು ನಿಜವಾಗಿಯೂ ಮೆಚ್ಚಲೇಬೇಕು.
ಕೃಷಿ ಸಿರಿ, ಜನಪದ ಸಿರಿ, ವಿದ್ಯಾರ್ಥಿ ಸಿರಿ, ನುಡಿ ಸಿರಿ, ವಿರಾಸತ್‍ಗಳ ಸಂಗಮವಾಗಿ ಮೇಳೈಸಿದ ನಾಲ್ಕು ದಿನಗಳ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸುವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಜರುಗುವುದರೊಂದಿಗೆ ಹೊಸ ದಾಖಲೆ ನಿರ್ಮಾಣ ಮಾಡಿದೆ. ಈ ಎಲ್ಲದಕ್ಕೂ ಶ್ರಮಿಸಿ ಸ್ವಯಂ ಸೇವಕರ ಆ ಶ್ರಮ ನಿಜವಾಗಿಯೂ ಮೆಚ್ಚಲೇಬೇಕು.





ಮಲ್ಲಿಕಾರ್ಜುನ ಭೃಂಗಿಮಠ