15ರಂದು ಆಳ್ವಾಸ್ ನುಡಿಸಿರಿಯಲ್ಲಿ ’ಕೊಂಕಣಿ ಸಿರಿ’

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನ.14ರಿಂದ 16ರ ವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿರುವ 'ಆಳ್ವಾಸ್ ನುಡಿಸಿರಿ-2014'ಕ್ಕೆ ಪೂರಕವಾಗಿ ಆಳ್ವಾಸ್ ಕೊಂಕಣಿ ಸಿರಿ- 2014 ನ.15ರಂದು ವಿದ್ಯಾಗಿರಿಯಲ್ಲಿ ನಡೆಯಲಿದೆ. 

ನ.15 ರ ಸಂಜೆ 5.30ರಿಂದ 10.30ರವರೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ಈ ಆಳ್ವಾಸ್ ಕೊಂಕಣಿ ಸಿರಿ ನಡೆಯುವ ವೇದಿಕೆಗೆ ವಿಲ್ಫಿ ರೆಬಿಂಬಸ್ ವೇದಿಕೆ ಎಂದು ಹೆಸರಿಸಲಾಗಿದ್ದು ಬಿ.ವಿ.ಬಾಳಿಗಾ ದ್ವಾರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಕೊಂಕಣಿ ಸಿರಿ ಮೂಡಿ ಬರಲಿದೆ. 

ಸಂಜೆ 5.30ರಿಂದ ಮೂಡುಬಿದಿರೆಯ ನೂರು ಗಾಯಕರಿಂದ ಸ್ವಾಗತಗೀತೆಯೊಂದಿಗೆ ಆರಂಭವಾಗುವ ಕೊಂಕಣಿ ಸಿರಿಯನ್ನು ಮಂಗಳೂರಿನ ಬಿಷಪ್ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಲಿದ್ದಾರೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರೋಯ್ ಕ್ಯಾಸ್ತೆಲಿನೋ ಮುಖ್ಯ ಅತಿಥಿಯಾಗಿ ಹಾಗೂ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎರಿಕ್ ಒಝಾರಿಯೋ, ಕಾಸರಗೋಡು ಚಿನ್ನಾ, ಕುಡುಬಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಎಂ.ರಾಮ ಗೌಡ, ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಭಾಗವಹಿಸಲಿದ್ದಾರೆ. 

ಮಂಗಳೂರಿನ ಮಾಂಡ್ ಸೊಭಾಣ್, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಭಟ್ಕಳದ ಅಂಜುಮಾನ್ - ಇ-ರಹಮ್ಮಾನಿಯಾ ಅಹಮ್ಮದೀಯ ಸುನ್ನಿ ಟ್ರಸ್ಟ್, ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ, ಗಿನ್ನೆಸ್ ದಾಖಲೆಯ ಈಜುಗಾರ ಗೋಪಾಲ ಖಾರ್ವಿ ಅವರಿಗೆ ಸಮ್ಮಾನ ಕಾರ್ಯಕ್ರಮವಿದೆ. 

ಬಳಿಕ ಕೊಂಕಣಿ ನಿನ್ನೆ ಇಂದು ಮತ್ತು ನಾಳೆ ಪರಿಕಲ್ಪನೆಯಲ್ಲಿ ಕೊಂಕಣಿ ಕಲೆ ಮತ್ತು ಸಂಸ್ಕೃತಿ ಕುರಿತು ಪ್ರೊ. ಜಯವಂತ ನಾಯಕ್, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತು ಪ್ರೊ. ವಿನ್ಸೆಂಟ್ ಆಳ್ವ ಪಾಂಬೂರು ಅವರಿಂದ ಉಪನ್ಯಾಸ ನಡೆಯಲಿದೆ. 

ಸಂಜೆ 7ರಿಂದ 10.30ರವರೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಡಪದವಿನ ಕುಡ್ಮಿ ಜಾನಪದ ಕಲಾವೇದಿಕೆಯಿಂದ ಕುಡ್ಮಿ ಗುಮ್ಟಾಂ ತ್ತು ಕೋಲಾಟ, ಭಟ್ಕಳದ ಖಾರ್ವಿ ಕಲಾಮಾಂಡ್ ವತಿಯಿಂದ ಖಾರ್ವಿ ಕಲಾ ಪ್ರದರ್ಶನ, ಮುಂಡಗೋಡದ ಸಿದ್ಧಿ ಕಲಾತಂಡದಿಂದ ಸಿದ್ಧಿ ಕಲಾ ಪ್ರದರ್ಶನ, ಶೀರೂರಿನ ನಾಕುದಾ ದಫ್ ಸಮಿತಿ ವತಿಯಿಂದ ದಾಲ್ದಿ-ದಫ್, ಕೊಂಕಣಿ ಸಾಂಸ್ಕೃತಿಕ ಸಂಘದಿಂಧ ಜಿ.ಎಸ್.ಬಿ. ಸಾಂಸ್ಕೃತಿಕ ಪ್ರದರ್ಶನ, ಕೊಂಕ್ಣಿ ಮ್ಹಜೊ ಫುಡಾರ್ -ಕಲಾಕುಲ್ ತಂಡದಿಂದ ಬೀದಿ ನಾಟಕ, ಮಂಗಳೂರಿನ ನಾಚ್ ಸೊಭಾಣ್ ವತಿಯಿಂದ ಕೊಂಕಣಿ ನೃತ್ಯ , ಕಾರ್ಕಳದ ಮಹಾಲಕ್ಷ್ಮೀ ಶೆಣೈ ಅವರಿಂದ ಹಾಡುಗಾರಿಕೆ ನಡೆಯಲಿದೆ. 

ಭಾಷಾ ಸಾಮರಸ್ಯ ಇಂದಿನ ಬಹು ಮುಖ್ಯ ಅಗತ್ಯವಾಗಿರುವುದರಿಂದ ಪ್ರಾದೇಶಿಕ ಭಾಷೆಯ ಜನರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶದ ಮೂಲಕ ಪ್ರಧಾನ ಭಾಷೆಯಾದ ಕನ್ನಡದ ಜತೆಗೆ ಅನುಸಂಧಾನ ನಡೆಸಿದಂತಾಗುತ್ತದೆ. ಜತೆಗೆ ಆಯಾ ಭಾಷಾ ಸಂಸ್ಕೃತಿಯನ್ನು ಇತರ ಭಾಷಾ ಬಾಂಧವರಿಗೆ ಪರಿಚಯಿಸಿ ಪರಸ್ಪರ ಗೌರವ, ತಮ್ಮ ತಮ್ಮ ಭಾಷೆ - ಸಂಸ್ಕೃತಿಗಳಲ್ಲಿ ಗೌರವನ್ನಿಟ್ಟುಕೊಂಡು ಅನ್ಯ ಭಾಷಾ ಸಂಸ್ಕೃತಿಗಳನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕು. ಆ ಮೂಲಕ ಪ್ರದೇಶ-ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಮರಸ್ಯ ಮೂಡಬೇಕು. ಈ ಸಣ್ಣ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಮೂಲಕ ಕೊಂಕಣಿ ಭಾಷಾ ನುಡಿವೈಭವದ ಯಶಸ್ಸಿಗೆ ಸಹಕರಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ವಿನಂತಿಸಿದ್ದಾರೆ.