ಮೌಲ್ಯವಿಲ್ಲದ ಶಿಕ್ಷಣ ಅನಾಚಾರಕ್ಕೆ ದಾರಿಮಾಡಿದೆ: ಕರ್ಜಗಿ

ಜೀವನ ಮೌಲ್ಯವಿಲ್ಲದ ಹಣಸಂಪಾದನೆಯನ್ನು ತಿಳಿಸಿಕೊಡುವ ಶಿಕ್ಷಣ ಇಂದಿನ ಅತ್ಯಾಚಾರಗಳಿಗೆ, ಅನಾಚಾರಗಳಿಗೆ ಪ್ರಮುಖ ಕಾರಣ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು. ಆಳ್ವಾಸ್ ನುಡಿಸಿರಿಯ ' ಶಿಕ್ಷಣ: ವರ್ತಮಾನದ ತಲ್ಲಣಗಳು' ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಚಾರಿತ್ರ್ಯವಿಲ್ಲದ ಶಿಕ್ಷಣ ಎಲ್ಲ ತಲ್ಲಣಗಳಿಗೆ ಮೂಲ ಕಾರಣ. ಪ್ರಸಕ್ತ ಕಾಲದ ಶಿಕ್ಷಣ ಹಣ ಸಂಪಾದನೆಗೆ ರಹದಾರಿಯಾಗಿದೆ ಹೊರತು ಜೀವನ ಮೌಲ್ಯಗಳನ್ನು ಕಟ್ಟಿಕೊಡುವುದನ್ನು ಕಲಿಸಲಾಗುತ್ತಿಲ್ಲ. ಸಾರ್ಥಕ ಶಿಕ್ಷಣದ ಸುತ್ತ ನಮ್ಮ ಬದುಕಿನ ವೃಂದಾವನ ಕಟ್ಟಬೇಕು. ಇಲ್ಲವಾದಲ್ಲಿ ಅದು ಗೋರಿಯಾದೀತು ಎಂಬ ಎಚ್ಚರದ ಮಾತುಗಳನ್ನೂ ಆಡಿದರು. ಈಗ ಶಿಕ್ಷಣದ ಮೇಲಿನ ಪ್ರೀತಿ ಕಳುವಾಗಿದೆ. ಗುರುಗಳಿಗೆ ಶಿಷ್ಯರ ಮೇಲಿನ ಪ್ರೀತಿ ಗೌರವ ಕಡಿಮೆಯಾಗಿದೆ. ಶಿಕ್ಷಣ ದುಬಾ ರಿಯಾಗಿ ಜನಸಾಮಾನ್ಯನ ಕೈಗೆ ಸಿಗುತ್ತಿಲ್ಲ. ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ನಡೆದ ಮಕ್ಕಳ ಮೇಲಿನ ಅತ್ಯಾಚಾರದಂಥ ಪ್ರಕರಣಗಳು ಪೋಷಕರನ್ನು ಭಯಭೀತರನ್ನಾಗಿಸಿದೆ. ಈ ಮೊದಲು ಪತ್ರಿಕೆಗಳಲ್ಲಿ ಶಿಕ್ಷಣ ಸಂಸ್ಥೆಗಳ ಸುದ್ದಿ ಒಳಪುಟದಲ್ಲಿ ಬರುತ್ತಿತ್ತು. ಈಗ ಮೊದಲ ಪುಟದಲ್ಲಿ ಬರುವಂತಾಗಿದೆ ಎಂದು ವಿಷಾದಿಸಿದರು. ಶಿಕ್ಷಣ ಸಂಸ್ಥೆಗಳು ಈಗ ನೌಕರಿಗೋಸ್ಕರ ಒಂದು ಕಾರ್ಖಾನೆ ಎಂಬಂತಾಗಿದೆ. ಕ್ಯಾಂಪಸ್ ಇಂಟರ್‌ವ್ಯೆ ಬಂದಿರುವುದರಿಂದ ಕನ್ನಡದ ಬದಲು ಇಂಗ್ಲಿಷ್ ಹೇರಿಕೆ ಅತಿಯಾಗಿದೆ. ಬೇಜವಾಬ್ದಾರಿ ಸರಕಾರ, ಆಸೆಬುರುಕ ಆಡಳಿತ ಮಂಡಳಿ, ಭ್ರಷ್ಟ ಅಧಿಕಾರಿಗಳು, ಓದದ ಶಿಕ್ಷಕರು, ಇವರ ಜತೆಗೆ ಅವಸರವಸರವಾಗಿ ಅತ್ಯಾಚಾರದಂಥ ಹಸಿಹಸಿ ಸಂಗತಿಗಳನ್ನು ಬಿಚ್ಚಿಡುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಸೇರಿ ಶಿಕ್ಷಣದ ಬಹುದೊಡ್ಡ ತಲ್ಲಣಗಳನ್ನು ಉಂಟು ಮಾಡುತ್ತಿವೆ ಎಂದು ಹೇಳಿದರು.