ಮೂಡುಬಿದಿರೆ: 'ನನ್ನ ಕೃತಿಗಳಲ್ಲಿ ಸಮಾಜ ಸೇವೆ ಹುಡುಕಬೇಡಿ. ಯಾಕೆಂದರೆ ನನ್ನ ಕೃತಿಗಳೇನಿದ್ದರೂ ಸತ್ಯಶೋಧನೆಯ ಫಲವಷ್ಟೇ' ಎಂದು ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಹೇಳಿದ್ದಾರೆ. ಅವರು ಆಳ್ವಾಸ್ ವಿಶ್ವನುಡಿಸಿರಿಯಲ್ಲಿ ಶುಕ್ರವಾರ ಸಾಹಿತ್ಯ ಕುರಿತ ಸಮಾವೇಶ ಗೋಷ್ಠಿಯಲ್ಲಿ ಮಾತನಾಡಿದರು.
ನಾನು ತತ್ವಶಾಸ್ತ್ರದ ವಿದ್ಯಾರ್ಥಿ. ಸತ್ಯ ಅನ್ವೇಷಣೆಯೇ ನನ್ನ ಕೃತಿಗಳ ಮೂಲ ಉದ್ದೇಶ. ನನ್ನ ಪ್ರತಿ ಕೃತಿಯೂ ಸತ್ಯದ ಹುಡುಕಾಟದ ಫಲವೇ ಹೊರತು ಬೇರೇನೂ ಅಲ್ಲ. ತತ್ವಶಾಸ್ತ್ರದ ಮೂಲಕವೂ ಸತ್ಯ ಹೇಳಬಹುದು. ಆದರೆ ಕಾದಂಬರಿಯಲ್ಲಿ ಕತೆಯ ಪಾತ್ರಗಳ ಮೂಲಕ ಸತ್ಯ ಹೇಳುವಾಗ ನನಗೆ ಹೆಚ್ಚು ಸ್ವಾತಂತ್ರ್ಯವಿರುತ್ತದೆ. ಆದ್ದರಿಂದ ನಾನು ಆ ಮಾರ್ಗವನ್ನು ಆರಿಸಿಕೊಂಡೆ. ಹೀಗಾಗಿ ಸಮಾಜ ಸೇವೆಯನ್ನು ನನ್ನ ಕೃತಿಗಳಲ್ಲಿ ಹುಡುಕಬೇಡಿ. ಸಮಾಜ ಸೇವೆ ನೋಡುವುದಾದರೆ ನನ್ನ ಖಾಸಗಿ ಜೀವನ ನೋಡಿ. ಅದು ಬಿಟ್ಟು ನನ್ನ ಕೃತಿಗಳಲ್ಲಿ ಸಮಾಜ ಸೇವೆ ಹುಡುಕಿದರೆ, ಅಲ್ಲಿ ನಿಮಗೆ ಅದು ಸಿಗುವುದಿಲ್ಲ ಎಂದು ಹೇಳಿದರು.

