ಅಂಧಪೋರ ಮಾಡಲಿದ್ದಾನೆ ನುಡಿಸಿರಿ ಅಧ್ಯಕ್ಷರ ಪರಿಚಯ





ಮೂಡಬಿದಿರೆ:  ವಿಶೇಷತೆಗಳಿಂದಲೇ ಕೂಡಿರುವ ನುಡಿಸಿರಿಯಲ್ಲಿ ಸಮಾರೋಪ ಸಮಾರಂಭದಲ್ಲಿ ಒಂದು ವಿಶೇಷ ಕಾದಿದೆ. ಅದೂ ನಮ್ಮೊಳಗಿನ ಕಣ್ಣನ್ನು ತೆರೆಸುವ ವಿಶೇಷ. ಹೌದು, ಗದಗದ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಯ ಒಂದನೇ ತರಗತಿಯಲ್ಲಿ ಓದುತ್ತಿರುವ ಪೋರ ಮಣಿಕಂಠ ನುಡಿಸಿರಿಯ ಸರ್ವಾಧ್ಯಕ್ಷ ನಾಡೋಜ ಡಾ| ಸಿದ್ಧಲಿಂಗಯ್ಯ ಅವರ ಪರಿಚಯ ಭಾಷಣ ಮಾಡಲಿದ್ದಾನೆ.
ಅಂಧನಾಗಿರುವ ಮಣಿಕಂಠ ಯೋಗದ ಎಲ್ಲಾ ಆಸನಗಳನ್ನು ಚಕಚಕನೆ ಮಾಡುವಷ್ಟು ಪ್ರವೀಣ, ಗಣಿತದ ಲೆಕ್ಕಗಳನ್ನು, 30ರ ವರೆಗಿನ ಮಗ್ಗಿಯನ್ನು ನೇರ ಮತ್ತು 20ರ ವರೆಗಿನ ಮಗ್ಗಿಯನ್ನು ಉಲ್ಟಾ ಹೇಳುವ ನಿಪುಣ. ಭಾರತದದ ಮೊದಲ ರಾಷ್ಟ್ರಪತಿ ಯಾರು? ಐದನೇ ಪ್ರಧಾನಿ ಯಾರು, ಕರ್ನಾಟಕದ ಮುಖ್ಯಮಂತ್ರಿಗಳು ಯಾರೆಲ್ಲ? ಹೀಗೆ ಕೇಳುವ ಪ್ರಶ್ನೆಗಳಿಗೆ ಕ್ಷಣಮಾತ್ರದಲ್ಲಿ ಉತ್ತರ ಹೇಳಿ ಎಂಥವರನ್ನೂ ಬೆರಗುಗೊಳಿಸುತ್ತಾನೆ.
ಸಂಜೆ ಮಾಧ್ಯಮ ಕೇಂದ್ರಕ್ಕೆ ತನ್ನ ಶಾಲೆಯ ಕಾರ್ಯದರ್ಶಿ ಶಿವಾನಂದ ಅವರೊಂದಿಗೆ ಆಗಮಿಸಿದ ಮಣಿಕಂಠ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ. ಈತನ ಜೊತೆಗಿದ್ದ ಇತರ ಅಂಧಮಕ್ಕಳು ಕೂಡ ಒಂದಿಲ್ಲೊಂದು ಪ್ರತಿಭೆ ಉಳ್ಳವರಾಗಿದ್ದರು. ಪ್ರತಿಭೆಗೆ ಅಂಧತ್ವ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಮಕ್ಕಳುಗಳೇ ಪ್ರತ್ಯಕ್ಷ ನಿದರ್ಶನ.