ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್‌ಗೆ ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಶುಕ್ರವಾರದಂದು ವಿದ್ಯಾಗಿರಿಯಲ್ಲಿ ತೆನೆ ಹಬ್ಬವನ್ನು ಆಚರಿಸುವ ಮೂಲಕ ವಿಶ್ವ ನುಡಿಸಿರಿ ವಿರಾಸತ್‌ಗೆ ಮುಹೂರ್ತ ನೆರವೇರಿಸಲಾಯಿತು.ಕಳೆದ 3 ತಿಂಗಳ ಹಿಂದೆ ಬಾಕಿಮಾರು ಗದ್ದೆಯಲ್ಲಿ ಕಂಬಳದ ಕೋಣಗಳನ್ನು ಓಡಿಸಿ, ಇತರ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ನಂತರ ಪೂಕರೆ ಹಾಕಿ ನೇಜಿ ನೆಡಲಾಗಿತ್ತು. ಇದೀಗ ಆ ಗದ್ದೆಯಲ್ಲಿ ಸೊಂಪಾಗಿ ಬೆಳೆದು ಕಟಾವಿಗೆ ಸಿದ್ಧವಾಗಿರುವ ಭತ್ತದ ಪೈರಿನಿಂದ ತೆನೆಯನ್ನು ಮತ್ತು ಗದ್ದೆಯ ಸುತ್ತ ಬೆಳೆಸಿರುವ ತರಕಾರಿಯನ್ನು ತೆಗೆದು ಕಾಲೇಜಿನ ಮೊಗಸಾಲೆಯಲ್ಲಿ ಅಲಂಕರಿಸಿ ಹಾಲೆರೆದು ಪೂಜಿಸಿ ತೆನೆ ಹಬ್ಬ ಆಚರಿಸುವುದರ ಮೂಲಕ ವಿದ್ಯಾಗಿರಿಯ ಸಭಾಂಗಣ ಕ್ಕೆಲ್ಲಾ ತೆನೆ ಕಟ್ಟಿ ಕೃಷಿ ಮತ್ತು ಜಾನಪದ ಕಲೆಗಳಿಗೆ ಡಾ.ಮೋಹನ ಆಳ್ವರು ಸ್ಪರ್ಶ ನೀಡಿದರು.
ಬಳಿಕ ಮಾತನಾಡಿದ ಡಾ. ಮೋಹನ್ ಆಳ್ವ, ಇಲ್ಲಿ ಬೆಳೆದ ಭತ್ತವನ್ನು ನುಡಿಸಿರಿ ಆವರಣದಲ್ಲಿ ತುಪ್ಪೆನಿರ್ಮಿಸಿ ಪ್ರದರ್ಶನಕ್ಕಿಡಲಾಗುವುದು. ವಿಶ್ವ ನುಡಿಸಿರಿ ವಿರಾಸತ್ ಸಂದರ್ಭದಲ್ಲಿ ಇದೇ ಬಾಕಿಮಾರು ಗದ್ದೆಯಲ್ಲಿ ಮತ್ತೆ ಉಳುಮೆ, ಕಂಬಳ ಹಾಗೂ ಸುಗ್ಗಿ ಬೆಳೆಯ ನಾಟಿ ನಡೆಯಲಿದೆ ಎಂದ ಅವರು, ಈ ಮೂಲಕ ವಿದ್ಯಾರ್ಥಿಗಳಿಗೆ ಕೃಷಿ ಸಂಸ್ಕೃತಿಯ ಚಟುವಟಿಕೆಯನ್ನು ತೋರಿಸಲಾಗುವುದು ಎಂದು ಅವರು ತಿಳಿಸಿದರು.
ಮೂಡುಬಿದಿರೆ ತುಳು ಕೂಟದ ಕಾರ್ಯಾಧ್ಯಕ್ಷ ಚಂದ್ರಹಾಸ ದೇವಾಡಿಗ, ಕೃಷಿಕ ಸುಧಾಕರ ಪೂಂಜಾ, ರೈತ ಸಂಘದ ಮುಖಂಡ ಪೌಸ್ತಿನ್ ಸಿಕ್ವೇರ ಸಾಂಪ್ರಾದಾಯಿಕ ಉಡುಪಿನಲ್ಲಿ ಗದ್ದೆಯಿಂದ ಭತ್ತದ ತೆನೆಯನ್ನು ತೆಗೆದರು.
ಚೌಟರ ಅರಮನೆಯ ಕುಲದೀಪ್ ಎಂ., ವಲಯ ರೈತ ಸಂಘದ ಅಧ್ಯಕ್ಷ ಎಚ್. ಧನಕೀರ್ತಿ ಬಲಿಪ, ಮೂಡು ಬಿದಿರೆ ಜೈನ ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಶ್ರೀನಿವಾಸ ಆಳ್ವ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಯೋಜನಾಧಿಕಾರಿ ಮುರಳೀಧರ್, ಜಿಪಂ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಜಿಪಂ ಸದಸ್ಯೆ ಸುನೀತಾ ಸುಚರಿತ ಶೆಟ್ಟಿ, ಪಿ.ಕೆ. ರಾಜು ಪೂಜಾರಿ, ಆಳ್ವಾಸ್ ಪಿಆರ್‌ಓ ಚೆಂಗಪ್ಪ ಎ.ಡಿ., ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ವೌಲ್ಯ ಜೀವನ್ ಮತ್ತಿತರರು ಉಪಸ್ಥಿತರಿದ್ದರು.


