ಖಾಲಿ ಹಾಳೆಯ ಮೇಲೆ ಲೇಖನಿ ನಡೆಸುವ ವ್ಯವಸಾಯ ಬರವಣಿಗೆ: ಎಚ್. ಡುಂಡಿರಾಜ್

ಮೂಡುಬಿದಿರೆ:  ಬರವಣಿಗೆಯೂ ಒಂದು ವ್ಯವಸಾಯವಾಗಿದ್ದು ಕವಿತೆಯ ಬೆಳೆಯನ್ನು ಲೇಖನಿಯ ಮೂಲಕ ಖಾಲಿ ಹಾಳೆಯ ಮೇಲೆ ನಡೆಸಿ ಬೆಳೆಯುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದವರು ಸಾಹಿತಿ ಎಚ್. ಡುಂಡಿರಾಜ್. ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ  ಕವಿ ಸಮಯ- ಕವಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
 ಬಡವ-ಶ್ರೀಮಂತ ಯಾರೇ ಇರಲಿ, ಬದುಕು ಶ್ರೇಷ್ಠವಾದದ್ದು. ಇದುವರೆಗೆ ನಾನು ನಡೆಸಿದ ಕಾವ್ಯ ಕೃಷಿ ಸಮಾಧಾನ ನೀಡಿದೆ. ಇನ್ನಷ್ಟು ಬರೆಯುವಂತೆ ಜನರ ಪ್ರೀತಿ ಪ್ರೇರೇಪಿಸಿದೆ ಎಂದರು.
ಬಳಿಕ ವೇದಿಕೆಯಲ್ಲಿ ಕಾವ್ಯ-ನೃತ್ಯ-ಚಿತ್ರ ವೈಭವ ಜರುಗಿತು. ಡುಂಡಿರಾಜ್ ಅವರು ಬರೆದ ‘ಬರೆಯುವುದೆಂದರೆ ಖಾಲಿ ಹಾಳೆಯಲಿ ಲೇಖನಿ ನಡೆಸುವ ವ್ಯವಸಾಯ’ ಕವನವನ್ನು ಪುತ್ತೂರು ನರಸಿಂಹ ನಾಯಕ್ ತಂಡ ಪ್ರಸ್ತುತ ಪಡಿಸಿತು. ಇದರೊಡನೆ, ವಿದುಷಿ ವಿದ್ಯಾ ಮನೋಜ್ ಅವರ ಕಲಾನಿಕೇತನ ಬೆಳ್ತಂಗಡಿ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಇವಕ್ಕೆ ಪೂರಕವಾಗಿ, ಬಿ.ಕೆ.ಎಸ್ ವರ್ಮಾ ಅವರ ಚಿತ್ರ ರಚನೆ ನೋಡುಗರ ಮನಸೂರೆಗೊಂಡಿತು.
-ಶ್ರೀಹರ್ಷ ಸಿ.ಎಂ