ಮೂಡುಬಿದಿರೆ: ಕನ್ನಡ ಭಾಷೆ ಉಳಿಯಬೇಕಾದರೆ ಅದು ಮೊದಲು ಜನಸಾಮಾನ್ಯರ ಭಾಷೆಯಾಗಬೇಕು. ಇಚ್ಚಾಶಕ್ತಿಯ ಕೊರತೆ ಭಾಷೆಯ ಬೇಳವಣಿಗೆಗೆ ತೊಡಕಾಗಿದೆ. ಕನ್ನಡದ ತಂತ್ರಾಂಶಗಳು ಸುಲಭವಾಗಿ ಸಾಮಾನ್ಯನೊಬ್ಬನಿಗೆ ತಲುಪುವಂತಿದ್ದರೆ ಅದು ಭಾಷೆಯ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಗಣಕ ತಜ್ಞ ಡಾ ಪವನಜ ಹೇಳಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಮೂರನೇ ದಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ವಿಚಾರಗೋಷ್ಟಿಯಲ್ಲಿ 'ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ' ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಪ್ರಪಂಚದ ಎಲ್ಲಾ ಭಾಷೆಗಳಿಗೂ ಒಂದು ಬಗೆಯ ಸ್ವಷ್ಟತೆ ಬೇಕು ಎಂಬ ಕಾರಣಕ್ಕಾಗಿ ಯುನಿಕೋಡ್ ಜಾರಿಗೆ ತರಲಾಯಿತು. ಕನ್ನಡದಲ್ಲೂ ಯುನಿಕೋಡ್ ಲಭ್ಯವಿದ್ದು ಮೊದಲಿದ್ದ ದೋಷಗಳನ್ನು ಸರಿಪಡಿಸಲಾಗಿದೆ. ಯುನಿಕೋಡ್ ನ ಸಹಾಯದಿಂದ ನಮಗೆ ಬೇಕಾದ ವಿಷಯಗಳನ್ನು ಸುಲಭವಾಗಿ ಹುಡುಕಬಹುದಾದಿದೆ. ಕರ್ನಾಟಕ ಸರಕಾರ ಈ ತನಕ ಬಿಡುಗಡೆ ಮಾಡದೇ ಇರುವ ತಂತ್ರಾಂಶ ಬಿಡುಗಡೆಗೊಳಿಸಿದರೆ ಕನ್ನಡದ ಬಳಕೆ ಮತ್ತಷ್ಟು ಸುಲಭವಾಗಲಿದೆ. ವಿಕಿಪಿಡಿಯಾ ದಂತಹ ವಿಶ್ವಕೋಶದಲ್ಲಿ ಕನ್ನಡದ ಲೇಖನಗಳು ಕಡಿಮೆ ಇದ್ದು ವಿಶ್ವ ವಿದ್ಯಾನಿಲಯಗಳು ಮತ್ತು ಸರ್ಕಾರ ಮಾಹಿತಿ ಸಾಹಿತ್ಯವನ್ನು ಮುಕ್ತವಾಗಿ ವಿಕಿಪಿಡಿಯಾದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಮನಸ್ಸು ಮಾಡಬೇಕು ಎಂದರು.


