ಸಾಹಿತಿಗಳ ಪಲ್ಲಕ್ಕಿ ಮೆರವಣಿಗೆ ಬೇಡ: ವಿಶ್ವೇಶ ತೀರ್ಥ ಸ್ವಾಮಿಜಿ ಸಲಹೆ













ಮೂಡುಬಿದಿರೆ: ಸಾಹಿತಿಗಳನ್ನು ಸ್ವಾಮಿಜಿಗಳನ್ನು ಆಳು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಬದಲು ಸಾಹಿತ್ಯ ಸರಸ್ವತಿಯನ್ನು ಪಲ್ಲಕ್ಕಿಯಲ್ಲಿ ಒಯ್ಯ ಬೇಕು ಎಂದು ಉಡುಪಿಯ ಅದೋಕ್ಷಜ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಸಲಹೆ ನೀಡಿದರು.
     ಅವರು ಬುಧವಾರದಂದು ಮಧ್ಯಾಹ್ನ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಸಕಲ ವ್ಯವಸ್ಥೆಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತಿದ್ದರು.
   ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಮತ್ತು ಅದನ್ನು ನಿರ್ಧರಿಸಲು ಆಳ್ವರು ಮತ್ತು ಅವರ ತಂಡ ಸ್ವತಂತ್ರವಾಗಿದೆ ಆದರೆ ಆಳುಗಳಿಂದ ಹೊರಿಸಿಕೊಳ್ಳುವ ಪಲ್ಲಕ್ಕಿ ಮೆರವಣಿಗೆಯನ್ನು ಈ ವರ್ಷದಿಂಧ ನಿಲ್ಲಿಸಲು ನಿರ್ಧರಿಸಿದ್ಧೇವೆ ಎಂದು ಅವರು ಹೇಳಿದರು
   ಭಾಷೆ, ಕಲೆಗಳ ಬಗ್ಗೆ ಅಭಿಮಾನ ಪ್ರೀತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಮ್ಮ ದೇಶದ ನಿಜವಾದ ಸಾಂಸ್ಕೃತಿಕ ಸಂಪತ್ತನ್ನು ಬೆಳೆಸಿ ಉಳಿಸಿ ಕೊಳ್ಳಲು ಸಾಧ್ಯ ಎಂದ ಅವರು ಭಾಷೆ, ಸಂಸ್ಮೃತಿ, ಕಲೆಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಡಾ.ಮೋಹನ ಆಳ್ವ ಅವರು ನಾಡು ನುಡಿಯ ಸೇವೆಯನ್ನು ನಿರಂತರ ಮಾಡುತ್ತಾ ಬಂದಿದ್ದಾರೆ ಎಂದು ಅವರು ಪ್ರಶಂಸಿಸಿದರು.
    ಕೆಲ ಬುದ್ಧಿ ಜೀವಿಗಳು ಸ್ವಾಮಿಗಳನ್ನು ಕೋಮುವಾದಿಗಳೆಂದು ಬಿಂಬಿಸುತ್ತಾರೆ ಆದರೆ ಎಲ್ಲಾ ಧರ್ಮದ ಜನರ ಒಳ್ಳೆಯ ರೀತಿಯಲ್ಲಿ ಬದುಕ ಬೇಕೆಂದು ಬಯಸುವ ನಾವು ಜಾತ್ಯಾತೀತರಲ್ಲಿ ಜಾತ್ಯಾತೀತರು ಎಂದ ಅವರು ಅಡ್ಡಪಲ್ಲಕ್ಕಿಯನ್ನು ವಿರೋಧಿಸಿಕೊಂಡು ಬಂದಿರುವ ಕೆಲ ಸಾಹಿತಿಗಳು ಅವಕಾಶ ಸಿಕ್ಕಾಗ ಅಡ್ಡ ಪಲ್ಲಕ್ಕಿ ಏರಿದ್ದಾರೆ ಎಂದು ಲಘು ದಾಟಿಯಲ್ಲಿ ಕುಟುಕಿದರು.
