ನುಡಿಸಿರಿಗೆ ಕೊನೆ ಕ್ಷಣದ ತಯಾರಿ...

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಇಂದಿನಿಂದ ಮೂರುದಿನಗಳ ಕಾಲ ನಡೆಯುವ “ಆಳ್ವಾಸ್ ನುಡಿಸಿರಿ-2014″ರಲ್ಲಿ 150 ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ತುಳುನಾಡಿನ ವಿಶೇಷ ತಿಂಡಿತಿನಿಸುಗಳ ಪ್ರದರ್ಶನ ಮತ್ತು ಕೃಷಿಗೆ ಸಂಬಂಧಿಸಿದ ಅಪರೂಪದ ವಸ್ತುಗಳ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರಗನ್ನು ನೀಡಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
11ನೇ ವರ್ಷದ ಈ ನುಡಿಸಿರಿಯಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ಸಂಜೆ 6 ಗಂಟೆಗೆ ಆರು ವೇದಿಕೆಗಳಲ್ಲಿ ಸಮಯಕ್ಕೆ ಸರಿಯಾಗಿ ಏಕಕಾಲದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಸಾಹಸ ಕ್ರೀಡೆಗಳು : ಹಗಲು ಹೊತ್ತಿನಲ್ಲಿ ವಿದ್ಯಾಗಿರಿಯ ಆವರಣದಲ್ಲಿ ವಿವಿಧ ಕಲಾ ತಂಡಗಳಿಂದ ಸಾಹಸ ಕ್ರೀಡೆಗಳ ಪ್ರದರ್ಶನ, ಮ್ಯಾಜಿಕ್‍ಗಳು, ಅಂಧ ಮಕ್ಕಳಿಂದ ಮಲ್ಲಕಂಬ ಸಾಹಸ ಕ್ರೀಡೆಗಳು, ಆವರಣದಲ್ಲಿ ಹಕ್ಕಿಪಿಕ್ಕಿ ತಂಡಗಳಿಂದ ಸಂಗೀತ ಕಾರ್ಯಕ್ರಮ, ಜನಪದ ತಂಡಗಳಿಂದ ಸಂಗೀತ ಕಾರ್ಯಕ್ರಮಗಳು, ಕೃಷಿಗೆ ಸಂಬಂಧಿಸಿದ ಪರಿಕರಗಳು ವಿಶೇಷವಾಗಿ ಮಣಿಪುರದ 22 ಫೀಟ್ ಎತ್ತರದ ಬಾಳೆಗಿಡ, ಕಲಾಕೃತಿಗಳ ಪ್ರದರ್ಶನ, ಫಲಪುಷ್ಪಗಳ ಪ್ರದರ್ಶನ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷಿಗರ ತಿಂಡಿ ತಿನಿಸುಗಳು ಪ್ರದರ್ಶನಗೊಳ್ಳಲಿರುವುದು ವಿಶೇಷ.
ಊಟ-ತಿಂಡಿ : ಊಟ ತಿಂಡಿಗಾಗಿ ವಿದ್ಯಾಗಿರಿಯ ಆವರಣದಲ್ಲಿ 9 ಕೌಂಟರ್‍ಗಳನ್ನು ತೆರೆಯಲಾಗಿದ್ದು ಏಕಕಾಲದಲ್ಲಿ 10,000 ಜನರಿಗೆ ಊಟೋಪಚಾರಕ್ಕಾಗಿ 45 ಕಡೆಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ.
ದಿನವೊಂದಕ್ಕೆ 22000 ಜನರ ನಿರೀಕ್ಷೆ ಇದ್ದು ಒಟ್ಟು 1ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಇದಲ್ಲದೆ ಈ ಬಾರಿ ವೇದಿಕೆಗಳನ್ನು ವಿಶೇಷವಾಗಿ ಶೃಂಗರಿಸಲಾಗಿದೆ. ಬೆಳಿಗ್ಗೆ ನಡೆಯುವ ಮೆರವಣಿಗೆಯಲ್ಲಿ 50 ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಲಿವೆ ಎಂದು ಆಳ್ವರು ತಿಳಿಸಿದ್ದಾರೆ.