ಇಂದಿನ ರಾಜಕೀಯ ಸ್ಥಿತಿಗೆ ಪರ್ಯಾಯವೇನು?

ಮೂಡಬಿದಿರೆ: ನಾಡು ನುಡಿ - ಸಂಸ್ಕೃತಿ ಅನಾವರಣಗೊಳ್ಳುತ್ತಿರುವ 'ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ - 2013'ರಲ್ಲಿ ಡಿ. 21ರಂದು ರಾಜಕಾರಣಿಗಳ ನುಡಿಗಳಿಗೂ ವೇದಿಕೆ ದೊರೆಯಿತು. 'ಪ್ರಸಕ್ತ ರಾಜಕಾರಣ ಅಧಃಪತನದತ್ತ ಸಾಗುತ್ತಿದೆ. ಇದಕ್ಕೆ ಪರ್ಯಾಯವೇನು, ಪರಿಹಾರ ಹೇಗೆ ?' ಎಂಬ ಆತಂಕವನ್ನು ಜೆಡಿಎಸ್‌ ನಾಯಕ ಎಂ.ಸಿ. ನಾಣಯ್ಯ, ಬಿಜೆಪಿ ನಾಯಕ ಬಿ. ಸುರೇಶ್‌ ಕುಮಾರ್‌ ಮತ್ತು ಕಾಂಗ್ರೆಸ್‌ನ ಬಿ.ಎಲ್‌. ಶಂಕರ್‌ ವ್ಯಕ್ತಪಡಿಸಿದರು. ಇಂತಹ ವೇದಿಕೆಗಳಲ್ಲಿ ಮೊತ್ತ ಮೊದಲ ಬಾರಿಗೆ 'ರಾಜಕಾರಣ' ಕುರಿತ ಮಾತುಗಳಿಗೆ ಅವಕಾಶ ಮಾಡಿಕೊಟ್ಟ ಆಳ್ವಾಸ್‌ ವಿರಾಸತ್‌ನ ಹೆಚ್ಚುಗಾರಿಕೆಯನ್ನು ಮೂವರೂ ಉಲ್ಲೇಖೀಸಿದರು.

ಎಂ.ಸಿ. ನಾಣಯ್ಯ ಮಾತನಾಡಿ, ರಾಜಕಾರಣಿಗಳು ಕಳಂಕಿತರು ಎನ್ನುವ ಭಾವನೆ ಸಮಾಜದಲ್ಲಿ ವ್ಯಾಪಕವಾಗಿ ಮೂಡಿದೆ. ರಾಜಕಾರಣಿಗಳು ಭ್ರಷ್ಟರಾಗಿದ್ದರೆ ಅದಕ್ಕೆ ಜನ ಅಥವ ಮತದಾರರು ಕೂಡ ಕಾರಣ ಎಂಬುದನ್ನು ಗಮನಿಸಬೇಕು. ರಾಜಕಾರಣ ಮೌಲ್ಯ ಕಳೆದುಕೊಳ್ಳಲು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದೊದಗಲು, ಭಯೋತ್ಪಾದನೆ ಹೆಚ್ಚಾಗಲು ಭ್ರಷ್ಟಾಚಾರವೇ ಮೂಲ ಕಾರಣ. ಭ್ರಷ್ಟಾಚಾರ ಕಾರ್ಯಾಂಗ, ಶಾಸಕಾಂಗ ಮಾತ್ರವಲ್ಲದೆ ನ್ಯಾಯಾಂಗಕ್ಕೂ ಪಸರಿಸಿದೆ. ಇತರ ಎರಡು ಅಂಗಗಳಿಗೆ ಹೋಲಿಸಿದರೆ ನ್ಯಾಯಾಂಗದಲ್ಲಿ ಸ್ವಲ್ಪ ಕಡಿಮೆ ಭ್ರಷ್ಟಾಚಾರ ಇದೆ ಅಷ್ಟೆ. ಇವೆಲ್ಲವನ್ನೂ ಯಾವ ರೀತಿ ತಿದ್ದಬೇಕು ಎಂಬುದೇ ಮುಖ್ಯ ಎಂದು ಹೇಳಿದರು.

ಬಿ. ಸುರೇಶ್‌ ಕುಮಾರ್‌ ವಿಚಾರ ಮಂಡಿಸಿ, ಇಂದು ದೇಶದ ಜನ ಒಳ್ಳೆಯ ರಾಜಕಾರಣ ಬಯಸುತ್ತಿದ್ದಾರೆ. ಅಧಃಪತನಕ್ಕೆ ಹೋಗುತ್ತಿರುವ ರಾಜಕಾರಣಕ್ಕೆ ಪರ್ಯಾಯವೇನು ಎಂಬುದರ ಯೋಚನೆ ಜನರಲ್ಲಿ ಮೂಡಿದೆ. ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಗಂಟೆ ಹೊಡೆಯುತ್ತಿದೆ. ರಾಜಕಾರಣಿಗಳು ಭ್ರಷ್ಟರಾಗಿದ್ದರೆ ಅದರ ಹಿಂದೆ ಮತದಾರರ ಪಾತ್ರವೂ ಇರುತ್ತದೆ. ಲೋಕಪಾಲ್‌ನಿಂದ ಭ್ರಷ್ಟಾಚಾರ ನಿರ್ಮೂಲನೆ ಆಗುವುದೆಂಬುದು ಪೂರ್ತಿ ಸರಿಯಲ್ಲ ಎಂದರು.