    ಇಡೀ ಸಮುದಾವನ್ನು ಕುಟುಂಬದ ಹಾಗೆ ಕಾಣುವ ಡಾ. ಮೋಹನ ಆಳ್ವ ಅವರಲ್ಲಿ ಆಶಯ, ಆಶ್ರಯ, ನೊಂದವರಿಗೆ ಸಮಾದಾನ ನೀಡುವ ಉತ್ತಮ ಗುಣಗಳಿವೆ. ಅದರ ಸತ್ಪಲವೇ ಈ ವಿಶ್ವ ನುಡಿ ವಿರಾಸತ್ ಎಂದು ಆಶೀರ್ವಚನ ನೀಡಿದ ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರು ಅಭಿಪ್ರಾಯ ಪಟ್ಟರು.
    ಕನ್ನಡಿಗರು ಹೃದಯ ಶ್ರೀಮಂತಿಕೆಗೆಹೆಸರಾದವರು. ಲೋಕಕ್ಕೆ ಶಾಂತಿ ನೀಡುವ ಕೆಲಸ ನಮ್ಮಿಂದಾಗಬೇಕು. ಸಾಹಿತ್ಯ ಗ್ರಂಥಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯ ಬೇಕು ಎಂದು ಅವರು ಸಲಹೆ ನೀಡಿದರು.
      ಆಳ್ವಾಸ್ ವಿಶ್ವನುಡಿ ಸಿರಿ ವಿರಾಸತ್ ಈ ನಾಲ್ಕು ದಿನ ಮಾತ್ರ ನಡೆಯುತ್ತಿಲ್ಲ ಆಳ್ವಾಸ್‌ನಲ್ಲಿ ಅದು ವರ್ಷದ ೩೬೫ ದಿನಗಳ ಕಾಲವೂ ನಡೆಯುತ್ತಾ ಇದೆ. ಹಾಗಾಗಿ ನಮಗೆ ಹೆಮ್ಮೆ. ಅವರ ಸಾಧನೆ ಸರ್ವತ್ರ ಪ್ರಶಂಸನೀಯ. ಡಾ. ಮೋಹನ ಆಳ್ವ ಇಂದಿನಿಂದ ಡಾ. ವಿಶ್ವ ಮೋಹನ ಆಳ್ವ ಅಗಿದ್ದಾರೆ. ಅವರ ಅಪೂರ್ವ ವಸ್ತು ಸಂಗ್ರಹಾಲಯ ವಿಶ್ವ ವಸ್ತು ಸಂಗ್ರಹಾಲಯ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಗುರುಗಳಾದ ಡಾ. ಅಲೋಶಿಯೇಸ್ ಪಾವ್ಲಾ ಡಿಸೋಜಾ ಹೇಳಿದರು.

     ಆಳ್ವಾಸ್ ವಿಶ್ವ ವಿರಾಸತ್ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಬಾಗಲಕೋಟೆಯ ಇಂದ್ರಕುಮಾರ್ ಅವರನ್ನು ಸಾಂಕೇತಿಕವಾಗಿ ಸನ್ಮಾನಿಸಲಾಯಿತು.
    ಕಟೀಲಿನ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಮಾತನಾಡಿ ಡಾ. ಮೋಹನ ಏನು ಮಾಡಿಯಾನು ಎಂಬವರಿಗೆ ಏನೂ ಮಾಡಿಯಾನು ಎಂದು ಮಾಡಿ ತೋರಿಸಿದ್ದಾನೆ ಎಂದು ಪ್ರಶಂಸಿದರು.
    ನಿಷ್ಠೆ ಮತ್ತು ಸತತ ಸಾಧನೆಯ ಛಲವಿದ್ದರೆ ಮನುಷ್ಯ ಏನು ಸಾಧಿಸ ಬಹುದು ಎಂಬುದಕ್ಕೆ ಮೋಹನ ಆಳ್ವ ಮಾದರಿಯಾಗಿದ್ದಾರೆ, ಸಮ್ಮೇಳನವನ್ನು ನೋಡಿ ಅನುಭವಿಸಿ, ಸಾಧ್ಯವಾದರೆ ಸಹಾಯ ಮಾಡಿ ಎಂದ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಕಕ್ಷ ಹರಿಕೃಷ್ ಪುನರೂರು ಅವರು ವಿಶ್ವ ನುಡಿಸಿರಿಗೆ ಶುಭ ಹಾರೈಸಿದರು.
    ವೇದಿಕೆಯಲ್ಲಿ ಸಚಿವ ಅಭಯಚಂದ್ರ ಜೈನ್, ಮಾಜಿ ಸಚಿವ ಕೆ,ಅಮರನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಂಡಾರು ಗುಣಪಾಲಹೆಗ್ಡೆ ಅವರು ವಂದಿಸಿದರು.