ಮೂಡಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 (ಡಿ. 19-22)ರ ಉದ್ಘಾಟಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಪದ್ಮಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಸರ್ವಾನುಮತಿಯಿಂದ ಆರಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಸಾಹಿತ್ಯ, ಕೃಷಿ, ಜಾನಪದ ಹಾಗೂ ವಿದ್ಯಾರ್ಥಿ ಸಿರಿ ಎಂಬ ನಾಲ್ಕು ಆಯಾಮಗಳಲ್ಲಿ ಸಮ್ಮೇಳನ ನಡೆಯಲಿದ್ದು, ಈ ಎಲ್ಲ ರಂಗಗಳಲ್ಲೂ ಡಾ| ವೀರೇಂದ್ರ ಹೆಗ್ಗಡೆ ಅವರು ಪ್ರೇರಕ, ಪ್ರೋತ್ಸಾಹಕ ಶಕ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಧರ್ಮಸ್ಥಳದಲ್ಲಿ 81 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಾ ಬಂದಿದ್ದು, ಹೆಗ್ಗಡೆಯವರು ಈ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿದವರು. 1979ರಲ್ಲಿ ಧರ್ಮಸ್ಥಳದಲ್ಲೇ ಅ.ಭಾ. 51ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ, ಮಂಗಳೂರಿನಲ್ಲಿ, ಮೂಡಬಿದಿರೆಯಲ್ಲಿ ಈ ಹಿಂದೆ ನಡೆದ ಅ.ಭಾ. ಕ.ಸಾ. ಸಮ್ಮೇಳನ ಸಮಿತಿಗಳ ಗೌರವಾಧ್ಯಕ್ಷರಾಗಿ, ರಾಜ್ಯದ ವಿವಿಧೆಡೆ ನಡೆದಿರುವ ಸಾಹಿತ್ಯ ಸಮ್ಮೇಳನಗಳಲ್ಲಿ ಊಟೋಪಚಾರದ ಹೊಣೆ ನಿರ್ವಹಿಸಿದ ಹೆಗ್ಗಡೆಯವರು 2009ರಲ್ಲಿ ಉಜಿರೆಯ ವಿಶ್ವ ತುಳು ಸಮ್ಮೇಳನದ ನೇತೃತ್ವ ವಹಿಸಿದವರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ಔಷಧ ದಾನ, ವಿದ್ಯಾದಾನ, ಅಭಯದಾನಾದಿಗಳನ್ನು ಅನೂಚಾನವಾಗಿ ನಡೆಸುತ್ತ, ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಾಧನ ಪ್ರತಿಷ್ಠಾನದ ಮೂಲಕ ವಿನಾಶದಂಚಿನಲ್ಲಿರುವ ತಾಳೆಗರಿ, ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಪೂರ್ವಕೃತಿಗಳ ಸಂಶೋಧನೆ, ಪ್ರಕಟನೆ, ಸಾಹಿತ್ಯ ಸಂಪಾದನೆ ಬಗ್ಗೆ ವಿಚಾರಸಂಕಿರಣ, ದಾಸ ಸಾಹಿತ್ಯ ಸಂಸ್ಕೃತಿ ಸಮ್ಮೇಳನ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದ ಕೃಷಿ ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆ, ಮದ್ಯವ್ಯಸನ ಮುಕ್ತ ಸಮಾಜ ರೂಪಣೆಗಾಗಿ ಮದ್ಯವರ್ಜನ ಶಿಬಿರಗಳ ಆಯೋಜನೆ, ಎಸ್‌ಡಿಎಂ ಶಿಕ್ಷಣ ಟ್ರಸ್ಟ್‌ನ ಮೂಲಕ ನಾಡಿನಾದ್ಯಂತ ಗುಣಮಟ್ಟದ ಶಿಕ್ಷಣಾಲಯಗಳ ಸ್ಥಾಪನೆ, ತೆಂಕುತಿಟ್ಟಿನ ಯಕ್ಷಗಾನ ಮೇಳ, ಯಕ್ಷಗಾನ ತರಬೇತಿ ಕೇಂದ್ರಗಳ ಮೂಲಕ ಯಕ್ಷಗಾನ ಅಭಿವೃದ್ಧಿಗೆ ಕೊಡುಗೆ ನೀಡಿರುವ ಹೆಗ್ಗಡೆಯವರು ಮಂಜೂಷ ವಸ್ತು ಪ್ರದರ್ಶನವನ್ನು ವ್ಯವಸ್ಥಿತವಾಗಿ ರೂಪಿಸಿದವರು.
ಸ್ವತಃ ಉತ್ತಮ ಮಾತುಗಾರರು, ಲೇಖಕರು, ಮಹತ್ವದ ಛಾಯಾಚಿತ್ರಗ್ರಾಹಕರು, ವರ್ಧಮಾನ ಪ್ರಶಸ್ತಿ ಪೀಠದ ಸ್ಥಾಪಕಾಧ್ಯಕ್ಷರಾಗಿ 11 ವರ್ಷ ಪೀಠವನ್ನು ಮುನ್ನಡೆಸಿದವರು. ಶಾಂತಿವನ ಟ್ರಸ್ಟ್ ಮೂಲಕ ಲಕ್ಷಾಂತರ ಮಕ್ಕಳಿಗೆ ನೈತಿಕ ಶಿಕ್ಷಣದ ಪುಸ್ತಕಗಳನ್ನು ಪ್ರಕಟಿಸಿ ವಿತರಿಸಿ, ಸ್ಪರ್ಧೆಗಳನ್ನು ಆಯೋಜಿಸುತ್ತಿರುವವರು. ಆಳ್ವಾಸ್ ನುಡಿಸಿರಿ, ವಿರಾಸತ್ ಕಾರ್ಯಕ್ರಮಗಳಿಗೆ ನಿರಂತರವಾಗಿ ಸಾಕ್ಷಿಯಾಗಿ, ಪ್ರೋತ್ಸಾಹ, ಸಹಕಾರ ನೀಡುತ್ತ ಬಂದಿರುವರು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಎಂದು ಆಳ್ವರು ತಿಳಿಸಿದರು.

