ಭಾರತೀಯರು ಯೂರೋಪ್ ಸಂಸ್ಸೃತಿಯನ್ನು ಅನುಸರಿಸಬೇಕಿತ್ತು : ನಟರಾಜ್ ಹುಳಿಯಾರ್

ಭಾರತೀಯರು ಯೂರೋಪ್‌ನ ಸಂಸ್ಸೃತಿಯನ್ನು ಅನುಸರಿಸಬೇಕಾಗಿತ್ತು ಆದರೆ ನಾವು ಅಮೇರಿಕಾದ ಬಂಡವಾಳಶಾಹಿ ಸಂಸ್ಸೃತಿಯನ್ನು ಅನುಸರಿಸಿದ್ದರಿಂದಾಗಿ ಇಂದು ಕೆಲ ಮೌಲ್ಯಗಳನ್ನು ಕಳೆದುಕೊಂಡು ಯಾಂತ್ರಿಕ ಬದುಕನ್ನು ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೆಂಗಳೂರು ವಿವಿಯ ಪ್ರಾಧ್ಯಾಪಕ ಡಾ. ನಟರಾಜ ಹುಳಿಯಾರ್ ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ನುಡಿಸಿರಿಯ ಎರಡನೇ ದಿನದ ಕಾರ್ಯಕ್ರಮದಲ್ಲಿ 'ಸಂಸ್ಕೃತಿ : ವರ್ತಮಾನದ ತಲ್ಲಣಗಳು' ಎಂಬ ವಿಷಯ ಕುರಿತಾಗಿ ಮಾತನಾಡುತ್ತಿದ್ದರು.
ಕರ್ನಾಟಕವು ಬಹುತ್ವ ಸಂಸ್ಕೃತಿಯ ನಾಡಾಗಿದ್ದರೂ ಕೂಡ ಇತತೀಚಿನ ದಿನಗಳಲ್ಲಿ ಅದಕ್ಕೆ ದಕ್ಕೆ ತರುವಂತಹ ಚಟುವಟಿಕೆಗಳು ಜೋರಾಗುತ್ತಿವೆ ಎಂಬುದಾಗಿ ಆತಂಕ ವ್ಯಕ್ತಪಡಿಸಿದರು. ಇದನ್ನು ತಪ್ಪಿಸಲು ಅದನ್ನು ನಿರಂತರವಾಗಿ ಮರಳಿ ಕಟ್ಟಬೇಕಾದ ಕೆಲಸ ಅನಿವಾರ್ಯವಾಗಿ ಆಗಬೇಕಾಗಿದ್ದು ಈ ಮೂಲಕ ಕನ್ನಡವು ಬೆಳೆಸಿಕೊಂಡು ಬಂದಿರುವ ಜಾಗತಿಕ ಜಾತ್ಯಾತಿತ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದರು. 
ಇಂದು ನಾವು ಯಾವುದನ್ನು ಜನಪ್ರಿಯ ಸಂಸ್ಕೃತಿ ಎಂಬುದಾಗಿ ಕರೆಯುತ್ತೇವೆಯೋ ಅದು ನಿಜವಾಗಿ ಜನವಿರೋಧಿ ಸಂಸ್ಕೃತಿಯಾಗಿದೆ. ಸರ್ವ ಮತ ಧರ್ಮಗಳನ್ನು ಒಗ್ಗೂಡಿಸುವ ಕಾರ್ತ ತುರ್ತಾಗಿ ಆಗಬೇಕಾಗಿದೆ. ಇದಕ್ಕೆ ಸಾಹಿತ್ಯ ನೆರವಾಗುತ್ತದೆ. ಯಾಕೆಂದರೆ ಸಾಹಿತ್ಯದಿಂದ ನವ ವೈಚಾರಿಕಥೆ ಹುಟ್ಟುತ್ತದೆ. ಈ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿ ಮೈಗೂಡಿಸುವ ಮೂಲಕ ಬೂಟಾಟಿಕೆಯ ಸಂಸ್ಕೃತಿಯನ್ನು ಉಚ್ಚಾಟಿಸಬೇಕಾಗಿದೆ ಎಂದು ಕರೆ ನುಡಿದರು.

-ಅಪರ ಉಜಿರೆ