ಆಳ್ವಾಸ್ ನುಡಿಸಿರಿ: ಅಧ್ಯಕ್ಷರಾಗಿ ಡಾ. ಸಿದ್ದಲಿಂಗಯ್ಯ, ಉದ್ಘಾಟಕರಾಗಿ ನಾ.ಡಿಸೋಜ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 11ನೇ ವರ್ಷದ ಆಳ್ವಾಸ್ ನುಡಿಸಿರಿ- 2014 'ಕರ್ನಾಟಕ: ವರ್ತಮಾನದ ತಲ್ಲಣಗಳು' ಎಂಬ ಮುಖ್ಯ ಪರಿಕಲ್ಪನೆಯಲ್ಲಿ  ನ.14ರಿಂದ 16ರ ವರೆಗೆ ಇಲ್ಲಿನ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. 

ತಮ್ಮ ಸಾಹಿತ್ಯದ ಮೂಲಕ ದನಿಯಿಲ್ಲದ ಜನರ ಸ್ವಾಭಿಮಾನವನ್ನು ಎಚ್ಚರಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ನಾಡಿನ ಹೆಸರಾಂತ ಕವಿ, ನಾಡೋಜ ಡಾ. ಸಿದ್ದಲಿಂಗಯ್ಯ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಲಿರುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. 

ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಅಲಂಕರಿಸಿದ್ದ ನಾಡಿನ ಹೆಮ್ಮೆಯ ಸಾಹಿತಿ, ಹಿರಿಯ ಕಾದಂಬರಿಕಾರ ನಾ.ಡಿಸೋಜ ನುಡಿಸಿರಿ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು. 

ಕಳೆದ 10 ವರ್ಷಗಳಿಂದ ನಿರಂತರವಾಗಿ ನಾಡು- ನುಡಿ- ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಆಳ್ವಾಸ್ ನುಡಿಸಿರಿಯನ್ನು ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನೂ, ಸಂಸ್ಕೃತಿಯ ಪ್ರೀತಿ, ಗೌರವಗಳನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಹಿಂದಿನ ವರ್ಷದ ದಶಮಾನೋತ್ಸವ ಸಂಭ್ರಮವನ್ನು 'ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013' ಎಂದು ಆಚರಿಸಿ ಕನ್ನಡದ ಖ್ಯಾತಿಯನ್ನು ಜಗದಗಲಕ್ಕೆ ಪಸರಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡಿದೆ. ದಶಮಾನೋತ್ಸ ಆಚರಿಸಿದ ಮೇಲೂ ಆಳ್ವಾಸ್ ನುಡಿಸಿರಿ ತನ್ನ ನಿರಂತರತೆ ಕಾಯ್ದಕೊಂಡು 2014ರ ಸಂಭ್ರಮಕ್ಕಾಗಿ ಕಾರ್ಯತತ್ಪರವಾಗಿದೆ ಎಂದರು. 

ವಿದ್ಯಾರ್ಥಿ ಪ್ರತಿನಿಧಿಗಳಿಗೆ ಸಂಪೂರ್ಣ ಉಚಿತವಾಗಿ, ಇತರ ಪ್ರತಿನಿಧಿಗಳಿಗೆ 100 ರೂ. ಪ್ರತಿನಿಧಿ ಶುಲ್ಕದೊಂದಿಗೆ ಮೂರು ದಿನಗಳ ಕಾಲ ವಸತಿ, ಊಟೋಪಚಾರದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ನಾಡಿನ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು, ಕವಿಗಳು ಭಾಗವಹಿಸುವ ಈ ಸಮ್ಮೇಳನವನ್ನು ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. 

ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ನಾ.ದಾ. ಶೆಟ್ಟಿ, ಕಾರ್ಯದರ್ಶಿಗಳಾದ ಉದಯ ಮಂಜುನಾಥ ಮತ್ತು ವೇಣುಗೋಪಾಲ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.