ಆಳ್ವಾಸ್‌ ವರ್ಣಸಿರಿ ಅಂತಾರಾಷ್ಟ್ರೀಯ ಚಿತ್ರಕಲಾವಿದರ ಶಿಬಿರ ಸಮಾರೋಪ

ಮೂಡಬಿದಿರೆ: ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ ಅಂಗವಾಗಿ ಡಿ. 5ರಿಂದ 8ರ ವರೆಗೆ ವಿದ್ಯಾಗಿರಿಯಲ್ಲಿ ನಡೆದ 'ಆಳ್ವಾಸ್‌ ವಿಶ್ವ ವರ್ಣ ವಿರಾಸತ್‌ - 2013' ಅಂತಾರಾಷ್ಟ್ರೀಯ ಚಿತ್ರಕಲಾವಿದರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಇತ್ತಿಚಿಗೆ ಜರುಗಿತು. ಮುಖ್ಯ ಅತಿಥಿಯಾಗಿ ಶ್ರೀನಗರದ ಚಿತ್ರಕಲಾವಿದೆ ಶಮಾ ಸೋಂಧಿ,  ಕಲಾವಿದ ಕಾಸರಗೋಡಿನ ಪಿ.ಎಸ್‌. ಪುಣಿಚಿತ್ತಾಯ ಪಾಲ್ಗೊಂಡು ಮಾತನಾಡಿದರು.
     ಭಾಗವಹಿಸಿದ 50 ಮಂದಿ ದೇಶ ವಿದೇಶಗಳ ಕಲಾವಿದರ ಪರವಾಗಿ ಗೋವಾದ ಅಜಯ್‌ ಸಿಂಗ್‌ ಕೋತಾವಲೆ, ಅಲ್ಲಹಾಬಾದ್‌ನ ಡಾ| ನಿರಂಜನ ಕುಮಾರ್‌ ಸಿಂಗ್‌ ಹಾಗೂ ಬೆಂಗಳೂರಿನ ಪ. ಸ. ಕುಮಾರ್‌ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
        ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್‌ ಕಾಲೇಜಿನ ಪ್ರಾಚಾರ್ಯ ಪ್ರೊ| ಕುರಿಯನ್‌ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು. ಕಲಾವಿದರ ಸ್ಪರ್ಶ, ಕೈಂಕರ್ಯದಿಂದ ವಿದ್ಯಾಗಿರಿ ತನ್ನ ಆಂತರಿಕ ಶಕ್ತಿ ವೃದ್ಧಿಸಿಕೊಂಡಿದೆ; ನೋಟಕರ ಮನಸ್ಸನ್ನು ಸಂವೇದನಶೀಲವಾಗಿಸಿದೆ ಎಂದು ಅವರು ಹೇಳಿದರು.
     ಶಿಬಿರದ ಕಾರ್ಯದರ್ಶಿ ಗಣೇಶ ಸೋಮಯಾಜಿ ಸ್ವಾಗತಿಸಿದರು. ಸಂಚಾಲಕರಾದ ಭಾಸ್ಕರ ನೆಲ್ಯಾಡಿ, ಶರತ್‌ಕುಮಾರ್‌ ಶೆಟ್ಟಿ, ವಿಪಿನ್‌ಲಾಲ್‌ ಮೊದಲಾದವರು ಉಪಸ್ಥಿತರಿದ್ದರು. ಭವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ನಿರ್ದೇಶಕ ಚಿ.ಸು. ಕೃಷ್ಣ ಶೆಟ್ಟಿ ವಂದಿಸಿದರು.