ಲೋಕಪಾಲ್‌ ಒಂದು ಆಸ್ಪತ್ರೆ ಅಥವಾ ಪೊಲೀಸ್‌ ಠಾಣೆ ಇದ್ದಂತೆ. ರೋಗ ಬಂದ ಅನಂತರ ಆಸ್ಪತ್ರೆಗೆ ಸೇರಿಸುವಂತೆ ಹಾಗೂ ಅಪರಾಧ ನಡೆದ ಅನಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ. ಭ್ರಷ್ಟಾಚಾರ ಮಾಡದಂತೆ ತಡೆಯಲು ಏನು ಮಾಡಬೇಕೆಂದು ಲೋಕಪಾಲ್‌ ಹೇಳುತ್ತಿಲ್ಲ. ಆದಾಗ್ಯೂ ಜನ ಒಳ್ಳೆಯ ರಾಜಕಾರಣದ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಸಂಪೂರ್ಣ ಭರವಸೆ ಕಳೆದುಕೊಂಡಿಲ್ಲ. ಇದಕ್ಕೆ ಪೂರಕವಾಗಿ ಕೆಲವೇ ಕೆಲವು ರಾಜಕಾರಣಿಗಳು ಕೂಡ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ಬಿ.ಎಲ್‌. ಶಂಕರ್‌ ಮಾತನಾಡಿ, ಉತ್ತಮ ರಾಜಕಾರಣ ಅಥವಾ ಪ್ರಜಾಪ್ರಭುತ್ವಕ್ಕೆ ತೊಡಕಾಗಿರುವುದು ಕುಟುಂಬ ರಾಜಕಾರಣ ಹಾಗೂ ವ್ಯಕ್ತಿ ಕೇಂದ್ರೀಕೃತ ರಾಜಕಾರಣ. ಇಂದಿನ ರಾಜಕಾರಣದ ಪರಿಸ್ಥಿತಿಗೆ ದೇಶದ ಒಟ್ಟು ಸ್ಥಿತಿಯೂ ಕಾರಣ. 5,68,000 ಗ್ರಾಮ, 619 ಜಿಲ್ಲೆ, 28 ರಾಜ್ಯ, 1,618 ಭಾಷೆ, 5,642 ಜಾತಿ, 6 ಮತ, 70 ಕೋಟಿ ಮತದಾರರು, 1,201 ರಾಜಕೀಯ ಪಕ್ಷಗಳನ್ನು ಹೊಂದಿರುವ ದೇಶದಲ್ಲಿ ಆದರ್ಶ ರಾಜಕಾರಣ ಅಷ್ಟು ಸುಲಭ ಸಾಧ್ಯವಲ್ಲ. ಆದರೂ ಭಾರತ ಕೆಲವೊಂದು ರಾಜಕೀಯ ವಿಚಾರಗಳಲ್ಲಿ ಇತರೇ ದೇಶಗಳಿಗಿಂತ ಉತ್ತಮ. ಸಂವಿಧಾನ ಅಂಗೀಕರಿಸಿದ ಕೂಡಲೇ ಮಹಿಳೆಯರಿಗೂ ಮತದಾನದ ಹಕ್ಕು ನೀಡಿದ ಮೊದಲ ದೇಶ ಭಾರತ. ಅಮೆರಿಕ ತನ್ನ ದೇಶದ ಸಂವಿಧಾನ ಅಂಗೀಕಾರವಾದ 131 ವರ್ಷಗಳ ಬಳಿಕ, ಬ್ರಿಟನ್‌ 110 ವರ್ಷಗಳ ಬಳಿಕ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದೆ ಎಂದರು.

ಇಂದು ಉದ್ಯಮಿಗಳೇ ನೇರವಾಗಿ ರಾಜಕೀಯಕ್ಕೆ ಧುಮುಕುತ್ತಿರುವುದರಿಂದ ರಾಜಕಾರಣದ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಪಾತಕೀಕರಣ, ವ್ಯಾಪರೀಕರಣ, ಜಾತಿ ಮತ್ತು ಮತ ಇವು ಉತ್ತಮ ರಾಜಕೀರಣಕ್ಕೆ ಅಡ್ಡಿಯಾಗಿವೆ ಎಂದರು.